ರಾಜ್ಯಸಭೆ, ಪರಿಷತ್ ಚುನಾವಣೆ ಜೂನ್ 19ರಂದು
ಬೆಂಗಳೂರು, ಜೂನ್ 2 : ವಿಧಾನಪರಿಷತ್ ಮತ್ತು ರಾಜ್ಯಸಭೆ ಚುನಾವಣೆ ಅಧಿಸೂಚನೆ ಹೊರಬಿದ್ದಿದ್ದು ಸೋಮವಾರದಿಂದ ನಾಮಪತ್ರ ಸಲ್ಲಿಸಬಹುದಾಗಿದೆ. ಜೂನ್ 19ರಂದು ವಿಧಾನಸಭೆಯಿಂದ ಪರಿಷತ್ತಿನ 7 ಸ್ಥಾನಗಳು ಮತ್ತು ರಾಜ್ಯಸಭೆಯ 4 ಸ್ಥಾನಗಳಿಗೆ ಚುನಾವಣೆ ನಡೆಯಲಿದೆ.
ರಾಜ್ಯಸಭೆಯ ನಾಲ್ಕು ಮತ್ತು ವಿಧಾನಪರಿಷತ್ತಿನ ಏಳು ಸ್ಥಾನಗಳಿಗೆ ನಾಮತ್ರ ಸಲ್ಲಿಸಲು ಜೂನ್ 9 ಕೊನೆಯ ದಿನವಾಗಿದ್ದು, ಜೂ. 2ರಿಂದ 9 ರವರೆಗೆ ಬೆಳಗ್ಗೆ 11 ರಿಂದ ಮಧ್ಯಾಹ್ನ 3ರವರೆಗೆ ನಾಮಪತ್ರ ಸಲ್ಲಿಸಬಹುದಾಗಿದೆ. ನಾಮಪತ್ರ ವಾಪಸ್ ಪಡೆಯಲು ಜೂ.12 ಕೊನೆ ದಿನವಾಗಿದ್ದು, ಜೂ. 19ರಂದು ಬೆಳಗ್ಗೆ 9ರಿಂದ ಸಂಜೆ 4ರವರೆಗೆ ಮತದಾನ ನಡೆಯಲಿದ್ದು, ಅಂದು ಸಂಜೆ 5 ಫಲಿತಾಂಶ ಘೋಷಣೆಯಾಗಲಿದೆ. [ರಾಜ್ಯಸಭೆ ರೇಸ್ ನಲ್ಲಿ ಪ್ರಕಾಶ್ ಶೆಟ್ಟಿ]

ವಿಧಾನಸಭೆಯಿಂದ ವಿಧಾನಪರಿಷತ್ತಿಗೆ ಆಯ್ಕೆಯಾಗಿದ್ದ ಬಿಜೆಪಿಯ ಡಿ.ವಿ.ಸದಾನಂದಗೌಡ, ಭಾರತಿಶೆಟ್ಟಿ, ಸಿದ್ದರಾಜು, ಮೋನಪ್ಪ ಭಂಡಾರಿ, ಜೆಡಿಎಸ್ ನ ಎಂ.ಸಿ.ನಾಣಯ್ಯ, ಕೆ.ವಿ.ನಾರಾಯಣಸ್ವಾಮಿ ಹಾಗೂ ಕಾಂಗ್ರೆಸ್ ನ ಎಂ.ವಿ.ರಾಜಶೇಖರನ್ ಅವರ ಅವಧಿ ಜೂ. 30ಕ್ಕೆ ಕೊನೆಗೊಳ್ಳಲಿದೆ ಇವರಿಂದ ತೆರವಾಗುವ ಸ್ಥಾನಗಳಿಗೆ ಚುನಾವಣೆ ನಡೆಯಲಿದೆ. [ಪರಿಷತ್ ಸ್ಥಾನಕ್ಕೆ ಕೆ.ಎಸ್.ಈಶ್ವರಪ್ಪ]
ನಾಲ್ಕು ರಾಜ್ಯಸಭೆ ಸ್ಥಾನಗಳು : ಕರ್ನಾಟಕ ವಿಧಾನಸಭೆಯಿಂದ ರಾಜ್ಯಸಭೆಗೆ ಆಯ್ಕೆಯಾದ ಕಾಂಗ್ರೆಸ್ ಪಕ್ಷದ ಎಸ್.ಎಂ. ಕೃಷ್ಣ, ಬಿ.ಕೆ ಹರಿಪ್ರಸಾದ್ ಹಾಗೂ ಬಿಜೆಪಿಯ ರಾಮಾಜೋಯಿಸ್ ಮತ್ತು ಪ್ರಭಾಕರ ಕೋರೆ ಅವರ ಅವಧಿ ಜೂ. 24ಕ್ಕೆ ಮುಕ್ತಾಯಗೊಳ್ಳಲಿದ್ದು, ಈ ಸ್ಥಾನಗಳಿಗೆ ಚುನಾವಣೆ ನಡೆಯುತ್ತಿದೆ.
ಎರಡೂ ಚುನಾವಣೆಗಳಿಗೆ ವಿಧಾನಸಭೆ ಕಾರ್ಯದರ್ಶಿ ಪಿ. ಓಂಪ್ರಕಾಶ್ ಅವರನ್ನು ಚುನಾವಣಾಧಿಕಾರಿಯಾಗಿ ಮತ್ತು ಜಂಟಿ ಕಾರ್ಯದರ್ಶಿ ಜಯತೀರ್ಥ ಪಿ. ಗಲಗಲಿ ಅವರನ್ನು ಸಹಾಯಕ ಚುನಾವಣಾಧಿಕಾರಿಯಾಗಿ ನೇಮಿಸಲಾಗಿದೆ. ವಿಧಾನಸೌಧದ ಮೊದಲನೆ ಮಹಡಿಯ ಕೊಠಡಿ ಸಂಖ್ಯೆ 128 (ಎ)ರಲ್ಲಿ ಸಹಾಯಕ ಚುನಾವಣಾಧಿಕಾರಿಯವರನ್ನು ಸಂಪರ್ಕಿಸಬಹುದಾಗಿದೆ.
ಅಭ್ಯರ್ಥಿಗಳನ್ನು ಘೋಷಿಸಿಲ್ಲ : ಸೋಮವಾರದಿಂದ ನಾಮಪತ್ರ ಸಲ್ಲಿಕೆಗೆ ಅವಕಾಶ ಕಲ್ಪಿಸಿದ್ದರೂ ಮೂರು ರಾಜಕೀಯ ಪಕ್ಷಗಳು ಅಭ್ಯರ್ಥಿಗಳನ್ನು ಮಾತ್ರ ಘೋಷಿಸಿಲ್ಲ. ವಿಧಾನಪರಿಷತ್ತಿಗೆ ಬಿಜೆಪಿಯಿಂದ ಮಾಜಿ ಡಿಸಿಎಂ ಕೆಎಸ್ ಈಶ್ವರಪ್ಪ ಆಯ್ಕೆಯಾಗಲಿದ್ದಾರೆ ಎಂಬ ಮಾತುಗಳು ಕೇಳಿಬರುತ್ತಿವೆಯಾದರೂ, ಈ ಬಗ್ಗೆ ಅಧಿಕೃತ ಆದೇಶ ಹೊರಬಿದ್ದಿಲ್ಲ.












Click it and Unblock the Notifications