ಕೊನೆಗೂ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಅಧಿಕಾರ ಸ್ವೀಕರಿಸಿದ ರಕ್ಷಾ ರಾಮಯ್ಯ!
ಬೆಂಗಳೂರು, ಆ 13: ಕರ್ನಾಟಕ ಪ್ರದೇಶ ಯುವ ಕಾಂಗ್ರೆಸ್ ಅಧ್ಯಕ್ಷರಾಗಿ ಎಂ.ಎಸ್. ರಕ್ಷಾ ರಾಮಯ್ಯ ಶುಕ್ರವಾರ ಅಧಿಕೃತವಾಗಿ ಅಧಿಕಾರ ಸ್ವೀಕರಿಸಿದರು. ಈ ಹಿಂದೆಯೆ ಯುವ ಕಾಂಗ್ರೆಸ್ ಸಮಿತಿ ಅಧ್ಯಕ್ಷರಾಗಿ ಚುನಾಯಿತರಾಗಿದ್ದರು. ಬೆಂಗಳೂರಿನಲ್ಲಿ ನಡೆದ ಕಾರ್ಯಕ್ರಮದಲ್ಲಿ ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಬಿ.ವಿ. ಶ್ರೀನಿವಾಸ್ ಅವರು ರಕ್ಷಾ ರಾಮಯ್ಯಗೆ ಕಾಂಗ್ರೆಸ್ ಪಕ್ಷದ ಬಾವುಟ ಹಸ್ತಾಂತರಿಸಿದರು.
ಕಾರ್ಯಕ್ರಮದಲ್ಲಿ ಮಾತನಾಡಿದ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್, "ಪಕ್ಷವನ್ನು ಮತ್ತೆ ಅಧಿಕಾರಕ್ಕೆ ತರಲು ಯುವ ಕಾಂಗ್ರೆಸ್ ಪಾತ್ರ ಅತ್ಯಂತ ನಿರ್ಣಾಯಕ. ಇಂದು ಪ್ರತಿಯೊಂದು ಮತವೂ ಮುಖ್ಯ. ಪ್ರಜಾಪ್ರಭುತ್ವದಲ್ಲಿ 49 ಅಂಕ ಪಡೆದರೆ ಅದು ಶೂನ್ಯಕ್ಕೆ ಸಮ. 51 ಅಂಕ ಪಡೆದರೆ ಅದು ಶತಕವಾಗುತ್ತದೆ. ಹೀಗಾಗಿ ಯುವ ಕಾಂಗ್ರೆಸ್ ನಾಯಕರು ಈಗಿನಿಂದಲೇ 18 - 30 ವರ್ಷದವರಿಂದ ಅಭಿಪ್ರಾಯ ಸಂಗ್ರಹಣೆ ಮಾಡಬೇಕು. ಕೇಂದ್ರದ ನರೇಂದ್ರ ಮೋದಿ ಸರ್ಕಾರದ ಏಳು ವರ್ಷಗಳ ಸಾಧನೆ ಕುರಿತು ಜನಾಭಿಪ್ರಾಯ ಸಂಗ್ರಹಿಸಲು ಪ್ರತಿ ಹಳ್ಳಿ ಹಾಗೂ ಬೂತ್‌ಗಳಿಗೆ ಯುವ ಜನರನ್ನು ಕಳುಹಿಸಬೇಕು. ಬಿಜೆಪಿ ಸರ್ಕಾರ ನಿಮಗೆ ಏನು ಮಾಡಿದೆ? ಉದ್ಯೋಗ, ಊಟ, ಮನೆ ಒದಗಿಸಿದೆಯೇ? ಬೆಲೆ ಏರಿಕೆ, ಹಣದುಬ್ಬರ ತಡೆದಿದೆಯೇ? ಎಂಬೆಲ್ಲಾ ಮಾಹಿತಿ ಪಡೆದುಕೊಳ್ಳಿ" ಎಂದು ಸಲಹೆ ನೀಡಿದರು.

ಇಂದು ಎಂಬುದು ನಿಮ್ಮ ಕೈಯಲ್ಲಿದೆ!
"ನಿನ್ನೆ ಎಂಬುದು ಕಳೆದುಹೋಗಿದೆ, ಅದು ನಿಮ್ಮ ಕೈಗೆ ಮತ್ತೆ ಸಿಗದ ಇತಿಹಾಸ. ನಾಳೆ ಎಂಬುದು ಭವಿಷ್ಯ. ನಾವು ಇರುತ್ತೇವೋ, ಇಲ್ಲವೋ ಗೊತ್ತಿಲ್ಲ. ಆದರೆ ಇಂದು ನಿಮ್ಮ ಕೈಯಲ್ಲಿದೆ. ಆ ದಿನವನ್ನು ಕಾಂಗ್ರೆಸ್ ಗೆ ಹೇಗೆ ಮುಡಿಪಾಗಿಟ್ಟಿದ್ದೇನೆ ಎಂಬುದು ಮುಖ್ಯ. ಕೆಪಿಸಿಸಿ ಕಾರ್ಯಾಧ್ಯಕ್ಷ ಆರ್. ಧೃವನಾರಾಯಣ್ ಕೇವಲ ಒಂದು ಮತಗಳ ಅಂತರದಿಂದ ವಿಧಾನಸಭೆಯಲ್ಲಿ ಗೆಲುವು ಸಾಧಿಸಿದ್ದರು. ನಂತರ ಮೂರು ಬಾರಿ ಶಾಸಕರು, ಸಂಸದರೂ ಆದರು. ಇತ್ತೀಚೆಗೆ ಬೆಳಗಾವಿ ಲೋಕಸಭಾ ಚುನಾವಣೆಯಲ್ಲಿ ಪ್ರತಿ ಬೂತ್‌ನಲ್ಲಿ ಒಂದೆರಡು ಮತಗಳು ಹೆಚ್ಚಿಗೆ ದೊರೆತಿದ್ದರೆ ಕಾಂಗ್ರೆಸ್ ಗೆದ್ದು ಇತಿಹಾಸ ಸೃಷ್ಟಿಸುತ್ತಿತ್ತು. ಹೀಗಾಗಿ ಯಾರನ್ನೂ ನಿರ್ಲಕ್ಷ್ಯ ಮಾಡಬೇಡಿ, ಪ್ರತಿಯೊಬ್ಬರನ್ನೂ ಸೆಳೆಯಲು ಪ್ರಯತ್ನಿಸಿ" ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್ ಸೂಚಿಸಿದರು.

ಹೆಸರು ಬದಲಾಯಿಸುವುದು ಬಿಜೆಪಿ ಕೆಲಸ
ಯುವ ಕಾಂಗ್ರೆಸ್ ರಾಷ್ಟ್ರೀಯ ಅಧ್ಯಕ್ಷ ಶ್ರೀನಿವಾಸ್ ಬಿ.ವಿ. ಮಾತನಾಡಿ, "ರಾಜ್ಯ ಹಾಗೂ ರಾಷ್ಟ್ರದಲ್ಲಿ ಪಕ್ಷವನ್ನು ಯುವ ಕಾಂಗ್ರೆಸ್ ಅಧಿಕಾರಕ್ಕೆ ತಂದ ಉದಾಹರಣೆ ಇದೆ. ಈ ಪರಂಪರೆ ಮುಂದುವರೆಬೇಕು. ಬಿಜೆಪಿಯವರು ಸುಳ್ಳು ಹೇಳುವವರಾಗಿದ್ದು, ದೇಶಕ್ಕೆ ಕಾಂಗ್ರೆಸ್ ನೀಡಿದ ಕೊಡುಗೆಗಳನ್ನು ಮಾರಾಟ ಮಾಡುತ್ತಿದೆ. ಅಥವಾ ಕಾಂಗ್ರೆಸ್ ಇಟ್ಟಿದ್ದ ಹೆಸರು ಬದಲಿಸುವ ಕೆಲಸ ಮಾಡುತ್ತಿದೆ" ಎಂದರು.
"ಕೋವಿಡ್ ಸಂದರ್ಭದಲ್ಲಿ ರಾಜ್ಯ ಯುವ ಕಾಂಗ್ರೆಸ್ ಮತ್ತು ಪಕ್ಷದ ವಿವಿಧ ಘಟಕಗಳು ಜನಪರವಾಗಿದ್ದವು. ಆದರೆ ಬಿಜೆಪಿಯರು ಲೂಟಿಯಲ್ಲಿ ತೊಡಗಿದ್ದರು. ಹೆಣ ಸುಡುವ ಸೌದೆ, ರೆಮ್ಡಿಸಿವಿಯರ್ ಇಂಜೆಕ್ಷನ್ ನಲ್ಲೂ ಭ್ರಷ್ಟಾಚಾರ ಮಾಡಿದ್ದಾರೆ. ಹಾಸಿಗೆ ಹಂಚಿಕೆಯಲ್ಲೂ ಹಣ ಮಾಡಿದ್ದಾರೆ. ದೇಶದ ಜನರಿಗೆ ಉದ್ಯೋಗ ದೊರಕಿಸಿಲ್ಲ. ಸ್ವಿಸ್ ಬ್ಯಾಂಕ್‌ನಿಂದ ಕಪ್ಪು ಹಣ ತಂದಿಲ್ಲ. ನಾನು ತಿನ್ನಲ್ಲ, ತಿನ್ನಲು ಬಿಡುವುದಿಲ್ಲ ಎಂದು ಪ್ರಧಾನಿ ಮೋದಿ ಹೇಳುತ್ತಾರೆ. ಆದರೆ ದೋಚಿ ಪಾರ್ಸೆಲ್ ಮಾಡುವ ಸಂಸ್ಕೃತಿ ಬಿಜೆಪಿಯದ್ದಾಗಿದೆ. ಸ್ವಾತಂತ್ರ್ಯ ಸಂಗ್ರಾಮದಲ್ಲಿ ದೇಶದ ವಿರುದ್ಧ ಪಿತೂರಿ ಮಾಡಿದವರು ಈಗ ನಮಗೆ ದೇಶ ಭಕ್ತಿ ಸರ್ಟಿಫಿಕೇಟ್ ನೀಡಲು ಮುಂದಾಗಿದ್ದಾರೆ" ಎಂದು ಶ್ರೀನಿವಾಸ್ ವ್ಯಂಗ್ಯವಾಡಿದರು.

ಮೋದಿ ಅಲೆಯಿಲ್ಲ, ದುರಾಡಳಿತದ ಅಲೆ ಎದ್ದಿದೆ!
ಅಧಿಕಾರ ಸ್ವೀಕರಿಸಿ ಮಾತನಾಡಿದ ಯುವ ಕಾಂಗ್ರೆಸ್ ಅಧ್ಯಕ್ಷ ರಕ್ಷಾ ರಾಮಯ್ಯ, "ದೇಶದಲ್ಲಿ ಈಗ ನರೇಂದ್ರ ಮೋದಿ ಅಲೆಯಿಲ್ಲ. ಬದಲಿಗೆ ದುರಾಡಳಿತದ ಅಲೆ ಎದ್ದಿದೆ. ಇಡಿ, ಐಟಿ, ಸಿಬಿಐ ನಂತಹ ಶಾಸನ ಬದ್ಧ ಸಂಸ್ಥೆಗಳನ್ನು ಬಿಜೆಪಿಯವರು ಸ್ವಂತ ಆಸ್ತಿ ಮಾಡಿಕೊಂಡಿದ್ದಾರೆ. ರಾಜ್ಯ ಹಾಗೂ ಕೇಂದ್ರ ಸರ್ಕಾರಗಳನ್ನು ಕಿತ್ತೊಗೆಯುವ ಸಮಯ ಬಂದಿದ್ದು, ಇದಕ್ಕೆ ನಮ್ಮ ಯುವ ಸಮೂಹ ಸಜ್ಜಾಗಬೇಕು" ಎಂದರು.
"ಒಂದು ಕಡೆ ಡಿಜಿಟಲ್ ಇಂಡಿಯಾ ಬಗ್ಗೆ ಮಾತನಾಡುತ್ತಾರೆ. ಮತ್ತೊಂದೆಡೆ ಡಿಜಿಟಲ್ ವ್ಯವಸ್ಥೆ ಮೂಲಕ ಪ್ರಜಾತಂತ್ರವನ್ನೇ ಹತ್ಯೆ ಮಾಡುತ್ತಿದ್ದಾರೆ. ಪೆಗಾಸಸ್ ಮೂಲಕ ಕಾಂಗ್ರೆಸ್ ಮುಂಖಡರು, ಪತ್ರಕರ್ತರ ಮೇಲೆ ಬೇಹುಗಾರಿಕೆ ನಡೆಸುತ್ತಿದ್ದಾರೆ. ಹಾಗಾದರೆ ಇವರೆಲ್ಲ ಭಯೋತ್ಪಾದಕರೇ?, ನಿಜಕ್ಕೂ ಭಯೋತ್ಪಾದಕರ ಮೇಲೆ ಕಣ್ಗಾವಲು ಹಾಕಿದ್ದರೆ ಪುಲ್ವಾಮದಂತಹ ದಾಳಿ ನಡೆಯುತ್ತಿರಲಿಲ್ಲ" ಎಂದರು.

ಚುನಾವಣೆಯಲ್ಲಿ ಯುವ ಕಾಂಗ್ರೆಸ್ ಸಾಧನೆ
"ಬ್ರಿಟಿಷರ ವಿರುದ್ಧ 1905 ರಿಂದ ಯುವ ಕಾಂಗ್ರೆಸ್ ಆರಂಭಿಸಿದ್ದ ಹೋರಾಟ ಇಂದಿಗೂ ಮುಂದುವರೆದಿದೆ. ಈಗ ನಮ್ಮ ಮೇಲೆ ಅತಿದೊಡ್ಡ ಜವಾಬ್ದಾರಿ ಇದ್ದು, ನಮ್ಮ ಹೋರಾಟ ಮತ್ತೊಂದು ಆಯಾಮದಿಂದ ಆರಂಭವಾಗಿದೆ. ಮುಂಬರುವ ಜಿಲ್ಲಾ, ತಾಲ್ಲೂಕು ಪಂಚಾಯತ್ ಚುನಾವಣೆಯಲ್ಲಿ ಪಕ್ಷವನ್ನು ಗೆಲ್ಲಿಸಲು ಎಲ್ಲರೂ ಶ್ರಮಿಸೋಣ" ಎಂದು ರಕ್ಷಾ ರಾಮಯ್ಯ ಹೇಳಿದರು.
ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ, ಕೆಪಿಸಿಸಿ ಕಾರ್ಯಾಧ್ಯಕ್ಷರಾದ ಆರ್, ದ್ರುವನಾರಾಯಣ್, ಸಲೀಂ ಅಹಮದ್, ರಾಜ್ಯ ಯುವ ಕಾಂಗ್ರೆಸ್ ಉಸ್ತುವಾರಿ ಕೃಷ್ಣ ಆಳ್ವರ್, ಆಂಧ್ರಪ್ರದೇಶದ ಯುವ ಕಾಂಗ್ರೆಸ್ ಅಧ್ಯಕ್ಷ ರಾಕೇಶ್ ರೆಡ್ಡಿ, ಗೋವಾ ಯುವ ಕಾಂಗ್ರೆಸ್ ಅಧ್ಯಕ್ಷ ವರದ್ ಮತ್ತಿತರರು ಭಾಗವಹಿಸಿದ್ದರು.
Recommended Video












Click it and Unblock the Notifications