ರಾಜ್ಯಸಭಾ ಚುನಾವಣೆ; 'ಕೈ' ನಿಂದ ಆತ್ಮಸಾಕ್ಷಿ ಮತ ಪ್ರಯೋಗ!
ಬೆಂಗಳೂರು, ಜೂನ್ 8 : ಈ ಬಾರಿಯ ರಾಜ್ಯಸಭೆ ಚುನಾವಣೆಯಲ್ಲಿ ಆಯಾಯ ಪಕ್ಷಗಳ ಶಾಸಕರು ಹಾಕಲಿರುವ ವಿಶ್ವಾಸದ ಮತಗಳ ನಡುವೆ ಕಾಂಗ್ರೆಸ್ ನಂಬಿರುವ 'ಆತ್ಮಸಾಕ್ಷಿ ಮತ'ಗಳ ವಿಚಾರ ಭಾರೀ ಸದ್ದು ಮಾಡುವುದರೊಂದಿಗೆ ಜೆಡಿಎಸ್ ಮತ್ತು ಬಿಜೆಪಿಗರ ನಿದ್ದೆಗೆಡಿಸಿದೆ.
ಕಾಂಗ್ರೆಸ್ ನಾಯಕರು ರಾಜ್ಯಸಭೆಯ ಎರಡನೇ ಅಭ್ಯರ್ಥಿಯನ್ನು ಆತ್ಮಸಾಕ್ಷಿ ಮತಗಳಿಂದ ಗೆಲ್ಲಿಸಿಕೊಳ್ಳುತ್ತೇವೆಂದು ಹೇಳಿಕೆ ನೀಡುತ್ತಿರುವುದು ಬಿಜೆಪಿ ಮತ್ತು ಜೆಡಿಎಸ್ ಪಕ್ಷದಲ್ಲಿ ಸಂಚಲನವನ್ನು ಸೃಷ್ಟಿಸಿದೆ. ಈಗಾಗಲೇ ರಾಜ್ಯದಲ್ಲಿ ನಡೆಯುತ್ತಿರುವ ರಾಜಕಾರಣ ಸಮಾಜದ ನೆಮ್ಮದಿಯನ್ನು ಕೆಡಿಸಿದೆ.
ಹೀಗಿರುವಾಗ ಚುನಾವಣೆ ನೆಪದಲ್ಲಿ ರಾಜಕೀಯ ಪಕ್ಷಗಳು ನೀಡುತ್ತಿರುವ ಹೇಳಿಕೆಗಳಂತು ರಾಜಕೀಯ ವಿವಾದಗಳನ್ನು ಹುಟ್ಟುಹಾಕುತ್ತಿದೆ. ರಾಜಕಾರಣದಲ್ಲಿ ಯಾರಿಗೆ ಯಾರು ಶತ್ರುವಲ್ಲ. ಮಿತ್ರರೂ ಅಲ್ಲ ಎಂಬುದಕ್ಕೆ ಹಲವು ನಿದರ್ಶನಗಳನ್ನು ನಾವು ನೋಡಿದ್ದೇವೆ. ಅದು ರಾಜ್ಯಸಭೆ ಚುನಾವಣೆಯಲ್ಲಿ ಮತ್ತೊಮ್ಮೆ ಸಾಬೀತಾಗುತ್ತಾ? ಎಂಬ ಸಂಶಯ ಮೂಡುತ್ತಿದೆ.
ರಾಜ್ಯಸಭಾ ಚುನಾವಣೆ ಎಂದರೆ ಒಂದು ರೀತಿಯಲ್ಲಿ ಹಣದ ಹೊಳೆ ಹರಿಯುವ ಚುನಾವಣೆ ಎಂಬಂತೆ ಬಿಂಬಿತವಾಗಿದ್ದನ್ನು ಕೂಡ ನಾವು ನೋಡಿದ್ದೇವೆ. ಆದರೆ ಒಂದು ಅಭ್ಯರ್ಥಿಯನ್ನಷ್ಟೆ ಗೆಲ್ಲಿಸಿಕೊಳ್ಳಲು ಸಾಧ‍್ಯತೆಯಿರುವ ಕಾಂಗ್ರೆಸ್ ಎರಡನೇ ಅಭ್ಯರ್ಥಿಯನ್ನು ಕಣಕ್ಕಿಳಿಸಿ ಕೊನೆಗಳಿಗೆಯಲ್ಲಿ ಜೆಡಿಎಸ್‌ಗೆ ಟಕ್ಕರ್ ನೀಡಿದೆ. ಆದರೆ ತನ್ನ ಅಭ್ಯರ್ಥಿಯನ್ನು ಗೆಲ್ಲಿಸಿಕೊಳ್ಳಬೇಕಾದರೆ ಕಾಂಗ್ರೆಸ್ ಪಕ್ಷದ ಅಥವಾ ಬೇರೆ ಶಾಸಕರ ಮತದ ಅಗತ್ಯತೆ ಇರುವ ಜೆಡಿಎಸ್ ಈಗ ಸೆಟೆದು ನಿಂತಿದೆ.

ಚುನಾವಣೆಯಲ್ಲಿ ಕಾಂಗ್ರೆಸ್ ತಂತ್ರ
ಜೆಡಿಎಸ್ ಪಕ್ಷದಲ್ಲಿರುವ ಭಿನ್ನಾಭಿಪ್ರಾಯ, ಕೆಲವು ಶಾಸಕರ ಅಸಮಾಧಾನ, ಇದನ್ನು ಕಾಂಗ್ರೆಸ್ ಪರ ಮತವಾಗಿ ಪರಿವರ್ತಿಸಿ ಗೆಲ್ಲುವ ಮತ್ತು ಆತ್ಮಸಾಕ್ಷಿ ಮತ ವಿಚಾರವನ್ನು ಮುನ್ನಲೆಗೆ ತಂದು ಈಗಾಗಲೇ ಕಾಂಗ್ರೆಸ್ ತೊರೆದು ಬಿಜೆಪಿ ಸೇರ್ಪಡೆಗೊಂಡು ಬಿಜೆಪಿ ಪಕ್ಷದಲ್ಲಿ ಬೇರೂರಿರುವ ಕೆಲವು ಶಾಸಕರ ಮೇಲೆ ಮೂಲ ಬಿಜೆಪಿಗರು ಸಂಶಯದಿಂದ ನೋಡುವಂತೆ ಮಾಡುವ ತಂತ್ರವೂ ಅಡಗಿದೆ ಎಂಬುದನ್ನು ಪ್ರತ್ಯೇಕವಾಗಿ ಹೇಳಬೇಕಾಗಿಲ್ಲ.
ಯಾರು ಯಾರನ್ನು ಬೆಂಬಲಿಸಿ ಅಡ್ಡಮತದಾನ ಮಾಡುತ್ತಾರೋ ಗೊತ್ತಿಲ್ಲ. ಆದರೆ ರಾಜ್ಯಸಭಾ ಚುನಾವಣೆ ಬಿಜೆಪಿಗೆ ಪ್ರತಿಷ್ಠೆಯಾದರೆ, ಕಾಂಗ್ರೆಸ್ ಗೆ ಜೆಡಿಎಸ್ ಅನ್ನು ಮಣಿಸಲು ಅಸ್ತ್ರವಾಗಿದೆ. ಅಷ್ಟೇ ಅಲ್ಲದೆ, ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಜೆಡಿಎಸ್ ಅನ್ನು ಹಣಿದು ಅವರಿಗೆ ಹೋಗಲಿರುವ ಅಲ್ಪಸಂಖ್ಯಾತ ಮತಗಳನ್ನು ಕಟ್ಟಿಹಾಕುವ ಉದ್ದೇಶವೂ ಇದರ ಹಿಂದೆ ಅಡಗಿದೆ.

ಸಮಾಜದ ಸ್ವಾಸ್ಥ್ಯ ಕೆಡಿಸುತ್ತಿರುವ ಹೋರಾಟ
ಹಾಗೆ ನೋಡಿದರೆ ರಾಜ್ಯದಲ್ಲಿ ರಾಜಕೀಯ ಪಕ್ಷಗಳ ರಾಜಕೀಯ ಹೋರಾಟಗಳು ದಿಕ್ಕುತಪ್ಪುತ್ತಿದ್ದು ಕವಲು ಹಾದಿಯಲ್ಲಿ ಸಾಗುತ್ತಿದೆ. ಕೇವಲ ಮತಗಳಿಕೆಗಾಗಿ ಓಲೈಕೆ ರಾಜಕಾರಣ ಮಾಡುವ ಮಟ್ಟಕ್ಕೆ ಪಕ್ಷಗಳು ಬಂದು ನಿಂತಿವೆ. ಜತೆಗೆ ಅಧಿಕಾರದ ವಿಚಾರ ಬಂದಾಗ ಪಕ್ಷದ ತತ್ವ ಸಿದ್ಧಾಂತವನ್ನೆಲ್ಲ ಬದಿಗೊತ್ತಿ ಒಂದಾಗುವ ನಾಯಕರು ಇತರೆ ಸಂದರ್ಭದಲ್ಲಿ ಹಾವು ಮುಂಗುಸಿಯಂತೆ ಕಚ್ಚಾಡಿ ಸಮಾಜದ ಸ್ವಾಸ್ಥ್ಯ ಕೆಡಿಸುತ್ತಾರೆ.
ರಾಜ್ಯದ ಅಭಿವೃದ್ಧಿ ಮತ್ತು ಜನತೆಯ ಶ್ರೇಯೋಭಿವೃದ್ಧಿಗಾಗಿ ಹೋರಾಟ ಮಾಡಬೇಕಾದ ರಾಜಕೀಯ ಪಕ್ಷಗಳು ಉಪಯೋಗಕ್ಕೆ ಬಾರದ ಚಿಲ್ಲರೆ ವಿಚಾರಗಳನ್ನು ಮುಂದಿಟ್ಟುಕೊಂಡು ಬೀದಿಗಿಳಿಯುವುದು ಒಂದೆಡೆಯಾದರೆ ವಿವಾದಾತ್ಮಕ ಹೇಳಿಕೆಗಳಿಂದ ಮುಂಚೂಣಿಗೆ ಬರಲು ನಾಯಕರು ಹವಣಿಸುತ್ತಿರುವುದು ಮತ್ತೊಂದು ಕಡೆಗಳಲ್ಲಿ ಎದ್ದು ಕಾಣಿಸುತ್ತಿದೆ.

ಕಾಂಗ್ರೆಸ್ ಬಿಡುತ್ತಿರುವ ನಾಯಕರು
ಇವತ್ತು ರಾಜ್ಯದಲ್ಲಿ ಜನ ನೂರಾರು ಸಮಸ್ಯೆಗಳಿಂದ ಬಳಲುತ್ತಿದ್ದಾರೆ. ಅವರ ಬದುಕನ್ನು ಹಸನುಗೊಳಿಸುವ ಬಗ್ಗೆ ಯಾರೂ ಚಿಂತನೆ ಮಾಡುತ್ತಿಲ್ಲ. ಬದಲಾಗಿ ದಿನನಿತ್ಯ ಸಾರ್ವಜನಿಕವಾಗಿ ಉಪಯೋಗವಾಗದ ವಿಚಾರಗಳಿಗೆ ಸಂಬಂಧಿಸಿದಂತೆ ಹೇಳಿಕೆ, ಆರೋಪಗಳನ್ನು ಮಾಡುತ್ತಾ ಜನರಲ್ಲಿ ದ್ವೇಷ ಭಾವ ಸೃಷ್ಟಿಸುತ್ತಿದ್ದಾರೆ.
ರಾಷ್ಟ್ರೀಯ ಪಕ್ಷವಾದ ಕಾಂಗ್ರೆಸ್ ರಾಜ್ಯದಲ್ಲಿ ಮತ್ತೆ ಅಧಿಕಾರ ಸ್ಥಾಪಿಸಲು ಹೋರಾಟ ನಡೆಸುತ್ತಿದೆ. ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಗೆಲುವು ಸಾಧಿಸಬೇಕಾದರೆ ಮುಖ್ಯವಾಗಿ ಬೇಕಾಗಿರುವುದು ಪಕ್ಷ ಸಂಘಟನೆ. ಆದರೆ ಪಕ್ಷ ಸಂಘಟನೆ ಮಾಡುವಲ್ಲಿ ಕಾಂಗ್ರೆಸ್ ವಿಫಲವಾಗಿದೆ. ತಳಮಟ್ಟದಿಂದ ಸಂಘಟನೆಯಾಗುತ್ತಿಲ್ಲ. ಇಷ್ಟೇ ಅಲ್ಲದೆ ಕೆಲವು ನಾಯಕರು ಪಕ್ಷ ಬಿಟ್ಟು ಹೊರಹೋಗುತ್ತಿರುವುದು ಕೂಡ ಹಿನ್ನಡೆಯಾಗಿದೆ.

ಆರ್‌ಎಸ್‌ಎಸ್ ಟಾರ್ಗೆಟ್
ಮೇಲುನೋಟಕ್ಕೆ ನಾವೆಲ್ಲ ಒಗ್ಗಟ್ಟಾಗಿದ್ದೇವೆ ಎಂಬಂತೆ ಫೋಸ್ ನೀಡುತ್ತಿದ್ದರೂ ಭಿನ್ನಾಭಿಪ್ರಾಯಗಳು ಪಕ್ಷದಲ್ಲಿರುವ ನಾಯಕರಿಗೆ ಮಾರಕವಾಗುತ್ತಿದೆ. ಸಿದ್ದರಾಮಯ್ಯ ಅವರು ಆರ್‌ಎಸ್‌ಎಸ್ ಅನ್ನು ಟಾರ್ಗೆಟ್ ಮಾಡಿಕೊಂಡು ನೀಡುತ್ತಿರುವ ಹೇಳಿಕೆ ಅಲ್ಪಸಂಖ್ಯಾತ ಮತವನ್ನು ಸೆಳೆಯುವ ತಂತ್ರದಂತೆ ಭಾಸವಾಗುತ್ತಿದೆ. ಆದರೆ ಇಡೀ ರಾಜ್ಯದಲ್ಲಿ ಕಾಂಗ್ರೆಸ್ ಗೆಲುವಿಗೆ ಅಲ್ಪ ಸಂಖ್ಯಾತ ಮತಗಳಷ್ಟೇ ಸಾಕಾಗುವುದಿಲ್ಲ ಎಲ್ಲ ಸಮುದಾಯಗಳ ಮತಗಳು ಅಗತ್ಯವಾಗಿದೆ.
ಆರ್‌ಎಸ್‌ಎಸ್ ಅನ್ನು ಜರೆಯುವ ಭರದಲ್ಲಿ ಬಹುಸಂಖ್ಯಾತ ಹಿಂದೂಗಳ ವಿರೋಧವನ್ನು ಕಟ್ಟಿಕೊಂಡರೆ ಮುಂದಿನ ವಿಧಾನಸಭಾ ಚುನಾವಣೆಯಲ್ಲಿ ಇತರೆ ಕಾಂಗ್ರೆಸ್ ನಾಯಕರ ಮೇಲೆ ಪರಿಣಾಮ ಬೀರಿದರೆ ಅಚ್ಚರಿ ಪಡಬೇಕಾಗಿಲ್ಲ. ಜೆಡಿಎಸ್ ಮತ್ತು ದೇವೇಗೌಡರ ಕುಟುಂಬವನ್ನು ಜರೆಯುತ್ತಾ ಒಕ್ಕಲಿಗರ ವಿರೋಧ ಕಟ್ಟಿಕೊಂಡ ಸಿದ್ದರಾಮಯ್ಯರಿಗೆ ಕಳೆದ ಬಾರಿಯ ಚುನಾವಣೆಯಲ್ಲಿ ಚಾಮುಂಡೇಶ‍್ವರಿ ಕ್ಷೇತ್ರದಲ್ಲಿ ಎಂಥಹ ಸೋಲಾಯಿತು ಎಂಬುದು ನಮ್ಮ ಕಣ್ಣಮುಂದಿದೆ.
ಇದೀಗ ಆತ್ಮಸಾಕ್ಷಿ ಮತದ ಗುಮ್ಮವನ್ನು ಬಿಡುವ ಮೂಲಕ ಜೆಡಿಎಸ್ ಅನ್ನು ಮುಗಿಸುವ ಖುಷಿಯಲ್ಲಿ ಸಿದ್ದರಾಮಯ್ಯ ಇರುವಂತೆ ಕಾಣಿಸುತ್ತಿದೆ. ಆದರೆ ಅದರ ಲಾಭ ಕಾಂಗ್ರೆಸ್‌ಗಿಂತ ಬಿಜೆಪಿಗೆ ಆಗುತ್ತದೆ ಎಂಬುದಂತು ಸತ್ಯ. ಸದ್ಯ ರಾಜ್ಯಸಭೆ ಚುನಾವಣೆಯಲ್ಲಿ ಆತ್ಮಸಾಕ್ಷಿ ಮತ ವಿಚಾರ ಸಂಚಲನ ಸೃಷ್ಟಿಸಿದೆ. ಅದು ಕಾಂಗ್ರೆಸ್‌ನ ಗೆಲುವಿನ ಮತನಾ ಅಥವಾ ಜೆಡಿಎಸ್ ಅನ್ನು ಹೆದರಿಸಲು ಸಿದ್ದರಾಮಯ್ಯ ಬಿಟ್ಟ ಗುಮ್ಮನಾ ಎಂಬುದು ರಾಜ್ಯಸಭಾ ಚುನಾವಣೆ ಬಳಿಕ ಗೊತ್ತಾಗಲಿದೆ.












Click it and Unblock the Notifications