Rahul Gandhi: ಬಸವ ಜಯಂತಿಯಂದು ಲಿಂಗಾಯತ ಮಠಕ್ಕೆ ರಾಹುಲ್ ಗಾಂಧಿ ಭೇಟಿ- ಇಲ್ಲಿದೆ ವೇಳಾಪಟ್ಟಿ
ಬೆಂಗಳೂರು, ಏಪ್ರಿಲ್ 22: ಪಕ್ಷದ ಚುನಾವಣಾ ಪ್ರಚಾರದ ಹಿನ್ನೆಲೆಯಲ್ಲಿ ಎರಡು ದಿನಗಳ ಭೇಟಿಗಾಗಿ ಕಾಂಗ್ರೆಸ್ ಮಾಜಿ ಅಧ್ಯಕ್ಷ ರಾಹುಲ್ ಗಾಂಧಿ ಏಪ್ರಿಲ್ 23 ರಂದು ಕರ್ನಾಟಕಕ್ಕೆ ಬರಲಿದ್ದಾರೆ. ಮೇ 10 ರಂದು ನಡೆಯಲಿರುವ ಕರ್ನಾಟಕ ವಿಧಾನಸಭಾ ಚುನಾವಣೆಗೆ ಅವರು ಬಾಗಲಕೋಟೆ ಮತ್ತು ವಿಜಯಪುರ ಜಿಲ್ಲೆಗಳಲ್ಲಿ ಪ್ರಚಾರ ಮಾಡುವ ನಿರೀಕ್ಷೆಯಿದೆ.
ಏಪ್ರಿಲ್ 16 ಮತ್ತು 17 ರಂದು ಕೋಲಾರ ಮತ್ತು ಬೀದರ್‌ನಲ್ಲಿ ರಾಹುಲ್ ಗಾಂಧಿ ಪ್ರಚಾರ ನಡೆಸಿ ಎರಡು ಜಿಲ್ಲೆಗಳಲ್ಲಿ ಪಕ್ಷದ ಅಭ್ಯರ್ಥಿಗಳ ಪರ ಮತ ಯಾಚಿಸಿದರು.

ಕಾಂಗ್ರೆಸ್ ಪಕ್ಷದ ಪ್ರಕಾರ, ರಾಹುಲ್ ಗಾಂಧಿ ಭಾನುವಾರ ಬೆಳಿಗ್ಗೆ 10:30 ರ ಸುಮಾರಿಗೆ ಹುಬ್ಬಳ್ಳಿ ವಿಮಾನ ನಿಲ್ದಾಣಕ್ಕೆ ಆಗಮಿಸಲಿದ್ದಾರೆ. ಬಾಗಲಕೋಟೆ ಜಿಲ್ಲೆಯ ಕೂಡಲಸಂಗಮಕ್ಕೆ ಹೆಲಿಕಾಪ್ಟರ್ ಮೂಲಕ ತೆರಳಲಿದ್ದಾರೆ.
ಕೂಡಲಸಂಗಮವು ಲಿಂಗಾಯತ ಸಮುದಾಯಕ್ಕೆ ಸೇರಿದ ಯಾತ್ರಾರ್ಥಿಗಳಿಗೆ ಪ್ರಮುಖ ಕೇಂದ್ರವಾಗಿದೆ. ಏಪ್ರಿಲ್ 23 ರಂದು ನಡೆಯಲಿರುವ ಬಸವ ಜಯಂತಿ ಹಿನ್ನೆಲೆಯಲ್ಲಿ ರಾಹುಲ್ ಗಾಂಧಿ ಲಿಂಗಾಯತ ಮಠಕ್ಕೆ ಭೇಟಿ ನೀಡಲಿದ್ದಾರೆ.
ಬಿಜೆಪಿ ಲಿಂಗಾಯತ ನಾಯಕರನ್ನು ಬದಿಗೊತ್ತುತ್ತಿದೆ ಎಂಬ ನಿರೂಪಣೆಯನ್ನು ಕಟ್ಟಿಕೊಡಲು ಕಾಂಗ್ರೆಸ್ ಪ್ರಯತ್ನಿಸುತ್ತಿದೆ. ಕೂಡಲಸಂಗಮಕ್ಕೆ ರಾಹುಲ್ ಭೇಟಿಯ ಮೂಲಕ ಸಮುದಾಯವನ್ನು ಓಲೈಸಲು ಕಾಂಗ್ರೆಸ್ ಯೋಜನೆ ರೂಪಿಸಿದೆ.
ಕೂಡಲಸಂಗಮ ಮಠದಲ್ಲಿ ಬಸವ ಜಯಂತಿ ಆಚರಣೆಯ ಅಂಗವಾಗಿ ಆಯೋಜಿಸಲಾದ ವಿವಿಧ ಕಾರ್ಯಕ್ರಮಗಳಲ್ಲಿ ಮಾಜಿ ವಯನಾಡ್ ಸಂಸದ ರಾಹುಲ್ ಗಾಂಧಿ ಭಾಗವಹಿಸಲಿದ್ದಾರೆ. ಸಂಜೆ 4.35ಕ್ಕೆ ಹೆಲಿಕಾಪ್ಟರ್ ಮೂಲಕ ವಿಜಯಪುರಕ್ಕೆ ಪ್ರಯಾಣ ಬೆಳೆಸಿ ವಿಜಯಪುರ ತಲುಪಿ ರೋಡ್ ಶೋ ನಡೆಸಲಿದ್ದಾರೆ. ಭಾನುವಾರ ವಿಜಯಪುರದ ಖಾಸಗಿ ಹೋಟೆಲ್‌ನಲ್ಲಿ ವಾಸ್ತವ್ಯ ಹೂಡಲಿದ್ದಾರೆ.
ಕಾಂಗ್ರೆಸ್ ಇತ್ತೀಚೆಗೆ ಇಬ್ಬರು ಬಿಜೆಪಿ ಲಿಂಗಾಯತ ನಾಯಕರನ್ನು ಸೆಳೆಯುವಲ್ಲಿ ಯಶಸ್ವಿ ಆಗಿದೆ. ಮಾಜಿ ಮುಖ್ಯಮಂತ್ರಿ ಜಗದೀಶ್ ಶೆಟ್ಟರ್ ಮತ್ತು ಮಾಜಿ ಡಿಸಿಎಂ ಲಕ್ಷ್ಮಣ ಸವದಿ ಬಿಜೆಪಿ ತೊರೆದು ಕಾಂಗ್ರೆಸ್ ಸೇರಿದ್ದಾರೆ.
ಮಾನನಷ್ಟ ಮೊಕದ್ದಮೆಯಲ್ಲಿ ಅವರನ್ನು ದೋಷಿ ಎಂದು ನ್ಯಾಯಾಲಯ ಘೋಷಿಸಿದ ಬಳಿಕ ರಾಹುಲ್ ಗಾಂಧಿ ಅವರನ್ನು ಲೋಕಸಭೆಯಿಂದ ಅಮಾನತುಗೊಳಿಸಲಾಗಿತ್ತು. ಅವರು ಶನಿವಾರ ದೆಹಲಿಯ ತುಘಲಕ್ ಲೇನ್‌ನಲ್ಲಿರುವ ತಮ್ಮ ಅಧಿಕೃತ ಬಂಗಲೆಯನ್ನು ಸಹ ಖಾಲಿ ಮಾಡಿದರು.
ಮುಂಬರುವ ವಿಧಾನಸಭಾ ಚುನಾವಣೆಯಲ್ಲಿ 150 ಸ್ಥಾನ ಗೆಲ್ಲುವ ಗುರಿಯನ್ನು ಕಾಂಗ್ರೆಸ್ ಹೊಂದಿದೆ.












Click it and Unblock the Notifications