ಅನ್ನಭಾಗ್ಯ ಫಲಾನುಭವಿಗಳಿಗೆ ಗುಡ್ ನ್ಯೂಸ್: ಪಡಿತರ ಚೀಟಿ ಇ-ಕೆವೈಸಿ ಮಾಡಲು ಗಡುವು ವಿಸ್ತರಣೆ
ಬೆಂಗಳೂರು: ರಾಜ್ಯದ ಲಕ್ಷಾಂತರ ಬಡ ಹಾಗೂ ಮಧ್ಯಮ ವರ್ಗದ ಕುಟುಂಬಗಳಿಗೆ ಅನ್ನ ನೀಡುತ್ತಿರುವ ಈ ಪಡಿತರ ಚೀಟಿ ವ್ಯವಸ್ಥೆಯನ್ನ ಮತ್ತಷ್ಟು ಪಾರದರ್ಶಕಗೊಳಿಸಲು ಸರ್ಕಾರ ಮುಂದಾಗಿದೆ. ಇದರ ಭಾಗವಾಗಿ, ಪಡಿತರ ಚೀಟಿ ಫಲಾನುಭವಿಗಳ ಇ-ಕೆವೈಸಿ ದೃಢೀಕರಣಕ್ಕೆ ನೀಡಲಾಗಿದ್ದ ಗಡುವನ್ನ ಕರ್ನಾಟಕ ಆಹಾರ ಮತ್ತು ನಾಗರಿಕ ಸರಬರಾಜು ಇಲಾಖೆಯು ಇದೀಗ ನವೆಂಬರ್ 10ರವರೆಗೆ ವಿಸ್ತರಿಸಿದೆ.
ಈ ಹಿಂದೆ ಇ-ಕೆವೈಸಿ ಪ್ರಕ್ರಿಯೆಯನ್ನ ಪೂರ್ಣಗೊಳಿಸಲು ಆಗಸ್ಟ್ 20 ಕೊನೆಯ ದಿನ ಎಂದು ಘೋಷಿಸಲಾಗಿತ್ತು. ಆದರೆ, ಸರ್ವರ್ ಸಮಸ್ಯೆ ಹಾಗೂ ಹಲವು ತಾಂತ್ರಿಕ ಕಾರಣಗಳಿಂದಾಗಿ ಲಕ್ಷಾಂತರ ಫಲಾನುಭವಿಗಳಿಗೆ ನಿಗದಿತ ಸಮಯದೊಳಗೆ ಪ್ರಕ್ರಿಯೆ ಮುಗಿಸಲು ಸಾಧ್ಯವಾಗಿರಲಿಲ್ಲ. ಸಾರ್ವಜನಿಕರ ಹಿತದೃಷ್ಟಿಯಿಂದ ಇದೀಗ ಈ ಗಡುವನ್ನ ಮತ್ತೆ ವಿಸ್ತರಿಸಲಾಗಿದ್ದು, ಜನರಿಗೆ ದೊಡ್ಡ ರಿಲೀಫ್ ಸಿಕ್ಕಂತಾಗಿದೆ.

ರಾಜ್ಯದಲ್ಲಿ ನಕಲಿ ಪಡಿತರ ಚೀಟಿಗಳನ್ನ ರದ್ದುಪಡಿಸಿ, ಅರ್ಹ ಫಲಾನುಭವಿಗಳಿಗೆ ಮಾತ್ರ ಸರ್ಕಾರದ ಸೌಲಭ್ಯಗಳು ತಲುಪುವಂತೆ ಮಾಡುವುದು ರಾಜ್ಯ ಆಹಾರ ಇಲಾಖೆಯ ಪ್ರಮುಖ ಉದ್ದೇಶವಾಗಿದೆ. ಇದೇ ಕಾರಣಕ್ಕಾಗಿ ಕಡ್ಡಾಯವಾಗಿ ಇ-ಕೆವೈಸಿ ಮಾಡುವಂತೆ ಸೂಚಿಸಲಾಗಿದೆ. ಬಿಪಿಎಲ್, ಎಪಿಎಲ್ ಹಾಗೂ ಅಂತ್ಯೋದಯ ಪಡಿತರ ಚೀಟಿದಾರರು ತಮ್ಮ ರೇಷನ್ ಕಾರ್ಡ್‌ಗೆ ಆಧಾರ್ ಕಾರ್ಡ್ ವಿವರಗಳನ್ನು ಹಾಗೂ ಬಯೋಮೆಟ್ರಿಕ್ ದೃಢೀಕರಣವನ್ನು ನೀಡುವುದು ಅತ್ಯಗತ್ಯವಾಗಿದೆ.
ಲಕ್ಷಾಂತರ ಫಲಾನುಭವಿಗಳಿಂದ ಇ-ಕೆವೈಸಿ ಇನ್ನೂ ಬಾಕಿ
ಆಹಾರ ಇಲಾಖೆಯ ಅಂಕಿ-ಅಂಶಗಳ ಪ್ರಕಾರ, ರಾಜ್ಯದಲ್ಲಿ ಇನ್ನೂ ಲಕ್ಷಾಂತರ ಜನರು ಈ ಪ್ರಕ್ರಿಯೆಯನ್ನ ಪೂರ್ಣಗೊಳಿಸಿಲ್ಲ. ಸುಮಾರು ಒಂದು ವರ್ಷಕ್ಕೂ ಮೇಲ್ಪಟ್ಟು ಇ-ಕೆವೈಸಿ ಮಾಡಿಸಿದ 1,15,87,298 ಫಲಾನುಭವಿಗಳು ತಮ್ಮ ಮಾಹಿತಿಯನ್ನ ಮರು-ದೃಢೀಕರಿಸಬೇಕಿದೆ.
ಇದರ ಜೊತೆಗೆ, ರೇಷನ್ ಕಾರ್ಡ್ ಪಡೆದ ದಿನದಿಂದ ಈವರೆಗೆ ಒಮ್ಮೆಯೂ ಇ-ಕೆವೈಸಿ ಮಾಡಿಸದ 3.82 ಲಕ್ಷಕ್ಕೂ ಅಧಿಕ ಜನರಿದ್ದಾರೆ. ಅಲ್ಲದೆ, 5 ವರ್ಷಗಳಿಗಿಂತಲೂ ಹಿಂದೆ ಇ-ಕೆವೈಸಿ ಮಾಡಿಸಿದ 54.27 ಲಕ್ಷಕ್ಕೂ ಹೆಚ್ಚು ಫಲಾನುಭವಿಗಳು ಕೂಡ ಕೂಡಲೇ ತಮ್ಮ ಇ-ಕೆವೈಸಿ ದೃಢೀಕರಿಸಬೇಕಿದೆ ಎಂದು ಇಲಾಖೆ ಸ್ಪಷ್ಟಪಡಿಸಿದೆ.
ಹೊರರಾಜ್ಯದ ಕನ್ನಡಿಗರಿಗೂ ಲಭ್ಯವಿದೆ ಅನ್ನಸೇವೆ ಆ್ಯಪ್ ಸೌಲಭ್ಯ
ಉದ್ಯೋಗ ಅಥವಾ ವ್ಯಾಸಂಗದ ನಿಮಿತ್ತ ರಾಜ್ಯದಿಂದ ಹೊರಗೆ ನೆಲೆಸಿರುವ ಕನ್ನಡಿಗರಿಗೆ ಇ-ಕೆವೈಸಿ ಮಾಡಿಸುವುದು ದೊಡ್ಡ ಸವಾಲಾಗಿತ್ತು. ಕೇವಲ ಬೆರಳುಗುರುತು ನೀಡಲು ಊರಿಗೆ ಬಂದು ಹೋಗುವುದು ಆರ್ಥಿಕವಾಗಿ ಹೊರೆಯಾಗುತ್ತಿತ್ತು. ಈ ಸಮಸ್ಯೆಯನ್ನ ಅರಿತ ಸರ್ಕಾರ, ಅನ್ನಸೇವೆ ಆ್ಯಪ್ ಮೂಲಕ ಇ-ಕೆವೈಸಿ ಮಾಡುವ ಸೌಲಭ್ಯವನ್ನು ಇದೀಗ ದೇಶಾದ್ಯಂತ ವಿಸ್ತರಿಸಿದೆ.
ಹೊರರಾಜ್ಯಗಳಲ್ಲಿರುವ ರಾಜ್ಯದ ಪಡಿತರ ಚೀಟಿದಾರರು ತಮ್ಮ ಸ್ಮಾರ್ಟ್‌ಫೋನ್‌ಗಳಲ್ಲಿ ಗೂಗಲ್ ಪ್ಲೇ ಸ್ಟೋರ್‌ನಿಂದ ಅನ್ನಸೇವೆ ಆ್ಯಪ್‌ನ ಹೊಸ ಅಪ್‌ಡೇಟ್ ಅನ್ನ ಡೌನ್‌ಲೋಡ್ ಮಾಡಿಕೊಂಡು, ತಾವು ಇರುವಲ್ಲಿಂದಲೇ ಅತ್ಯಂತ ಸುಲಭವಾಗಿ ಪ್ರಕ್ರಿಯೆಯನ್ನ ಪೂರ್ಣಗೊಳಿಸುವಂತೆ ಇಲಾಖೆ ಮನವಿ ಮಾಡಿಕೊಂಡಿದೆ.
ನ್ಯಾಯಬೆಲೆ ಅಂಗಡಿಗಳಲ್ಲಿ ಆಹಾರ ತಂತ್ರಾಂಶದ ಮೂಲಕ ಕೆವೈಸಿ
ಮೊಬೈಲ್ ಆ್ಯಪ್ ಬಳಸಲು ಬಾರದವರು ಅಥವಾ ಸ್ಮಾರ್ಟ್‌ಫೋನ್ ಇಲ್ಲದ ಗ್ರಾಮೀಣ ಭಾಗದ ಜನರು ಆತಂಕಪಡುವ ಅಗತ್ಯವಿಲ್ಲ. ನಿಮ್ಮ ಹತ್ತಿರದ ನ್ಯಾಯಬೆಲೆ ಅಂಗಡಿಗಳಿಗೆ (ಪಡಿತರ ವಿತರಣಾ ಕೇಂದ್ರ) ಖುದ್ದಾಗಿ ಭೇಟಿ ನೀಡಿ, ಅಲ್ಲಿರುವ ಆಹಾರ ತಂತ್ರಾಂಶದ ಮೂಲಕ ನೇರವಾಗಿ ಬಯೋಮೆಟ್ರಿಕ್ ನೀಡಿ ಇ-ಕೆವೈಸಿ ದೃಢೀಕರಿಸಬಹುದು.
ಗಡುವಿನೊಳಗೆ ಪ್ರಕ್ರಿಯೆ ಪೂರ್ಣಗೊಳಿಸದಿದ್ದರೆ ಏನಾಗಲಿದೆ?
ಒಂದು ವೇಳೆ ನವೆಂಬರ್ 10ರ ಗಡುವಿನೊಳಗೆ ಪಡಿತರ ಚೀಟಿ ಇ-ಕೆವೈಸಿ ದೃಢೀಕರಣ ಪ್ರಕ್ರಿಯೆಯನ್ನ ಪೂರ್ಣಗೊಳಿಸದಿದ್ದರೆ, ಇಲಾಖೆಯು ಅಂತಹ ಕಾರ್ಡ್‌ಗಳ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವ ಎಚ್ಚರಿಕೆ ನೀಡಿದೆ. ಕಾರ್ಡ್ ಅಮಾನತುಗೊಳ್ಳುವ ಅಥವಾ ಪ್ರತಿ ತಿಂಗಳು ವಿತರಿಸಲಾಗುವ ಉಚಿತ ಅಕ್ಕಿ ಹಾಗೂ ಅನ್ನಭಾಗ್ಯ ಯೋಜನೆಯಡಿ ನೀಡಲಾಗುವ ನಗದು ವರ್ಗಾವಣೆಯು ಸ್ಥಗಿತಗೊಳ್ಳುವ ಅಪಾಯವಿದೆ.
ಹೀಗಾಗಿ, ತಡ ಮಾಡದೆ ಬೇಗ ನಿಮ್ಮ ಕೆವೈಸಿ ಪ್ರಕ್ರಿಯೆಯನ್ನ ಮುಗಿಸುವುದು ಸೂಕ್ತ.


Click it and Unblock the Notifications
