ಕಲ್ಯಾಣ ಕರ್ನಾಟಕದ ಪ್ರಭಾವಿ ಧುರೀಣ ಖಮರುಲ್ ಇಸ್ಲಾಂ
ಕಲಬುರಗಿ,
ಸೆಪ್ಟೆಂಬರ್ 18: ಹಿರಿಯ ರಾಜಕಾರಣಿ ಖಮರುಲ್ ಇಸ್ಲಾಂ ತಮ್ಮ 69ನೇ ವಯಸ್ಸಿನಲ್ಲಿ ಬೆಂಗಳೂರಿನಲ್ಲಿ ನಿಧನರಾಗಿದ್ದಾರೆ. ಕರ್ನಾಟಕ ಅದರಲ್ಲೂ ಹೈದರಾಬಾದ್ - ಕರ್ನಾಟಕದ ಪಾಲಿನ ಜನಪ್ರಿಯ ರಾಜಕಾರಣಿಗಳಲ್ಲಿ ಖಮರುಲ್ ಇಸ್ಲಾಂ ಕೂಡಾ ಒಬ್ಬರು. ಅವರನ್ನು ಕಲಬುರಗಿ ಭಾಗದಲ್ಲಿ 'ಖಮರ್ ಸಾಬ್' ಎಂದೇ ಕರೆಯುವುದು ರೂಢಿ. id="toptextpromo"> id='are-slot-1' class='oiad oi-axt oiadv'>1948,
ಜನವರಿ 27ರಂದು ಕಲಬುರಗಿ (ಹಿಂದಿನ ಗುಲ್ಬರ್ಗಾ)ಯಲ್ಲಿ ಸೂರುಲ್ ಇಸ್ಲಾಂರ ಮಗನಾಗಿ ಖಮರುಲ್ ಇಸ್ಲಾಂ ಜನಿಸಿದರು. ಕಲಬುರಗಿಯ ಪಿಡಿಎ ಕಾಲೇಜ್ ಆಫ್ ಇಂಜಿನಿಯರಿಂಗ್ ನಲ್ಲಿ ಮೆಕ್ಯಾನಿಕಲ್ ಎಂಜಿನಿಯರ್ ಪದವಿ ಮುಗಿಸಿದ ಖಮರುಲ್ ನಂತರ ರಾಜಕೀಯದತ್ತ ಮುಖ ಮಾಡಿದರು. id='are-slot-2' class='oiad oi-axt oiadv'>
ಕಾಲೇಜು ದಿನಗಳಲ್ಲೇ ರಾಜಕೀಯಾಸಕ್ತಿ
ಪಿಡಿಎ ಕಾಲೇಜಿನಲ್ಲಿದ್ದ ದಿನಗಳಲ್ಲೇ ವಿದ್ಯಾರ್ಥಿ ಸಂಘದ ಅಧ್ಯಕ್ಷರಾಗಿದ್ದರು ಖಮರುಲ್. ಮುಂದೆ 1978ರಲ್ಲಿ ಮೊದಲ ಬಾರಿಗೆ ಆಗಿನ ಗುಲ್ಬರ್ಗಾ ಕ್ಷೇತ್ರದಿಂದ ಕಣಕ್ಕಿಳಿದು ವಿಧಾನಸಭೆ ಪ್ರವೇಶಿಸಿದ್ದರು. ಹೀಗೆ ಆರಂಭವಾದ ಅವರ ರಾಜಕೀಯ ಜೀವನ ಸಾವಿನವರೆಗೂ ಮುಂದುವರಿದಿತ್ತು.

ಪಕ್ಷ ಬದಲಾದರೂ ಗೆಲುವಿಗಿಲ್ಲ ಅಡ್ಡಿ
1978ರಲ್ಲೇ ಆಗಿನ ಗುಲ್ಬರ್ಗಾ ಕ್ಷೇತ್ರದಲ್ಲಿ ಖಮರುಲ್ ಇಸ್ಲಾಂ ಸ್ವತಂತ್ರ ಅಭ್ಯರ್ಥಿಯಾಗಿ ನಿಂತು ಗೆಲುವು ಸಾಧಿಸಿದ್ದರು. ಮುಂದೆ 1983 ಮತ್ತು 1985ರಲ್ಲಿ ಜನತಾ ಪಕ್ಷದಿಂದ ಕಣಕ್ಕಿಳಿದಿದ್ದ ಎಸ್.ಕೆ ಕಾಂತಾ ವಿರುದ್ಧ ಸೋಲು ಕಂಡಿದ್ದರು. ಮುಂದೆ 1989ರಲ್ಲಿ ಖಮರುಲ್ ಇಸ್ಲಾಂ ಮುಸ್ಲಿಂ ಲೀಗ್ ನಿಂದ ಕಣಕ್ಕಿಳಿದು ಎಸ್.ಕೆ ಕಾಂತಾರನ್ನು ಸೋಲಿಸಿ ಮತ್ತೆ ವಿಧಾನಸಭೆ ಪ್ರವೇಶಿಸಿದ್ದರು.

199ರಲ್ಲಿ ಸಚಿವ ಖಮರುಲ್ ಇಸ್ಲಾಂ
ಮುಂದೆ 1994ರಲ್ಲಿ ಇಂಡಿಯನ್ ನ್ಯಾಷನಲ್ ಲೀಗ್, 1999ರಲ್ಲಿ ಕಾಂಗ್ರೆಸ್ ನಿಂದ ಸ್ಪರ್ಧಿಸಿ ಖಮರುಲ್ ಶಾಸಕರಾದರು. ಇದೇ ಅವಧಿಯಲ್ಲಿ ಅವರು ಎಸ್.ಎಂ ಕೃಷ್ಣಾ ಸಂಪುಟದಲ್ಲಿ ವಸತಿ ಮತ್ತು ಕಾರ್ಮಿಕ ಸಚಿವರಾಗಿದ್ದರು.
ಆದರೆ ಸಚಿವರಾಗಿದ್ದ ಮುಂದಿನ ಚುನಾವಣೆಯಲ್ಲಿ ಅಂದರೆ 2004ರಲ್ಲಿ ಬಿಜೆಪಿಯ ಚಂದ್ರಶೇಖರ್ ಪಾಟೀಲ್ ರೇವೂರ ಎದುರು ಸೋಲು ಕಂಡರು.

ಕಲಬುರಗಿ ಉತ್ತರ ಕ್ಷೇತ್ರಕ್ಕೆ ಬಂದು ಸತತ 2 ಬಾರಿ ಗೆಲುವು
2008ರಲ್ಲಿ ಕ್ಷೇತ್ರ ಮರು ವಿಂಗಡಣೆಯಾದ ನಂತರ ಕಲಬುರಗಿ ಉತ್ತರ ಕ್ಷೇತ್ರ ಅಸ್ತಿತ್ವಕ್ಕೆ ಬಂತು. ಈ ವೇಳೆ ಕಲಬುರಗಿ ಉತ್ತರ ಕ್ಷೇತ್ರಕ್ಕೆ ಬಂದ ಖಮರುಲ್ ಇಸ್ಲಾಂ ಮತ್ತೆ ವಿಧಾನಸಭೆ ಪ್ರವೇಶಿಸಿದರು. 2013ರಲ್ಲೂ ಖಮರುಲ್ ಇಸ್ಲಾಂ ಮತ್ತೆ ಜಯಶಾಲಿಯಾಗುವುದರೊಂದಿಗೆ ಆರನೇ ಬಾರಿಗೆ ವಿಧಾನಸಭೆ ಪ್ರವೇಶಿಸಿದ್ದರು.
2013ರಿಂದ 2016ರವರೆಗೆ ಅವರು ಸಿದ್ದರಾಮಯ್ಯ ಸಂಪುಟದಲ್ಲಿ ಪೌರಾಡಳಿತ ಖಾತೆ ಸಚಿವರಾಗಿಯೂ ಸೇವೆ ಸಲ್ಲಿಸಿದ್ದರು. 2016ರಲ್ಲಿ ಸಚಿವ ಸಂಪುಟ ಪುನಾರಚನೆ ಮಾಡಿದಾಗ ಅವರನ್ನು ಸಂಪುಟದಿಂದ ಬಿಡಲಾಯಿತು.

ಕೇರಳ ಉಸ್ತುವಾರಿ, ಒಮ್ಮೆ ಲೋಕಸಭೆ ಸದಸ್ಯ
ಖಮರುಲ್ ಇಸ್ಲಾಂ 1996-1998ರವರೆಗೆ ಗುಲ್ಬರ್ಗಾ ಕ್ಷೇತ್ರದಿಂದ ಲೋಕಸಭೆಗೂ ಗೆದ್ದಿದ್ದರು. ಕೇರಳ ಕಾಂಗ್ರೆಸ್ ನ ಉಸ್ತುವಾರಿಯಾಗಿಯೂ ಅವರು ಕಾರ್ಯನಿರ್ವಹಿಸಿದ್ದರು.
ಖಮರುಲ್ ಇಸ್ಲಾಂ ಅವರಿಗೆ ಕ್ರಿಕೆಟ್ ಮತ್ತು ಟೇಬಲ್ ಟೆನ್ನಿಸ್ ಎಂದರೆ ಪಂಚ ಪ್ರಾಣವಾಗಿತ್ತು. ತಮ್ಮ ಬಿಡುವಿನ ಅವಧಿಯಲ್ಲಿ ಅವರು ಈ ಆಟಗಳನ್ನು ಆಡುತ್ತಿದ್ದರು.
ದೇಶದಾದ್ಯಂತ ಕಾರ್ಯನಿರ್ವಹಿಸುವ ಹಲವು ಸಂಘ ಸಂಸ್ಥೆಗಳಲ್ಲಿ ಖಮರುಲ್ ಇಸ್ಲಾಂ ಸೇವೆ ಸಲ್ಲಿಸಿದ್ದಾರೆ.
ಖಮರುಲ್ ಇಸ್ಲಾಂ ಅವರ ಅಂತ್ಯಕ್ರಿಯೆ ನಾಳೆ ಕಲಬುರಗಿಯಲ್ಲಿ ನಡೆಯಲಿದೆ.












Click it and Unblock the Notifications