Karnataka Budget: ಡಿಕೆ ಶಿವಕುಮಾರ್ ಮೇಲೆ ನಿಗಾ ಇಡಲು ಸಿದ್ದರಾಮಯ್ಯರಿಂದ ತಂಡ ರಚನೆ: ಆರ್.ಅಶೋಕ್
ಬೆಂಗಳೂರು: ರಾಜ್ಯದ ಉಪಮುಖ್ಯಮಂತ್ರಿ ಡಿಕೆ ಶಿವಕುಮಾರ್ ಅವರ ಚಟುವಟಿಕೆಗಳ ಮೇಲೆ ನಿಗಾ ಇರಿಸಲು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಸ್‌ಪಿ ನೇತೃತ್ವದಲ್ಲಿ ಅನಧಿಕೃತವಾಗಿ ತಂಡ ರಚಿಸಿದ್ದಾರೆ. ಅನುದಾನ ಕಡಿತ ಮಾಡುವುದು, ಫೋನ್ ಟ್ಯಾಪ್ ಮಾಡುವುದು ಹೀಗೆ ಎಲ್ಲ ಕಾರ್ಯಗಳನ್ನು ಮಾಡುತ್ತಿದ್ದಾರೆ ಎಂದು ವಿಪಕ್ಷ ನಾಯಕ ಆರ್.ಅಶೋಕ್ ಗಂಭೀರ ಆರೋಪ ಮಾಡಿದ್ದಾರೆ.
2026ರ ಬಜೆಟ್ ಅಧಿವೇಶನಕ್ಕೆ ಸಂಬಂಧಿಸಿದಂತೆ ಅವರು ಸುದ್ದಿಗೋಷ್ಠ ನಡೆಸಿ ಮಾತನಾಡಿದರು. ಡಿಸಿಎಂ ಮೇಲಿನ ನಿಗಾ ವಹಿಸಿದ ರಚಿಸಿದ ತಂಡವು ಇದು ಕಣ್ಣಿಗೆ ಕಾಣದ ಎಸ್‌ಐಟಿ ಆಗಿದೆ. ಗ್ಯಾರಂಟಿಗಳನ್ನು ಮಾಡುವ ಮುಂಚೆಯೇ ಯೋಚನೆ ಮಾಡಬೇಕಿತ್ತು ಎಂದು ಕಾಂಗ್ರೆಸ್ ನಾಯಕರು ಹೇಳುತ್ತಿದ್ದಾರೆ. ಅಡುಗೆ ಅನಿಲ ಸಬ್ಸಿಡಿ ಬಹಳ ವರ್ಷಗಳಿಂದ ಇತ್ತು. ನರೇಂದ್ರ ಮೋದಿ ಪ್ರಧಾನಿಯಾದ ಬಳಿಕ ಬಿಟ್ಟುಕೊಡಿ ಎಂದು ಕರೆ ನೀಡಿದ್ದರು. ಆದರೆ ಗ್ಯಾರಂಟಿ ಯೋಜನೆಯನ್ನು ಚುನಾವಣೆಯಲ್ಲಿ ಘೋಷಣೆ ಮಾಡಲಾಗಿತ್ತು. ಉಳ್ಳವರಿಗೂ ಕೊಡುತ್ತೇನೆಂದು ಸಿದ್ದರಾಮಯ್ಯ ಆಗಲೇ ಹೇಳಿದ್ದರು. ಈಗ ಉಳ್ಳವರು ಬಿಟ್ಟುಕೊಡಿ ಎಂದು ಹೇಳುವುದು ತಪ್ಪಾಗುತ್ತದೆ ಎಂದು ಲೇವಡಿ ಮಾಡಿದ್ದಾರೆ. ಅವರ ಈ ಆರೋಪವು ಸಾಕಷ್ಟು ಚರ್ಚೆ ಆಗುತ್ತಿದೆ.

ಈ ಬಾರಿಯ ಬಜೆಟ್ ಅಧಿವೇಶನದಲ್ಲಿ ಸರ್ಕಾರದ ಲೋಪದೋಷಗಳನ್ನು ಚರ್ಚಿಸಲಾಗುವುದು. ರಾಜ್ಯದ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡಲಾಗುವುದು. ಕಾಂಗ್ರೆಸ್ ಒಡೆದ ಮನೆಯಾಗಿದ್ದು, ಶಾಸಕರು ಬೀದಿಯಲ್ಲಿ ನಿಂತು ಧಮಕಿ ಹಾಕುತ್ತಿದ್ದಾರೆ. ಕಾಂಗ್ರೆಸ್ ಆಡಳಿತದ ಅವಧಿ ಮುಗಿಯುತ್ತಾ ಬಂದಿದೆ. ಮಹಿಳಾ ಮತ್ತು ಮಕ್ಕಳ ಕಲ್ಯಾಣ ಇಲಾಖೆಯಲ್ಲಿ ಅಕ್ರಮ ನಡೆದಿದೆ.
ಕಳೆದ ಮೂರು ಬಜೆಟ್‌ನಲ್ಲಿ ಅನುದಾನ ಘೋಷಣೆಯಾದರೂ ಬಿಡುಗಡೆಯಾಗಿಲ್ಲ. ಮುಖ್ಯಮಂತ್ರಿ ಸಿದ್ದರಾಮಯ್ಯ ದಾಖಲೆ ಮಟ್ಟದಲ್ಲಿ ಸಾಲ ಮಾಡಿದ್ದಾರೆ. ಹಿಂದೂಗಳ ಮೇಲೆ ಹಲ್ಲೆಯಾಗುತ್ತಿದೆ. ಬೆಂಗಳೂರಿನಲ್ಲಿ ಕಸದ ಸಮಸ್ಯೆ ಹೆಚ್ಚಿದೆ. ಕಂದಾಯ ಇಲಾಖೆಯಲ್ಲಿ ಇ ಖಾತಾ ಸಮಸ್ಯೆ ಇದೆ. ಈ ಎಲ್ಲ ವಿಷಯಗಳ ಬಗ್ಗೆ ಸದನದಲ್ಲಿ ಚರ್ಚೆ ಮಾಡುತ್ತೇವೆ ಎಂದು ತಿಳಿಸಿದರು.
ಆರ್ಥಿಕ ದುಸ್ಥಿತಿ ವಿರುದ್ಧ ಹೋರಾಟ
ರಾಜ್ಯ ಸರ್ಕಾರ ಮೂರೂವರೆ ಲಕ್ಷ ಕೋಟಿ ರೂ. ಸಾಲ ಮಾಡಿದೆ. ಹಿಂದಿನ ಎಲ್ಲ ಮುಖ್ಯಮಂತ್ರಿಗಳನ್ನು ಮೀರಿ ಸಿದ್ದರಾಮಯ್ಯ ಸಾಲ ಮಾಡಿದ್ದು, ಅವಧಿ ಮುಗಿಯುವ ವೇಳೆಗೆ ಸಾಲದ ಪ್ರಮಾಣ 6 ಲಕ್ಷ ಕೋಟಿ ರೂ. ಗೆ ಹೋಗಲಿದೆ. ಪ್ರತಿ ವ್ಯಕ್ತಿಯ ಮೇಲೆ 1 ಲಕ್ಷ ರೂ. ಸಾಲ ಇರಲಿದೆ. ಇಂತಹ ಆರ್ಥಿಕ ದುಸ್ಥಿತಿಯ ವಿರುದ್ಧ ಹೋರಾಟ ಮಾಡುತ್ತೇವೆ ಎಂದು ತಿಳಿಸಿದರು.
ಚುನಾವಣಾ ಪ್ರಣಾಳಿಕೆಯಲ್ಲಿ ಯಾವುದನ್ನೂ ಕಾಂಗ್ರೆಸ್ ಈಡೇರಿಸಿಲ್ಲ. ಗುತ್ತಿಗೆದಾರರಿಗೆ 37,000 ಕೋಟಿ ರೂ. ಬಾಕಿ ಕೊಡಬೇಕಿದೆ. ಅದನ್ನು ಕೊಡುವುದು ಬಿಟ್ಟು ಹಿಂದಿನ ಬಿಜೆಪಿ ಬಾಕಿ ಉಳಿಸಿಕೊಂಡಿದೆ ಎಂದು ಸಿದ್ದರಾಮಯ್ಯ ಹೇಳುತ್ತಾರೆ. ಕೋವಿಡ್ ನಂತರ ಬಸವರಾಜ ಬೊಮ್ಮಾಯಿ ಕೊರತೆ ಇಲ್ಲದ ಬಜೆಟ್ ಮಂಡಿಸಿದ್ದರು. ಅದನ್ನು ಸಿದ್ದರಾಮಯ್ಯ ಮುಂದುವರಿಸಬೇಕಿತ್ತು. ಆಗ ಪ್ರಶ್ನೆ ಮಾಡದವರು ಈಗ ಆರೋಪ ಮಾಡುತ್ತಾರೆ ಎಂದು ತಿರುಗೇಟು ನೀಡಿದರು.
ಖಮೇನಿ ಪರ ಮುಸ್ಲಿಮರು ಮೆರವಣಿಗೆ ಬೇಡ
ಇರಾನ್ ಅಧ್ಯಕ್ಷನಾಗಿದ್ದ ಖಮೇನಿ ಸರ್ವಾಧಿಕಾರಿಯಾಗಿದ್ದು, ಆತನ ವಿರುದ್ಧ ಆಂತರಿಕ ದಂಗೆಯಾಗಿತ್ತು. ಅಲ್ಲಿ ಮಹಿಳೆಯರ ಮೇಲೆ ದೌರ್ಜನ್ಯ ನಡೆದಿತ್ತು. ಸಾವಿರಾರು ಜನರನ್ನು ಗುಂಡಿಟ್ಟು ಸಾಯಿಸಲಾಗಿತ್ತು. ಆದರೆ ಬೆಂಗಳೂರು ಸೇರಿದಂತೆ ಭಾರತದ ಅನೇಕ ಕಡೆ ಖಮೇನಿ ಪರವಾಗಿ ಮುಸ್ಲಿಮರು ಪ್ರತಿಭಟನೆ ಮಾಡಿದ್ದಾರೆ. ವಿವಿಧ ದೇಶಗಳಲ್ಲಿ ಸಿಲುಕಿರುವ ಕನ್ನಡಿಗರನ್ನು ಮರಳಿ ಕರೆತರಲು ಪ್ರಧಾನಿ ನರೇಂದ್ರ ಮೋದಿ ಸರ್ಕಾರ ಕಾರ್ಯೋನ್ಮುಖವಾಗಿದೆ. ಕೇಂದ್ರ ಸರ್ಕಾರ ಈ ಹಿಂದೆಯೂ ಈ ರೀತಿ ಭಾರತೀಯರನ್ನು ಮರಳಿ ಕರೆತಂದಿದೆ. ಈ ಬಾರಿಯೂ ಎಲ್ಲರನ್ನೂ ಸುರಕ್ಷಿತವಾಗಿ ಕರೆತರಲಾಗುತ್ತದೆ ಎಂದರು.
ಸರ್ವಾಧಿಕಾರಿ ಖಮೇನಿ ಪರ ಮೆರವಣಿಗೆ ಮಾಡಬಾರದು. ಕಾನೂನು ಕೈಗೆ ತೆಗೆದುಕೊಂಡು ಪ್ರತಿಭಟನೆ ನಡೆಸಿದವರ ವಿರುದ್ಧ ಕಾನೂನು ಕ್ರಮ ಜರುಗಿಸಬೇಕಿದೆ. ಭಾರತ ಹಾಗೂ ಇಸ್ರೇಲ್ ನಡುವಿನ ಸಂಬಂಧ ಉತ್ತಮವಾಗಿದೆ. ಭಾರತ ಯಾವುದೇ ದೇಶಗಳ ವಿರೋಧಿ ಅಲ್ಲ. ಯುದ್ಧ ಆಗಬಾರದು ಎಂಬುದೇ ನನ್ನ ಅಭಿಪ್ರಾಯ. ಕೇಂದ್ರ ಸರ್ಕಾರ ಎಂದೂ ಯುದ್ಧಕ್ಕೆ ಬೆಂಬಲ ಕೊಟ್ಟಿಲ್ಲ. ಮುಖ್ಯಮಂತ್ರಿ ಹಾಗೂ ಉಪಮುಖ್ಯಮಂತ್ರಿ ಕೇಂದ್ರದ ಸಚಿವರನ್ನು ಭೇಟಿ ಮಾಡಿ, ಕನ್ನಡಿಗರ ರಕ್ಷಣೆಗಾಗಿ ಕೆಲಸ ಮಾಡಬೇಕಿದೆ ಎಂದು ಆಗ್ರಹಿಸಿದರು.












Click it and Unblock the Notifications