
Vande Bharat Express : ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ, 5 ಗಂಟೆ ಪ್ರಯಾಣ!
ಬೆಂಗಳೂರು, ಜನವರಿ 25; ಕರ್ನಾಟಕದ ರಾಜಧಾನಿ ಬೆಂಗಳೂರು ಮತ್ತು ಉತ್ತರ ಕರ್ನಾಟಕ ಸಂಪರ್ಕಿಸುವ ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಸಂಚಾರಕ್ಕೆ ಜನರು ಕಾತರದಿಂದ ಕಾಯುತ್ತಿದ್ದಾರೆ. ಈ ರೈಲಿನ ಕುರಿತು ಒಂದೊಂದೇ ಅಪ್‌ಡೇಟ್‌ಗಳು ಲಭ್ಯವಾಗುತ್ತಿವೆ.
ಭಾರತೀಯ ರೈಲ್ವೆಯ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್. ಬೆಂಗಳೂರಿಂದ ಹೊರಡುವ ರೈಲು ಹುಬ್ಬಳ್ಳಿ ಮೂಲಕ ಧಾರವಾಡ ತಲುಪಲಿದೆ. ಮಾರ್ಚ್ ಅಂತ್ಯ ಅಥವ ಏಪ್ರಿಲ್ ತಿಂಗಳಿನಲ್ಲಿ ಈ ರೈಲು ಸಂಚಾರ ಆರಂಭವಾಗುವ ನಿರೀಕ್ಷೆ ಇದೆ.
Vande Bharat Express : ಬೆಂಗಳೂರು ನಗರದಿಂದ ಮೂರು ಮಾರ್ಗದಲ್ಲಿ ರೈಲು ಸಂಚಾರ
ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಓಡಿಸಲು ಅಗತ್ಯವಾಗಿರುವ ಕಾಮಗಾರಿಗಳನ್ನು ನೈಋತ್ಯ ರೈಲ್ವೆ ವಲಯ ಕೈಗೊಂಡಿದೆ. ಅಲ್ಲದೇ ರೈಲಿನ ತಾತ್ಕಾಲಿಕ ವೇಳಾಪಟ್ಟಿಯನ್ನು ಭಾರತೀಯ ರೈಲ್ವೆ ಮಂಡಳಿಗೆ ಈಗಾಗಲೇ ಹುಬ್ಬಳ್ಳಿಯಲ್ಲಿ ಪ್ರಧಾನ ಕಚೇರಿ ಹೊಂದಿರುವ ನೈಋತ್ಯ ರೈಲ್ವೆ ಸಲ್ಲಿಕೆ ಮಾಡಿದೆ.
Vande Bharat; ಧಾರವಾಡ-ಹುಬ್ಬಳ್ಳಿ ಮಾರ್ಗದ ವೇಗ ಪರೀಕ್ಷೆ ಯಶಸ್ವಿ
ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲುಗಳನ್ನು ತಮಿಳುನಾಡಿನ ಚೆನ್ನೈನ ಪೆರಂಬೂರ್‌ನ ಸಮಗ್ರ ಕೋಚ್ ಫ್ಯಾಕ್ಟರಿಯಲ್ಲಿ ದೇಶೀಯವಾಗಿ ಉತ್ಪಾದಿಸಲಾಗುತ್ತಿದೆ. ವಂದೇ ಭಾರತ್ 2.0 ಮಾದರಿಯ ರೈಲನ್ನು ಈಗ ಓಡಿಸಲಾಗುತ್ತಿದ್ದು, ಸದ್ಯ ದೇಶದಲ್ಲಿ 8 ವಂದೇ ಭಾರತ್ ರೈಲುಗಳು ಸಂಚಾರ ನಡೆಸುತ್ತಿವೆ.
Year end 2022; ಈ ವರ್ಷ ಸಂಚಾರ ಆರಂಭಿಸಿದ ವಂದೇ ಭಾರತ್ ರೈಲುಗಳು

ಬೆಂಗಳೂರು-ಧಾರವಾಡ ರೈಲಿಗೆ 8 ಬೋಗಿ
ಭಾರತೀಯ ರೈಲ್ವೆಯು ಮಿನಿ ವಂದೇ ಭಾರತ್ ರೈಲಿನ ಪರಿಕಲ್ಪನೆಯನ್ನು ಸಿದ್ಧಪಡಿಸಿದೆ. ದೂರದ ನಗರಗಳಿಗೆ ಸಂಚಾರ ನಡೆಸುವ ವಂದೇ ಭಾರತ್ ರೈಲುಗಳಿಗೆ 16 ಕೋಚ್, ಕಡಿಮೆ ದೂರದ ನಗರಗಳನ್ನು ಸಂಪರ್ಕಿಸುವ ರೈಲಿಗೆ 8 ಕೋಚ್‌ಗಳನ್ನು ಅಳವಡಿಕೆ ಮಾಡಲಾಗುತ್ತದೆ. ಪ್ರಯಾಣದ ಅವಧಿಯ ಆಧಾರದ ಮೇಲೆ ಎಷ್ಟು ಕೋಚ್ ಇರಬೇಕು ಎಂದು ರೈಲ್ವೆ ತೀರ್ಮಾನ ಕೈಗೊಳ್ಳಲಿದೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವೆ ಸಂಚಾರ ನಡೆಸುವ ರೈಲಿಗೆ 8 ಬೋಗಿ ಆಳವಡಿಕೆ ಮಾಡಲಾಗುತ್ತದೆ. ಮುಂದಿನ ದಿನಗಳಲ್ಲಿ ಪ್ರಯಾಣಿಕರ ದಟ್ಟಣೆ ಉಂಟಾದರೆ ಬೋಗಿಗಳ ಸಂಖ್ಯೆ ಜಾಸ್ತಿ ಮಾಡಲು ಸಹ ಅವಕಾಶವಿದೆ.

ವೆಚ್ಚ ಕಡಿಮೆ, ಎರಡನೇ ದರ್ಜೆಯ ನಗರಗಳು
16 ಬೋಗಿಗಳ ವಂದೇ ಭಾರತ್ ರೈಲುಗಳ ನಿರ್ಮಾಣಕ್ಕೆ ಸುಮಾರು 115 ರಿಂದ 120 ಕೋಟಿ ರೂ. ವೆಚ್ಚವಾಗಲಿದೆ ಎಂದು ಅಂದಾಜಿಸಲಾಗಿದೆ. 16 ಬೋಗಿ ರೈಲುಗಳನ್ನು ಮೆಟ್ರೋ ನಗರಗಳ ನಡುವೆ ಸಂಪರ್ಕಿಸುವ ಗುರಿಯೊಂದಿಗೆ ವಿನ್ಯಾಸ ಮಾಡಲಾಗಿತ್ತು.
ಆದರೆ ಎರಡನೇ ದರ್ಜೆಯ ನಗರಗಳ ನಡುವೆ ಸಂಪರ್ಕ ಕಲ್ಪಿಸಲು 8 ಬೋಗಿಯ ರೈಲುಗಳನ್ನು ವಿನ್ಯಾಸಗೊಳಿಸಲಾಗುತ್ತಿದೆ. ಮಿನಿ ವಂದೇ ಭಾರತ್ ವಿನ್ಯಾಸದ ಈ ರೈಲಿನ ತಯಾರಿಕಾ ವೆಚ್ಚ 55 ರಿಂದ 60 ಕೋಟಿ ಎಂದು ಅಂದಾಜಿಸಲಾಗಿದೆ. ಆದ್ದರಿಂದ, ಬೆಂಗಳೂರು-ಹುಬ್ಬಳ್ಳಿ ನಡುವೆ 8 ಬೋಗಿಯ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.

5 ಗಂಟೆಯ ಪ್ರಯಾಣದ ಸಮಯ
ಈಗ ಅಭಿವೃದ್ಧಿಗೊಂಡಿರುವ ವಂದೇ ಭಾರತ್ 2.0 ರೈಲುಗಳು ಪ್ರತಿ ಗಂಟೆಗೆ 160 ಕಿಲೋಮೀಟರ್‌ನಷ್ಟು ವೇಗವಾಗಿ ಸಂಚರಿಸುವ ಸಾಮರ್ಥ್ಯ ಹೊಂದಿದೆ. ವಂದೇ ಭಾರತ್ ರೈಲು ಸಂಚಾರ ಆರಂಭವಾದರೆ ಬೆಂಗಳೂರು-ಹುಬ್ಬಳ್ಳಿ ನಡುವಿನ ಪ್ರಯಾಣದ ಅವಧಿ ಎಷ್ಟು? ಎಂಬುದು ಪ್ರಶ್ನೆಯಾಗಿದೆ.
ಸದ್ಯದ ಮಾಹಿತಿ ಪ್ರಕಾರ ಬೆಂಗಳೂರು-ಹುಬ್ಬಳ್ಳಿ-ಧಾರವಾಡ ನಡುವಿನ ವಂದೇ ಭಾರತ್ ರೈಲು ಸಂಚಾರದ ಅವಧಿ 5 ಗಂಟೆಗಳು. ಹುಬ್ಬಳ್ಳಿ-ಧಾರವಾಡ ರೈಲ್ವೇ ಮಾರ್ಗದಲ್ಲಿ ಈಗಾಗಲೇ ರೈಲಿನ ವೇಗದ ಪರೀಕ್ಷೆ ಯಶಸ್ವಿಯಾಗಿದೆ. ವಂದೇ ಭಾರತ್ ರೈಲು ಸಂಚಾರಕ್ಕೆ ಪೂರಕವಾಗಿ ಹಳಿಗಳನ್ನು ಉನ್ನತೀಕರಿಸಲಾಗಿದ್ದು, ಗಂಟೆಗೆ 120 ಕಿ. ಮೀ. ವೇಗಕ್ಕೆ ಅನುಗುಣವಾಗಿ ಹಳಿ ನಿರ್ಮಿಸಲಾಗಿದೆ.

ಏಪ್ರಿಲ್‌ನಲ್ಲಿ ರೈಲುಗಳ ಸಂಚಾರ?
ಕೇಂದ್ರ ರೈಲ್ವೆ ಸಚಿವ ಅಶ್ವಿನಿ ವೈಷ್ಣವ್ ನವೆಂಬರ್‌ನಲ್ಲಿ ರಾಜ್ಯದ ರೈಲು ಯೋಜನೆಗೆ ಬಗ್ಗೆ ಸಭೆ ನಡೆಸಿದ್ದರು. ಮುಖ್ಯಮಂತ್ರಿ ಬಸವರಾಜ ಬೊಮ್ಮಾಯಿ ನೇತೃತ್ವದಲ್ಲಿ ನಡೆದ ಸಭೆಯಲ್ಲಿ ಮಾರ್ಚ್ ವೇಳೆಗೆ ಬೆಂಗಳೂರು-ಹುಬ್ಬಳ್ಳಿ ನಡುವೆ ವಂದೇ ಭಾರತ್ ರೈಲು ಓಡಿಸಲು ಸಿದ್ಧತೆ ಮಾಡಿಕೊಳ್ಳಬೇಕು ಎಂದು ಸೂಚನೆ ನೀಡಲಾಗಿತ್ತು.
ಆದರೆ ಬೆಂಗಳೂರು-ಹುಬ್ಬಳ್ಳಿ ಮಾರ್ಗದ ವಿದ್ಯುದೀಕರಣ ಕಾಮಗಾರಿ ಪೂರ್ಣಗೊಂಡಿಲ್ಲ. ಮಾರ್ಚ್ ವೇಳೆಗೆ ಇದು ಪೂರ್ಣಗೊಳ್ಳುವ ನಿರೀಕ್ಷೆ ಇದೆ. ಆದ್ದರಿಂದ ವಂದೇ ಭಾರತ್ ರೈಲುಗಳು ಏಪ್ರಿಲ್‌ನಲ್ಲಿ ಉಭಯ ನಗರಗಳ ನಡುವೆ ಸಂಚಾರ ನಡೆಸಲಿವೆ ಎಂದು ಅಂದಾಜಿಸಲಾಗಿದೆ.

ಕರ್ನಾಟಕದಲ್ಲಿ ಒಂದೇ ರೈಲಿನ ಸಂಚಾರ
ಭಾರತೀಯ ರೈಲ್ವೆಯ ಮೊದಲ ಸೆಮಿ ಹೈಸ್ಪೀಡ್ ರೈಲು ವಂದೇ ಭಾರತ್ ಎಕ್ಸ್‌ಪ್ರೆಸ್ ಆಗಿದೆ. 2019ರ ಫೆಬ್ರವರಿ 15ರಂದು ನವದೆಹಲಿಯಲ್ಲಿ ಪ್ರಧಾನಿ ನರೇಂದ್ರ ಮೋದಿದ ಕಾನ್ಪುರ-ಅಲಹಾಬಾದ್-ವಾರಣಸಿ ಮಾರ್ಗದ ರೈಲಿಗೆ ಚಾಲನೆ ನೀಡಿದ್ದರು. ಸದ್ಯ ದೇಶದಲ್ಲಿ 8 ವಂದೇ ಭಾರತ್ ಮಾದರಿ ರೈಲುಗಳು ಸಂಚಾರ ನಡೆಸುತ್ತಿವೆ.
ಕರ್ನಾಟಕದಲ್ಲಿ ಸದ್ಯ ಒಂದು ವಂದೇ ಭಾರತ್ ಎಕ್ಸ್‌ಪ್ರೆಸ್ ರೈಲು ಮಾತ್ರ ಓಡುತ್ತಿದೆ. ನರೇಂದ್ರ ಮೋದಿ 2022ರ ನವೆಂಬರ್‌ನಲ್ಲಿ ಮೈಸೂರು ಮತ್ತು ಪುರುಚ್ಚಿ ತಲೈವರ್ ಡಾ. ಎಂಜಿಆರ್ ಚೆನ್ನೈ ಸೆಂಟ್ರಲ್ ನಡುವಿನ ರೈಲು ಸಂಚಾರಕ್ಕೆ ಕೆ. ಎಸ್. ಆರ್ ಬೆಂಗಳೂರು ರೈಲು ನಿಲ್ದಾಣದಲ್ಲಿ ಹಸಿರು ನಿಶಾನೆ ತೋರಿಸಿದ್ದರು. ಮೈಸೂರು-ಚೆನ್ನೈ ನಡುವಿನ ರೈಲು ಬೆಂಗಳೂರು ಮೂಲಕ ಸಂಚಾರ ನಡೆಸುತ್ತಿದೆ. ಬೆಂಗಳೂರು ನಗರದಿಂದ ಇನ್ನೂ ಮೂರು ಮರ್ಗದಲ್ಲಿ ವಂದೇ ಭಾರತ್ ರೈಲು ಸಂಚಾರ ನಡೆಸುವ ನಿರೀಕ್ಷೆ ಇದೆ.