ಎಚ್ಡಿಕೆ ಸರಕಾರ ಪತನದ ಅಂದಿನ ರಹಸ್ಯವನ್ನು ಈಗ ಬಾಯಿಬಿಟ್ಟ ರಮೇಶ್ ಜಾರಕಿಹೊಳಿ
ಕೊರೊನಾ ಸಂಕಷ್ಟದ ವೇಳೆ ಎಚ್.ಡಿ.ಕುಮಾರಸ್ವಾಮಿ ನೇತೃತ್ವದ ಸಮ್ಮಿಶ್ರ ಸರಕಾರ ಉರುಳಿದ ಕಥೆ, ಕರ್ನಾಟಕದ ಜನತೆಗೆ ಈಗ ಬೇಕಾ? ಗೊತ್ತಿಲ್ಲ.. ಆದರೆ, ಜಲಸಂಪನ್ಮೂಲ ಖಾತೆಯ ಸಚಿವರೇ ಆ ವಿಚಾರವನ್ನು ಮತ್ತೆ ಸ್ಮರಿಸಿಕೊಂಡಿದ್ದಾರೆ.
ಕಳೆದ ಮೇ 23ಕ್ಕೆ ಕಾಂಗ್ರೆಸ್ ಮೈತ್ರಿಯೊಂದಿಗೆ ಎಚ್.ಡಿ.ಕುಮಾರಸ್ವಾಮಿ ಅಧಿಕಾರಕ್ಕೆ ಬಂದ ನಂತರ, ಸರಕಾರಕ್ಕೆ ಮುಗ್ಗಲಮುಳ್ಳಾಗಿ ಕಾಡಿದವರು ಈಗಿನ ಜಲಸಂಪನ್ಮೂಲ ಖಾತೆಯ ಸಚಿವರಾದ ರಮೇಶ್ ಜಾರಕಿಹೊಳಿ.
ಎಚ್ಡಿಕೆ ಸರಕಾರದ ಅವಧಿಯಲ್ಲೂ ಉತ್ತಮ ಖಾತೆಯನ್ನೇ ಹೊಂದಿದ್ದ ಜಾರಕಿಜೊಳಿ, ಯಾವುದೇ ಕ್ಯಾಬಿನೆಟ್ ಮೀಟಿಂಗ್ ನಲ್ಲಿ ಭಾಗವಹಿಸದೇ, ಮೊದಲಿಂದಲೂ, ರೆಬೆಲ್ ಆಗಿಯೇ ಗುರುತಿಸಿಕೊಂಡಿದ್ದರು.
ತಾನು ಸೇರಿದಂತೆ, ಜೆಡಿಎಸ್ಸಿನ ಇಬ್ಬರು ಮತ್ತು ಕಾಂಗ್ರೆಸ್ಸಿನ ಹನ್ನೆರಡು ಶಾಸಕರನ್ನು ಎಚ್ಡಿಕೆ ಸರಕಾರದ ವಿರುದ್ದ ಎತ್ತಿಕಟ್ಟಿ, ಸರಕಾರ ಬೀಳಿಸುವಲ್ಲಿ ಯಶಸ್ವಿಯಾಗಿದ್ದ ರಮೇಶ್ ಜಾರಕಿಹೊಳಿ, ಅದಕ್ಕೆ ಇನ್ನೊಬ್ಬ ಮುಖಂಡರ ಸಹಕಾರವೂ ಪ್ರಮುಖವಾಗಿತ್ತು ಎಂದು ಹೇಳಿದ್ದಾರೆ.

ಎತ್ತಿನಹೊಳೆ ಕುಡಿಯುವ ನೀರು ಯೋಜನೆ
ಬುಧವಾರ (ಮೇ 13) ತುಮಕೂರು ತಾಲೂಕು, ಗುಬ್ಬಿ ತಾಲೂಕು ವ್ಯಾಪ್ತಿಯ ಹೋಬಳಿಯೊಂದರಲ್ಲಿ ನಡೆಯುತ್ತಿರುವ ಎತ್ತಿನಹೊಳೆ ಕುಡಿಯುವ ನೀರು ಯೋಜನೆಯ ಕಾಮಗಾರಿ ವೀಕ್ಷಿಸಲು ಜಲಸಂಪನ್ಮೂಲ ಖಾತೆಯ ಸಚಿವ ರಮೇಶ್ ಜಾರಕಿಹೊಳಿ ಹೋಗಿದ್ದರು. ಆ ವೇಳೆ, ಎಚ್ಡಿಕೆ ಸರಕಾರ ಪತನದ ಹಿಂದಿನ ಸೂತ್ರಧಾರರೊಬ್ಬರ ಹೆಸರನ್ನು ಬಹಿರಂಗ ಪಡಿಸಿದ್ದಾರೆ.

ಮೈತ್ರಿ ಸರಕಾರ ಉರುಳಲು ಪ್ರಮುಖ ಕಾರಣ
"ಮೈತ್ರಿ ಸರಕಾರ ಉರುಳಲು ಪ್ರಮುಖ ಕಾರಣಕರ್ತರಲ್ಲಿ ಒಬ್ಬರು ಮಧುಗಿರಿಯ ಮಾಜಿ ಶಾಸಕ ಕೆ.ಎನ್.ರಾಜಣ್ಣ" ಎಂದು ಸಚಿವ ಜಾರಕಿಹೊಳಿ ಹೇಳಿದ್ದಾರೆ. "ನಾವಿಬ್ಬರೂ ಸೇರಿ, ಹೇಗಾದರೂ ಮಾಡಿ, ಮೈತ್ರಿ ಸರಕಾರವನ್ನು ಬೀಳಿಸಲೇ ಬೇಕೆಂದು ಪಣ ತೊಟ್ಟಿದ್ದೆವು. ಅದರಂತೇ ಮಾಡಿದ್ದೇವೆ"ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.

ತುಮಕೂರು ಜಿಲ್ಲೆಯ ಪ್ರಭಾವೀ ಮುಖಂಡ ಕೆ.ಎನ್.ರಾಜಣ್ಣ
ಕಳೆದ ಲೋಕಸಭಾ ಚುನಾವಣೆಯಲ್ಲಿ ತುಮಕೂರು ಕ್ಷೇತ್ರವನ್ನು ಜೆಡಿಎಸ್ಸಿಗೆ ಬಿಟ್ಟುಕೊಟ್ಟಿದ್ದಕ್ಕೆ ಕೆ.ಎನ್.ರಾಜಣ್ಣ, ಕಾಂಗ್ರೆಸ್ ಮತ್ತು ಜೆಡಿಎಸ್ ಮುಖಂಡರ ವಿರುದ್ದ ಕಿಡಿಕಾರಿದ್ದರು. ಜಿಲ್ಲೆಯ ಪ್ರಭಾವೀ ಮುಖಂಡರಾಗಿರುವ ರಾಜಣ್ಣ, ಮೈತ್ರಿ ಸರಕಾರದ ವಿರುದ್ದ ಅಪಸ್ವರ ಎತ್ತುತ್ತಲೇ ಇದ್ದರು.

ಬಿಜೆಪಿ ಸೇರುವಂತೆ ರಾಜಣ್ಣ ಅವರನ್ನು ಒತ್ತಾಯಿಸುತ್ತಿದ್ದೇವೆ,ಜಾರಕಿಹೊಳಿ
ಯಡಿಯೂರಪ್ಪನವರ ಪ್ರಮಾಣವಚನ ಸಮಾರಂಭದಲ್ಲಿ ಭಾಗವಹಿಸಿದ್ದ ರಾಜಣ್ಣ, ಸದ್ಯದಲ್ಲೇ ಬಿಜೆಪಿ ಸೇರಲಿದ್ದಾರೆಂದು ಅಂದು ಸುದ್ದಿಯಾಗಿತ್ತು. "ಬಿಜೆಪಿ ಸೇರುವಂತೆ ರಾಜಣ್ಣ ಅವರನ್ನು ಒತ್ತಾಯಿಸುತ್ತಿದ್ದೇವೆ. ಅವರು ಏನು ನಿರ್ಧಾರ ತೆಗೆದುಕೊಳ್ಳುತ್ತಾರೆ ಎನ್ನುವುದನ್ನು ಕಾದು ನೋಡಬೇಕಿದೆ"ಎಂದು ರಮೇಶ್ ಜಾರಕಿಹೊಳಿ ಹೇಳಿದ್ದಾರೆ.












Click it and Unblock the Notifications