ರಾಜ್ಯ ಸರ್ಕಾರ ಮಳೆ ಹಾನಿ ಸಂತ್ರಸ್ತರಿಗೆ ದೀಪಾವಳಿ ಒಳಗೆ ಪರಿಹಾರ ನೀಡಲು ವಿಪಕ್ಷ ಒತ್ತಾಯ
ಬೆಂಗಳೂರು, ಅಕ್ಟೋಬರ್ 27: ರಾಜ್ಯದಲ್ಲಿ ಈ ತಿಂಗಳಲ್ಲಿ ವಾಡಿಕೆಗಿಂತ ಹೆಚ್ಚು ಮಳೆ ಆಗಿದೆ. ಆದ್ದರಿಂದ ಜಿಲ್ಲಾಡಳಿತ ಅತಿವೃಷ್ಠಿ ಪ್ರದೇಶಗಳಿಗೆ ಭೇಟಿ ನೀಡಿ, ಪರಿಹಾರ ಕ್ರಮ ಕೈಗೊಳ್ಳುವಂತೆ ಸಿಎಂ ಸಿದ್ದರಾಮಯ್ಯ ಅವರು ಸೂಚಿಸಿದ್ದಾರೆ. ಇದಕ್ಕೆ ಪ್ರತಿಕ್ರಿಯಿಸಿರುವ ವಿಪಕ್ಷ ನಾಯಕ ಆರ್.ಅಶೋಕ್ ಅವರು, ಪ್ರಗಾಢ ನಿದ್ದೆಯಿಂದ ಎದ್ದಿರುವ ಸರ್ಕಾರ ಸಭೆ ನಡೆಸಿ ಸೂಚನೆ ಕೊಟ್ಟಿದೆ. ಪರಿಹಾರ ವಿತರಣೆಯಲ್ಲಿ ಸರ್ಕಾರ ಸಬೂಬು ಹೇಳದೇ ಕೆಲಸ ಮಾಡಬೇಕು ಎಂದು ಅವರು ಟಾಂಗ್ ನೀಡಿದ್ದಾರೆ.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಶನಿವಾರ ಜಿಲ್ಲಾಡಳಿತ ಹಾಗೂ ಜಿಲ್ಲಾ ಪಂಚಾಯಿತಿ ಸಿಇಓಗಳ ಜೊತೆಗೆ ವಿಡಿಯೋ ಕಾನ್ಫರೆನ್ಸ್ ನಡೆಸಿದ್ದಾರೆ. ಈ ವಿಚಾರ ಕುರಿತು ಭಾನುವಾರ ಟ್ವೀಟ್ ಮಾಡಿರುವ ಆರ್.ಅಶೋಕ ಅವರು ಸರ್ಕಾರದ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.

ಅಕಾಲಿಕ ಮಳೆಯಿಂದ ಅಪಾರ ಬೆಳೆ ಹಾನಿಯಾಗಿ ರಾಜ್ಯಾದ್ಯಂತ ರೈತರು ಸಂಕಷ್ಟ ಎದುರಿಸಲಾಗುತ್ತಿದೆ. ಇದನ್ನು ವಿಪಕ್ಷಗಳು ಗಮನಕ್ಕೆ ತಂದ ಮೇಲೆ ಪ್ರಗಾಢ ನಿದ್ದೆಯಿಂದ ಎದ್ದಿರುವ ಕರ್ನಾಟಕ ರಾಜ್ಯ ಕಾಂಗ್ರೆಸ್ ಸರ್ಕಾರ ನೆನ್ನೆಯಷ್ಟೇ ನಿನ್ನೆ ಜಿಲ್ಲಾಡಳಿತಗಳ ಜೊತೆ ವಿಡಿಯೋ ಕಾನ್ಫರೆನ್ಸ್ ನಡೆಸಿದೆ.
ರಾಜ್ಯ ಸರ್ಕಾರವು ಕಳೆದ ವರ್ಷ ಬರ ಪರಿಹಾರ ವಿತರಣೆ ವೇಳೆ, ಈ ವರ್ಷ ಮುಂಗಾರು ಬೆಳೆ ಹಾನಿ ಪರಿಹಾರ ವಿತರಣೆ ವೇಳೆ ಉಂಟಾದ ಎಡವಟ್ಟುಗಳು ಮರುಕಳಿಸದಂತೆ ನೋಡಿಕೊಳ್ಳಬೇಕು ಎಂದು ಅವರು ಎಚ್ಚರಿಸಿದ್ದಾರೆ.
ರಾಜ್ಯದಲ್ಲಿ ಮಳೆ, ಅತಿವೃಷ್ಟಿಯಿಂದ ಆದ ಬೆಳೆ ಹಾನಿ ಸಮೀಕ್ಷೆಯನ್ನು ಸಮರೋಪಾದಿಯಲ್ಲಿ ನಡೆಸಿ, ಒಂದು ವಾರದೊಳಗೆ ಪರಿಹಾರದ ಹಣ ರೈತರ ಕೈಸೇರುವಂತೆ ಕ್ರಮ ಕೈಗೊಳ್ಳಬೇಕು ಎಂದು ಅವರು ಒತ್ತಾಯಿಸಿದ್ದಾರೆ.
ಫ್ರೂಟ್ಸ್ ತಂತ್ರಾಂಶದಲ್ಲಿ ಸಮಸ್ಯೆ ಇದೆ. ಆಧಾರ್ ಲಿಂಕ್ ಆಗಿಲ್ಲ ಎಂದು ಕುಂಟು ನೆಪವೊಡ್ಡಿ ಪರಿಹಾರ ವಿತರಣೆಯಲ್ಲಿ ವಿಳಂಬ ಮಾಡಬಾರದು. ಈಗಿನಿಂದಲೇ ಸರ್ಕಾರ ಸೂಕ್ತ ರೀತಿಯಲ್ಲಿ ಪೂರ್ವಸಿದ್ಧತೆ ಮಾಡಿಕೊಂಡು, ಸಮೀಕ್ಷೆ ವರದಿ ಕೈಸೇರುತ್ತಿದ್ದಂತೆ ಡಿಬಿಟಿ ಮೂಲಕ ರೈತರ ಬ್ಯಾಂಕ್ ಖಾತೆಗಳಿಗೆ ಹಣ ಜಮೆ ಮಾಡಬೇಕೆಂದು ಅವರು ಮನವಿ ಮಾಡಿದ್ದಾರೆ.
ಹಿಂದಿನ ಎರಡು ವರ್ಷಗಳಿಂದ ರಾಜ್ಯದಲ್ಲಿ ಸತತವಾಗಿ ಬರ, ನೆರೆ ಹಾವಳಿಯಿಂದ ಹೈರಾಣಗಿರುವ ರೈತರು ವಾರದೊಳಗೆ ಪರಿಹಾರ ಹಣ ಕೈಸೇರಿದರೆ ದೀಪಾವಳಿ ಹಬ್ಬವನ್ನಾದರೂ ನೆಮ್ಮದಿಯಿಂದ ಆಚರಿಸಲು ಸಹಕಾರಿಯಾಗುತ್ತದೆ ಎಂದು ಅವರು ಕಿವಿ ಮಾತು ಹೇಳಿದ್ದಾರೆ.
ಸಭೆಯಲ್ಲಿ ಸಿಎಂ ಕೊಟ್ಟ ಸೂಚನೆಗಳೇನು?
ಸಿಎಂ ಸಿದ್ದರಾಮಯ್ಯ ಅವರು, ಬೆಳೆಹಾನಿಗೆ ಸಂಬಂಧಿಸಿದಂತೆ ಒಂದು ವಾರದಲ್ಲಿ ಸಮೀಕ್ಷೆ ನಡೆಸಬೇಕು. ಜಿಲ್ಲಾಧಿಕಾರಿಗಳು ಖುದ್ದು ಸ್ಥಳಕ್ಕೆ ಭೇಟಿ ನೀಡಿ ವಾರದೊಳಗೆ ವರದಿ ನೀಡುವಂತೆ ಸಭೆಯಲ್ಲಿ ಸೂಚಿಸಿದ್ದಾರೆ.
ಈ ಭಾರಿ ಅತ್ಯಧಿಕ ಮಳೆ ಸುರಿದಿದೆ. ನವೆಂಬರ್ ಡಿಸೆಂಬರ್ ಅವಧಿಯಲ್ಲೂ ಭಾರಿ ಮಳೆ ಆಗುವ ಸಾಧ್ಯತೆ ಇದೆ. ಆದ್ದರಿಂದ ಅಗತ್ಯ ಮುನ್ನೆಚ್ಚರಿಕೆ ವಹಿಸಬೇಕು. ಸಂಭವನೀಯ ಅತಿವೃಷ್ಠ ಸ್ಥಳಗಳಿಗೂ ಜಿಲ್ಲಾಧಿಕಾರಿಗಳು ಭೇಟಿ ನೀಡಬೇಕು. ಯಾವ ಅನಾಹುತ ಸಂಭವಿಸದಂತೆ ತಡೆಯಬೇಕು ಎಂದು ಸಿಎಂ ಆದೇಶಿಸಿದ್ದಾರೆ. ಹಾಲಿ ಇರುವ ಅನುದಾನ ಸದ್ಭಳಕೆ ಆಗಬೇಕು. ಒಂದು ವಾರದಲ್ಲಿ ವರದಿ ಸಲ್ಲಿಸಬೇಕು. ಪರಿಹಾರ ಕಾರ್ಯ ಕೈಗೊಳ್ಳಲಾಗುತ್ತದೆ ಎಂದು ಅವರು ಭರವಸೆ ನೀಡಿದ್ದಾರೆ.












Click it and Unblock the Notifications