ಸಿಎಂ ಸಿದ್ದರಾಮಯ್ಯರಿಂದ ರಾಜ್ಯಕ್ಕೆ ಗೂಂಡಾ ಭಾಗ್ಯ: ಆರ್.ಅಶೋಕ್ ವ್ಯಂಗ್ಯ
ಮೈಸೂರು, ಜನವರಿ 26: ರಾಜ್ಯ ಸರ್ಕಾರ ದಿವಾಳಿಯಾಗಿದ್ದು, ರಾಜ್ಯದಲ್ಲಿ ಮೈಕ್ರೋ ಫೈನಾನ್ಸ್ ಕಿರುಕುಳ ಮಿತಿಮೀರಿದ್ದು, ಕಾನೂನು ಸುವ್ಯವಸ್ಧೆ ಸಂಪೂರ್ಣ ಕುಸಿದಿದ್ದು ಸಿಎಂ ಸಿದ್ದರಾಮಯ್ಯ ಗೂಂಡಾ ಭಾಗ್ಯ ನೀಡಿದ್ದಾರೆ ಎಂದು ಕಾಂಗ್ರೆಸ್ ಸರ್ಕಾರದ ವಿರುದ್ಧ ವಿಪಕ್ಷ ನಾಯಕ ಆರ್.ಅಶೋಕ್ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಭಾನುವಾರ ನಗರದಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ಸರ್ಕಾರ ದಿವಾಳಿಯಾಗಿರುವುದರಿಂದ ರಾಷ್ಟ್ರೀಕೃತ ಬ್ಯಾಂಕ್‌ಗಳಲ್ಲಿ ಸಾಲ ನೀಡುತ್ತಿಲ್ಲ. ಹೀಗಾಗಿ ಜನರು ಮೈಕ್ರೋ ಫೈನಾನ್ಸ್‌ಗಳಲ್ಲಿ ಸಾಲ ಮಾಡುತ್ತಿದ್ದಾರೆ. ಸಿದ್ದರಾಮಯ್ಯ ಅಧಿಕಾರಕ್ಕೆ ಬಂದ ಮೇಲೆ ಗೂಂಡಾಗಳಿಗೂ ಕೆಲಸ ಸಿಕ್ಕಿದೆ. ಅವರು ಅವರ ಕೆಲಸವನ್ನು ನಿಷ್ಠೆಯಿಂದ ಮಾಡುತ್ತಿದ್ದಾರೆ. ಸಿದ್ದರಾಮಯ್ಯನವರು ಆರನೇ ಭಾಗ್ಯವಾಗಿ ಗೂಂಡಾ ಭಾಗ್ಯ ಕೂಡ ಕೊಟ್ಟಿದ್ದಾರೆ ಎಂದು ಕಿಡಿಕಾರಿದರು.

ಖೋ ಖೋ ವಿಶ್ವಕಪ್ ವಿಜೇತರಿಂದ ಸರ್ಕಾರಕ್ಕೆ ಬಹುಮಾನ ವಾಪಸ್ ಕುರಿತು ಮಾತನಾಡಿದ ಅವರು, ಈ ಸರ್ಕಾರ ಪಾಪರ್ ಆಗಿದೆ. ಪೇಪರ್ ತೆಗೆದುಕೊಳ್ಳಲು ಕೂಡ ಕಾಸಿಲ್ಲ. ವಾಪಸ್ ಕೊಟ್ಟರೆ ಅದೂ ಸಿಗುವುದಿಲ್ಲ. ಇತರೆ ರಾಜ್ಯಗಳು ಆರ್ಥಿಕವಾಗಿ ಸದೃಢವಾಗಿವೆ. ಅಲ್ಲಿ ಹೆಚ್ಚಿನ ಬಹುಮಾನ ಘೋಷಣೆ ಮಾಡಿದ್ದಾರೆ. ಕೇಂದ್ರ ಸರ್ಕಾರ ದುಡ್ಡು ಕೊಡಬೇಕು ಎಂದು ಡಿ.ಕೆ.ಶಿವಕುಮಾರ್ ಹೇಳುತ್ತಾರೆ. ಹಿಂದೆ ಮನಮೋಹನ್ ಸಿಂಗ್ ಇದ್ದಾಗ ಎಷ್ಟು ಅನುದಾನ ತಂದಿದ್ದೀರಾ? ಈ ಬಾರಿಯ ಬಜೆಟ್ ಕೂಡ ದಿವಾಳಿ ಬಜೆಟ್ ಆಗಿರಲಿದೆ. ಸಿದ್ದರಾಮಯ್ಯ ಪರವಾಗಿ ನಾನು ನಿಮಗೆ ಮನವಿ ಮಾಡುತ್ತೇನೆ, ದಯಮಾಡಿ ಬಹುಮಾನ ತೆಗೆದುಕೊಳ್ಳಿ ಎಂದರು.
ಸೋಮವಾರ ಹೈಕೋರ್ಟ್‌ನಲ್ಲಿ ಮುಡಾ ಪ್ರಕರಣದ ಅರ್ಜಿ ವಿಚಾರಣೆ ಕುರಿತು ಮಾತನಾಡಿದ ಆರ್.ಅಶೋಕ್, ಮುಡಾ ಹಗರಣ ಬಹುದೊಡ್ಡ ಪ್ರಕರಣ. ನಾವು ಸಿಬಿಐಗೆ ವಹಿಸಿ ಎಂದು ಹೋರಾಟ ಮಾಡಿದ್ದೇವೆ. ಲೋಕಾಯುಕ್ತ ತನಿಖೆ ಪಾರದರ್ಶಕತೆಯಿಂದ ಆಗಿಲ್ಲ. ಸಿದ್ದರಾಮಯ್ಯ ಪರವಾಗಿ ಲೋಕಾಯುಕ್ತ ಅಧಿಕಾರಿಗಳು ರಿಪೋರ್ಟ್ ಕೊಡುತ್ತಾರೆ. ಅಧಿಕಾರಿಗಳಿಗೆ ಪ್ರಮೋಶನ್ ಬೇಕು. ವಿಚಾರಣೆಗೆ ಸಿಎಂ ಟೈಮ್ ಫಿಕ್ಸ್ ಮಾಡಿಕೊಂಡು ಬರುತ್ತಾರೆ ಎಂದರೆ ಅರ್ಥ ಏನು? ನಾನು ಈಗಲೇ ಹೇಳುತ್ತಿದ್ದೇನೆ ಎಲ್ಲಿಂದಲೋ ಬಂದ ಇಡಿ ಇಲ್ಲಿ ಆಸ್ತಿ ಮುಟ್ಟುಗೋಲು ಹಾಕುತ್ತದೆ. ಇಲ್ಲೇ ಇರುವಂತಹ ಲೋಕಾಯುಕ್ತ ಏಕೆ ಸುಮ್ಮನೆ ಕುಳಿತಿದೆ? ಇಲ್ಲಿ ಕೇವಲ 14 ಸೈಟುಗಳು ಮಾತ್ರವಲ್ಲ, 1500ಕ್ಕೂ ಹೆಚ್ಚು ಸೈಟುಗಳ ಹಗರಣ ನಡೆದಿದೆ. ಹೀಗಾಗಿ ನಮ್ಮ ಮುಡಾ ಹೋರಾಟ ಮುಂದುವರೆಯುತ್ತದೆ ಎಂದರು.












Click it and Unblock the Notifications