ರಾಮಮಂದಿರ ಉದ್ಘಾಟನೆ; ಮಂತ್ರಾಕ್ಷತೆ ಬಳಕೆ ಮಾಡುವುದು ಹೇಗೆ?
ಬೆಂಗಳೂರು, ಜನವರಿ 12: ಅಯೋಧ್ಯೆಯ ಶ್ರೀ ರಾಮ ಮಂದಿರದಲ್ಲಿ ಜನವರಿ 22ರ ಸೋಮವಾರ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮ ನಡೆಯಲಿದೆ. ಈ ಕಾರ್ಯಕ್ರಮದ ಅಂಗವಾಗಿ ಬಿಜೆಪಿ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯ ಮಹಾಸಂಪರ್ಕ ಅಭಿಯಾನವನ್ನು ನಡೆಸುತ್ತಿದೆ. ಮನೆ-ಮನೆಗೆ ಮಂತ್ರಾಕ್ಷತೆಯನ್ನು ತಲುಪಿಸುತ್ತಿದೆ.
ಅಯೋಧ್ಯೆ ಶ್ರೀರಾಮ ಮಂದಿರದ ಪವಿತ್ರ ಮಂತ್ರಾಕ್ಷತೆಯು ದೇಶಾದ್ಯಂತ ಮನೆಗಳಿಗೆ ತಲುಪುತ್ತಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ನಾವು ಅದನ್ನು ಏನು ಮಾಡಬೇಕು? ಎಂಬ ಬಗ್ಗೆ ಹಲವರು ಕೇಳುತ್ತಿದ್ದಾರೆ. ಈ ಕುರಿತು ಫೇಸ್‌ಬುಕ್ ಪುಟವೊಂದರಲ್ಲಿ ನೀಡಿದ ಮಾಹಿತಿ ಇಲ್ಲಿದೆ.

ಫೇಸ್‌ಬುಕ್ ಪೋಸ್ಟ್ ವಿವರ
ನಮಗೆಲ್ಲಾ ತಿಳಿದಿರುವ ಹಾಗೆ ಅಯೋಧ್ಯೆಯ ರಾಮ ಮಂದಿರದ ಮಂತ್ರಾಕ್ಷತೆ ದೇಶದ ಪ್ರತಿಯೊಂದು ಹಿಂದೂವಿನ ಮನೆ ತಲುಪುತ್ತಿದೆ. ಇನ್ನು ಕೆಲವು ಮನೆಗೆ ತಲುಪಬೇಕಿದೆ. ಮಂತ್ರಾಕ್ಷತೆ ಸಿಕ್ಕಿದ ಬಳಿಕ ಅದನ್ನು ನಾವು ಈಗಲೇ ಉಪಯೋಗ ಮಾಡುವಂತಿಲ್ಲ.
ಜನವರಿ 22ರ ತನಕ ದೇವರ ಮಂಟಪ ಅಥವಾ ದೇವರ ಕೋಣೆಯಲ್ಲಿ ಮಂತ್ರಾಕ್ಷತೆ ಇಡಬೇಕು. ದಿನನಿತ್ಯ ದೇವರಿಗೆ ಪೂಜೆ ಮಾಡುವಾಗ ಆ ಮಂತ್ರಾಕ್ಷತೆಗೂ ಪೂಜೆ ಸಲ್ಲಿಸಬೇಕು.
ಸೋಮವಾರ ಮಧ್ಯಾಹ್ನ 12 ಘಂಟೆ 29 ನಿಮಿಷ 8 ಸೆಕೆಂಡ್‌ನ ಮೇಷ ಲಗ್ನದಲ್ಲಿ ಅಯೋಧ್ಯೆಯ ರಾಮಮಂದಿರದಲ್ಲಿ ಶ್ರೀ ರಾಮಚಂದ್ರನ ಭವ್ಯ ಮೂರ್ತಿಯ ಪ್ರಾಣ ಪ್ರತಿಷ್ಠೆ ನಡೆಯುತ್ತದೆ. ಆವಾಗ ಮಂತ್ರಾಕ್ಷತೆಗೆ ದಿವ್ಯಶಕ್ತಿ ಪ್ರಾಪ್ತವಾಗುತ್ತದೆ.
* ಆ ಬಳಿಕ ಊಟದ ಅಕ್ಕಿಯೊಡನೆ ಈ ಮಂತ್ರಾಕ್ಷತೆಯನ್ನು ಹಾಕಿ ಅದನ್ನು ಅನ್ನವಾಗಿಸಿ ಸೇವಿಸಬಹುದು.
* ಮಂತ್ರಾಕ್ಷತೆಯನ್ನು ಮನೆಯವರೆಲ್ಲಾ ಹಂಚಿಕೊಂಡು ಶ್ರದ್ಧೆಯಿಂದ ತಲೆಗೆ ಹಾಕಿಕೊಳ್ಳಬಹುದು.
* ಪಾಯಸ ಮಾಡಿ ಸೇವಿಸಬಹುದು.
* ನಮ್ಮ ಹಣ, ಚಿನ್ನ ಇಡುವ ಕಪಾಟಿನಲ್ಲಿ ಅದನ್ನು ಭದ್ರವಾಗಿ ಇಡಬಹುದು.
* ಮನೆಯ ಎದುರಿನ ಬಾಗಿಲಿನ ಮೇಲೆ ಬಟ್ಟೆಯಲ್ಲಿ ಸುತ್ತಿ ಅತ್ಯಂತ ಭದ್ರವಾಗಿ ಕಟ್ಟಿ ಇಡಬಹುದು.
* ದೇವರ ಕೋಣೆಯಲ್ಲಿ ಕೂಡ ಭದ್ರವಾಗಿ ಶ್ರದ್ಧೆಯಿಂದ ಇಟ್ಟುಕೊಳ್ಳಬಹುದು.
ಮಂತ್ರಾಕ್ಷತೆಯ ಜೊತೆಗೆ ರಾಮಮಂದಿರದ ಒಂದು ಚಿತ್ರ ಹಾಗೂ ಅದರ ಹಿನ್ನಲೆಯುಳ್ಳ ಒಂದು ಕರಪತ್ರವನ್ನು ನೀಡಲಾಗುತ್ತಿದೆ. ಇದನ್ನು ಕೂಡ ಶ್ರದ್ಧೆಯಿಂದ ಇಟ್ಟುಕೊಂಡರೆ ಒಳ್ಳೆಯದು ಎಂದು ಫೇಸ್‌ಬುಕ್ ಪೋಸ್ಟ್ ಮಾಹಿತಿ ನೀಡಿದೆ.
ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದ ಉದ್ಘಾಟನಾ ಕಾರ್ಯಕ್ರಮಕ್ಕೆ ತಯಾರಿ ಜೋರಾಗಿದೆ. ಉತ್ತರ ಪ್ರದೇಶ ಸರ್ಕಾರ ಕಾರ್ಯಕ್ರಮಕ್ಕೆ ಸಕಲ ರೀತಿಯಲ್ಲಿ ಸಜ್ಜಾಗಿದೆ. ಸೋಮವಾರ ನಡೆಯುವ ಮೂರ್ತಿ ಪ್ರತಿಷ್ಠಾಪನೆ ಕಾರ್ಯಕ್ರಮದಲ್ಲಿ ಪ್ರಧಾನಿ ನರೇಂದ್ರ ಮೋದಿ ಸೇರಿದಂತೆ ಹಲವು ಗಣ್ಯರು ಪಾಲ್ಗೊಳ್ಳಲಿದ್ದಾರೆ.
ದೇಶದ ವಿವಿಧ ರಾಜ್ಯಗಳಿಂದ ಸಾಧುಗಳು, ಸಂತರು, ವಿವಿಧ ಮಠಗಳ ಮಠಾಧೀಶರು ಶ್ರೀರಾಮ ಮಂದಿರದ ಉದ್ಘಾಟನೆಗಾಗಿ ಅಯೋಧ್ಯೆಗೆ ತೆರಳುತ್ತಿದ್ದಾರೆ. ಜನವರಿ 22ರಂದು ಅಯೋಧ್ಯೆಗೆ ಬರಬೇಡಿ. ಬಳಿಕ ಬನ್ನಿ ಎಂದು ಪ್ರಧಾನಿ ನರೇಂದ್ರ ಮೋದಿ ಈಗಾಗಲೇ ಜನರಿಗೆ ಕರೆ ನೀಡಿದ್ದಾರೆ.
ಪ್ರಧಾನಿ ನರೇಂದ್ರ ಮೋದಿ ಅಯೋಧ್ಯೆಯಲ್ಲಿ ಶ್ರೀ ರಾಮ ಮಂದಿರದಲ್ಲಿ ನಡೆಯುವ ಪ್ರಾಣ ಪ್ರತಿಷ್ಠೆ ಹಿನ್ನಲೆಯಲ್ಲಿ ದೇಶದಾದ್ಯಂತ ಇರುವ ಎಲ್ಲಾ ದೇವಾಲಯ ಮತ್ತು ತೀರ್ಥಕ್ಷೇತ್ರಗಳಲ್ಲಿ ಸ್ವಚ್ಛತಾ ಕಾರ್ಯ ನಡೆಸಲು ಕರೆ ನೀಡಿದ್ದಾರೆ. ಜನವರಿ 14ರಿಂದ 22ರ ತನಕ ಈ ಕಾರ್ಯ ನಡೆಯಲಿದೆ.
ಕರ್ನಾಟಕದ ಮುಜರಾಯಿ ಇಲಾಖೆ ಜನವರಿ 22ರ ಸೋಮವಾರ ಎಲ್ಲಾ ದೇವಾಲಯಗಳಲ್ಲಿ ವಿಶೇಷ ಪೂಜೆ/ ಪ್ರಾರ್ಥನೆ ಸಲ್ಲಿಸಬೇಕು ಎಂದು ಈಗಾಗಲೇ ಸುತ್ತೋಲೆ ಹೊರಡಿಸಿದೆ. ಕರ್ನಾಟಕದಿಂದಲೂ ಹಲವು ಗಣ್ಯರು ಅಂದು ಅಯೋಧ್ಯಗೆ ತೆರಳುತ್ತಿದ್ದಾರೆ.












Click it and Unblock the Notifications