ಜಮೀರ್ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ರಾಧಿಕಾ ಕುಮಾರಸ್ವಾಮಿಗೆ ಸಂಕಷ್ಟ; ಕೋಟಿ ಕೋಟಿ ಹಣಕಾಸು ವ್ಯವಹಾರ ಪತ್ತೆ!
ಬೆಂಗಳೂರು, ಸೆಪ್ಟೆಂಬರ್ 01: ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಸಂಪುಟದ ವಸತಿ ಸಚಿವ ಜಮೀರ್ ಅಹಮದ್ ಖಾನ್ ಅವರಿಗೆ ಸಂಬಂಧಿಸಿದ ಅಕ್ರಮ ಆಸ್ತಿ ಗಳಿಕೆ ಪ್ರಕರಣದಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಮತ್ತು ನಟಿ ರಾಧಿಕಾ ಕುಮಾರಸ್ವಾಮಿಗೆ ದೊಡ್ಡ ಸಂಕಷ್ಟ ಎದುರಾಗಿದೆ. ನಟಿ ರಾಧಿಕಾ ಕುಮಾರಸ್ವಾಮಿ ಅವರನ್ನು ಲೋಕಾಯುಕ್ತ ಪೊಲೀಸರು ವಿಚಾರಣೆಗೆ ಒಳಪಡಿಸಿದ್ದಾರೆ.
ಅಕ್ರಮ ಆಸ್ತಿ ಸಂಪಾದನೆ ಪ್ರಕರಣ ಸಂಬಂಧ ಲೋಕಾಯುಕ್ತ ಪೊಲೀಸರು, ವಸತಿ ಸಚಿವರ ಆದಾಯದ ಮೂಲಗಳನ್ನು ಶೋಧಿಸಿದಾಗ ಸಾಲ ಕೊಟ್ಟವರ ಪಟ್ಟಿ ಸಿಕ್ಕಿದೆ. ಇದರಲ್ಲಿ ಕನ್ನಡ ಚಿತ್ರರಂಗದ ಖ್ಯಾತ ನಿರ್ಮಾಪಕಿ ಮತ್ತು ನಟಿ ರಾಧಿಕಾ ಕುಮಾರಸ್ವಾಮಿ ಅವರ ಹೆಸರು ಉಲ್ಲೇಖವಾಗಿತ್ತು. ಈ ಹಿನ್ನೆಲೆಯಲ್ಲಿ ನೋಟಿಸ್ ನೀಡಿ ರಾಧಿಕಾ ಕುಮಾರಸ್ವಾಮಿ ಅವರಿಂದ ಲೋಕಾಯುಕ್ತ ಪೊಲೀಸರು ವಿವರಣೆ ಸಹ ಪಡೆದುಕೊಂಡಿದ್ದಾರೆ. ಈ ವೇಳೆ ರಾಜ್ಯ ವಸತಿ ಸಚಿವ ಜಮೀರ್ ಅಹಮ್ಮದ್ ಖಾನ್ ಅವರಿಗೆ ನಟಿ ರಾಧಿಕಾ ಕುಮಾರಸ್ವಾಮಿ ಅವರು ₹2 ಕೋಟಿ ಸಾಲ ಕೊಟ್ಟಿದ್ದರು ಎಂಬ ವಿಷಯ ಲೋಕಾಯುಕ್ತ ಪೊಲೀಸರ ತನಿಖೆಯಿಂದ ಪತ್ತೆಯಾಗಿದೆ. ಅಲ್ಲದೇ ಸಚಿವ ಜಮೀರ್ ಅವರಿಗೆ ಸಾಲ ಕೊಟ್ಟಿದ್ದನ್ನು ಅವರು ಒಪ್ಪಿಕೊಂಡು ಅಧಿಕೃತ ಹೇಳಿಕೆ ಸಹ ದಾಖಲಿಸಿದ್ದಾರೆ.

ಇನ್ನೂ ಲೋಕಾಯುಕ್ತ ಪೊಲೀಸರು ಜಮೀರ್ ಅಹಮದ್ ಖಾನ್ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಆರೋಪದ ತನಿಖೆಯನ್ನು 2024ರಲ್ಲಿ ತೀವ್ರಗೊಳಿಸಿದ್ದರು. ಜಮೀರ್ ಅವರಿಗೆ ರಾಧಿಕಾ ಕುಮಾರಸ್ವಾಮಿ ಅವರು ಚಿತ್ರ ನಿರ್ಮಾಣದಿಂದ ಬಂದ ಹಣದ ಮೂಲಕ ಬರೋಬ್ಬರಿ ಕೋಟಿ ರೂಪಾಯಿಗಳ ಹಣಕಾಸು ನೆರವು ನೀಡಿರುವುದು ಇದೀಗ ಬೆಳಕಿಗೆ ಬಂದಿದೆ. ಈ ವ್ಯವಹಾರವು 2012ರಲ್ಲಿ ರಾಧಿಕಾ ನಿರ್ಮಾಣ ಮಾಡಿದ 'ಲಕ್ಕಿ' ಚಿತ್ರದ ಸಂದರ್ಭದಲ್ಲಿ ನಡೆದಿದೆ ಎಂದು ತನಿಖಾಧಿಕಾರಿಗಳು ಮಾಹಿತಿ ನೀಡಿದ್ದಾರೆ.
ಈ ಹಿಂದೆ ಅಂದರೆ 2019ರಲ್ಲಿ ಐ ಮಾನಿಟರಿ ಅಡ್ವೈಸರಿ ಕಂಪನಿಯ ಬಹುಕೋಟಿ ವಂಚನೆ ಹಗರಣ ಬೆಳಕಿಗೆ ಬಂದಾಗ ಆ ವಂಚಕ ಕಂಪನಿ ಜತೆ ನಂಟು ಹೊಂದಿದ್ದ ಆರೋಪದ ಮೇರೆಗೆ ಸಚಿವ ಜಮೀರ್ ಖಾನ್ ಅವರ ಮೇಲೆ ಜಾರಿ ನಿರ್ದೇಶನಾಲಯ (ಇ.ಡಿ) ದಾಳಿ ನಡೆಸಿತ್ತು. ಬಳಿಕ ಇ.ಡಿ ವರದಿ ಆಧರಿಸಿ ಆಗಿನ ಮೈತ್ರಿ ಸರ್ಕಾರದಲ್ಲೂ ಸಚಿವರಾಗಿದ್ದ ಜಮೀರ್ ಖಾನ್ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಆರೋಪದಡಿ ಅಂದು ಅಸ್ತಿತ್ವದಲ್ಲಿದ್ದ ಭ್ರಷ್ಟಾಚಾರ ನಿಗ್ರಹ ದಳವು (ಎಸಿಬಿ) ಪ್ರಕರಣ ದಾಖಲಿಸಿತ್ತು. ಎಸಿಬಿ ರದ್ದುಗೊಂಡ ಬಳಿಕ ಪ್ರಕರಣದ ತನಿಖೆಯೂ ಲೋಕಾಯುಕ್ತ ಪೊಲೀಸರಿಗೆ ವರ್ಗವಾಯಿತು. ಈಗ ಸಚಿವರ ವಿರುದ್ಧ ಅಕ್ರಮ ಆಸ್ತಿ ಸಂಪಾದನೆ ಬಗ್ಗೆ ಲೋಕಾಯುಕ್ತ ಪೊಲೀಸರು ತನಿಖೆ ನಡೆಸುತ್ತಿದ್ದಾರೆ. ಈ ಸಂಬಂಧ ಸಚಿವ ಜಮೀರ್ ಸೇರಿ ಹಲವು ಜನರ ವಿಚಾರಣೆ ಸಹ ನಡೆದಿದ್ದು, ರಾಧಿಕಾ ಕುಮಾರಸ್ವಾಮಿ ಅವರಿಗೆ ಸಂಕಷ್ಟ ಎದುರಾಗಿದೆ.
ತನಿಖೆಯ ವೇಳೆ ಸಚಿವ ಜಮೀರ್ ಖಾನ್ ಅವರಿಗೆ ಯಾರಿಂದೆಲ್ಲ ಸಾಲ ಪಡೆದಿರುವ ಬಗ್ಗೆ ಲೋಕಾಯುಕ್ತ ಪೊಲೀಸರು ಕೇಳಿದ್ದರು, ಈ ವೇಳೆ ಲಿಖಿತವಾಗಿ ಸಚಿವ ಜಮೀರ್ ಪಟ್ಟಿ ಕೊಟ್ಟಿದ್ದರು. ಇದರಲ್ಲಿ ತಾವು ನಟಿ ರಾಧಿಕಾ ಕುಮಾರಸ್ವಾಮಿ ಅವರಿಂದ ಎರಡು ಕೋಟಿ ರು. ಸಾಲ ಪಡೆದಿರುವುದಾಗಿ ಉಲ್ಲೇಖಿಸಿದ್ದರು. ಅಂತೆಯೇ ಲೋಕಾಯುಕ್ತ ಪೊಲೀಸರು ರಾಧಿಕಾ ಅವರಿಗೆ ನೋಟಿಸ್ ನೀಡಿ ಹಣದ ವಿವರ ನೀಡುವಂತೆ ಸೂಚಿಸಿದ್ದರು. ಈ ಹಿನ್ನೆಲೆಯಲ್ಲಿ ಲೋಕಾಯಕ್ತ ಪೊಲೀಸರ ಮುಂದೆ ಹಾಜರಾದ ರಾಧಿಕಾ ಕುಮಾರಸ್ವಾಮಿಅವರು, ಜಮೀರ್ ಖಾನ್ ಅವರಿಗೆ ಸಂಕಷ್ಟ ಸಂದರ್ಭದಲ್ಲಿ 2 ಕೋಟಿ ಸಾಲ ಕೊಟ್ಟಿದ್ದಾಗಿ ಹೇಳಿಕೆ ಕೊಟ್ಟಿದ್ದಾರೆ.












Click it and Unblock the Notifications