ʻಮುಸ್ಲಿಮರ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂಪಾಯಿʼ
ರಾಜ್ಯ ಕಾಂಗ್ರೆಸ್ ಸರ್ಕಾರದ ನಿರ್ಧಾರವೊಂದು ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ ಇತ್ತೀಚಿನ ವರ್ಷಗಳಲ್ಲಿ ಪ್ರಾರಂಭ ಮಾಡಲಾಗಿದ್ದ 9 ವಿಶ್ವ ವಿದ್ಯಾಲಯಗಳನ್ನು ಮುಚ್ಚುವುದಕ್ಕೆ ರಾಜ್ಯ ಸರ್ಕಾರ ಮುಂದಾಗಿರುವುದು ಭಾರೀ ಚರ್ಚೆಗೆ ಕಾರಣವಾಗಿದೆ. ಇದರ ನಡುವೆಯೇ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ಮತ್ತೊಂದು ನಿರ್ಧಾರವು ಸಹ ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯ ಸರ್ಕಾರವನ್ನು ವಿರೋಧ ಪಕ್ಷಗಳು ತೀವ್ರವಾಗಿ ತರಾಟೆಗೆ ತೆಗೆದುಕೊಂಡಿವೆ. ಅದೇನು ಎನ್ನುವ ಸಂಪೂರ್ಣ ವಿವರ ಇಲ್ಲಿದೆ.
ಕರ್ನಾಟಕ ಕಾಂಗ್ರೆಸ್ ಸರ್ಕಾರವು ಓಲೈಕೆಯ ರಾಜಕೀಯವನ್ನು ಮಾಡುತ್ತಿದೆ ಎಂದು ಬಿಜೆಪಿ ಸೇರಿದಂತೆ ವಿರೋಧ ಪಕ್ಷಗಳು ಆರೋಪ ಮಾಡಿಕೊಂಡೇ ಬರುತ್ತಿವೆ. ಇದೀಗ ಮುಸ್ಲಿಮರ ಶಿಕ್ಷಣಕ್ಕೆ ಸಂಬಂಧಿಸಿದಂತೆ ರಾಜ್ಯ ಸರ್ಕಾರವು ತೆಗೆದುಕೊಂಡಿರುವ ನಿರ್ಧಾರವೊಂದು ಭಾರೀ ಚರ್ಚೆಗೆ ಕಾರಣವಾಗಿದೆ. ರಾಜ್ಯದಲ್ಲಿ 9 ವಿಶ್ವ ವಿದ್ಯಾನಿಲಯಗಳನ್ನು ಮುಚ್ಚಬೇಕು ಎನ್ನುವ ರಾಜ್ಯ ಸರ್ಕಾರದ ನಿರ್ಧಾರಕ್ಕೆ ಈಗಾಗಲೇ ವಿರೋಧ ವ್ಯಕ್ತವಾಗಿದೆ. ಇನ್ನು ಈ ರೀತಿ ವಿಶ್ವವಿದ್ಯಾಲಯಗಳನ್ನು ಮುಚ್ಚುವುದಕ್ಕೆ ಯಾವುದೇ ಕಾರಣಕ್ಕೂ ಬಿಡುವುದಿಲ್ಲ ಎಂದು ಈಗಾಗಲೇ ಬಿಜೆಪಿ ಸಹ ಹೇಳಿದೆ. ಈ ನಡುವೆ ಮುಸ್ಲಿಂ ಸಮುದಾಯದ ಶಿಕ್ಷಣಕ್ಕೆ ಕೋಟ್ಯಾಂತರ ರೂಪಾಯಿ ಕೊಡಲು ರಾಜ್ಯ ಸರ್ಕಾರ ನಿರ್ಧಾರ ಮಾಡಿರುವುದು ಬಿಜೆಪಿಯ ಕಣ್ಣನ್ನು ಕೆಂಪಗಾಗಿಸಿದೆ.

ಈ ಸಂಬಂಧ ಸೋಷಿಯಲ್ ಮೀಡಿಯಾ ಎಕ್ಸ್‌ನಲ್ಲಿ ಪೋಸ್ಟ್ ಮಾಡಿ ಆಕ್ರೋಶ ವ್ಯಕ್ತಪಡಿಸಿರುವ ವಿರೋಧ ಪಕ್ಷದ ನಾಯಕ ಆರ್. ಅಶೋಕ್ ಅವರು, 342 ಕೋಟಿ ರೂಪಾಯಿ ಅನುದಾನ ನೀಡಲು ಯೋಗ್ಯತೆ ಇಲ್ಲದೆ ಬಿಜೆಪಿ ಸರ್ಕಾರ 9 ಜಿಲ್ಲೆಗಳಲ್ಲಿ ಆರಂಭಿಸಿದ್ದ ವಿಶ್ವವಿದ್ಯಾಲಯಗಳನ್ನ ಮುಚ್ಚುತ್ತೇವೆ ಎಂದು ರಾಜ್ಯ ಕಾಂಗ್ರೆಸ್ ಸರ್ಕಾರ ಹಠಕ್ಕೆ ಬಿದ್ದಿದೆ. ಆದರೆ ಮುಸ್ಲಿಮರ ಶಿಕ್ಷಣಕ್ಕೆ ಬರೋಬ್ಬರಿ 1,200 ಕೋಟಿ ರೂಪಾಯಿ ವಿನಿಯೋಗಿಸಲು ಹೊರಟಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಮುಂದುವರಿದು ಸ್ವಾಮಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರೇ ತಮ್ಮ ಸರ್ಕಾರದ ಬಳಿ 9 ವಿಶ್ವವಿದ್ಯಾಲಯಗಳನ್ನು ಉಳಿಸಿಕೊಳ್ಳಲು ₹342 ಕೋಟಿ ರೂಪಾಯಿ ಹಣ ಇಲ್ಲ. ಆದರೆ ಮುಸ್ಲಿಮರ ಶಿಕ್ಷಣಕ್ಕೆ ಕೊಡಲು 1,200 ಕೋಟಿ ರೂಪಾಯಿ ಇದೆ. ಅಲ್ಲವೇ? ಮುಸ್ಲಿಂ ಮಕ್ಕಳ ಶಿಕ್ಷಣಕ್ಕೆ ಅನುದಾನ ಕೊಡಿ, ಬೇಡ ಅನ್ನಲ್ಲ. ಆದರೆ ಬಡವರು, ಗ್ರಾಮೀಣ ಪ್ರದೇಶದ ಮಕ್ಕಳಿಗೆ ಉಪಯೋಗವಾಗುವ ವಿವಿಗಳನ್ನು ಯಾಕೆ ಮುಚ್ಚುತ್ತೀರಿ ಎಂದು ಪ್ರಶ್ನೆ ಮಾಡಿದ್ದಾರೆ. ಬಡವರ ಮಕ್ಕಳ ಉನ್ನತ ಶಿಕ್ಷಣಕ್ಕೆ 342 ಕೋಟಿ ರೂಪಾಯಿ ಖರ್ಚು ಮಾಡಲೂ ಸಾಧ್ಯವಾಗದಷ್ಟು ಪಾಪರ್ ಆಗಿದೆಯಾ ನಿಮ್ಮ ಕಾಂಗ್ರೆಸ್ ಸರ್ಕಾರ? ಬಡವರ ಮಕ್ಕಳ ಶಿಕ್ಷಣಕ್ಕಿಂತ ಓಲೈಕೆ ರಾಜಕಾರಣವೇ ಹೆಚ್ಚಾಗಿರುವ ನಿಮ್ಮ ಕಾಂಗ್ರೆಸ್ ಪಕ್ಷಕ್ಕೆ ನಾಚಿಕೆಯಾಗಬೇಕು ಎಂದೂ ಅವರು ಹೇಳಿದ್ದಾರೆ.
ಅಲ್ಪಸಂಖ್ಯಾತರ ಹಕ್ಕು ದಿನದಲ್ಲಿ ಭಾಗವಹಿಸಿ ಮಾತನಾಡಿದ್ದ ಸಚಿವ ಜಮೀರ್ ಅಹಮದ್ ಅವರು, ಅಲ್ಪಸಂಖ್ಯಾತರ ಶಿಕ್ಷಣಕ್ಕಾಗಿ 1200 ಕೋಟಿ ವಿನಿಯೋಗ ಮಾಡುವುದಾಗಿ ಅವರು ಹೇಳಿದ್ದರು. ಇದರ ಬೆನ್ನಲ್ಲೇ ವಿರೋಧ ವ್ಯಕ್ತವಾಗುತ್ತಿದೆ. ಸಾರ್ವಜನಿಕ ವಲಯದಿಂದಲೂ ಇದಕ್ಕೆ ಪರ - ವಿರೋಧ ವ್ಯಕ್ತವಾಗಿದೆ.












Click it and Unblock the Notifications