ಉಪ ಚುನಾವಣೆ ಬಿಡಿ, ಪ್ರವಾಹ ಪರಿಸ್ಥಿತಿ ನೋಡಿ; ಎಚ್‌ಡಿಕೆ
ಬೆಂಗಳೂರು, ಅಕ್ಟೋಬರ್ 15 : "ಉಪಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಸರ್ಕಾರ ತನ್ನ ಹೊಣೆಗಾರಿಕೆ ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ" ಎಂದು ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.
ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದೆ. ರೈತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಮಳೆ, ಪ್ರವಾಹದಿಂದಾಗಿ ಅಪಾರವಾದ ಹಾನಿಯಾಗಿದೆ.
ಗುರುವಾರ ಮಾಜಿ ಮುಖ್ಯಮಂತ್ರಿ ಎಚ್. ಡಿ. ಕುಮಾರಸ್ವಾಮಿ ಸರಣಿ ಟ್ವೀಟ್‌ಗಳನ್ನು ಮಾಡಿದ್ದು ರಾಜ್ಯದಲ್ಲಿನ ಪ್ರವಾಹ ಪರಿಸ್ಥಿತಿಯ ಬಗ್ಗೆ ಸರ್ಕಾರವನ್ನು ಎಚ್ಚರಿಸುವ ಕೆಲಸವನ್ನು ಮಾಡಿದ್ದಾರೆ. ಸರ್ಕಾರದ ಕೆಲಸಗಳನ್ನು ನೆನಪು ಮಾಡಿಕೊಟ್ಟಿದ್ದಾರೆ.
ಕಲಬುರಗಿ ಮತ್ತು ಬೀದರ್ ಜಿಲ್ಲೆಗಳಲ್ಲಿ ಹಳ್ಳ, ನದಿ, ನಾಲೆಗಳು ತುಂಬಿ ಹರಿಯುತ್ತಿವೆ. ತಗ್ಗು ಪ್ರದೇಶಗಳಿಗೆ ನೀರು ನುಗ್ಗಿದ್ದು ಜನ, ಜಾನುವಾರುಗಳು ಸಂಕಷ್ಟಕ್ಕೆ ಸಿಲುಕಿವೆ. ಹಲವು ಕಿ. ಮೀ. ರಸ್ತೆಗೆ ಹಾನಿಯಾಗಿದೆ. ಸೇತುವೆಗಳು ಮುಳುಗಿವೆ.

ಹೊಣೆಗಾರಿಕೆ ಪ್ರದರ್ಶನ ಮಾಡಿ
"ಕೋವಿಡ್ ಸೋಂಕು ಹೆಚ್ಚುತ್ತಿರುವ ಬೆನ್ನಲ್ಲೇ ನೆರೆಹಾವಳಿಯಿಂದ ರೈತರು ದಿಕ್ಕೆಟ್ಟುಹೋಗಿದ್ದಾರೆ. ಉಪಚುನಾವಣೆಗಳಿಗಿಂತ ರೈತರ ಸಂಕಷ್ಟಕ್ಕೆ ಆದ್ಯತೆಯ ಮೇರೆಗೆ ಸ್ಪಂದಿಸಿ ಸರ್ಕಾರ ತನ್ನ ಹೊಣೆಗಾರಿಕೆ ಪ್ರದರ್ಶಿಸಬೇಕಾದ ತುರ್ತು ಅಗತ್ಯವಿದೆ" ಎಂದು ಎಚ್. ಡಿ. ಕುಮಾರಸ್ವಾಮಿ ಒತ್ತಾಯಿಸಿದ್ದಾರೆ.

ಸಂಕಷ್ಟಕ್ಕೆ ಸಿಲುಕಿದ್ದಾರೆ
"ಸತತ ಎರಡು ವರ್ಷಗಳ ನೆರೆಯಿಂದ ತತ್ತರಿಸಿರುವ ರಾಜ್ಯದ ರೈತರು ಈ ಬಾರಿ ಮತ್ತೆ ಮಳೆಯಿಂದಾಗಿ ತೀವ್ರ ಸಂಕಷ್ಟಕ್ಕೆ ಸಿಲುಕಿದ್ದಾರೆ. ಬೆಳೆ, ಮನೆ-ಮಠ ಕಳೆದುಕೊಂಡು ನೆರೆಯಿಂದ ನೊಂದ ರಾಜ್ಯದ ರೈತರ ನೆರವಿಗೆ ರಾಜ್ಯ ಸರ್ಕಾರ ಧಾವಿಸುವ ಮೂಲಕ ವಿಶ್ವಾಸ ತುಂಬುವ ಕೆಲಸವನ್ನು ಸಮರೋಪಾದಿಯಲ್ಲಿ ಕೈಗೆತ್ತಿಕೊಳ್ಳಬೇಕು" ಎಂದು ಕುಮಾರಸ್ವಾಮಿ ಆಗ್ರಹಿಸಿದ್ದಾರೆ.

ಸಚಿವರನ್ನು ತಕ್ಷಣ ನಿಯೋಜಿಸಿ
"ರಾಜ್ಯದ ಉತ್ತರ ಕರ್ನಾಟಕ, ಕರಾವಳಿ ಹಾಗೂ ಮಲೆನಾಡಿನ ಹಲವು ಜಿಲ್ಲೆಗಳಲ್ಲಿ ಭಾರಿ ಮಳೆಯಿಂದ ಸಂಭವಿಸಿರುವ ಬೆಳೆ ಹಾನಿ, ಆಸ್ತಿ ನಷ್ಟಕ್ಕೆ ಸರ್ಕಾರ ತಕ್ಷಣ ವಿಶೇಷ ಅನುದಾನ ಘೋಷಣೆ ಮಾಡಬೇಕು. ನೆರೆಪೀಡಿತ ಪ್ರದೇಶಗಳ ಸಂಕಷ್ಟ ಪರಿಸ್ಥಿತಿಯನ್ನು ಸಮರ್ಥವಾಗಿ ನಿಭಾಯಿಸಲು ಅಧಿಕಾರಿಗಳು ಮತ್ತು ಸಚಿವರನ್ನು ತಕ್ಷಣವೇ ನಿಯೋಜಿಸಬೇಕು" ಎಂದು ಆಗ್ರಹಿಸಿದ್ದಾರೆ.
Recommended Video

ವಿವಿಧ ಜಿಲ್ಲೆಗಳಲ್ಲಿ ಮಳೆ
ಕರಾವಳಿ, ಮಲೆನಾಡು ಭಾಗದಲ್ಲಿ ಮಳೆಯಾಗುತ್ತಿದೆ. ಕಲಬುರಗಿ, ಯಾದಗಿರಿ, ಬೀದರ್, ರಾಯಚೂರು, ಕೊಪ್ಪಳ ಸೇರಿದಂತೆ ವಿವಿಧ ಜಿಲ್ಲೆಗಳಲ್ಲಿ ಭಾರಿ ಮಳೆಯಾಗುತ್ತಿದ್ದು, ಪ್ರವಾಹ ಪರಿಸ್ಥಿತಿ ಉಂಟಾಗಿದೆ. ರೈತರ ಬೆಳೆಗಳು ನೀರಿನಲ್ಲಿ ಮುಳುಗಿವೆ. ಮಳೆ, ಪ್ರವಾಹದಿಂದಾಗಿ ಅಪಾರವಾದ ಹಾನಿಯಾಗಿದೆ.












Click it and Unblock the Notifications