RCB: ಬೆಂಗಳೂರು ಕಾಲ್ತುಳಿತ ಪ್ರಕರಣ: ಇವರನ್ನೇ A1 & A2 ಆರೋಪಿ ಮಾಡಿ ಬಿಜೆಪಿ - ಜೆಡಿಎಸ್ ಆಗ್ರಹ
ಬೆಂಗಳೂರಿನ ಚಿನ್ನಸ್ವಾಮಿ ಕ್ರೀಡಾಂಗಣದಲ್ಲಿನ ಐಪಿಎಲ್ ಸಂಭ್ರಮಾಚರಣೆಯ ದುರಂತದ ಹಿನ್ನೆಲೆಯಲ್ಲಿ ಕರ್ನಾಟಕ ಬಿಜೆಪಿ ಹಾಗೂ ಜೆಡಿಎಸ್‌ನಿಂದ ಜಂಟಿ ಪತ್ರಿಕಾಗೋಷ್ಠಿಯನ್ನು ನಡೆಸಲಾಗಿದೆ. ಕರ್ನಾಟಕದ ಇತಿಹಾಸದಲ್ಲಿ ಕರಾಳ ಹಾಗೂ ಘೋರ ದುರಂತ ಘಟನೆಗೆ ನೇರ ಹೊಣೆ ಕಾಂಗ್ರೆಸ್ ಸರ್ಕಾರ, A1 ಆರೋಪಿ ಮುಖ್ಯಮಂತ್ರಿ ಸಿದ್ದರಾಮಯ್ಯ, A2 ಆರೋಪಿ ಉಪ ಮುಖ್ಯಮಂತ್ರಿ ಡಿ.ಕೆ ಶಿವಕುಮಾರ್ ಹಾಗೂ A3 ಆರೋಪಿ ಗೃಹ ಸಚಿವ ಜಿ ಪರಮೇಶ್ವರ್ ಅವರ ಮೇಲೆ ಪರೋಕ್ಷ ಕೊಲೆ ಆರೋಪದ ಅಡಿಯಲ್ಲಿ ಪ್ರಕರಣ ದಾಖಲಿಸಬೇಕಾಗಿದೆ ಎಂದು ಆಗ್ರಹಿಸಲಾಗಿದೆ.
ಈ ವಿಚಾರವಾಗಿ ಮಾತನಾಡಿರುವ ಬಿಜೆಪಿ ರಾಜ್ಯಾಧ್ಯಕ್ಷ ಬಿ.ವೈ ವಿಜಯೇಂದ್ರ ಅವರು, ಯಾವ ಮಾನದಂಡ ಕಾರ್ಯಸೂಚಿಯ ಮೇಲೆ ಪ್ರಜಾಪ್ರಭುತ್ವದ ದೇಗುಲ ವಿಧಾನಸೌಧದ ಮೆಟ್ಟಿಲುಗಳ ಮೇಲೆ ಈ ಕಾರ್ಯಕ್ರಮ ಹಮ್ಮಿಕೊಳ್ಳಲು ಸರ್ಕಾರ ನಿರ್ಧರಿಸಿತ್ತು ಎಂಬ ಬಗ್ಗೆ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯದ ಜನತೆಗೆ ಉತ್ತರ ಹೇಳಬೇಕಾಗಿದೆ ಎಂದು ಆಗ್ರಹಿಸಿದ್ದಾರೆ.

ಬೆಂಗಳೂರು ಪೊಲೀಸ್ ಆಯುಕ್ತರೂ ಸೇರಿದಂತೆ ಐವರು ಅಧಿಕಾರಿಗಳನ್ನು ಅಮಾನತು ಮಾಡಿರುವ ಸರ್ಕಾರ ಗುಪ್ತಚರ ದಳ ಮುಖ್ಯಮಂತ್ರಿಗಳ ಅಡಿಯಲ್ಲಿ ಬರುವುದರಿಂದ ಇದರ ನೈತಿಕ ಹೊಣೆ ತಾವು ಹೊರಬೇಕಾಗುತ್ತದೆ ಎಂಬ ಕಾರಣಕ್ಕೆ ಗುಪ್ತಚರ ಇಲಾಖೆಯ ಆಯುಕ್ತರನ್ನು ಅಮಾನತು ಮಾಡದೆ ರಕ್ಷಿಸಿಕೊಳ್ಳಲಾಗಿದೆ. ಇಂತಹ ಘೋರ ದುರಂತಕ್ಕೆ ಕಾರಣವಾಗಿರುವ ಸರ್ಕಾರ ಅಧಿಕಾರದಲ್ಲಿ ಮುಂದುವರೆಯುವ ಅರ್ಹತೆಯನ್ನು ಕಳೆದುಕೊಂಡಿದೆ.
ರಾಜ್ಯದ ಜನ ಸಾಮಾಜಿಕ ಜಾಲತಾಣಗಳಲ್ಲಿ ಈ ನಿಮ್ಮ ಯೋಗ್ಯತೆ, ನಿಮ್ಮ ಸ್ವಾರ್ಥ, ನಿಮ್ಮ ತೀಟೆಗಳ ಕುರಿತು ವಾಚಮಗೋಚರವಾಗಿ ನಿಂಧಿಸುತ್ತಿದ್ದಾರೆ, ಇಷ್ಟಾದರೂ ನಾಚಿಕೆ ಮಾನ ಮರ್ಯಾದೆ ಇಲ್ಲದೆ ಅಧಿಕಾರಕ್ಕೆ ಅಂಟಿ ಕುಳಿತಿದ್ದೀರಿ. ಈ ದೇಶದಲ್ಲಿ ಕಾಂಗ್ರೆಸ್ ಇನ್ನೂ ಉಳಿದಿದ್ದರೆ ಅದಕ್ಕೊಂದು ಹೈಕಮಾಂಡ್ ಅನ್ನುವುದೇನಾದರೂ ಇದ್ದರೆ ಕಾಂಗ್ರೆಸ್ ಈ ಕೂಡಲೇ ಈ ಮೂವರ ವಿರುದ್ಧವೂ ಕ್ರಮ ತೆಗೆದುಕೊಂಡು ಅಧಿಕಾರದಿಂದ ಕೆಳಗಿಳಿಸಿ ತಾನು ಒಂದು ಜನರ ಪರವಾಗಿರುವ ರಾಜಕೀಯ ಪಕ್ಷ ಎನ್ನುವ ಅವಕಾಶವನ್ನು ಬಳಸಿಕೊಳ್ಳಲಿ ಎಂದು ಒತ್ತಾಯಿಸಲಾಯಿತು.
ಕರ್ನಾಟಕದಲ್ಲಿ ಅರಾಜಕತೆ ಸೃಷ್ಟಿಯಾಗಿದೆ , ಈ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬಂದ ನಂತರ ಪೊಲೀಸ್ ಅಧಿಕಾರಿಗಳನ್ನು ಸೆಕ್ಯೂರಿಟಿ ಗಾರ್ಡ್ ಗಳು ಹಾಗೂ ವಾಚ್ ಮ್ಯಾನ್ ಗಳಂತೆ ನಡೆಸಿಕೊಳ್ಳಲಾಗುತ್ತಿದೆ. "ಹಣ್ಣು ತಿಂದವ ಜಾರಿಕೊಂಡ, ಸಿಪ್ಪೆ ತಿಂದವ ಸಿಕ್ಕಾಕಿಕೊಂಡ ಎಂಬಂತೆ" ತಮ್ಮದಲ್ಲದ ಕಾರಣಕ್ಕೆ ಪೊಲೀಸ್ ಅಧಿಕಾರಿಗಳು ಅಮಾನತ್ತಿನ ಶಿಕ್ಷೆಗೊಳಗಾಗಿದ್ದಾರೆ.
ಪೊಲೀಸ್ ಆಯುಕ್ತರು ಹಾಗೂ ಇತರ ಉನ್ನತ ಅಧಿಕಾರಿಗಳ ಅಮಾನತ್ತಿನ ಹಿನ್ನೆಲೆಯಲ್ಲಿ ಅಧಿಕಾರಿಗಳು ಬುದ್ದಿ ಕಲಿಯಬೇಕಾಗಿದೆ. ಈ ಸರ್ಕಾರದ ಪ್ರಭಾವ ಹಾಗೂ ಒತ್ತಡಕ್ಕೆ ಮಣಿದು ಕಾರ್ಯನಿರ್ವಹಿಸಿದರೆ ಎಂತಹ ಶಿಕ್ಷೆ ಕಾದಿರುತ್ತದೆ ಎಂಬುದಕ್ಕೆ ಬೆಂಗಳೂರಿನ ದುರ್ಘಟನೆಗೆ ತಮ್ಮದಲ್ಲದ ತಪ್ಪಿಗೆ ಬಲಿಯಾಗಿರುವ ಪೊಲೀಸರು ಉದಾಹಣೆಯಾಗಿದ್ದಾರೆ. ಇನ್ನು ಮುಂದಾದರೂ ಪೊಲೀಸರು ಕಾನೂನಿನ ಅಡಿಯಲ್ಲಿ ಕೆಲಸ ಮಾಡಲಿ ಈ ಸರ್ಕಾರದ ದುಷ್ಟ ಯೋಚನೆಗಳ ಒತ್ತಡ ಹಾಗೂ ಪ್ರಭಾವಕ್ಕೆ ಮಣಿದರೆ ಅದರ ಪ್ರತಿಫಲ ಕಠೋರವಾಗಿರುತ್ತದೆ ಎಂಬ ಸತ್ಯ ಪೊಲೀಸರಿಗೆ ತಿಳಿದಿರಲಿ ಎಂದು ಆಗ್ರಹಿಸಲಾಗಿದೆ.
ಈ ಸಂದರ್ಭದಲ್ಲಿ ಕೇಂದ್ರ ಸಚಿವ ಹಾಗೂ ಜೆಡಿಎಸ್ ರಾಜ್ಯಾಧ್ಯಕ್ಷ ಎಚ್.ಡಿ ಕುಮಾರಸ್ವಾಮಿ, ವಿಧಾನಸಭಾ ವಿರೋಧ ಪಕ್ಷ ನಾಯಕ ಆರ್. ಅಶೋಕ್ ಸೇರಿದಂತೆ ಹಲವರು ಇದ್ದರು.












Click it and Unblock the Notifications