ಬರಲೇ ಇಲ್ಲ ಮುಂಗಾರು ಮಳೆ: ಕರ್ನಾಟಕದಲ್ಲಿ ನೀರು, ವಿದ್ಯುತ್ ಸಮಸ್ಯೆ- ವರದಿ, ವಿವರ
ಬೆಂಗಳೂರು, ಆಗಸ್ಟ್ 30: ಆಗಸ್ಟ್ ತಿಂಗಳಲ್ಲಿ ಬರಬೇಕಿದ್ದ ಮುಂಗಾರು ಮಳೆ ಸಂಪೂರ್ಣವಾಗಿ ಕೈಕೊಟ್ಟಿದೆ. ಈ ಹಿನ್ನೆಲೆಯಲ್ಲಿ ಕರ್ನಾಟಕದಾದ್ಯಂತ ನೀರು ಹಾಗೂ ವಿದ್ಯುತ್ ಸಮಸ್ಯೆಗಳು ಎದುರಾಗಲಿವೆ ಎಂದು ವರದಿಯಾಗಿದೆ. ರಾಜ್ಯದಲ್ಲಿ ಕೇವಲ ನೀರಿನ ಬಿಕ್ಕಟ್ಟು ಮಾತ್ರವಲ್ಲದೇ ವಿದ್ಯುತ್ ಸಮಸ್ಯೆಯೂ ತಲೆದೋರಲಿದೆ ಎಂದು ತಜ್ಞರು ಅಭಿಪ್ರಾಯಪಟ್ಟಿದ್ದಾರೆ.
ಮುಂಗಾರು ಮಳೆ ಕೈಕೊಟ್ಟ ಹಿನ್ನೆಲೆಯಲ್ಲಿ ನೀರಿನ ಕೊರತೆ ಉಂಟಾಗಲಿದೆ ಎಂದು ಇಂಧನ ಇಲಾಖೆ ಅಧಿಕಾರಿಗಳು ಹೇಳಿದ್ದಾರೆ.

'ಈಗಾಗಲೇ ರಾಜ್ಯದಲ್ಲಿ ವಿದ್ಯುತ್ ಬೇಡಿಕೆ ಹೆಚ್ಚಿದೆ. ಆದರೆ ಉತ್ಪಾದನೆಗೆ ನಿರ್ಬಂಧವಿದೆ. ಈಗಾಗಲೇ ಜಲ ಸಂಪನ್ಮೂಲಗಳಲ್ಲಿನ ಗರಿಷ್ಠ ಸಾಮರ್ಥ್ಯವನ್ನು ಬಳಸಿಕೊಂಡಿದ್ದೇವೆ. ಕುಡಿಯಲು ಮತ್ತು ಶೇಖರಣಾ ಮಟ್ಟವನ್ನು ಕಾಪಾಡಿಕೊಳ್ಳಲು ನೀರಿನ ಅಗತ್ಯವಿದೆ. ಈ ಹಿನ್ನೆಲೆಯಲ್ಲಿ ಹೆಚ್ಚಿನದನ್ನು ಕೇಳಲು ನಮಗೆ ಸಾಧ್ಯವಿಲ್ಲ' ಎಂದು ಇಂಧನ ಇಲಾಖೆ ಅಧಿಕಾರಿಗಳು ತಿಳಿಸಿದ್ದಾರೆ.
ಮಾನ್ಸೂನ್ ತಿಂಗಳಾದ ಆಗಸ್ಟ್‌ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಬಂದಿದೆ. ಮಾರ್ಚ್ ಮತ್ತು ಏಪ್ರಿಲ್‌ನ ಬೇಸಿಗೆ ತಿಂಗಳುಗಳಿಗಿಂತ ಹೆಚ್ಚು ಬೇಡಿಕೆ ಇದೆ ಎಂದು ಅಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಏಪ್ರಿಲ್‌ಗೆ ಹೋಲಿಸಿದರೆ ಆಗಸ್ಟ್‌ನಲ್ಲಿ ವಿದ್ಯುತ್ ಬಳಕೆ ಹೆಚ್ಚಾಗಿದೆ. ಆದ್ದರಿಂದ ನಾವು ವಿದ್ಯುತ್ ಸಂರಕ್ಷಣೆ ಮಾಡಬೇಕಿದೆ. ಇದಕ್ಕಾಗಿ ಯಾವ ಕ್ರಮವನ್ನು ಕೈಗೊಳ್ಳಬೇಕೆಂದು ನಾವು ಯೋಚಿಸುತ್ತಿದ್ದೇವೆ. ನವೀಕರಿಸಬಹುದಾದ ಇಂಧನ ಮತ್ತು ವಿದ್ಯುತ್ ಖರೀದಿಯ ಮೇಲೆ ಹೆಚ್ಚು ಅವಲಂಬಿತರಾಗಿದ್ದೇವೆ ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ಮಾಹಿತಿ ನೀಡಿದ್ದಾರೆ.

ವರದಿಗಳ ಪ್ರಕಾರ, ಆಗಸ್ಟ್ 25, 2023 ರಂದು ಕರ್ನಾಟಕದಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 16,950 ಮೆಗಾವ್ಯಾಟ್ ದಾಖಲಾಗಿದೆ. ಆಗಸ್ಟ್ 29, 2023 ರಂದು, ರಾತ್ರಿ 11 ರ ವರೆಗೆ ಗರಿಷ್ಠ ವಿದ್ಯುತ್ ಬೇಡಿಕೆ 16,118 ಮೆಗಾವ್ಯಾಟ್ ಆಗಿದೆ. ಮಾರ್ಚ್‌ನಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ 16,110 ಮೆಗಾವ್ಯಾಟ್ ಆಗಿತ್ತು.
ಬೆಸ್ಕಾಂ ಪ್ರಕಾರ, ಬೆಂಗಳೂರಿನಲ್ಲಿ ಬೇಸಿಗೆಯಲ್ಲಿ ಗರಿಷ್ಠ ವಿದ್ಯುತ್ ಬೇಡಿಕೆ ಏಪ್ರಿಲ್ 20 ರಂದು 7,800 ಮೆಗಾವ್ಯಾಟ್ ಆಗಿದ್ದು, ಆಗಸ್ಟ್ 25 ರಂದು 7,981 ಮೆಗಾವ್ಯಾಟ್ ತಲುಪಿದೆ. ಇಂಧನ ಉತ್ಪಾದನೆಯು ಬೇಡಿಕೆಗೆ ಅನುಗುಣವಾಗಿರುತ್ತದೆ ಎಂದು ಅಧಿಕಾರಿಗಳು ತಿಳಿಸಿದ್ದಾರೆ.
ಇಂಧನ ಇಲಾಖೆಯ ದಾಖಲೆಗಳ ಪ್ರಕಾರ, ಆಗಸ್ಟ್ 28 ರಂದು ರಾಜ್ಯದ ಜಲ ವಿದ್ಯುತ್ ಉತ್ಪಾದನೆಯು 26.25 MU ಮತ್ತು ಉಷ್ಣ ವಿದ್ಯುತ್ ಉತ್ಪಾದನೆಯು 41.35 MU ಆಗಿದೆ. ರಾಜ್ಯದ ಒಟ್ಟು ವಿದ್ಯುತ್ ಬಳಕೆಯು 288.83 MU ಆಗಿದೆ.
'ನಾವು ಹವಾಮಾನ ಇಲಾಖೆ ಅಧಿಕಾರಿಗಳೊಂದಿಗೆ ನಿಯಮಿತವಾಗಿ ಸಂವಾದ ನಡೆಸುತ್ತೇವೆ. ಪ್ರತಿ ಬಾರಿ ಅವರು ಮಳೆಯ ಮುನ್ಸೂಚನೆ ನೀಡಿದಾಗ ನಮ್ಮ ನಿರೀಕ್ಷೆಗಳು ಹೆಚ್ಚಾಗುತ್ತವೆ. ಆದರೆ, ಈಗ ಮಳೆ ಇಲ್ಲ. ಮುಂಗಾರು ಮುಗಿಯುತ್ತಿದ್ದಂತೆ ಇಡೀ ವರ್ಷ ನೀರನ್ನು ಶೇಖರಣೆ ಮಾಡಬೇಕಾಗಿದೆ. ಈ ಹಿನ್ನೆಲೆಯಲ್ಲಿ ವಿದ್ಯುತ್ ಉತ್ಪಾದನೆಗೆ ಹೆಚ್ಚು ನೀರು ಹರಿಸಲು ಸಾಧ್ಯವಿಲ್ಲ' ಎಂದು ಇಂಧನ ಇಲಾಖೆ ಅಧಿಕಾರಿಯೊಬ್ಬರು ತಿಳಿಸಿದ್ದಾರೆ.












Click it and Unblock the Notifications