Karnataka Rain: ಬಿಸಿಲಿನ ಝಳಕ್ಕೆ ತತ್ತರಿಸಿದ ಜನ, ಕರುನಾಡಿನಲ್ಲಿ ಮಳೆ ಯಾವಾಗ..?
ಬೆಂಗಳೂರು, ಏಪ್ರಿಲ್ 07: ಕರ್ನಾಟಕದ ಜನ ಬರ, ಬೇಸಿಗೆ ಹಾಗೂ ಬಿಸಿಲಿನ ಝಳಕ್ಕೆ ತತ್ತರಿಸಿದ್ದು, ಮಳೆಗಾಗಿ ಕಾಯುತ್ತಿದ್ದಾರೆ. ಕೊಡಗು, ದಕ್ಷಿಣ ಕನ್ನಡ, ಚಿಕ್ಕಮಗಳೂರು ಸೇರಿದಂತೆ ಕೆಲವು ಭಾಗಗಳಲ್ಲಿ ಈಗಾಗಲೇ ಮೊದಲ ಮಳೆಯಾಗಿದ್ದು, ಮಳೆ ಬಂದು ಹೋದ ಬಳಿಕ ಧಗೆ ಮತ್ತಷ್ಟು ಹೆಚ್ಚಾಗಿದೆ. ಕೆಲವು ಭಾಗಗಳಲ್ಲಿ ಮೋಡ ಕವಿದ ವಾತಾವರಣವಿದ್ದು, ಸೆಕೆ ಮಾತ್ರ ಕಿಂಚಿತ್ತೂ ಕಡಿಮೆಯಾಗುತ್ತಿಲ್ಲ.
ಹೀಗಾಗಿ ಬಿಸಿಲಿನ ಧಗೆ ಹಾಗೂ ಸೆಕೆಗೆ ಜನ ಹೈರಾಣಾಗುತ್ತಿದ್ದು, ಒಮ್ಮೆಲೆ ಭಾರೀ ಮಳೆಗೆ ಆಕಾದತ್ತ ನೋಡುತ್ತಿದ್ದಾರೆ. ಮಳೆಗಾಗಿ ಕಾಯುತ್ತಿದ್ದ ಕರುನಾಡಿನ ಜನರಿಗೆ ಸಿಹಿ ಸುದ್ದಿಯೊಂದು ಸಿಕ್ಕಿದ್ದು, ಇಂದಿನಿಂದ ಅಂದರೆ ಏಪ್ರಿಲ್ 07ರಿಂದ ರಾಜ್ಯದ ಕೆಲವು ಭಾಗಗಳಲ್ಲಿ ಮಳೆಯಾಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ.

ರಾಜ್ಯದಲ್ಲಿ ಮುಂದಿನ ವಾರ ಬಿಸಿ ಗಾಳಿ ಮತ್ತು ಮಳೆ ಎರಡೂ ಆಗಲಿದೆ ಎಂದು ಹವಾಮಾನ ಇಲಾಖೆ ಮುನ್ಸೂಚನೆ ನೀಡಿದೆ. ಉತ್ತರ ಒಳನಾಡಿನ ಪ್ರದೇಶಗಳಲ್ಲಿ ಬಿಸಿಲಿನ ಧಗೆ ಮತ್ತಷ್ಟು ಹೆಚ್ಚಲಿದೆ. ಈಗಾಗಲೇ ತಾಪಮಾನವು 40 ಡಿಗ್ರಿ ಸೆಲ್ಸಿಯಸ್ ದಾಟಿದ್ದು, ಮುಂದಿನ ದಿನಗಳಲ್ಲಿ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇದೆ.
ಇಂದಿನ ಹಾಗೂ ಮುಂದಿನ ನಾಲ್ಕು ದಿನಗಳ ಹವಾಮಾನ ವರದಿ
ಇಂದು ಏಪ್ರಿಲ್ 7ರಂದು ಉತ್ತರ ಒಳನಾಡಿನ ಬಾಗಲಕೋಟೆ, ಧಾರವಾಡ, ಗದಗ, ಹಾವೇರಿ, ಕಲಬುರಗಿ, ಕೊಪ್ಪಳ, ರಾಯಚೂರು ಜಿಲ್ಲೆಗಳಲ್ಲಿ ಬಿಸಿ ಗಾಳಿ ಇರಲಿದ್ದು, ಚಿಕ್ಕಮಗಳೂರು, ಮಂಡ್ಯ ಹಾಗೂ ಕೊಡಗು ಜಿಲ್ಲೆಗಳ ಕೆಲವೆಡೆ ಹಗುರ ಮಳೆಯಾಗುವ ಸಾಧ್ಯತೆಯಿದೆ. ಅಲ್ಲದೇ ಉಡುಪಿ ಜಿಲ್ಲೆಯಲ್ಲಿ ಮೋಡ ಕವಿದ ವಾತಾವರಣವಿದೆ.
ಏಪ್ರಿಲ್ 8 ರಂದು ಕೊಡಗು, ಚಿಕ್ಕಮಗಳೂರು ಮತ್ತು ಮೈಸೂರು ಜಿಲ್ಲೆಗಳ ಒಂದೆರಡು ಸ್ಥಳಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆಯಿದ್ದು, ಉಳಿದ ಜಿಲ್ಲೆಗಳಲ್ಲಿ ಒಣಹವೆ ಇರಲಿದೆ. ಏಪ್ರಿಲ್ 9 ಮತ್ತು 10 ರಂದು ರಾಜ್ಯದ ಬಹುತೇಕ ಜಿಲ್ಲೆಗಳಲ್ಲಿ ಹಗುರ ಮಳೆಯಾಗುವ ಸಾಧ್ಯತೆ ಇದೆ ಎಂದು ಹವಾಮಾನ ಇಲಾಖೆ ತಿಳಿಸಿದೆ.












Click it and Unblock the Notifications