ದೇಶದ ಅಭಿವೃದ್ಧಿಗೆ ಹೆಗಲಾದವರು ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ: ಎಚ್ಡಿಕೆ
ಬೆಂಗಳೂರು, ಏಪ್ರಿಲ್ 7: ಹುಟ್ಟೂರು ಸೇರಬೇಕೆಂದು ಹಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕೆ ಗಂಗಮ್ಮ ದಾರಿ ಮಧ್ಯದಲ್ಲೇ ಮೃತ ಪಟ್ಟಿರುವ ಘಟನೆಯ ಬಗ್ಗೆ ಮಾಜಿ ಸಿಎಂ ಎಚ್.ಡಿ.ಕುಮಾರಸ್ವಾಮಿ ತೀವ್ರ ವಿಷಾದ ವ್ಯಕ್ತ ಪಡಿಸಿದ್ದಾರೆ.
ಈ ಬಗ್ಗೆ ಕುಮಾರಸ್ವಾಮಿ ಸರಣಿ ಟ್ವೀಟ್ ಮಾಡಿದ್ದು ಹೀಗೆ, "ಹುಟ್ಟೂರು ಸೇರಬೇಕೆಂಬ ಆಸೆಯೊಂದಿಗೆ ಹಸಿವಿನಲ್ಲೇ ರಾಯಚೂರಿನತ್ತ ಹೆಜ್ಜೆ ಹಾಕುತ್ತಿದ್ದ ಕಟ್ಟಡ ಕಾರ್ಮಿಕ ಮಹಿಳೆ ಗಂಗಮ್ಮ ಎಂಬುವರು ಮಾರ್ಗ ಮಧ್ಯೆ ಅನ್ನಾಹಾರವಿಲ್ಲದೆ, ಸಕಾಲಕ್ಕೆ ಚಿಕಿತ್ಸೆ ಸಿಗದೇ ಮೃತಪಟ್ಟರೆಂಬ ಸುದ್ದಿ ತೀವ್ರ ನೋವುಂಟು ಮಾಡಿತು".
"ಗಂಗಮ್ಮ ಅವರ ಈ ಪ್ರಕರಣ ವಲಸೆ ಕಾರ್ಮಿಕರು, ಕೂಲಿಕಾರ್ಮಿಕರ ಬದುಕನ್ನು ಸಾಕ್ಷೀಕರಿಸುವಂತಿದೆ. ಗಂಗಮ್ಮ ಪ್ರಕರಣದಲ್ಲಿ ಕೂಲಿ ನೀಡದ ಗುತ್ತಿಗೆದಾರನೊಬ್ಬನದ್ದೇ ತಪ್ಪಿಲ್ಲ. ಸರ್ಕಾರದ್ದೂ ತಪ್ಪಿದೆ. ಕಾರ್ಮಿಕರ ಇಲಾಖೆಯಲ್ಲಿ ₹8000 ಕೋಟಿ ಹಣವಿದೆ".

"ಆದರೆ ಇಂಥವರಿಗೆ ವಿನಿಯೋಗವಾಗುತ್ತಿಲ್ಲವೇಕೆ? ಆಕೆಯನ್ನು ಬಳ್ಳಾರಿ ಜಿಲ್ಲಾಡಳಿತ ನಿರಾಶ್ರಿತರ ಕ್ಯಾಂಪ್‌ನಲ್ಲಿ ಇರಿಸಿತ್ತಂತೆ. ಕ್ಯಾಂಪ್‌ನಲ್ಲಿದ್ದೂ ಆಕೆಗೆ ಆಹಾರ, ಚಿಕಿತ್ಸೆ ಸಿಗಲಿಲ್ಲ ಏಕೆ? ಲಾಕ್‌ಡೌನ್ ಮಧ್ಯಮ ವರ್ಗ ಮತ್ತು ಶ್ರೀಮಂತರನ್ನು ಮನೆಯಲ್ಲಿ ಬಂಧಿಸಿಟ್ಟಿರಬಹುದು. ಆದರೆ, ಕೂಲಿಕಾರ್ಮಿಕರನ್ನು, ವಲಸಿಗರನ್ನು ಬೀದಿಗೆ ತಳ್ಳಿದೆ".
"ಸರ್ಕಾರ ಕೂಡಲೇ ಇಂಥವರ ಕಡೆಗೂ ಗಮನ ಹರಿಸಬೇಕು. ದೂರದೂರುಗಳಿಗೆ ಹೆಜ್ಜೆ ಹಾಕಿರುವವರ ಬದುಕು ಬವಣೆನ್ನು ನೋಡಬೇಕು. ಮೃತ ಗಂಗಮ್ಮನ ಕುಟುಂಬಕ್ಕೆ ಪರಿಹಾರ ನೀಡಬೇಕು. ವಿದೇಶದಿಂದ ಬಂದ ಸೋಂಕು ಅತ್ತ ಸಾವಿರಾರು ಸಂಖ್ಯೆಯಲ್ಲಿ ಜನರನ್ನು ಭಾದಿಸುತ್ತಿದೆ".
"ಇತ್ತ, ದೇಶದ ಅಭಿವೃದ್ಧಿಗೆ ಹೆಗಲಾದವರು, ದೇಶ ಕಟ್ಟಿದವರು, ಕಟ್ಟುವ ಕೆಲಸಕ್ಕೆ ಮಣ್ಣು, ಕಲ್ಲು, ಇಟ್ಟಿಗೆ ಹೊತ್ತವರು ತಾವು ಮಾಡದ ತಪ್ಪಿಗೆ ಅನ್ನಾಹಾರಗಳಿಲ್ಲದೇ ಸಾವಿಗೆ ಶರಣಾಗುತ್ತಿರುವುದು ವಿಧಿಯ ಕ್ರೂರ ವ್ಯಂಗ್ಯ" ಎಂದು ಕುಮಾರಸ್ವಾಮಿ ಟ್ವೀಟ್ ಮಾಡಿದ್ದಾರೆ.












Click it and Unblock the Notifications