ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಸಾಹಿತ್ಯಕ್ಕೂ ರಾಜಕೀಯಕ್ಕೂ ಬೇರ್ಪಡಿಸಲಾಗದ ಗಂಟು!

By Prasad
|
Google Oneindia Kannada News

ರಾಯಚೂರಿನಲ್ಲಿ ಡಿಸೆಂಬರ್ 2ರಿಂದ ನಡೆಯುತ್ತಿರುವ 3 ದಿನಗಳ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳವನ್ನು ಉದ್ದೇಶಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಮಾಡಿರುವ ಸುದೀರ್ಘ ಭಾಷಣದ ಪ್ರಮುಖ ಅಂಶಗಳನ್ನು ಇಲ್ಲಿ ನೀಡುತ್ತಿದ್ದೇವೆ. ಕನ್ನಡ ಭಾಷೆ ಅಪಾಯದಲ್ಲಿದ್ದು, ಕನ್ನಡದ ಉಳಿವಿಗಾಗಿ ಎಲ್ಲರೂ ಕಂಕಣಬದ್ಧರಾಗಬೇಕು ಎಂದು ಅವರು ಸಮಸ್ತ ಕನ್ನಡಿಗರಿಗೆ ಕರೆ ನೀಡಿದ್ದಾರೆ.

ಕರ್ನಾಟಕ ರಾಜ್ಯೋತ್ಸವ ವಜ್ರ ಮಹೋತ್ಸವ ವರ್ಷ ಆಚರಿಸಿದ ಬೆನ್ನಲ್ಲೇ, ಒಂದು ನೂರು ವರ್ಷಗಳನ್ನು ಪೂರ್ಣಗೊಳಿಸಿರುವ ಕನ್ನಡ ಸಾಹಿತ್ಯ ಪರಿಷತ್‌ನ ಸಾರಥ್ಯದಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿರುವುದು ಕನ್ನಡಿಗರೆಲ್ಲರೂ ಅಭಿಮಾನ ಮತ್ತು ಹೆಮ್ಮೆ ಪಡುವ ಸಂಗತಿಯಾಗಿದೆ.[82ನೇ 'ರಾಯಚೂರು' ಕನ್ನಡ ಸಾಹಿತ್ಯ ಸಮ್ಮೇಳನದ ಚಿತ್ರಸಂಪುಟ]

Raichur Kannada Sahitya Sammelana : Siddaramaiah Speech Part 1

ಮೊದಲು 1934ರಲ್ಲಿ ಪಂಜೆ ಮಂಗೇಶರಾಯರ ಅಧ್ಯಕ್ಷತೆಯಲ್ಲಿ ಮತ್ತು ನಂತರ 1956ರಲ್ಲಿ ಶ್ರೀರಂಗರ ಅಧ್ಯಕ್ಷತೆಯಲ್ಲಿ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನಗಳು ರಾಯಚೂರಿನಲ್ಲಿ ನಡೆದಿವೆ. ಈಗ ಬಂಡಾಯ ಸಾಹಿತಿ ಎಂದು ಕನ್ನಡ ನಾಡಿನ ಜನತೆ ಗುರುತಿಸಿರುವ ಬಹುಮುಖ ಪ್ರತಿಭಾಶಾಲಿ ಡಾ ಬರಗೂರು ರಾಮಚಂದ್ರಪ್ಪ ಅವರ ಅಧ್ಯಕ್ಷತೆಯಲ್ಲಿ 82ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನ ನಡೆಯುತ್ತಿದೆ. ಡಾ ಬರಗೂರು ರಾಮಚಂದ್ರಪ್ಪ ಅವರ ವಿಚಾರಪ್ರಚೋದಕ ಭಾಷಣ ಕೇಳಲು ತಮ್ಮಂತೆ ನಾನೂ ಕೂಡಾ ಉತ್ಸುಕನಾಗಿದ್ದೇನೆ.

ಹೈದರಾಬಾದ್ ಕರ್ನಾಟಕವನ್ನು ಕನ್ನಡದ ಕಾಶಿ ಎಂದೂ ಕರೆಯುತ್ತಾರೆ. ವೈಚಾರಿಕ ಕ್ರಾಂತಿಗೆ ನಾಂದಿ ಹಾಡಿದ ವಚನ ಪರಂಪರೆ, ಅನುಭಾವದ ದರ್ಶನ ಮಾಡಿಸಿದ ದಾಸ ಪರಂಪರೆ ಹಾಗೂ ಜಾನಪದ ವಿವೇಕದ ತತ್ವ ಪದಗಳು ಹುಟ್ಟಿದ್ದು ಈ ಭಾಗದಲ್ಲಿಯೇ. ಮಧ್ಯಕಾಲೀನ ಸಾಹಿತ್ಯ ಹಾಗೂ ಜೈನ ಸಾಹಿತ್ಯದ ಮೇರು ಕೃತಿಗಳು ಬೆಳಕು ಕಂಡದ್ದು ಇದೇ ನೆಲದಲ್ಲೇ. ಕನ್ನಡ ಸಂಸ್ಕೃತಿ ಮತ್ತು ಸಾಹಿತ್ಯದ ಹೃದಯ ಭಾಗದಂತಿರುವ ಉತ್ತರ ಕರ್ನಾಟಕ ಮತ್ತು ಹೈದರಾಬಾದ್ ಕರ್ನಾಟಕದ ಕೇಂದ್ರ ಸ್ಥಾನ ರಾಯಚೂರಿನಲ್ಲಿ ಸಮ್ಮೇಳನ ನಡೆಯುತ್ತಿರುವುದು ಐತಿಹಾಸಿಕವಾಗಿಯೂ ಮಹತ್ವದ್ದಾಗಿದೆ. ವಚನ ಪರಂಪರೆಗೆ ಈ ಭಾಗದ ಶರಣರಾದ ದಾಸೀಮಯ್ಯ, ಆಯ್ದಕ್ಕಿ ಮಾರಯ್ಯ, ಲಕ್ಕಮ್ಮ, ಮೊಸರ ಕಲ್ಲಿನ ಮುಕ್ತಾಯಕ್ಕ ಮೊದಲಾದವರು ಅಪೂರ್ವ ಕೊಡುಗೆ ನೀಡಿದ್ದಾರೆ.

Raichur Kannada Sahitya Sammelana : Siddaramaiah Speech Part 1
ಅದೇ ರೀತಿ ಕನಕದಾಸರು, ಪುರಂದರದಾಸರು, ವಿಜಯದಾಸರು, ಗೋಪಾಲದಾಸರೂ ಸೇರಿದಂತೆ ನೂರಕ್ಕೂ ಹೆಚ್ಚು ದಾಸರು ಕೀರ್ತನಾ ಸಾಹಿತ್ಯವನ್ನು ಶ್ರೀಮಂತಗೊಳಿಸಿದ್ದಾರೆ. ಕಡಕೋಳ ಮಡಿವಾಳಪ್ಪ, ತಿಂಥಣಿ ಮೋನಪಯ್ಯ, ಕೂಡಲೂರು ಬಸವಲಿಂಗಪ್ಪ, ಗಬ್ಬೂರು ಹಂಪಣ್ಣ, ಚಂದೂರು ಜಲಾಲ ಸಾಹೇಬ ಮೊದಲಾದವರು ತತ್ವ ಪದಗಳ ಮೂಲಕ ನಾಡಿನ ವಿವೇಕವನ್ನು ಬೆಳೆಸಿದ್ದಾರೆ.

ಶಾಂತರಸರು, ರಾಜಶೇಖರ ನೀರಮಾನ್ವಿ, ಗೀತಾ ನಾಗಭೂಷಣ, ಜಂಬಣ್ಣ ಅಮರಚಿಂತ, ಚಂದ್ರಕಾಂತ ಕುಸನೂರು, ಅಲ್ಲಮಪ್ರಭು ಬೆಟದೂರು, ಚನ್ನಣ್ಣ ವಾಲೀಕಾರ, ಅಮರೇಶ ನುಗಡೋಣಿ ಮೊದಲಾದವರು ಆಧುನಿಕ ಸಾಹಿತ್ಯಕ್ಕೆ ನೀಡಿರುವ ಕೊಡುಗೆ ಕೂಡಾ ಅನನ್ಯವಾದುದು. ಇವರ ಜೊತೆಯಲ್ಲಿ ಸಂಗೀತಗಾರರಾದ ಸಿದ್ದರಾಮ ಜಂಬಲದಿನ್ನಿ, ಹನುಮಣ್ಣ ನಾಯಕ ದೊರೆ, ನರಸಿಂಹಲು ವಡವಾಟಿ, ಚಿತ್ರ ಕಲಾವಿದರಾದ ಎಂ.ಎಸ್. ಪಂಡಿತ್, ಎಂ. ಆರ್. ಹಡಪದ ಮೊದಲಾದವರು ತಮ್ಮ ಪ್ರತಿಭೆಯ ಪ್ರಭೆಯಿಂದ ಈ ನಾಡಿನ ಸಾಂಸ್ಕೃತಿಕ ಲೋಕವನ್ನು ಶ್ರೀಮಂತಗೊಳಿಸಿದ್ದಾರೆ. ನಾಡು, ನುಡಿಗೆ ಚಿರಕಾಲ ಬಾಳುವಂತಹ ಕೊಡುಗೆಯನ್ನು ನೀಡಿರುವ ಮತ್ತು ನೀಡುತ್ತಿರುವ ಈ ನೆಲದ ಎಲ್ಲಾ ಪ್ರತಿಭಾ ಸಂಪನ್ನರಿಗೆ ನಾನು ಅಭಿನಂದನೆಗಳನ್ನು ಸಲ್ಲಿಸುತ್ತೇನೆ.

Raichur Kannada Sahitya Sammelana : Siddaramaiah Speech Part 1

ಬೇರ್ಪಡಿಸಲಾಗದ ಗಂಟು

ಸಾಹಿತ್ಯಕ್ಕೂ ರಾಜಕಾರಣಕ್ಕೂ ಇರುವ ನಂಟು ಬೇರ್ಪಡಿಸಲಾಗದ ಗಂಟು! ತನ್ನ ಕಾಲದ ರಾಜಕಾರಣದ ಬಗ್ಗೆ ಅರಿವಿಲ್ಲದ ಸಾಹಿತಿ ಗಟ್ಟಿಯಾದ ಬದುಕಿನ ಚಿತ್ರಣವನ್ನು ಕಟ್ಟಿಕೊಡಲಾರ. ರಾಜಕಾರಣ ಎಂದರೆ ಪುಢಾರಿಗಿರಿಯ ರಾಜಕಾರಣವಲ್ಲ. ಅದಕ್ಕೊಂದು ತಾತ್ವಿಕತೆಯ ತಳಹದಿ ಇರುತ್ತದೆ. ಇದನ್ನೇ ಮುತ್ಸದ್ಧಿ ರಾಜಕಾರಣ ಎಂದು ಕರೆಯುತ್ತಾರೆ.

ಪ್ರಭುಗಳ ಕಾಲದ ರಾಜಕಾರಣದಲ್ಲಿ ಒಂದು ಬಗೆಯ ತಾತ್ವಿಕತೆ ಇದ್ದರೆ, ಪ್ರಜಾಪ್ರಭುತ್ವದ ಕಾಲದ ರಾಜಕಾರಣಕ್ಕೆ ಹಲವು ಬಗೆಯ ತಾತ್ವಿಕ ಸಂಘರ್ಷಗಳಿರುತ್ತವೆ. ಎಡ-ಬಲ ಚಿಂತನೆಗಳು ಇದ್ದಹಾಗೆ ಸಮನ್ವಯ ಚಿಂತನೆಯೂ ಇರುತ್ತದೆ. ಇವೆಲ್ಲವನ್ನೂ ಬಲ್ಲವನಾಗಿದ್ದ ಸಾಹಿತಿ ಜನಪರವಾದದ್ದು ಯಾವುದು, ಜನವಿರೋಧಿಯಾದದ್ದು ಯಾವುದು ಎಂಬುದನ್ನು ಯೋಚಿಸಿ ಸರ್ವಜನಾಂಗದ ಶಾಂತಿಯ ತೋಟವಾಗಿಸಿ ಸಾಹಿತ್ಯವನ್ನು ಸೃಷ್ಟಿಸುತ್ತಾನೆ.

ಇಂತಹ ಸಾಹಿತ್ಯ ಲೋಕಮಾನ್ಯ ಸಾಹಿತ್ಯವಾಗಿ ಗೌರವಿಸಲ್ಪಡುತ್ತದೆ. ಏಕೆಂದರೆ ಸಾಹಿತಿಗೆ ಕಲಾತ್ಮಕ ಸಿದ್ಧಾಂತಕ್ಕಿಂತಲೂ ಬದುಕಿನ ಬದ್ಧತೆ ಬಹು ದೊಡ್ಡದು. ಬದುಕು ಹಸನಾಗಬೇಕೆಂಬುದೇ ಬರಹದ ಬಹುದೊಡ್ಡ ಆಶಯವಾಗಿರುತ್ತದೆ. ಸಾಹಿತ್ಯಿಕ ವ್ಯಕ್ತಿತ್ವ ಮನುಷ್ಯನನ್ನು ಮಾನವೀಯಗೊಳಿಸುತ್ತದೆ ಎನ್ನುವ ಮಾತಿಗೆ ನನ್ನ ಸಹಮತ ಇದೆ. ಸಾಹಿತ್ಯದ ಓದಿನ ಮೂಲಕ ಗಳಿಸಿಕೊಂಡ ಅನುಭವದ್ರವ್ಯ ವೈಯಕ್ತಿಕವಾಗಿ ನನ್ನ ಜೀವನ ದೃಷ್ಟಿಯನ್ನು ರೂಪಿಸಿಕೊಳ್ಳಲು ನೆರವಾಗಿದೆ ಎಂಬುದನ್ನೂ ವಿನಯಪೂರ್ವಕವಾಗಿ ಒಪ್ಪಿಕೊಳ್ಳುತ್ತೇನೆ.

Raichur Kannada Sahitya Sammelana : Siddaramaiah Speech Part 1

ಕನ್ನಡ ಭಾಷೆ ಅಪಾಯ ಎದುರಿಸುತ್ತಿದೆ

ನಮ್ಮ ಕಾಲದಲ್ಲಿಯೇ ಕನ್ನಡದ ಎಂಟು ಘನತೆವೆತ್ತ ಸಾಹಿತಿಗಳು ಜ್ಞಾನಪೀಠ ಪ್ರಶಸ್ತಿಗೆ ಭಾಜನರಾಗಿದ್ದಾರೆ. ಕನ್ನಡ ಭಾಷೆಯ ಕನ್ನಡ ಸಂಸ್ಕೃತಿಯ ಕನ್ನಡ ಸಾಹಿತ್ಯದ ಬದುಕಿನ ಗೌರವವನ್ನು ರಾಷ್ಟ್ರೀಯ ವ್ಯಾಪ್ತಿಯಲ್ಲಿ ವಿಸ್ತರಿಸಿದ್ದಾರೆ. ಇದು ಕನ್ನಡ ಸಾಹಿತ್ಯದ ಹಿರಿಮೆ. ಆದರೆ, ಎಲ್ಲೋ ಒಂದು ಕಡೆ ಕನ್ನಡ ಭಾಷೆ, ಸಂಸ್ಕೃತಿ, ಸಾಹಿತ್ಯ ಅಪಾಯವನ್ನು ಎದುರಿಸುತ್ತಿದೆ ಎಂಬ ಆತಂಕವೂ ವ್ಯಕ್ತವಾಗುತ್ತಿದೆ.

ಮುಖ್ಯವಾಗಿ ಶಿಕ್ಷಣದಲ್ಲಿ ಕಲಿಕೆಯ ಮಾಧ್ಯಮ ದೊಡ್ಡ ಸವಾಲಾಗಿ ನಮ್ಮೆದುರು ಬೆಳೆದು ನಿಂತಿದೆ. ಪ್ರಾಥಮಿಕ ಹಂತದಲ್ಲಿ ಕನ್ನಡ ಮಾಧ್ಯಮದಲ್ಲಿಯೇ ಶಿಕ್ಷಣ ನೀಡಬೇಕೆಂಬುದು ಸರ್ಕಾರದ ಸಂಕಲ್ಪ. ಸರ್ಕಾರದ ಈ ನಿರ್ಧಾರಕ್ಕೆ ಭಾರತ ಸರ್ವೋಚ್ಚ ನ್ಯಾಯಾಲಯದ ಇತ್ತೀಚಿನ ತೀರ್ಪಿನಿಂದಾಗಿ ಹಿನ್ನಡೆಯಾಗಿದೆ. ಈ ತೀರ್ಪಿನ ವಿರುದ್ಧ ರಾಜ್ಯ ಸರ್ಕಾರ ಸಲ್ಲಿಸಿರುವ ಪರಿಶೀಲನಾ ಅರ್ಜಿ ಮತ್ತು ಪರಿಹಾರಾತ್ಮಕ ಅರ್ಜಿ ಎರಡನ್ನೂ ಸರ್ವೋಚ್ಚ ನ್ಯಾಯಾಲಯವು ತಿರಸ್ಕರಿಸಿದೆ.

Raichur Kannada Sahitya Sammelana : Siddaramaiah Speech Part 1

ಭಾಷಾ ಮಾಧ್ಯಮವನ್ನು ಕಡ್ಡಾಯ ಮಾಡುವಂತಿಲ್ಲ. ಅದು ಹೆತ್ತವರ ಆಯ್ಕೆ ಎಂದು ಸರ್ವೋಚ್ಚ ನ್ಯಾಯಾಲಯವು ಹೇಳಿದೆ. ಸರ್ವೋಚ್ಚ ನ್ಯಾಯಾಲಯದ ಈ ತೀರ್ಪು ಜಾರಿಯಾದರೆ ಕನ್ನಡವೊಂದೇ ಅಲ್ಲ, ನಮ್ಮ ಎಲ್ಲಾ ಪ್ರಾದೇಶಿಕ ಭಾಷೆಗಳೂ ತಮ್ಮ ಅಸ್ತಿತ್ವವನ್ನೇ ಕಳೆದುಕೊಳ್ಳುವ ಅಪಾಯಕ್ಕೀಡಾಗಲಿವೆ. ಇದನ್ನು ತಪ್ಪಿಸಲು ಕೇಂದ್ರ ಸರ್ಕಾರ ಮಧ್ಯೆ ಪ್ರವೇಶ ಮಾಡಬೇಕಾಗಿದೆ. ಅಗತ್ಯ ಬಿದ್ದರೆ ಸಂವಿಧಾನಕ್ಕೆ ತಿದ್ದುಪಡಿ ಮಾಡಬೇಕಾಗುತ್ತದೆ. ನಾನು ದೆಹಲಿಯಲ್ಲಿ ಪ್ರಧಾನ ಮಂತ್ರಿ ನರೇಂದ್ರ ಮೋದಿ ಅವರನ್ನು ಭೇಟಿ ಮಾಡಿದಾಗ ಈ ಬಗ್ಗೆ ಅವರ ಗಮನ ಸೆಳೆದಿದ್ದೇನೆ. ಈ ನಿಟ್ಟಿನಲ್ಲಿ ಸೂಕ್ತ ಕ್ರಮ ಕೈಗೊಳ್ಳುವಂತೆ ಒತ್ತಾಯಿಸಿದ್ದೇನೆ.

English summary
82nd All India Kannada Literary Conference in Raichur. Inaugural speech by chief minister of Karnataka Siddaramaiah. In his speech he remembers the contribution to Kannada literary world by laureates and warns about threat Kannada language is facing.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X