Ragi Minimum Support Prices: ನಾಳೆಯಿಂದ ಬೆಂಬಲ ಬೆಲೆಗೆ ರಾಗಿ ಖರೀದಿ: ದರ, ಸ್ಥಳ ವಿವರ ಇಲ್ಲಿದೆ
ಬೆಂಗಳೂರು, ನವೆಂಬರ್ 30: ಈ ವರ್ಷ ಮಳೆ ಕೈಕೊಟ್ಟಿದ್ದು, ರಾಜ್ಯದೆಲ್ಲೆಡೆ ಬರಗಾಲದ ಛಾಯೆ ಆವರಿಸಿದೆ. ಕುಡಿಯುವ ನೀರಿಗೆ ಸಮಸ್ಯೆಯಾಗದಂತೆ ನೋಡಿಕೊಳ್ಳುವುದು ದೊಡ್ಡ ಸವಾಲಾಗಿದ್ದರೆ, ಇತ್ತ ರೈತರ ಬದುಕು ಕೂಡ ಸಂಕಷ್ಟಕ್ಕೆ ಸಿಲುಕಿದೆ. ನಿರೀಕ್ಷಿಸಿದ ಮಟ್ಟಿಗೆ ಮಳೆಯಾಗದೇ ನೀರಿಲ್ಲದೇ ಬೆಳೆಗಳು ಜಮೀನುಗಳಲ್ಲೇ ಒಣಗಿ ನಾಶವಾಗುತ್ತಿದೆ.
ಬರ ಹಾಗೂ ಇತರ ಸವಾಲುಗಳ ಮಧ್ಯೆಯೇ ರೈತರು ಈ ಬಾರಿ ಒಂದಿಷ್ಟು ಬೆಳೆಯನ್ನು ಬೆಳೆದಿದ್ದು, ಇದೀಗ ಫಸಲ ಮಾರಾಟಕ್ಕೆ ಸಿದ್ಧರಾಗಿದ್ದಾರೆ. ಹೀಗಾಗಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ಖರೀದಿಗೆ ಸರ್ಕಾರ ಸಿದ್ಧತೆ ನಡೆಸಿದೆ. ಇದರಲ್ಲಿ ರಾಗಿ ಬೆಳೆಗಾರಿಗೆ ಗುಡ್‌ನ್ಯೂಸ್ ಸಿಕ್ಕಿದ್ದು, ಈ ಬಾರಿ ಬೆಲೆ ಏರಿಸಿ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭಿಸಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೊಡ್ಡಬಳ್ಳಾಪುರ, ದೇವನಹಳ್ಳಿ, ಹೊಸಕೋಟೆ ಹಾಗೂ ನೆಲಮಂಗಲ ತಾಲೂಕಿನಲ್ಲಿ ಬಹುತೇಕ ಭಾಗಗಳಲ್ಲಿ ರಾಗಿ ಬೆಳೆಯಲಾಗುತ್ತದೆ. ಈಗಾಗಲೇ ರಾಗಿ ಬೆಳೆ ಬಂದಿದ್ದು, ಜಿಲ್ಲೆಯಲ್ಲಿ ನಾಳೆ ಅಂದರೆ ಡಿಸೆಂಬರ್ 1ರಿಂದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರೈತರಿಂದ ರಾಗಿ ಖರೀದಿ ಪ್ರಕ್ರಿಯೆ ಆರಂಭವಾಗಲಿದೆ ಎಂದು ವರದಿಯಾಗಿದೆ.
ಬೆಂಗಳೂರು ಗ್ರಾಮಾಂತರ ಜಿಲ್ಲೆಯಲ್ಲಿ ಕಳೆದ ಬಾರಿ 5 ರಾಗಿ ಖರೀದಿ ಕೇಂದ್ರ ಆರಂಭಿಸಲಾಗಿತ್ತು. ಈ ಬಾರಿ ಮತ್ತೆ 4 ಹೆಚ್ಚು ಖರೀದಿ ಕೇಂದ್ರಗಳನ್ನು ಸಂಗ್ರಹಣಾ ಏಜೆನ್ಸಿಗಳ ಮೂಲಕ ಆರಂಭಿಸುವ ಸಾಧ್ಯತೆ ಇದೆ. ಡಿಸೆಂಬರ್ 1ರಿಂದ ರಾಗಿ ಖರೀದಿಗೆ ರೈತರ ನೋಂದಣಿ ಕಾರ್ಯ ಆರಂಭವಾಗಲಿದೆ. ಈ ಬಗ್ಗೆ ಈಗಾಗಲೇ ಕ್ರಮವಹಿಸಲಾಗಿದೆ ಎಂದು ಜಿಲ್ಲೆಯ ಆಹಾರ ಇಲಾಖೆ ಮಾಹಿತಿ ನೀಡಿದೆ.

ರೈತರಿಗೆ ಪ್ರತಿ ವರ್ಷವು ಸವಾಲಿನ ವರ್ಷವೇ, ಅತೀವೃಷ್ಟಿ, ಅನಾವೃಷ್ಟಿ ಎರಡೂ ಕೂಡ ರೈತರಿಗೆ ಮಾರಕ. ಆದರೆ ಈ ವರ್ಷ ಮಳೆಯಾಗದೇ ರೈತರು ಸಂಕಷ್ಟಕ್ಕೆ ಸಿಲುಕಿದ್ದಾರೆ. ಹೀಗಾಗಿ ಸರ್ಕಾರ ಈ ಬಾರಿ ರಾಗಿ ಬೆಂಬಲ ಬೆಲೆ ಹೆಚ್ಚಿಸಲು ಮುಂದಾಗಿದೆ. ಕಳೆದ ವರ್ಷ ಅಂದರೆ 2022-23ನೇ ಸಾಲಿನ ರಾಗಿ ಪ್ರತಿ ಕ್ವಿಂಟಾಲ್‌ಗೆ 3,578 ರೂ. ನಿಗದಿ ಮಾಡಲಾಗಿತ್ತು. ಆದರೆ ಈ ಬಾರಿ ರಾಗಿ ಪ್ರತಿ ಕ್ವಿಂಟಾಲ್‌ಗೆ 3,846 ರೂಪಾಯಿ ನಗದಿ ಮಾಡಲಾಗಿದೆ. ಜೊತೆಗೆ ರಾಗಿಯ ಮಾರುಕಟ್ಟೆ ದರ ಕೂಡ ಹೆಚ್ಚದ್ದು, ಇದರಿಂದ ರೈತರಿಗೆ ಉಪಯೋಗವಾಗಲಿದೆ.
ರೈತರು ನೀಡಬೇಕಾದ ದಾಖಲೆಗಳೇನು..?
ಸರ್ಕಾರದ ಕನಿಷ್ಠ ಬೆಂಬಲ ಬೆಲೆ ಯೋಜನೆಯಡಿ ರಾಗಿ ಖರೀದಿಯ ನೋಂದಣಿಗೆ ಬರುವ ರೈತರಿಗೆ ಫ್ರೂಟ್ಸ್ ಐಡಿ ಖಡ್ಡಾಯವಾಗಿದೆ. ರೈತರು ರಾಗಿ ಕೇಂದ್ರಗಳಿಗೆ ಹೋಗುವ ಮುನ್ನ ಫ್ರೂಟ್ ಐಡಿ ಮಾಡಿಸಿಕೊಳ್ಳುವುದು ಉತ್ತಮ. ಮೊದಲು ರೈತರು ತಮ್ಮ ರಾಗಿ ಬೆಳೆಯ ಜಮೀನು ವಿವರಗಳು, ಪಹಣಿ, ಬ್ಯಾಂಕ್ ಪಾಸ್ ಪುಸ್ತಕ, ಆಧಾರ್ ಕಾರ್ಡ್ ಹಾಗೂ ಇತ್ಯಾದಿ ಮಾಹಿತಿಗಳನ್ನು ನೀಡಿ ಸರ್ಕಾರದ ಫ್ರೂಟ್ ಐಡಿಯಲ್ಲಿ ನೋಂದಾಯಿಸಿಕೊಳ್ಳಬೇಕು. ಕೃಷಿ ಇಲಾಖೆ ಅಧಿಕಾರಿಗಳು ನೀಡುವ ಫ್ರೂಟ್ ಐಡಿಯನ್ನು ರಾಗಿ ಖರೀದಿ ಕೇಂದ್ರದಲ್ಲಿ ನೀಡಿದ ಮೇಲೆ ಎಷ್ಟು ರೈತರು ಎಷ್ಟು ಪ್ರಮಾಣದ ರಾಗಿ ಮಾರಾಟ ಮಾಡುತ್ತಾರೆಂಬ ನಿಖರವಾದ ಮಾಹಿತಿ ಸಿಗುತ್ತದೆ.












Click it and Unblock the Notifications