ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಟೀಕಾಕಾರರಿಗೆ ತಕ್ಕ ಉತ್ತರ ಕೊಟ್ಟ ರಾಘವೇಶ್ವರ ಶ್ರೀ

By ಮಂಜು ನೀರೇಶ್ವಾಲ್ಯ
|
Google Oneindia Kannada News

ಬೆಂಗಳೂರು, ಸೆ 11: ಚಾರ್ತುಮಾಸದ ಕೊನೆಯ ದಿನ ಹೊಸನಗರ ರಾಮಚಂದ್ರಾಪುರ ಮಠದ ರಾಘವೇಶ್ವರ ಭಾರತಿ ಶ್ರೀಗಳು ತಮ್ಮ ಮೇಲೆ ಕೇಳಿ ಬಂದಿರುವ ಆರೋಪಕ್ಕೆ ಸಂಬಂಧಿಸಿದಂತೆ ಭಕ್ತರ ಎದುರು ಮನಬಿಚ್ಚಿ ಮಾತನಾಡಿದ್ದಾರೆ. ಇದು ಈ ಪ್ರಕರಣದ ಬಗ್ಗೆ ಶ್ರೀಗಳ ನೀಡುತ್ತಿರುವ ಮೊದಲ ಪ್ರತಿಕ್ರಿಯೆಯಾಗಿದೆ.

ಉತ್ತರಕನ್ನಡ ಜಿಲ್ಲೆ ಹೊನ್ನಾವರದ ಚೆಕ್ಕಾರು ಮಠದಲ್ಲಿ ಚಾತುರ್ಮಾಸ ವ್ರುತ ಮುಗಿಸಿ ಭಕ್ತರನ್ನು ಸಂಬೋಧಿಸಿ ಮಾತನಾಡುತ್ತಿದ್ದ ಶ್ರೀಗಳು, ಒಂದು ವೇಳೆ ಪ್ರಪಂಚ ನನ್ನನ್ನು ತಿರಸ್ಕರಿಸಿದರೆ ನಾನು ಪರಮಾತ್ಮನ ಕಡೆ ಹೋಗುತ್ತೇನೆ. (ರಾಘವೇಶ್ವರ ಶ್ರೀಗಳ ವಿರುದ್ಧ ಅತ್ಯಾಚಾರ ಪ್ರಕರಣ ದಾಖಲು)

ನನ್ನ ಮೇಲಿನ ಪ್ರಕರಣದ ಸೃಷ್ಠಿಕರ್ತರಿಗೆ ಒಂದು ಮಾತನ್ನು ಹೇಳಲು ಬಯಸುತ್ತೇನೆ. ರಾಮನ ದಾರಿಯಲ್ಲಿ ನಡೆದು ಬಂದವನು ನಾನು, ರಾವಣನ ಹಾದಿಯಲ್ಲಿ ಅಲ್ಲ. ಎಲ್ಲವೂ ಭಗವಂತನಿಗೆ ಗೊತ್ತು, ಉತ್ತರ ನಿಮ್ಮ ಕಣ್ಣ ಮುಂದೆಯೇ ಇದೆ, ನಿಮಗೂ ತಿಳಿಯಲಿದೆ ಎಂದು ಶ್ರೀಗಳು ಹೇಳಿದ್ದಾರೆ.

ಬಟ್ಟೆ ತುದಿಗೆ ಅಂಟಿದ ಕಸವನ್ನು ಕೊಡವಿ ಹೋಗಲೇ ಬೇಕು, ಕಸ ಹೋಯಿತಲ್ಲವೆಂದು ತಲೆ ಕೆಡಿಸಿಕೊಳ್ಳಬಾರದು. ಕೃಷ್ಣನಿಗೂ ಅಪವಾದ ತಪ್ಪಿದ್ದಲ್ಲ, ಅಪವಾದದಿಂದ ಶ್ರೀಕೃಷ್ಣ ಮೂರು ತಿಂಗಳು ಮುಖವನ್ನು ತೋರಿಸಲಿಲ್ಲ ಎಂದು ಭಕ್ತರ ಮುಂದೆ ಶ್ರೀಗಳು ನೋವಿನ ಮಾತನ್ನಾಡಿದ್ದಾರೆ.

ಶ್ರೀಕೃಷ್ಣ ನೊಂದಿದ್ದು ಈ ಜಗತ್ತಿನ ವಕ್ರದೃಷ್ಟಿಯನ್ನು ನೆನೆದು, ತನಗಾದ ನೋವಿನಿಂದಲ್ಲ. ನಾನು ಹೊರಗೆ ಬಾರದಿರಲು ಸಾಧ್ಯವಿಲ್ಲ, ಸಾವಿರಾರು ಜನ ನನ್ನನ್ನು ಕಾಯುತ್ತಾ ಕುಳಿತಿದ್ದಾರೆ. ಇಷ್ಟು ದೊಡ್ಡ ಆರೋಪ ಬಂದರೂ ನೀವು ನನ್ನ ಬೆನ್ನಿಗೆ ನಿಂತಿದ್ದೀರಿ ಎಂದು ಭಕ್ತರ ಬಗ್ಗೆ ಅಭಿಮಾನದ ಮಾತನ್ನಾಡಿದ್ದಾರೆ.

ಭಕ್ತರನ್ನು ಉದ್ದೇಶಿಸಿ ಮಾತನಾಡಿದ ಶ್ರೀಗಳ ಪೂರ್ಣ ಪಾಠ ಸ್ಲೈಡಿನಲ್ಲಿ ಮುಂದುವರಿಸಲಾಗಿದೆ..

ಭಾವೋದ್ವೇಗಕ್ಕೊಳಗಾದ ಶ್ರೀಗಳು

ಭಾವೋದ್ವೇಗಕ್ಕೊಳಗಾದ ಶ್ರೀಗಳು

ಭಕ್ತರನ್ನು ಸಂಭೋದಿಸಿ ಮಾತನಾಡುತ್ತಿದ್ದ ವೇಳೆ ಭಾವೋದ್ವೇಗಕ್ಕೊಳಗಾದ ಶ್ರೀಗಳು, ಎಷ್ಟೋ ಬಾರಿ ನಾನು ನಿಮ್ಮನ್ನು ಸಂತೈಸಿದ್ದೇನೆ, ಇಂದು ನೀವು ನನ್ನನ್ನು ಸಂತೈಸುತ್ತಿದ್ದೀರಿ. ಅಮೃತವಿದ್ದವರು ಅಮೃತ ಕೊಡುತ್ತಾರೆ, ಇಲ್ಲದವರು ಅವರ ಬಳಿ ಏನಿದೆಯೋ ಅದನ್ನು ಕೊಡುತ್ತಾರೆ.(ಸಂಗ್ರಹ ಚಿತ್ರ)

ತನ್ನ ಮೇಲಿರುವ ಪ್ರಕರಣವನ್ನು ಉಲ್ಲೇಖಿಸಿದ ಶ್ರೀಗಳು

ತನ್ನ ಮೇಲಿರುವ ಪ್ರಕರಣವನ್ನು ಉಲ್ಲೇಖಿಸಿದ ಶ್ರೀಗಳು

ಎಲ್ಲವೂ ಅತಿಯಾದರೆ ಏನಾಗುತ್ತೆ ಅನ್ನೋದನ್ನು ನನ್ನ ಮೇಲಿರುವ ಆರೋಪದ ಘಟನೆ ತೋರಿಸುತ್ತಿದೆ. ನೀವು ಎಂಥಾ ಪೂಜೆ ಮಾಡುತ್ತೀರೋ ಅಂಥದ್ದೇ ಪ್ರಸಾದ ಸಿಗುತ್ತೆ. ಈ ಘಟನೆಯಲ್ಲೂ ಹಾಗೇ ಆಗಿದೆ. ಕೆಲವು ಸಂಗತಿಗಳು ಎಂಥಾ ಕಾರಣಕ್ಕೆ ನಡೆದವು ಅಂದರೆ ಅದು ಇಂಥಹ ಕಾರಣಕ್ಕೆ ಅನ್ನೋದು ಮತ್ತೆ ಸ್ಪಷ್ಟವಾಗುತ್ತದೆ. (ಸಂಗ್ರಹ ಚಿತ್ರ)

ಗೋವಿನ ಉದಾಹರಣೆ ನೀಡಿದ ಶ್ರೀಗಳು

ಗೋವಿನ ಉದಾಹರಣೆ ನೀಡಿದ ಶ್ರೀಗಳು

ಯಾರು ನಿಷ್ಕಳಂಕವಾದ ಪೀಠವನ್ನು ಜೈಲಿನಲ್ಲಿ ಇಡೋದಕ್ಕೆ ಬಯಸಿದರೋ ಅವರು ಅಲ್ಲೇ ಇದ್ದಾರೆ. ಈ ಘಟನೆ ಕಣ್ಣು ಮುಂದೆ ಬಂದಾಗ ಗೋವಿನ ಕಥೆಯೊಂದು ಕಣ್ಣಿಗೆ ಕಟ್ಟಿದಂತಾಯಿತು, ಎಲ್ಲರಿಗೂ ಉಪಕರಿಸಲು ಶಕ್ತವಾಗಿರುವ ಗೋವನ್ನು ಕಟುಕರಿಗೆ ಕೊಡೋರಿಗೆ ಏನು ಮಾಡಬೇಕು. (ಸಂಗ್ರಹ ಚಿತ್ರ)

ಚೆನ್ನಾಗಿರು ಎಂದವರು ನನಗೆ ಕೊಟ್ಟಿದ್ದೇನು?

ಚೆನ್ನಾಗಿರು ಎಂದವರು ನನಗೆ ಕೊಟ್ಟಿದ್ದೇನು?

ಎಲ್ಲವನ್ನು ಕೊಟ್ಟಿದ್ದೇನೆ, ಒಳ್ಳೆದಾಗಿ ಚೆನ್ನಾಗಿರು ಎಂದಿದ್ದೆ. ಕೊನೆಗೆ ಅವರು ಕೊಟ್ಟಿದ್ದೇನು? ಕೆಡಕು ಮಾಡಿಲ್ಲ, ಕೇಡು ಬಯಸಿಲ್ಲ ಅದಕ್ಕೆ ಅವರು ಕೊಟ್ಟ ದೊಡ್ಡ ಉಡುಗೊರೆಯಿದು. ಆತ್ಮ ನಾಶ, ಜೀವನ ನಾಶ, ಕೊನೆಗೆ ಪೀಠದ ನಾಶ ಮಾಡಲು ಹೊರಟಿದ್ದಾರೆ. (ಸಂಗ್ರಹ ಚಿತ್ರ)

ನೀ ಯಾರಿಗಾದೆ ಎಲೆ ಮಾನವ..

ನೀ ಯಾರಿಗಾದೆ ಎಲೆ ಮಾನವ..

ನೀ ಯಾರಿಗಾದೆ ಎಲೆ ಮಾನವ.. ಎಂದು ನಾನು ಇಂದು ಅವರನ್ನು ಕೇಳಬೇಕಾಗಿದೆ. ಈ ಯುದ್ಧದಲ್ಲಿ ನೀನು ಗೆದ್ದರೆ ನೀನೇ ಸೋತೆ, ನೀ ಸೋತರೆ ನೀನೇ ಸತ್ತೆ. ಇಂಥವರು ಒಬ್ಬರಿದ್ದರೆ, ಒಬ್ಬರಿಗೆ ಇಂಥಹ ಬುದ್ಧಿ ಬಂದರೆ ಏನಾಗಬಹುದು ಅನ್ನೋದಕ್ಕೆ ಇದೇ ಸಾಕ್ಷಿ. ಯಾವುದರಿಂದ ತನಗೂ ಹಿತವಲ್ಲ, ಪರರಿಗೂ ಹಿತವಲ್ಲ ಅಂಥಾದ್ದನ್ನು ಮಾಡಬಾರದು - ಶ್ರೀಗಳ ಕಿವಿಮಾತು. (ಸಂಗ್ರಹ ಚಿತ್ರ)

ತನಗೆ ಏನನಿಸುತ್ತದೋ ಅದೇ ಸರಿಯಲ್ಲ

ತನಗೆ ಏನನಿಸುತ್ತದೋ ಅದೇ ಸರಿಯಲ್ಲ

ನನಗೆ ಏನನ್ನಿಸುತ್ತೋ ಅದೇ ಸತ್ಯ ಎಂದು ಅಂದುಕೊಳ್ಳಬಾರದು. ನನ್ನ ಮೇಲಿನ ಜನರ ಅಂದಿನ ಭಾವನೆ, ಇಂದಿಗೂ ಹಾಗೇ ಇದೆ. ಹಾಗಾದ್ರೆ ಅದು ತಪ್ಪಾ? ನನ್ನ ಜೊತೆ ಇಷ್ಟು ದೊಡ್ಡ ಸಮಾಜವಿದೆ, ಹಾಗಾದ್ರೆ ಇಲ್ಲಿರುವವರೆಲ್ಲಾ ಮೂರ್ಖರೆ, ಇಂಥಾ ವಿಷ ಬೀಜ ಬಿತ್ತಿದ ಮೇಲೂ ನನ್ನ ಮೇಲೆ ನಿಮ್ಮ ಭಾವನೆ ತಪ್ಪಾಗಿಲ್ಲ. ಒಂದು ಪಕ್ಷ ಇದು ಸತ್ಯವಾದರೆ ಜಗತ್ತಿನಲ್ಲಿ ಯಾವುದೂ ಸತ್ಯವಾಗಿ ಉಳಿಯುವುದಿಲ್ಲ - ರಾಘವೇಶ್ವರ ಶ್ರೀಗಳು (ಸಂಗ್ರಹ ಚಿತ್ರ)

ರಾಮನ ಸಾಕ್ಷಿಯಾಗಿ ಹೆಜ್ಜೆ ಇಟ್ಟಿದ್ದೇನೆ

ರಾಮನ ಸಾಕ್ಷಿಯಾಗಿ ಹೆಜ್ಜೆ ಇಟ್ಟಿದ್ದೇನೆ

ರಾಮನ ಸಾಕ್ಷಿಯಾಗಿ ಹೆಜ್ಜೆಗಳನ್ನು ಇಟ್ಟಿದ್ದೇನೆ, ನಾನಿಟ್ಟ ಹೆಜ್ಜೆ ರಾಮನ ಹೆಜ್ಜೆಗಳು, ಅಂತಿಮವಾಗಿ ನೀವೇ ಪ್ರಶ್ನಿಸಬೇಕಿದ್ದರೂ ರಾಮನನ್ನು ಪ್ರಶ್ನಿಸಬೇಕಾಗಿ ಬರಬಹುದು - ರಾಮನಿಗೆ ಗೊತ್ತು ತಾನು ಏನು ಎನ್ನುವುದು, ಏನಾಗಿದ್ದೆ ಅನ್ನೋದು, ಮತ್ಯಾರಿಗೂ ಅಲ್ಲ. ನಾನು ರಾಮನೆದುರು ನಿಂತಾಗ ಕಿಂಚಿತ್ತು ಅಳುಕು ಮನಸ್ಸಿನಲ್ಲಿ ಹುಟ್ಟೋದಿಲ್ಲ. ಸಂಪೂರ್ಣ ತೃಪ್ತಿ, ಸಮಾಧಾನ ಎಲ್ಲವೂ ಇದೆ, ಒಂದಿಷ್ಟು ಕಲ್ಮಶ ಮನಸ್ಸಿನಲ್ಲಿಲ್ಲ - ರಾಘವೇಶ್ವರ ಶ್ರೀಗಳು (ಸಂಗ್ರಹ ಚಿತ್ರ)

ಅಂಜುವುದಿಲ್ಲ, ಯುದ್ದ ಗೆಲ್ಲಬೇಕಾಗಿದೆ

ಅಂಜುವುದಿಲ್ಲ, ಯುದ್ದ ಗೆಲ್ಲಬೇಕಾಗಿದೆ

ಯಾವುದಕ್ಕೂ ಅಂಜಬೇಕಿಲ್ಲ, ಆದರೆ ಖಚಿತವಾಗಿ ಯುದ್ಧವನ್ನು ಗೆಲ್ಲಬೇಕಾಗಿದೆ. ಯುದ್ಧ ಯಾಕೆ ಗೆಲ್ಲಬೇಕು ಅಂದರೆ ನಿಮಗಾಗಿ ಯುದ್ಧವನ್ನು ಗೆಲ್ಲಬೇಕಾಗಿದೆ. ನನಗೆ ಏನಾದರೂ ಏನಂತೆ, ಎಲ್ಲವನ್ನೂ ಬಿಟ್ಟಾಗಿದೆ ಇನೇನಾದರೂ ಏನಂತೆ - ರಾಘವೇಶ್ವರ ಶ್ರೀಗಳು (ಸಂಗ್ರಹ ಚಿತ್ರ)

ಲಕ್ಷಾಂತರ ಹೃದಯಗಳನ್ನು ಬಂಧಿಸುವ ಜೈಲು ನಿಮ್ಮಲ್ಲಿದೆಯೇ?

ಲಕ್ಷಾಂತರ ಹೃದಯಗಳನ್ನು ಬಂಧಿಸುವ ಜೈಲು ನಿಮ್ಮಲ್ಲಿದೆಯೇ?

ನನ್ನನ್ನು ಬಂಧಿಸಲಿಕ್ಕೆ ಬಂದವರಿಗೆ ನನ್ನ ಪ್ರಶ್ನೆ, ಸಾವಿರ ಸಾವಿರ ಜನರ ಭಾವನೆಗಳನ್ನು ಬಂಧಿಸುತ್ತೀರಾ?? ಲಕ್ಷಾಂತರ ಹೃದಯಗಳನ್ನು ಬಂಧಿಸುವ ಜೈಲು ನಿಮ್ಮಲ್ಲಿದೆಯೇ? ಅಂಥಾ ಬೇಡಿಗಳಿವೆಯೇ ನಿಮ್ಮಲ್ಲಿ? ನನ್ನನ್ನು ಏನು ಮಾಡ ಕೊಳ್ಳಬಲ್ಲೀರಿ, ಇದು ನನ್ನ ನೇರ ಸವಾಲು ನಿಮಗೆ. ಅದೇನು ಮಾಡ್ತೀರೋ ಮಾಡಿ, ನನ್ನನ್ನು ಬಂಧಿಸಲು ಬಂದವರು ಆ ಇಲಾಖೆಗೆ ಬಂದು 10-20 ವರ್ಷವಾಗಿರಬಹುದು. ಆದರೆ ಈ ಪೀಠಕ್ಕೆ ಸಾವಿರ ವರ್ಷದ ಇತಿಹಾಸವಿದೆ ನೆನಪಿರಲಿ. (ಸಂಗ್ರಹ ಚಿತ್ರ)

ಅಧಿಕಾರದ ಅಮಲೇರಿದವರಿಗೆ ಶ್ರೀಗಳ ಖಡಕ್ ಸಂದೇಶ

ಅಧಿಕಾರದ ಅಮಲೇರಿದವರಿಗೆ ಶ್ರೀಗಳ ಖಡಕ್ ಸಂದೇಶ

ಅಧಿಕಾರದ ಅಮಲೇರಿದವರಿಗೆ ನಾವು ನೀಡುವ ಸಂದೇಶ. ಪೀಠದ ಹಿಂದೆ ಮುಂದೆ ಸಾವಿರ ವರ್ಷದ ಇತಿಹಾಸವಿದೆ ನೆನಪಿರಲಿ. ಈ ಪೀಠ ನಿಮ್ಮಂಥ ಸಾವಿರ ಜನರನ್ನು ಕಂಡಿದೆ ನೆನಪಿರಲಿ. ಚಕ್ರವರ್ತಿಗಳು, ಸಾಮ್ರಾಜ್ಯಗಳು, ಹುಟ್ಟಿವೆ, ಹೋಗಿವೆ. ರಾಮಚಂದ್ರಪುರ ಮಠ ಹುಟ್ಟಿದ ಮೇಲೆ ಎಷ್ಟೋ ಸಾಮ್ರಾಜ್ಯಗಳು ಹುಟ್ಟಿ ಹೋಗಿವೆ. ಆದ್ರೆ ಇವತ್ತಿಗೂ ಮಠ ಜೀವಂತವಾಗಿದೆ ನೆನಪಿರಲಿ (ಸಂಗ್ರಹ ಚಿತ್ರ)

ಚಾತುರ್ಮಾಸ ಬಂದಾಗ ಮನಸ್ಸು ತಂಪಾಗಿದೆ

ಚಾತುರ್ಮಾಸ ಬಂದಾಗ ಮನಸ್ಸು ತಂಪಾಗಿದೆ

ಇವೆಲ್ಲದರ ಬಳಿಕ ಚಾತುರ್ಮಾಸ ಬಂದಾಗ ಮನಸ್ಸು ತಂಪಾಗಿದೆ. ಇಲ್ಲದಿದ್ದರೆ ನಿಮ್ಮ ಪ್ರೀತಿ ನನಗೆ ಗೊತ್ತಾಗುತ್ತಿರಲಿಲ್ಲ. ಜನ ಮತ್ತೊಂದು ಮಗದೊಂದು ಭ್ರಮೆ ಅನ್ನುತ್ತಾರೆ, ಆದರೆ ಇದೆಷ್ಟು ಸತ್ಯ ಅನ್ನೋದನ್ನು ತೋರಿಸಿಕೊಟ್ಟಿದ್ದೀರಿ. ಈ ಬಂಧನ ಸುಳ್ಳಲ್ಲ, ಚಾತುರ್ಮಾಸ ಉತ್ತಮವಾಗಿ ವಿಧಿವಿಧಾನಗಳ ಮೂಲಕ ನಡೆದಿದೆ. (ಸಂಗ್ರಹ ಚಿತ್ರ)

ನಾವೆಲ್ಲಾ ಒಂದಾಗಿರೋಣ

ನಾವೆಲ್ಲಾ ಒಂದಾಗಿರೋಣ

ನಾವೆಲ್ಲ ಒಂದಾಗಿರೋಣ, ಬಂದದ್ದೆಲ್ಲವನ್ನು ಎದುರಿಸೋಣ, ಅದೇನು ಬರುತ್ತೋ ಬರಲಿ, ಇನ್ನೇನು ಬರಲಾರದು, ಇದಕ್ಕಿಂತ ಹೀನವಾಗಿದ್ದು ಬಂದರೂ ಒಟ್ಟಿಗೆ ಎದುರಿಸೋಣ, ಭ್ರಮೆಗೆ ಒಳಗಾಗಬೇಡಿ, ಇದು ಮಾಯಾಸ್ತ್ರ. ನಮ್ಮ ಎದುರಿಗಿರುವವರು ಸುಳ್ಳನ್ನು ಸತ್ಯಮಾಡಲು ಹೊರಟಿದ್ದಾರೆ, ಬಗೆ ಬಗೆಯ ಭ್ರಮೆಗಳನ್ನು ಮೂಡಿಸುವ ಕೆಲಸ ನಡೆಯಬಹುದು. (ಸಂಗ್ರಹ ಚಿತ್ರ)

ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ

ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ

ನಮ್ಮ ಆಸ್ತಿ ಅಂದ್ರೆ ಅದು ಪ್ರೀತಿ, ಕೊನೆಗೆ ಸತ್ಯವೊಂದೇ ಉಳಿದದ್ದೆಲ್ಲವೂ ಸುಳ್ಳು, ಭಾವದ ಮೇಲೆ ನಿಂತಿರುವ ಬಾಂಧವ್ಯ ನನ್ನ-ನಿಮ್ಮ ನಡುವಿನದ್ದು, ಬಾಂಧವ್ಯದ ಈ ಸಾಮ್ರಾಜ್ಯವನ್ನು ಮುಂದೆ ನಡೆಸಿಕೊಂಡು ಹೋಗೋಣ. ಈ ಹಡಗನ್ನು ರಾಮನ ಕಡೆ ಕೊಂಡೊಯ್ಯೋಣ. ಏನು ಬಂದರೂ ಎದುರಿಸೋಣ, ಎಂಥದ್ದು ಬಂದ್ರೂ ಎದುರಿಸೋಣ, ಇಡೀ ಪ್ರಪಂಚ ಬಂದು ಬಿದ್ರೂ ನಾವೆಲ್ಲಾ ಒಂದಾಗಿ ಎದುರಿಸೋಣ-ಸತ್ಯಮೇವ ಜಯತೆ, ಸತ್ಯಮೇವ ಜಯತೆ, ಸತ್ಯಮೇವ ಜಯತೆ. (ಸಂಗ್ರಹ ಚಿತ್ರ)

English summary
Hosanagara Ramachandrapura Math seer Raghaveshwara Seer speech after Chaturmasa Vruta, on case filed against him.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X