ಡಿಕೆಶಿ ಸರಕಾರದ ಮೊದಲ ವಿಕೆಟ್ ಪತನ, ಜಲ ಸಂಪನ್ಮೂಲ ಖಾತೆ ಬೇಡವೆಂದು ರಾಮಲಿಂಗಾ ರೆಡ್ಡಿ ರಾಜೀನಾಮೆ

Ramalinga Reddy: ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ನೇತೃತ್ವದ ನೂತನ ಸಚಿವ ಸಂಪುಟದಲ್ಲಿ ಖಾತೆ ಹಂಚಿಕೆಯಾದ ಬೆನ್ನಲ್ಲೇ ಆಂತರಿಕ ಅಸಮಾಧಾನ ಸ್ಫೋಟಗೊಂಡಿದೆ. ಬೆಂಗಳೂರು ನಗರಾಭಿವೃದ್ಧಿ ಖಾತೆ ಸಿಗದ ಹಿನ್ನೆಲೆಯಲ್ಲಿ ಬೇಸರಗೊಂಡ ಕಾಂಗ್ರೆಸ್ ಹಿರಿಯ ನಾಯಕ ರಾಮಲಿಂಗಾ ರೆಡ್ಡಿ ಅವರು ತಮ್ಮ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡಿದ್ದಾರೆ. ಸದ್ಯ ಈ ಬೆಳವಣಿಗೆ ರಾಜ್ಯ ರಾಜಕೀಯದಲ್ಲಿ ಹೊಸ ಚರ್ಚೆಗೆ ಕಾರಣವಾಗಿದೆ.

ಕಾಂಗ್ರೆಸ್‌ನ ಅತ್ಯಂತ ಹಿರಿಯ ಹಾಗೂ ಪ್ರಭಾವಿ ನಾಯಕರಾಗಿರುವ ರಾಮಲಿಂಗಾ ರೆಡ್ಡಿ ಅವರು ಆರಂಭದಿಂದಲೂ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯ ಮೇಲೆ ಕಣ್ಣಿಟ್ಟಿದ್ದರು. ಆದರೆ ಅವರಿಗೆ ಜಲಸಂಪನ್ಮೂಲ ಖಾತೆಯನ್ನು ಹಂಚಿಕೆ ಮಾಡಲಾಗಿದೆ. ಅವರು ಕೇಳಿದ್ದ ಬೆಂಗಳೂರು ನಗರಾಭಿವೃದ್ಧಿ ಇಲಾಖೆಯನ್ನು ಕೃಷ್ಣ ಬೈರೇಗೌಡ ಅವರಿಗೆ ವಹಿಸಿರುವುದು ರೆಡ್ಡಿ ಅವರ ತೀವ್ರ ಅಸಮಾಧಾನಕ್ಕೆ ಕಾರಣವಾಗಿದೆ. ಆದ್ದರಿಂದ ಈ ನಿರ್ಧಾರ ತೆಗೆದುಕೊಂಡಿದ್ದಾರೆ ಎನ್ನಲಾಗಿದೆ.

Ramalinga Reddy Resigns from Karnataka Cabinet After Missing Bengaluru Development Portfolio

ರಾಮಲಿಂಗಾ ರೆಡ್ಡಿ ಹೇಳಿದ್ದೇನು?

ರಾಮಲಿಂಗಾರೆಡ್ಡಿ ಅವರು ಕಚೇರಿಗೆ ಆಗಮಿಸಿ ರಾಜೀನಾಮೆ ಪತ್ರಕ್ಕೆ ಸಹಿ ಹಾಕಿದ್ದು, ಬಳಿಕ ಸುದ್ದಿಗೋಷ್ಠಿ ನಡೆಸಿ ರಾಜೀನಾಮೆ ಘೋಷಣೆ ಮಾಡಿದ್ದಾರೆ. ಬಳಿಕ ಮಾತಾಡಿದ ಅವರು, 'ನಾನು 1973ರಲ್ಲಿ ವಿದ್ಯಾರ್ಥಿ ನಾಯಕನಾಗಿ ನನ್ನ ರಾಜಕೀಯ ಜೀವನ ಆರಂಭಿಸಿದೆ. ಅಂದು ವೀರಪ್ಪ ಮೊಯ್ಲಿ ಅವರು ನನ್ನ ಪ್ರತಿಭೆಯನ್ನು ಗುರುತಿಸಿ ನನಗೆ ಟಿಕೆಟ್ ನೀಡಿದ್ದರು. ಅಂದಿನಿಂದ ಇಂದಿನವರೆಗೆ ಪಕ್ಷಕ್ಕಾಗಿ ಪ್ರಾಮಾಣಿಕವಾಗಿ ದುಡಿದಿದ್ದೇನೆ. ನನ್ನ ದೀರ್ಘಾವಧಿಯ ರಾಜಕೀಯ ಜೀವನದಲ್ಲಿ ಒಟ್ಟು 6 ಬಾರಿ ಸಚಿವನಾಗಿ ವಿವಿಧ ಪ್ರಮುಖ ಜವಾಬ್ದಾರಿಗಳನ್ನು ಯಶಸ್ವಿಯಾಗಿ ನಿಭಾಯಿಸಿದ್ದೇನೆ,' ಎಂದು ತಮ್ಮ ರಾಜಕೀಯ ಇತಿಹಾಸವನ್ನು ನೆನಪಿಸಿಕೊಂಡರು.

'ಯಾರ ಬಳಿಯೂ ಬೇಡಿಕೆ ಇಟ್ಟಿರಲಿಲ್ಲ'

'ಆದರೆ ನಾನು ಈ ಬಾರಿಯೂ ಯಾರ ಬಳಿಯೂ ಹೋಗಿ ಇಂಥಹದ್ದೇ ಖಾತೆ ಬೇಕು ಎಂದು ಯಾರ ಬಳಿಯೂ ಬೇಡಿಕೆ ಇಟ್ಟಿರಲಿಲ್ಲ. ಆದರೆ ಪಕ್ಷದ ನಾಯಕರೇ ಸ್ವತಃ ನನ್ನನ್ನು ಎರಡು ಬಾರಿ ಪ್ರತ್ಯೇಕವಾಗಿ ಕರೆದು ಮಾತನಾಡಿ, ಈ ಬಾರಿ ನಿಮಗೆ ಬೆಂಗಳೂರು ನಗರಾಭಿವೃದ್ಧಿ ಖಾತೆಯನ್ನೇ ನೀಡುತ್ತೇವೆ ಎಂದು ಭರವಸೆ ಕೊಟ್ಟಿದ್ದರು. ಅವರ ಮಾತನ್ನು ನಂಬಿ ನಾನು ಸಚಿವ ಸ್ಥಾನ ಸ್ವೀಕರಿಸಿದ್ದೆ. ಆದರೆ ಈಗ ಅಂತಿಮ ಪಟ್ಟಿಯಲ್ಲಿ ನನಗೆ ಬೇರೆ ಖಾತೆ ನೀಡಿ ಸಂಪೂರ್ಣವಾಗಿ ನಿರಾಸೆ ಮೂಡಿಸಿದ್ದಾರೆ. ಹಿರಿಯ ನಾಯಕನಾದ ನನಗೆ ನೀಡಿದ ಮಾತನ್ನು ತಪ್ಪಿ ನಡೆದುಕೊಂಡಿರುವುದು ತೀವ್ರ ನೋವುಂಟು ಮಾಡಿದೆ. ಇದೇ ಕಾರಣಕ್ಕಾಗಿ ನಾನು ನನ್ನ ಸಚಿವ ಸ್ಥಾನಕ್ಕೆ ರಾಜೀನಾಮೆ ನೀಡುತ್ತಿದ್ದೇನೆ,' ಎಂದು ಸ್ಪಷ್ಟನೆ ನೀಡಿದರು.

ಕಾಂಗ್ರೆಸ್ ಸರ್ಕಾರಕ್ಕೆ ಎದುರಾದ ಮೊದಲ ಸವಾಲು

ರಾಮಲಿಂಗಾರೆಡ್ಡಿ ಅವರು ಬೆಂಗಳೂರು ನಗರದ ರಾಜಕೀಯದಲ್ಲಿ ದಶಕಗಳ ಕಾಲ ಹಿಡಿತ ಹೊಂದಿರುವ ಪ್ರಭಾವಿ ನಾಯಕರು. ಹೀಗಾಗಿ ಅವರು ಬೆಂಗಳೂರಿನ ಉಸ್ತುವಾರಿ ಹಾಗೂ ನಗರಾಭಿವೃದ್ಧಿ ಖಾತೆಯ ಮೇಲೆ ಕಣ್ಣಿಡುವುದು ಸಹಜವಾಗಿತ್ತು. ಆದರೆ ಹೈಕಮಾಂಡ್ ಕೃಷ್ಣ ಬೈರೇಗೌಡ ಅವರ ಹೆಗಲಿಗೆ ಈ ಜವಾಬ್ದಾರಿಯನ್ನು ಹೊರಿಸಿದೆ.

ಡಿಕೆ ಶಿವಕುಮಾರ್‌ ಸರ್ಕಾರಕ್ಕೆ ರೆಡ್ಡಿ ಬಿಗ್ ಶಾಕ್

ನೂತನ ಸರ್ಕಾರ ಅಸ್ತಿತ್ವಕ್ಕೆ ಬಂದು ಖಾತೆಗಳನ್ನು ಹಂಚಿಕೆ ಮಾಡಿದ ಮೊದಲ ದಿನವೇ ಅತ್ಯಂತ ಹಿರಿಯ ಸಚಿವ ಸುದ್ದಿಗೋಷ್ಠಿ ನಡೆಸಿ ಬಹಿರಂಗವಾಗಿ ರಾಜೀನಾಮೆ ನೀಡಿರುವುದು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರಿಗೆ ದೊಡ್ಡ ತಲೆನೋವಾಗಿ ಪರಿಣಮಿಸಿದೆ. ಈಗಾಗಲೇ ಸಂಪುಟದ ಇತರ ಕೆಲವು ಸಚಿವರಲ್ಲೂ ಖಾತೆಗಳ ಬಗ್ಗೆ ಆಂತರಿಕ ಅಸಮಾಧಾನವಿದೆ ಎಂಬ ಊಹಾಪೋಹಗಳ ನಡುವೆ ರೆಡ್ಡಿ ಅವರ ಈ ನಿರ್ಧಾರ ಸರ್ಕಾರಕ್ಕೆ ಹೊಡೆತ ನೀಡಿದೆ.

ರಾಮಲಿಂಗಾರೆಡ್ಡಿ ಅವರ ರಾಜೀನಾಮೆಯನ್ನು ಮುಖ್ಯಮಂತ್ರಿಗಳು ಅಂಗೀಕರಿಸುತ್ತಾರಾ ಅಥವಾ ಅವರ ಮನವೊಲಿಸಿ ಬೇರೆ ಪ್ರಮುಖ ಖಾತೆ ನೀಡುವ ಮೂಲಕ ಈ ಅಸಮಾಧನವನ್ನ ಶಮನಗೊಳಿಸುತ್ತಾರಾ ಎಂಬುದನ್ನು ಕಾದುನೋಡಬೇಕಿದೆ. ಸದ್ಯಕ್ಕೆ ಈ ಬೆಳವಣಿಗೆಯಿಂದಾಗಿ ರಾಜ್ಯ ಕಾಂಗ್ರೆಸ್ ವಲಯದಲ್ಲಿ ತೀವ್ರ ಸಂಚಲನ ಮೂಡಿದೆ.

Notifications
Settings
Clear Notifications
Notifications
Use the toggle to switch on notifications
  • Block for 8 hours
  • Block for 12 hours
  • Block for 24 hours
  • Don't block
Gender
Select your Gender
  • Male
  • Female
  • Others
Age
Select your Age Range
  • Under 18
  • 18 to 25
  • 26 to 35
  • 36 to 45
  • 45 to 55
  • 55+