ರಾಹುಲ್ ಗಾಂಧಿ 'ಹೇಳಿದ್ದನ್ನೇ ಹೇಳೋ ಕಿಸ್ಬಾಯಿ ದಾಸ'
ಬೆಂಗಳೂರು, ಫೆ 25: ಎರಡನೇ ಹಂತದ ರಾಜ್ಯ ಪ್ರವಾಸದಲ್ಲಿರುವ ಎಐಸಿಸಿ ಅಧ್ಯಕ್ಷ ರಾಹುಲ್ ಗಾಂಧಿ ಅವರ ಭಾಷಣ 'ಹೇಳಿದ್ದನ್ನೇ ಹೇಳೋ ಕಿಸ್ಬಾಯಿ ದಾಸ' ಗಾದೆಮಾತಿನಂತೆ ಎಂದು ಬಿಜೆಪಿ ಮುಖಂಡ ಆರ್ ಅಶೋಕ್ ಲೇವಡಿ ಮಾಡಿದ್ದಾರೆ.
ನಗರದಲ್ಲಿ ಶನಿವಾರ (ಫೆ 24) ಪತ್ರಿಕಾಗೋಷ್ಠಿ ಉದ್ದೇಶಿಸಿ ಮಾತನಾಡುತ್ತಿದ್ದ ಅಶೋಕ್, ಕರ್ನಾಟಕದಲ್ಲಿ ಕಾಂಗ್ರೆಸ್ಸಿನ ಗೂಂಡಾಗಳು ನಡೆಸುತ್ತಿರುವ ದೌರ್ಜನ್ಯದ ಬಗ್ಗೆ ಇಲ್ಲಿನ ಕಾಂಗ್ರೆಸ್ ಮುಖಂಡರ ಕಿವಿಹಿಂಡುವುದು ಬಿಟ್ಟು, ಮೋದಿಯವರ ಬಗ್ಗೆ ಮಾತನಾಡಲು ರಾಹುಲ್ ಗಾಂಧಿಗೆ ನಾಚಿಗೆಯಾಗುವುದಿಲ್ಲವೇ ಎಂದು ಅಶೋಕ್ ಕಿಡಿಕಾರಿದ್ದಾರೆ.
ಬಸವಣ್ಣನ ವಚನವನ್ನು ಓದುವ ರಾಹುಲ್ ಗಾಂಧಿಗೆ ಅದರ ಅರ್ಥ ಗೊತ್ತಿದಿಯೇ ಎಂದು ಪ್ರಶ್ನಿಸಿರುವ ಅಶೋಕ್, ಯಾರೋ ಹಿಂದಿಯಲ್ಲೋ, ಇಂಗ್ಲಿಷ್ ನಲ್ಲೋ ಬರೆದುಕೊಟ್ಟ ವಚನವನ್ನು ಓದಿದರೆ ಆದರಿಂದ ಏನೂ ಪ್ರಯೋಜನವಾಗುವುದಿಲ್ಲ ಎಂದು ವ್ಯಂಗ್ಯವಾಡಿದ್ದಾರೆ.

ಪೆಟ್ರೋಲ್ ನಾರಾಯಣಸ್ವಾಮಿ, ಹ್ಯಾರಿಸ್ ಪುತ್ರ, ಸೋಮಶೇಖರ್ ಬೆಂಬಲಿಗರು ನಡೆಸಿದ ದಾಂಧಲೆಯ ಬಗ್ಗೆ ರಾಹುಲ್ ಗಾಂಧಿ ಮಾತನಾಡಬೇಕಿತ್ತು, ಅದು ಬಿಟ್ಟು ಮೋದಿ, ಅಮಿತ್ ಶಾ ಬಗ್ಗೆ ಟೀಕೆ ಮಾಡಿ ಹೋದರೆ ಏನು ಪ್ರಯೋಜನ ಎಂದು ಅಶೋಕ್, ರಾಹುಲ್ ಅವರನ್ನು ಟೀಕಿಸಿದ್ದಾರೆ.
ನುಡಿದಂತೆ ನಡೆ ಎಂದು ಬಸವಣ್ಣನವರು ಹೇಳಿದ್ದಾರೆ, ಕಾಂಗ್ರೆಸ್ ಸರ್ಕಾರ ನುಡಿದಂತೆಯೇ ನಡೆಯುತ್ತಿದೆ. ಆದರೆ ಪ್ರಧಾನಿ ಮೋದಿ ಎಂದಾದರೂ ತಾವು ನುಡಿದಂತೆ ನಡೆದಿದ್ದಾರಾ?" ಎಂದು ಪ್ರಧಾನಿ ನರೇಂದ್ರ ಮೋದಿಯವರಿಗೆ ಛಾಟಿ ಬೀಸುತ್ತಲೇ ಕಾಂಗ್ರೆಸ್ ಅಧ್ಯಕ್ಷ ರಾಹುಲ್ ಗಾಂಧಿ ಅಥಣಿಯಲ್ಲಿ ಮಾತು ಆರಂಭಿಸಿದ್ದರು.
ರಾಹುಲ್ ಗಾಂಧಿಯವರ ಜನಾಶೀರ್ವಾದ ಸಮಾವೇಶದ ಬೆನ್ನಲ್ಲೇ ಬಿಜೆಪಿ ಪತ್ರಿಕಾಗೋಷ್ಠಿ ನಡೆಸಿ, ಕಾಂಗ್ರೆಸ್ ವಿರುದ್ದ ತಿರುಗಿಬೀಳುವ ಕೆಲಸವನ್ನು ಮಾಡುತ್ತಿದೆ.












Click it and Unblock the Notifications