Bengaluru Rain: ಬೆಂಗಳೂರಿನಲ್ಲಿ ಭಾರೀ ಮಳೆ- ಮಟ ಮಟ ಮಧ್ಯಾಹ್ನ ವರುಣನ ಅರ್ಭಟ
ಬೆಂಗಳೂರು ಜೂನ್ 13: ಬೆಂಗಳೂರಿನಲ್ಲಿ ಮಟ ಮಟ ಮಧ್ಯಾಹ್ನ ಮಳೆ ಶುರುವಾಗಿದೆ. ನಗರದ ಹಲವೆಡೆ ಬಿಸಿಲು ಜೋರಾಗಿದ್ದು ಇನ್ನೂ ಕೆಲವೆಡೆ ವರುಣನ ಅರ್ಭಟ ಜೋರಾಗಿದೆ.
ನಗರದ ಮಹಾಲಕ್ಷ್ಮಿ ಲೇಔಟ್, ಮತ್ತಿಕೆರೆ, ಗುರುಗುಂಟೆ ಪಾಳ್ಯ, ವಿಜಯನಗರ, ರಾಜಾಜಿನಗರ, ಯಶವಂತಪುರ, ಮಲ್ಲೇಶ್ವರಂ, ಕೆಆರ್ ಮಾರುಕಟ್ಟೆ ಇನ್ನಿತರ ಕಡೆ ಧಾರಾಕಾರವಾಗಿ ಮಳೆಯಾಗುತ್ತಿದೆ. ಬೆಳಗ್ಗೆ ನೆತ್ತಿ ಸುಡುತ್ತಿದ್ದ ಸೂರ್ಯ ಈಗ ಮೋಡದಲ್ಲಿ ಮರೆಯಾಗಿದೆ. ಕಪ್ಪು ಮೋಡ ಆಕಾಶದಲ್ಲಿ ಆವರಿಸಿದ್ದು ಸಂಜೆವರೆಗೂ ಜೋರು ಮಳೆಯಾಗಲಿದೆ.

ಏಕಾಏಕ ಮಳೆ ಜೋರಾಗುತ್ತಿದ್ದಂತೆ ವಾಹನ ಸಂಚಾರಕ್ಕೆ ತೊಂದರೆಯನ್ನುಂಟು ಮಾಡಿದೆ. ವಾಹನ ಸವಾರರು ರಸ್ತೆಗಳಲ್ಲಿ ವಾಹನ ನಿಲ್ಲಿಸಿ ಅಂಗಡಿ, ಮೆಟ್ರೋ ಪಿಲ್ಲರ್ ಆಶ್ರಯ ಪಡೆದಿರುವುದು ಕಂಡು ಬರುತ್ತಿದೆ. ಮಳೆ ಜೋರಾಗಿದ್ದರಿಂದ ರಸ್ತೆಯಲ್ಲಿ ನೀರು ನಿಂತು ವಾಹನ ಸವಾರರು ಪರದಾಡುವಂತಾಗಿದೆ.
ಇನ್ನೂ ನಿಧಾನವಾಗಿ ಕಪ್ಪು ಕಾರ್ಮೋಡ ಎಲ್ಲೆಡೆ ಆವರಿಸುತ್ತಿದ್ದು ಸಂಜೆ ವೇಳೆಗೆ ಬಹುತೇಕ ಕಡೆ ಜೋರು ಮಳೆ ಬೀಳುವ ಸಾಧ್ಯತೆ ಇದೆ. ಈಗಾಗಲೇ ಕೆಲವೆಡೆ ಜಿಟಿ ಜಿಟಿ ಮಳೆ ಆರಂಭವಾಗಿದ್ದು, ಸಂಜೆವರೆಗೂ ಇದೇ ವಾತಾವರಣ ಮುಂದುವರೆಯುವ ಲಕ್ಷಣವಿದೆ.

ಮಳೆ ನೀರಿನಿಂದ ತುಂಬಿದ ಮಡಿವಾಳ ಅಂಡರ್‌ಪಾಸ್
ನಗರದ ಮಡಿವಾಳದಲ್ಲಿ ಭಾರೀ ಮಳೆಯಾಗುತ್ತಿದ್ದು ಮಳೆ ನೀರಿನಿಂದ ಮಡಿವಾಳ ಅಂಡರ್‌ಪಾಸ್ ತುಂಬಿ ಹೋಗಿದೆ. ಇದರಿಂದಾಗಿ ವಾಹನ ಸವಾರರು ಪರದಾಡುವಂತಾಗಿದೆ. ಧಾರಾಕಾರವಾಗಿ ಸುರಿದ ಮಳೆಯಿಂದಾಗಿ ಅಂಡರ್‌ಪಾಸ್ ತುಂಬಾ ಮಳೆ ನೀರು ತುಂಬಿಕೊಂಡಿದೆ. ಹೀಗಾಗಿ ದ್ವಿಚಕ್ರವಾಹನ ಇಲ್ಲಿ ಸಂಚರಿಸುವುದು ಕಷ್ಟವಾಗಿದೆ. ಇನ್ನಿತರ ವಾಹನಗಳು ಮುಂದೆ ಚಲಿಸಲು ಸಾಧ್ಯವಾಗದೆ ಇಂಜಿನ್‌ಗೆ ನೂರು ಹೊಕ್ಕು ಸವಾರರು ವಾಹನಗಳನ್ನು ತಳ್ಳಿಕೊಂಡು ಹೋಗುವಂತಾಗಿದೆ.
ಇನ್ನೂ ರಾಜ್ಯದ ದಕ್ಷಿಣ ಒಳನಾಡು, ಉತ್ತರ ಒಳನಾಡು ಹಾಗೂ ಕರಾವಳಿ ಜಿಲ್ಲೆಗಳಲ್ಲಿ ಭರ್ಜರಿಯಾಗಿ ಮಳೆ ಸುರಿಯುತ್ತಿದೆ. ಬೆಳಗಾವಿ, ಧಾರವಾಡ, ಗದಗ, ಕೊಪ್ಪಳ ಜಿಲ್ಲೆಗಳಲ್ಲಿ ಅತಿ ಹೆಚ್ಚು ಮಳೆ ಸುರಿಯಲಿದ್ದು ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ. ಹಾವೇರಿ, ಶಿವಮೊಗ್ಗಕ್ಕೆ ಆರೆಂಜ್ ಅಲರ್ಟ್, ಕಜಲಬುರಗಿ, ರಾಯಚೂರು, ಯಾದಗಿರಿ, ದಾವಣಗೆರೆಗೆ ಯೆಲ್ಲೋ ಅಲರ್ಟ್ ಘೋಷಿಸಲಾಗಿದೆ.
ಪ್ರತಿ ವರ್ಷ ಜೂನ್, ಜುಲೈ, ಆಗಸ್ಟ್ ತಿಂಗಳು ರಾಜಧಾನಿಯಲ್ಲಿ ಉತ್ತಮ ಮಳೆಯಾಗಲಿದೆ. ಅಲ್ಲದೆ ಈ ಸಮಯದಲ್ಲಿ ಮಳೆ ಸುರಿಯುವುದರಿಂದ ಧೂಳಿನ ಪ್ರಮಾಣ ಕಡಿಮೆಯಾಗಲಿದೆ. ಮಳೆಯಿಂದಾಗಿ ರಸ್ತೆಗಳಿಂದ ಧೂಳು ಏಳುವುದಿಲ್ಲ.
ಮಳೆ ಬರುವುದರಿಂದ ಹೆಚ್ಚಾಗಿ ಜನರು ಸಾರ್ವಜನಿಕ ಸಾರಿಗೆ ಬಳಸುತ್ತಾರೆ. ಅಲ್ಲದೆ, ಈ ಅವಧಿಯಲ್ಲಿ ಅಗ್ನಿ ಅವಘಧಧಿಗಳು ಸಂಭವಿಸುವುದು ಕೂಡ ಕಡಿಮೆ. ವಾತಾವರಣ ಪರಿಶುದ್ಧವಾಗಿರುವದರಿಂದ ಗಾಳಿಯ ಗುಣಮಟ್ಟ ಉತ್ತಮವಾಗಿರುತ್ತದೆ. ಇನ್ನೂ ಸಂಜೆಯಾಗುತ್ತಿದ್ದಂತೆ ಬಜ್ಜಿ ಬೊಂಡಾಕ್ಕೆ ಬೇಡಿಕೆ ಹೆಚ್ಚಾಗುತ್ತದೆ. ಟೀ ಕಾಫಿ ಅಂಗಡಿಗಳ ಮುಂದೆ ಜನರು ಹೆಚ್ಚಾಗಿರುವುದು ಕಂಡು ಬರುತ್ತಿದೆ.












Click it and Unblock the Notifications