Ration Card: ಅನ್ನಭಾಗ್ಯ ಯೋಜನೆಯಲ್ಲಿ ಇನ್ಮುಂದೆ ಮಹತ್ವದ ಬದಲಾವಣೆ, ಏನದು ?
Anna Bhagya Scheme: ರಾಜ್ಯ ಸರ್ಕಾರವು ಅನ್ನಭಾಗ್ಯ ಯೋಜನೆಯಡಿ ಫಲಾನುಭವಿಗಳಿಗೆ ಸಿಹಿಸುದ್ದಿಯೊಂದನ್ನು ನೀಡಲು ಮುಂದಾಗಿದೆ. ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರ ಅಧಿಕಾರಕ್ಕೆ ಬರುವುದಕ್ಕಿಂತ ಮೊದಲು ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿತ್ತು. ಅದರಲ್ಲಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ.
ಅನ್ನಭಾಗ್ಯ ಯೋಜನೆಯಿಂದಾಗಿ ರಾಜ್ಯದ ಲಕ್ಷಾಂತರ ಬಡ ಕುಟುಂಬಗಳಿಗೆ ಲಾಭವಾಗಿದೆ. ಗ್ಯಾರಂಟಿ ಯೋಜನೆಗಳಲ್ಲಿ ಯಾವುದೇ ಗೊಂದಲ ಸೃಷ್ಟಿಯಾಗದ ಹಾಗೂ ಜನರಿಗೆ ಅತ್ಯಂತ ವೇಗವಾದ ಯೋಜನೆಗಳಲ್ಲಿ ಅನ್ನಭಾಗ್ಯ ಯೋಜನೆಯೂ ಒಂದಾಗಿದೆ. ಇನ್ನು ಈ ಯೋಜನೆ ಜಾರಿ ಮಾಡುವ ಸಂದರ್ಭದಲ್ಲಿ ಕೇಂದ್ರ ಸರ್ಕಾರದಿಂದ ನಿರೀಕ್ಷಿತ ಪ್ರಮಾಣದಲ್ಲಿ ನೆರವು ಸಿಗದೆ ರಾಜ್ಯ ಕಾಂಗ್ರೆಸ್ ಸರ್ಕಾರ ಸಂಕಷ್ಟ ಅನುಭವಿಸಿರುವುದು ಸಹ ಇದೆ. ಆದರೆ, ರಾಜ್ಯ ಸರ್ಕಾರವು ಸಕಾಲದಲ್ಲಿ ಪರ್ಯಾಯ ಉಪಾಯಗಳನ್ನು ಕಂಡುಕೊಂಡಿತ್ತು.

ಇದೀಗ ರಾಜ್ಯ ಕಾಂಗ್ರೆಸ್ ಸರ್ಕಾರವು ಅನ್ನಭಾಗ್ಯ ಯೋಜನೆಯನ್ನು ಇನ್ನಷ್ಟು ಅಪ್ಡೇಟ್ ಮಾಡಲು ಮುಂದಾಗಿದೆ. ಅನ್ನಭಾಗ್ಯ ಯೋಜನೆಯ ಫಲಾನುಭವಿಗಳಿಗೆ ಇನ್ಮುಂದೆ ಡಿಬಿಟಿಗೆ ಬದಲಾಗಿ (ನೇರ ಹಣ ವರ್ಗಾವಣೆ) ಆಹಾರ ಕಿಟ್ ನೀಡಲು ಸರ್ಕಾರ ಚಿಂತನೆ ನಡೆಸಿದೆ ಎಂದು ಹೇಳಲಾಗುತ್ತಿದೆ. ಸರ್ಕಾರ ಈ ರೀತಿ ನೀಡುವ ಆಹಾರ ಕಿಟ್‌ನಲ್ಲಿ ಹಣದ ಬದಲಾಗಿ, ಎಣ್ಣೆ ಹಾಗೂ ಬೆಳೆ ಸಹ ಇರಲಿದೆ. ರಾಜ್ಯದಲ್ಲಿ ರೇಷನ್ ಕಾರ್ಡ್‌ದಾರರಿಗೆ ಸಿಹಿಸುದ್ದಿ ನೀಡುವ ವಿಚಾರವಾಗಿ ಸಚಿವ ಸಂಪುಟ ಸಭೆಯಲ್ಲಿ ಚರ್ಚೆ ನಡೆಯುವ ಸಾಧ್ಯತೆ ಇದೆ. ಇದೇ 28ರಂದು ರಾಜ್ಯ ಸಚಿವ ಸಂಪುಟ ಸಭೆ ನಡೆಯಲಿದೆ.
ಅನ್ನಭಾಗ್ಯ: ಆಹಾರದ ಕಿಟ್ ನೀಡಲು ಕಾರಣವೇನು ?
ರಾಜ್ಯದಲ್ಲಿ ಕಾಂಗ್ರೆಸ್ ಸರ್ಕಾರವು ಅಧಿಕಾರಕ್ಕೆ ಬಂದ ಮೇಲೆ ಅನ್ನಭಾಗ್ಯ ಸೇರಿದಂತೆ ಐದು ಪ್ರಮುಖ ಗ್ಯಾರಂಟಿ ಯೋಜನೆಗಳನ್ನು ಪರಿಚಯಿಸಿದೆ ನಿಜ. ಆದರೆ, ಈ ಯೋಜನೆಯ ಸಕಾರಕ್ಕೆ ಹಲವು ಸಮಸ್ಯೆಗಳು ಎದುರಾಗಿದೆ. ಮೊದ ಮೊದಲು ಕೇಂದ್ರ ಸರ್ಕಾರ ಅಕ್ಕಿ ನೀಡುವುದಕ್ಕೆ ಹಿಂದೇಟು ಹಾಕುತ್ತಿದೆ ಎನ್ನಲಾಗಿತ್ತು. ಆದರೆ, ಇದೀಗ ಕೇಂದ್ರ ಸರ್ಕಾರವೇ ಅಕ್ಕಿ ವಿತರಣೆ ಮಾಡಲು ಸಮ್ಮತಿ ಸೂಚಿಸಿದರೂ, ರಾಜ್ಯ ಸರ್ಕಾರ ಹಿಂದೇಟು ಹಾಕುತ್ತಿದೆ ಎನ್ನಲಾಗಿದೆ.
ರಾಜ್ಯ ಸರ್ಕಾರವು ರೇಷನ್ ಕಾರ್ಡ್ ಇರುವವರಿಗೆ ಡಿಬಿಟಿಯ ಮೂಲಕ ಪ್ರತಿಯೊಬ್ಬರಿಗೂ 170 ರೂಪಾಯಿ ಕೊಡುತ್ತಿದೆ. ಕೇಂದ್ರದಿಂದ ಕರ್ನಾಟಕದ ಪ್ರತಿ ವ್ಯಕ್ತಿಗೆ ತಲಾ 5 ಕೆ.ಜಿ ಅಕ್ಕಿ ವಿತರಣೆ ಮಾಡಲಾಗುತ್ತಿದೆ. ಈ ಹಿಂದೆ ಕಾಂಗ್ರೆಸ್ ಈಗಾಗಲೇ ನೀಡುತ್ತಿರುವ 5 ಕೆ.ಜಿ ಅಕ್ಕಿಯೊಂದಿಗೆ ಮತ್ತೆ 5 ಕೆಜಿ ಅಕ್ಕಿ ಸೇರಿಸಿ ಒಟ್ಟು 10 ಕೆ.ಜಿ ನೀಡುವುದಾಗಿ ಹೇಳಿತ್ತು. ಆದರೆ, ಅದು ಸಾಧ್ಯವಾಗಿಲ್ಲ. ಹೀಗಾಗಿ, ಇದೀಗ ರಾಜ್ಯ ಸರ್ಕಾರ ಆಹಾರ ಕಿಟ್ ನೀಡಲು ಮುಂದಾಗಿದೆ ಎನ್ನಲಾಗಿದೆ.

ಶೀಘ್ರ ಬಾಕಿ ಹಣ ಬಿಡುಗಡೆ
5 ಕೆ.ಜಿ ಅಕ್ಕಿಯ ಬದಲಿಗೆ ರೇಷನ್ ಕಾರ್ಡ್‌ದಾರರ ಖಾತೆಗೆ ರಾಜ್ಯ ಸರ್ಕಾರವು ಡಿಬಿಟಿಯ ಮೂಲಕ ಪ್ರತಿಯೊಬ್ಬರಿಗೆ ತಲಾ 170 ರೂಪಾಯಿ ಹಣ ಕೊಡುತ್ತಿದೆ. ಆದರೆ, ಆಗಸ್ಟ್ ಹಾಗೂ ಸೆಪ್ಟೆಂಬರ್ ತಿಂಗಳ ಡಿಬಿಟಿ ಹಣ ಇನ್ನೂ ಬಾಕಿ ಇದೆ. ಶೀಘ್ರವೇ ಫಲಾನುಭವಿಗಳ ಖಾತೆಗೆ ಹಣ ವರ್ಗಾವಣೆ ಮಾಡುವುದಾಗಿ ರಾಜ್ಯ ಆಹಾರ ಸಚಿವ ಕೆ.ಹೆಚ್.ಮುನಿಯಪ್ಪ ಹೇಳಿದ್ದಾರೆ.
ಅಲ್ಲದೇ, ಕೇಂದ್ರ ಆಹಾರ ಸಚಿವ ಪ್ರಹ್ಲಾದ್ ಜೋಶಿ ಅವರನ್ನು ಭೇಟಿಯಾಗಿದ್ದು, ಕೇಂದ್ರದಿಂದ ರಾಜ್ಯಕ್ಕೆ ಅಕ್ಕಿ ನೀಡಲು ಸಿದ್ಧರಿರುವುದಾಗಿ ಹೇಳಿದ್ದಾರೆ ಎಂದು ಸಹ ಮಾಹಿತಿ ನೀಡಿದ್ದಾರೆ.












Click it and Unblock the Notifications