BJP Ashok: ಕಾಂಗ್ರೆಸ್ ಶಾಸಕರೇ ಸರ್ಕಾರಕ್ಕೆ ಛೀ ಥೂ ಅಂತ ಉಗೀತಿದ್ದಾರೆ
ತಮ್ಮದೇ ಸರ್ಕಾರದ ವಸತಿ ಇಲಾಖೆಯಲ್ಲಿ ಭ್ರಷ್ಟಾಚಾರ ನಡೆಯುತ್ತಿದೆ ಎಂದು ಕಾಂಗ್ರೆಸ್ ಪಕ್ಷದ ಹಿರಿಯ ಶಾಸಕ ಬಿ.ಆರ್.ಪಾಟೀಲ್ ಅವರ ನೀಡಿರುವ ಹೇಳಿಕೆಯ ರಾಜ್ಯ ರಾಜಕಾರಣದಲ್ಲಿ ಸಂಚಲನ ಸೃಷ್ಟಿಸಿದೆ. ಇದು ಕಾಂಗ್ರೆಸ್ ನಾಯಕರನ್ನು ಇಕ್ಕಟ್ಟಿಗೆ ಸಿಲುಕುವಂತೆ ಮಾಡಿದ್ದು, ಇದೇ ವಿಚಾರ ವಿಪಕ್ಷಗಳ ಪಾಲಿಗೆ ಅಸ್ತ್ರವಾಗಿದೆ. ಕಾಂಗ್ರೆಸ್ ಸಚಿವರು ಹಾಗೂ ಸಿಎಂ ರಾಜೀನಾಮೆಯ ಕೂಗು ಕೂಡ ಕೇಳಿಬರುತ್ತಿದೆ. ವಿರೋಧ ಪಕ್ಷದ ನಾಯಕ ಆರ್.ಅಶೋಕ್ ಅವರು ಕಾಂಗ್ರೆಸ್ ಶಾಸಕರೇ ಒಬ್ಬಬ್ಬರಾಗಿ ಕಾಂಗ್ರೆಸ್ ಸರ್ಕಾರಕ್ಕೆ ಛೀ, ಥೂ ಅಂತ ಉಗೀತಾ ಇದ್ದಾರೆ ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.
ಹಿರಿಯ ಕಾಂಗ್ರೆಸ್ ಶಾಸಕ ಬಿ.ಆರ್.ಪಾಟೀಲ್ ಅವರು ವಸತಿ ಇಲಾಖೆಯಲ್ಲಿ ನಡೆಯುತ್ತಿರುವ "ಮನಿ ಫಾರ್ ಮನೆ" ಭ್ರಷ್ಟಾಚಾರವನ್ನು ಬಯಲಿಗೆಳೆದ ಬೆನ್ನಲ್ಲೇ ಈಗ ಮತ್ತೊಬ್ಬ ಕಾಂಗ್ರೆಸ್ ಶಾಸಕ ಕಾಂಗ್ರೆಸ್ ಸರ್ಕಾರದ ಬಂಡವಾಳ ಬಯಲು ಮಾಡಿದ್ದಾರೆ. ಅನುಮೋದನೆಗೊಂಡ ಯೋಜನೆ ಕಾಮಗಾರಿಗಳಿಗೆ ವರ್ಕ್ ಆರ್ಡರ್ ಕೊಡೋಕೆ ಎರಡು ವರ್ಷದಿಂದ ವಿಳಂಬವಾಗುತ್ತಿದೆ, ಸಿಎಂ ಸಿದ್ದರಾಮಯ್ಯ ಅವರನ್ನ ಭೇಟಿ ಮಾಡಿ ರಾಜೀನಾಮೆ ಕೊಡುವುದಾಗಿ ಕಾಂಗ್ರೆಸ್ ಸರ್ಕಾರದ ವಿರುದ್ಧ ಸ್ವಪಕ್ಷದ ಶಾಸಕ ರಾಜು ಕಾಗೆ ಅಸಮಾಧಾನ ವ್ಯಕ್ತಪಡಿಸಿದ್ದಾರೆ. ಬಿ.ಆರ್.ಪಾಟೀಲ್ ಅವರ ಪರಿಸ್ಥಿತಿಯೇ ತಮಗೂ ಬಂದಿದೆ ಎಂದು ಅಳಲು ತೋಡಿಕೊಂಡಿದ್ದಾರೆ ಎಂದು ಲೇವಡಿ ಮಾಡಿದ್ದಾರೆ.

ನಿಮ್ಮ ನಾಲಾಯಕ್ ಕಾಂಗ್ರೆಸ್ ಸರ್ಕಾರದ ಕಾರ್ಯವೈಖರಿ ಬಗ್ಗೆ ನಿಮ್ಮದೇ ಪಕ್ಷದ ಶಾಸಕರು ದಿನಕ್ಕೊಂದು ಸರ್ಟಿಫಿಕೇಟ್ ಕೊಡುತ್ತಿದ್ದಾರಲ್ಲ ಸಿಎಂ ಸಿದ್ದರಾಮಯ್ಯನವರೇ, ಇನ್ನೆಷ್ಟು ದಿನ ಈ ಭಂಡ ಬಾಳು? ರಾಜೀನಾಮೆ ಕೊಟ್ಟು ಕರ್ನಾಟಕದ ಘನತೆ ಹಾಗೂ ಗೌರವ ಕಾಪಾಡಿ ಎಂದು ಆಗ್ರಹಿಸಿದ್ದಾರೆ.
ಮನಿ ಕೊಟ್ರೆ ಮನೆ
ರಾಜ್ಯದ ಹೌಸಿಂಗ್ ಬೋರ್ಡ್‌ನ ಹೊಸ ಘೋಷವಾಕ್ಯ ಮನಿ ಕೊಟ್ರೆ ಮನೆ, ವಸತಿ ಯೋಜನೆಯಲ್ಲಿ ಎಸ್‌ಸಿ, ಎಸ್‌ಟಿ ಹಾಗೂ ಹಿಂದುಳಿದ ವರ್ಗವನ್ನು ಕಡೆಗಣಿಸಿ ಮುಸ್ಲಿಮರಿಗೆ ಶೇ 15ರಷ್ಟು ಮೀಸಲಾತಿ ನೀಡಿದೆ. ಹಿಂದೂಗಳಿಂದ ಶೇ 60ರಷ್ಟು ಕಮಿಷನ್ ವಸೂಲಾತಿ ಮಾಡುತ್ತಿದೆ. ವಸತಿ ಇಲಾಖೆಯಲ್ಲಿ ರಕ್ತ ಹೀರುವ ಜಿಗಣೆಗಳು ಸೇರಿಕೊಂಡಿವೆ ಎಂದು ಅಶೋಕ್ ಆರೋಪ ಮಾಡಿದ್ದಾರೆ.
ಸ್ವಪಕ್ಷದ ಶಾಸಕರೇ ಲಂಚದ ಆರೋಪ ಮಾಡುತ್ತಿರುವಾಗ ಸಚಿವ ಜಮೀರ್ ಅಹ್ಮದ್ ಖಾನ್ ಅವರು ಇನ್ನು ಯಾವ ಮುಖ ಇಟ್ಟುಕೊಂಡು ಸಚಿವರಾಗಿ ಮುಂದುವರೆಯುತ್ತಿದ್ದಾರೆ ಸಿಎಂ ಸಿದ್ದರಾಮಯ್ಯನವರೇ? ವಸತಿ ಇಲಾಖೆ ಅಡಿ ಹಂಚಿಕೆಯಾಗಿತ್ತಿರುವ ಪ್ರತಿ ಮನೆಯಿಂದ ತಮಗೆ ಎಷ್ಟು ಪರ್ಸೆಂಟೇಜ್ ಕಮಿಷನ್ ಬರುತ್ತಿದೆ? ಇದರಲ್ಲಿ ರಾಹುಲ್ ಗಾಂಧಿ ಅವರಿಗೂ ಪಾಲಿದೆಯಾ? ಹೈಕಮಾಂಡ್ ಏಜೆಂಟುಗಳಾದ ಸುರ್ಜೇವಾಲ ಹಾಗೂ ಕೆಸಿ ವೇಣುಗೋಪಾಲ್ ಅವರಿಗೂ ಪಾಲಿದೆಯೇ? ಎಂದು ಗುಡುಗಿದ್ದಾರೆ.
ಶಾಸಕ ಬಿ.ಆರ್.ಪಾಟೀಲ್ ಅವರು ನಾನು ಬಾಯಿ ಬಿಟ್ಟರೆ, ಸರ್ಕಾರ ಶೇಕ್ ಆಗುತ್ತೆ ಅಂತ ಹೇಳಿದ್ದಾರೆ? ಇದಕ್ಕೆ ತಮ್ಮ ಉತ್ತರವೇನು? ನೀವು ಮೌನವಾಗಿದ್ದೀರಿ ಅಂದರೆ ಅದು ಸತ್ಯ ಅಂತ ತಿಳಿದುಕೊಳ್ಳಬೇಕೆ? ಅದು ನಿಜ ಅಲ್ಲ ಅನ್ನುವುದಾದರೆ ಅವರ ಮೇಲೆ ಕೆಪಿಸಿಸಿ ವತಿಯಿಂದ ಯಾಕೆ ಕ್ರಮ ಕೈಗೊಳ್ಳುತ್ತಿಲ್ಲ? ಎಂದು ತರಾಟೆಗೆ ತೆಗೆದುಕೊಂಡಿದ್ದಾರೆ.












Click it and Unblock the Notifications