ಡಿಕೆ ಶಿವಕುಮಾರ್ ಕಿಡಿ ಶಮನಗೊಳಿಸಿ ಮೊದಲ ಯುದ್ಧ ಗೆದ್ದ ರಾಹುಲ್!
Recommended Video

ಬೆಂಗಳೂರು, ಜೂನ್ 06 : ಕಾಂಗ್ರೆಸ್ ಮತ್ತು ಜೆಡಿಎಸ್ ಮೈತ್ರಿಕೂಟದ ಸರಕಾರದಲ್ಲಿ ಸಂಪುಟ ರಚನೆಯಾಗಿರುವ ಬೆನ್ನ ಹಿಂದೆಯೇ ಅಸಮಾಧಾನದ ಬೆಂಕಿ ಹೊತ್ತಿಕೊಂಡಿದ್ದರೂ, ಹೊತ್ತಿಕೊಂಡು ಸುಟ್ಟುಹಾಕಬೇಕಿದ್ದ ಕಿಡಿಯೊಂದನ್ನು ಶಮನಗೊಳಿಸಿ ರಾಹುಲ್ ಗಾಂಧಿಯವರು ಮೊದಲ ಯುದ್ಧವನ್ನು ಗೆದ್ದಿದ್ದಾರೆ.
ಬುಧವಾರ ನಡೆದ ಪ್ರಮಾಣ 25 ಶಾಸಕರ ವಚನ ಸ್ವೀಕಾರ ಸಮಾರಂಭದಲ್ಲಿ, ಕುಮಾರಸ್ವಾಮಿ ನೇತೃತ್ವದ ಮೈತ್ರಿಕೂಟ ವಿಶ್ವಾಸಮತ ಯಾಚಿಸುವ ಸಂದರ್ಭದಲ್ಲಿ ಮತ್ತು ಕುಮಾರಸ್ವಾಮಿ ಹಾಗು ಡಾ. ಜಿ ಪರಮೇಶ್ವರ ಅವರು ಮುಖ್ಯಮಂತ್ರಿಯಾಗಿ ಮತ್ತು ಉಪಮುಖ್ಯಮಂತ್ರಿಯಾಗಿ ಪ್ರಮಾಣ ಸ್ವೀಕರಿಸಿದ ಸಂದರ್ಭದಲ್ಲಿ ಕಂಡುಬಂದಿದ್ದ ಪರಿಸ್ಥಿತಿ ಕಂಡುಬಂದಿಲ್ಲ.
ಇದಕ್ಕೆ ಕಾರಣ, ಕಾಂಗ್ರೆಸ್ ಪಾಲಿನ ಟ್ರಬಲ್ ಶೂಟರ್, ಆಪದ್ಬಾಂಧವ, ಕನಕಪುರದ ಶಾಸಕ ಡಿಕೆ ಶಿವಕುಮಾರ್ ಅವರು ಪ್ರಮಾಣ ವಚನ ಸ್ವೀಕಾರ ಸಮಾರಂಭದಲ್ಲಿ ಖುಷಿಖುಷಿಯಿಂದ ಪಾಲ್ಗೊಂಡು, ಸಂಪುಟ ದರ್ಜೆಯ ಸಚಿವರಾಗಿ ಪ್ರಮಾಣ ಸ್ವೀಕರಿಸಿರುವುದು. ಅವರಿಗೆ ಯಾವ್ಯಾವ ಖಾತೆ ಸಿಗಲಿದೆ ಎಂಬುದು ಇನ್ನೆರಡು ದಿನಗಳಲ್ಲಿ ತಿಳಿದುಬರಲಿದೆ.
ಯಡಿಯೂರಪ್ಪನವರು ತಾವೇ ಸರಕಾರ ರಚಿಸಲು ಮುಂದಾಗಿದ್ದಾಗ, ಎಲ್ಲ ಕಾಂಗ್ರೆಸ್ ಶಾಸಕರು ಕುದುರೆ ವ್ಯಾಪಾರಕ್ಕೆ ಬಲಿಯಾಗದಂತೆ ತಡೆಹಿಡಿಯುವಲ್ಲಿ ಮತ್ತು ಆಮಿಷಗಳಿಗೆ ಬಲಿಯಾಗದಂತೆ ನೋಡಿಕೊಳ್ಳುವಲ್ಲಿ ಡಿಕೆ ಶಿವಕುಮಾರ್ ಅವರು ಪ್ರಮುಖ ಪಾತ್ರವಹಿಸಿದ್ದರು. ಇದೇ ಸಮಯದಲ್ಲಿ ಡಿಕೆ ಶಿವಕುಮಾರ್ ಅವರ ಆಪ್ತರ ಮೇಲೆ ದಾಳಿ ನಡೆಸಿ, ಬಿಜೆಪಿಯೆಡೆಗೆ ಸೆಳೆಯಲು ಯತ್ನಿಸಿದಾಗ ಕೂಡ ಅದು ಯಶಸ್ವಿಯಾಗಿರಲಿಲ್ಲ. ಇಂಥ ಆಮಿಷಗಳಿಗೆ ಬಗ್ಗುವಂಥ ಆಸಾಮಿಯೇ ಅಲ್ಲ ಡಿಕೆ ಶಿವಕುಮಾರ್.

ವಿಸ್ಪೋಟಗೊಂಡಿದ್ದ ಡಿಕೆಶಿ ಅಸಮಾಧಾನ
ಮೊದಲಿಗೆ ಉಪ ಮುಖ್ಯಮಂತ್ರಿ ಹುದ್ದೆಯ ಮೇಲೆ ಕಣ್ಣಿಟ್ಟಿದ್ದ 56 ವರ್ಷಗಳ ಹಿರಿಯ ರಾಜಕಾರಣಿ ಡಿಕೆ ಶಿವಕುಮಾರ್ ಅವರಿಗೆ ಡಾ. ಜಿ ಪರಮೇಶ್ವರ ಅವರನ್ನು ಡಿಸಿಎಂ ಆಗಿ ಘೋಷಿಸಿದಾಗ ಕೆಂಡಾಮಂಡಲರಾಗಿದ್ದರು. ಇಬ್ಬಿಬ್ಬರು ಡಿಸಿಎಂ ಬೇಡವೇ ಬೇಡ ಎಂದು ಕುಮಾರಸ್ವಾಮಿ ಅವರು ಪಟ್ಟುಹಿಡಿದಾಗ ಡಿಕೆಶಿ ಅಸಮಾಧಾನಗೊಂಡಿದ್ದು ನಿಜ. ಅಷ್ಟೇ ಏಕೆ, ಎರಡೂ ಪಕ್ಷಗಳ ನಡುವೆ ಖಾತೆಗಳ ಹಂಚಿಕೆಯಾದಾಗ ಕೂಡ ಡಿಕೆ ಶಿವಕುಮಾರ್ ಅವರು ಹೊಳೆನರಸೀಪುರದ ಶಾಸಕ ಎಚ್ ಡಿ ರೇವಣ್ಣ ಅವರ ವಿರುದ್ಧವೇ ಬುಸುಗುಟ್ಟಿದ್ದರು.

ಡಿಕೆಶಿ ಕೋಪ ಶಮನ ಮಾಡಿದ ರಾಹುಲ್
ಕಿಡಿ ಹೊತ್ತಿ ಭುಗಿಲೇಳುವ ಮೊದಲೇ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿಯವರು ಶಿವಕುಮಾರ್ ಅವರ ಜೊತೆ ಖುದ್ದಾಗಿ ಮಾತನಾಡಿ, ಅವರಿಗೆ ಎರಡು ಪ್ರಮುಖ ಖಾತೆಗಳನ್ನು ಕೊಡುವ ಬಗ್ಗೆ ವಾಗ್ದಾನ ನೀಡಿದ ನಂತರವೇ ಸಿಡಿದೇಳಬೇಕಿದ್ದ ಬೆಂಕಿಯ ಕಿಡಿ ಶಾಂತವಾಗಿದೆ. ಸುಳಿದಾಡುತ್ತಿರುವ ಸುದ್ದಿ ಮತ್ತು ಬಲ್ಲ ಮೂಲಗಳ ಪ್ರಕಾರ, ಡಿಕೆ ಶಿವಕುಮಾರ್ ಅವರಿಗೆ ನೀರಾವರಿ ಖಾತೆಯ ಜೊತೆ ಮತ್ತೊಂದು ಪ್ರಮುಖ ಖಾತೆ ನೀಡುವ ಬಗ್ಗೆ ಮಾತು ನೀಡಲಾಗಿದೆ. ಸಿದ್ದರಾಮಯ್ಯ ಅವರ ಸರಕಾರದಲ್ಲಿ ಅವರು ಇಂಧನ ಖಾತೆ ನಿಭಾಯಿಸಿದ್ದರು. ಆದರೆ, ಆ ಖಾತೆ ಈ ಬಾರಿ ಜೆಡಿಎಸ್ ಪಾಲಾಗಿದೆ.

ನೀರಾವರಿ ಖಾತೆ ಡಿಕೆಶಿ ಪಾಲಾಗಲಿದೆಯೆ?
ಸಿದ್ದರಾಮಯ್ಯ ಅವರ ಸರಕಾರದಲ್ಲಿ ಬಬಲೇಶ್ವರದ ಶಾಸಕ ಎಂಬಿ ಪಾಟೀಲ ಅವರು ನೀರಾವರಿ ಖಾತೆಯನ್ನು ನಿಭಾಯಿಸಿದ್ದರು. ಈಗ ಅವರಿಗೆ ಸಂಪುಟದಲ್ಲಿಯೇ ಸ್ಥಾನ ನೀಡಲಾಗಿಲ್ಲ. ನೀರಾವರಿಯನ್ನು ಡಿಕೆಶಿ ಅವರಿಗೆ ನೀಡುವ ಉದ್ದೇಶದಿಂದಲೇ ಎಂಬಿ ಪಾಟೀಲರನ್ನು ಹೊರಗಿಡಲಾಯಿತೆ? ಗೊತ್ತಿಲ್ಲ. ಇನ್ನೆರಡು ದಿನಗಳಲ್ಲಿ ಖಾತೆಯ ವಹಿಸುವ ಕಾರ್ಯ ಮುಗಿಯಲಿದೆ ಎಂದು ಪರಮೇಶ್ವರ ಅವರು ಹೇಳಿದ್ದು, ಡಿಕೆಶಿ ಅವರಿಗೆ ನೀರಾವರಿ ಜೊತೆಗೆ ವೈದ್ಯಕೀಯ ಶಿಕ್ಷಣ ಖಾತೆ ದೊರೆತರೂ ಅಚ್ಚರಿಯಿಲ್ಲ ಎಂಬ ಮಾತು ಚಾಲ್ತಿಯಲ್ಲಿದೆ.

ಅಸಮಾಧಾನದ ಕಿಡಿ ಇನ್ನೂ ಶಾಂತವಾಗಿಲ್ಲ
ಇಷ್ಟಕ್ಕೇ ಅಸಮಾಧಾನದ ಕಿಡಿ ಶಾಂತಿವಾಯಿತೆಂದು ತಿಳಿಯಬೇಕಿಲ್ಲ. ಡಿಕೆ ಶಿವಕುಮಾರ್ ಅವರಿಗೆ ಎರಡು ಖಾತೆ ನೀಡುತ್ತಿರುವ ಸುದ್ದಿ ತಿಳಿಯುತ್ತಿದ್ದಂತೆ ಕೆಲ ಹಿರಿತಲೆಗಳು ಗಂಟುಮುಖ ಹಾಕಿರುವ ಸುದ್ದಿ ಹೊರಬಿದ್ದಿದೆ. ಇದೆಲ್ಲದರ ನಡುವೆ, ಸಂಪುಟ ಸೇರುವ ಆಸೆ ಇಟ್ಟುಕೊಂಡಿದ್ದ ಹಲವಾರು ಅತೃಪ್ತ ಶಾಸಕರು ಸಿಡಿಮಿಡಿ ಆರಂಭಿಸಿದ್ದಾರೆ. ಎಂಬಿ ಪಾಟೀಲರು ಬಹಿರಂಗವಾಗಿ ತಮ್ಮ ಅಸಮಾಧಾನ ಹೊರಹಾಕಿದ್ದಾರೆ. ತಮ್ಮ ನಾಯಕನಿಗೆ ಸಂಪುಟದಲ್ಲಿ ಸ್ಥಾನ ಸಿಕ್ಕಿಲ್ಲವೆಂದು ಕಾಂಗ್ರೆಸ್ ಶಾಸಕರ ಬೆಂಬಲಿಗರು ಟೈರ್ ಮತ್ತು ಪ್ರತಿಕೃತಿ ದಹಿಸಲು ಆರಂಭಿಸಿದ್ದಾರೆ. ಇದು ಎಲ್ಲಿಗೆ ಹೋಗಿ ಮುಟ್ಟತ್ತೋ?












Click it and Unblock the Notifications