Viral Video: ನಿಮ್ ಮೇಷ್ಟ್ರು ಎಲ್ಲಿ? ಎಂದಿದ್ದಕ್ಕೆ ಕುಡಿದು ಮಲಗಿದ್ದಾರೆ ಎಂದು ತೋರಿಸಿದ ವಿದ್ಯಾರ್ಥಿಗಳು!
ಸಾಮಾನ್ಯವಾಗಿ ಶಾಲೆಗಳು ಮಕ್ಕಳ ತಪ್ಪುಗಳನ್ನು ತಿದ್ದಿ ಬುದ್ಧಿ ಹೇಳಿಕೊಡುವ ಜಾಗ ಎನ್ನುತ್ತೇವೆ. ಶಿಕ್ಷಕರಿಗೆ ಅಂತಹ ಮಹತ್ವದ ಸ್ಥಾನ ನೀಡಲಾಗಿದೆ. ಜೀವನದ ದಾರಿ ತೋರಬೇಕಾದವರೇ ದಾರಿ ತಪ್ಪಿದರೆ ಅದಕ್ಕಿಂತ ದೊಡ್ಡ ದುರಂತ ಮತ್ತೊಂದಿಲ್ಲ. ಮಕ್ಕಳಿಗೆ ಕೆಟ್ಟದ್ದನ್ನು ಮಾಡಬೇಕು, ಕೆಟ್ಟ ಅಭ್ಯಾಸಗಳಿಂದ ದೂರವಿರಿ ಎಂದು ಹೇಳಬೇಕಾದ ಶಿಕ್ಷಕನೇ ಕಂಠಪೂರ್ತಿ ಮದ್ಯ ಸೇವಿಸಿ, ಶಾಲೆಯ ಅಂಗಳದಲ್ಲಿ ಮೈಮರೆತು ಬಿದ್ದಿದ್ದಾರೆ. ಇದನ್ನು ಕಂಡ ಮಕ್ಕಳು ಸರ್ವೇಸಾಮಾನ್ಯ ಎನ್ನುವಂತೆ ನಿಮ್ ಮೇಷ್ಟ್ರು ಎಲ್ಲಿ ಎಂದು ಕೇಳಿದ್ದಕ್ಕೆ ಕುಡಿದು ಮಲಗಿದ್ದಾರೆ ಎಂದು ಶಿಕ್ಷಕನನ್ನು ತೋರಿಸಿರುವ ವಿಡಿಯೋ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗಿದೆ. ಇದು ನಡೆದಿರುವುದು ನಮ್ಮ ಕರ್ನಾಟಕದಲ್ಲೇ ಆಗಿದ್ದು, ಶಿಕ್ಷಣ ಸಚಿವರು ಸ್ವಲ್ಪ ಈ ಕಡೆ ಗಮನ ಕೊಡಿ ಎಂದು ಆಗ್ರಹಿಸುತ್ತಿದ್ದಾರೆ.
ರಾಯಚೂರು ಜಿಲ್ಲೆ ಮಸ್ಕಿ ತಾಲೂಕಿನ ಗೋನಾಳ ಗ್ರಾಮದ ಅಂಬಾದೇವಿ ಸರ್ಕಾರಿ ಪ್ರಾಥಮಿಕ ಶಾಲೆಯಲ್ಲಿ ಈ ಘಟನೆ ನಡೆದಿದೆ ಎಂದು ಹೇಳಲಾಗುತ್ತಿದೆ. ಈ ವೈರಲ್ ವಿಡಿಯೋದಲ್ಲಿ ಮುಖ್ಯ ಶಿಕ್ಷಕ ನಿಂಗಪ್ಪ ಕಂಠಪೂರ್ತಿ ಮದ್ಯಪಾನ ಮಾಡಿ, ನೇರವಾಗಿ ಶಾಲೆಗೇ ಬಂದು ಮಲಗಿದ್ದಾನೆ. ಕುಡಿದ ಅಮಲಿನಲ್ಲಿ ಶಾಲೆ ಮುಂಭಾಗ ಬಿದ್ದು ತೂರಾಡಿರುವ ಬಗ್ಗೆ ಪೋಷಕರು ಆತಂಕ ವ್ಯಕ್ತಪಡಿಸಿದ್ದಾರೆ.
ಶಾಲಾ ಆವರಣದಲ್ಲಿ ಮಲಗಿದ್ದ ನಿಂಗಪ್ಪ ವಿರುದ್ಧ ಗಂಭೀರ ಆರೋಪ ಕೇಳಿಬಂದಿದ್ದು, ಪಾಠ ಮಾಡದೆ, ಕಂಠ ಪೂರ್ತಿ ಕುಡಿದು ಮಲಗುತ್ತಾರೆ ಎಂದು ಗ್ರಾಮಸ್ಥರು ದೂರಿದ್ದಾರೆ. ಇಂತಹ ಬೇಜವಾಬ್ದಾರಿ ಶಿಕ್ಷಕನ ವಿರುದ್ಧ ಕ್ರಮಕ್ಕೆ ಒತ್ತಾಯಿಸಿದ್ದಾರೆ. ಈ ಮುಖ್ಯ ಶಿಕ್ಷಕನ ಅಮಲಿನ ವಿಡಿಯೋ ಗ್ರಾಮಸ್ಥರ ಮೊಬೈಲ್ ಕ್ಯಾಮರಾದಲ್ಲಿ ರೆಕಾರ್ಡ್ ಮಾಡಲಾಗಿದೆ.
ಜ್ಞಾನ ದೇಗುಲದಲ್ಲೇ ಗುರು ಸ್ಥಾನದಲ್ಲಿರುವ ಶಿಕ್ಷಕನ ಈ ವರ್ತನೆಯನ್ನು ಖಂಡಿಸಲಾಗುತ್ತಿದೆ. ರಾಯಚೂರಿನ ಮಸ್ಕಿ ತಾಲೂಕಿನಲ್ಲಿ ಈ ಘಟನೆ ಬೆಳಕಿಗೆ ಬಂದಿದ್ದು, ಮುಖ್ಯಶಿಕ್ಷಕ ನಿಂಗಪ್ಪ ಶಾಲಾ ಅವಧಿಯಲ್ಲೇ ಈ ರೀತಿ ಕುಡಿದು ಮಕ್ಕಳ ಮುಂದೆಯೇ ತೂರಾಡಿದ್ದಲ್ಲದೆ ಅಡುಗೆ ಮನೆಯ ಬಾಗಿಲ ಬಳಿ ಅಡ್ಡಲಾಗಿ ಮೈಮರೆತು ಅಮಲಿನಲ್ಲಿರುವ ವಿಡಿಯೋಗೆ ಎಲ್ಲೆಡೆ ಆಕ್ರೋಶ ವ್ಯಕ್ತವಾಗುತ್ತಿದೆ.

ಸ್ಥಳೀಯರು ಮಕ್ಕಳು ಹೊರಗೆ ಇದ್ದಿದ್ದನ್ನು ಕೇಳಿದ್ದಾರೆ. ನಿಮ್ಮ ಶಿಕ್ಷಕರು ಎಲ್ಲಿ? ಎಂದಿದ್ದಕ್ಕೆ ನೋಡಿ ಅಲ್ಲಿ ಕುಡಿದು ಮಲಗಿದ್ದಾರೆ ಎಂದು ಆತನನ್ನು ಕರೆದೊಯ್ದು ತೋರಿಸಿದ್ದಾರೆ. ಮದ್ಯಪಾನದ ವಿಚಾರವನ್ನೇ ಕೇಳಬಾರದ ವಯಸ್ಸಿನಲ್ಲಿರುವ ಮಕ್ಕಳ ಮುಂದೆಯೇ ಶಿಕ್ಷಕನ ಈ ವರ್ತನೆ ನಿಜಕ್ಕೂ ಸರಿಯಾದದ್ದಲ್ಲ. ಇಂತಹ ಶಿಕ್ಷಕರಿಂದ ಮಕ್ಕಳಿಗೆ ಯಾವ ಪ್ರಯೋಜನವೂ ದೊರೆಯುವುದಿಲ್ಲ.ಕೂಡಲೇ ಈತನ ವಿರುದ್ಧ ಕಠಿಣ ಕ್ರಮ ಕೈಗೊಂಡು, ಕೆಲಸದಿಂದ ವಜಾ ಮಾಡಿ ಎಂದು ಶಿಕ್ಷಣ ಸಚಿವರಿಗೆ ಆಗ್ರಹಿಸಿದ್ದಾರೆ.
ಈ ಶಿಕ್ಷಕನ ವಿರುದ್ಧ ಈ ಹಿಂದೆಯೂ ಹಲವು ಬಾರಿ ಗ್ರಾಮಸ್ಥರು ದೂರು ನೀಡಿದ್ದರೂ ಯಾವುದೇ ಕ್ರಮ ಕೈಗೊಂಡಿಲ್ಲ ಎನ್ನಲಾಗಿದೆ. ಅಧಿಕಾರಿಗಳ ಈ ನಿರ್ಲಕ್ಷ್ಯದಿಂದ ವಿದ್ಯಾರ್ಥಿಗಳ ಮೇಲೆ ಎಂತಹ ಪರಿಣಾಮ ಬೀರಬಹುದು? ಎಂದು ಆತಂಕ ವ್ಯಕ್ತಪಡಿಸಿದ್ದಾರೆ.












Click it and Unblock the Notifications