ಕಾವೇರಿ ದಡದಲ್ಲಿ ಪುಷ್ಕರ ಸಂಭ್ರಮ, ತೀರ್ಥ ಸ್ನಾನ ಮಾಡಿದ ಭಕ್ತರು

Posted By: ಬಿಎಂ ಲವಕುಮಾರ್
Subscribe to Oneindia Kannada

ಮೈಸೂರು, ಸೆಪ್ಟೆಂಬರ್ 13: 12 ವರ್ಷಗಳಿಗೊಮ್ಮೆ ನಡೆಯುವ ಕಾವೇರಿ ಪುಷ್ಕರ ಸಂಭ್ರಮದ ಹಿನ್ನೆಲೆಯಲ್ಲಿ ಸಾವಿರಾರು ಭಕ್ತರು ಮಂಗಳವಾರ ಕಾವೇರಿ ನದಿಯಲ್ಲಿ ಸ್ನಾನ ಮಾಡಿ ಪಾವನರಾದರು.

ಕಾವೇರಿಯ ಉಗಮಸ್ಥಾನವಾದ ತಲಕಾವೇರಿಯ ಭಾಗಮಂಡಲದ ತ್ರಿವೇಣಿ ಸಂಗಮ, ಶ್ರೀರಂಗಪಟ್ಟಣ, ಹಾಸನದ ರಾಮನಾಥಪುರದಲ್ಲಿ ಸಾವಿರಾರು ಮಂದಿ ತೀರ್ಥ ಸ್ನಾನ ಮಾಡಿದ್ದಾರೆ.

ಶ್ರೀರಂಗಪಟ್ಟಣ: ಕಾವೇರಿ ನದಿ ಪುಷ್ಕರ ಪುಣ್ಯ ಸ್ನಾನ ಆರಂಭ

ಸ್ಥಳೀಯರಿಗಿಂತ ದೂರದ ಆಂಧ್ರ ಪ್ರದೇಶದಿಂದ ಆಗಮಿಸಿದ ಸಾವಿರಾರು ಮಂದಿ ಭಕ್ತಾದಿಗಳು ತೀರ್ಥಸ್ನಾನ ಮಾಡಿದ್ದು ವಿಶೇಷವಾಗಿತ್ತು. ಆಂಧ್ರದ ಸುದ್ದಿ ಮಾಧ್ಯಮಗಳಲ್ಲಿ ಈ ಕುರಿತು ಹೆಚ್ಚು ಪ್ರಚಾರವಾದುದರಿಂದ ಬಹುತೇಕ ತೆಲಂಗಾಣ ಮತ್ತು ಆಂಧ್ರಪ್ರದೇಶದ ಭಕ್ತಾದಿಗಳು ನೂರಾರು ವಾಹನಗಳಲ್ಲಿ ಭಾಗಮಂಡಲ ಮತ್ತು ತಲಕಾವೇರಿ ಕ್ಷೇತ್ರಗಳಿಗೆ ಆಗಮಿಸಿದ್ದು ಕಂಡು ಬಂತು.

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣ

ಶ್ರೀರಂಗಪಟ್ಟಣದ ಕಾವೇರಿ ನದಿಯಲ್ಲಿ ವೇದಬ್ರಹ್ಮ ಡಾ.ಭಾನುಪ್ರಕಾಶ್ ಶರ್ಮಾ ನೇತೃತ್ವದಲ್ಲಿ ಆಯೋಜಿಸಿದ್ದ ಕಾವೇರಿ ಪುಷ್ಕರ ಪೂಜಾ ಕಾರ್ಯಕ್ರಮದಲ್ಲಿ ಮೈಸೂರಿನ ಗಣಪತಿ ಸಚ್ಚಿದಾನಂದ ಸ್ವಾಮೀಜಿ, ಕೂಡಲಿ ಶಂಕರಾಚಾರ್ಯರು, ಅವಿಚ್ಚನ್ನ ಪರಂಪರೆ, ಪೂರಿ ಮತ್ತು ದ್ವಾರಕಾ ಶಿಷ್ಯರು, ಆನಂದ ಸರಸ್ವತಿ, ಗೋವಿಂದ ಭಟ್, ಗಣೇಶ ಧನಪಾಠಿಗಳು, ವಿಶ್ವ ಹಿಂದೂಪರಿಷತ್ ಅಧ್ಯಕ್ಷ ಗೋಪಾಲ್ ಜಿ ಸೇರಿದಂತೆ ಹಲವು ಸಾಧು-ಸಂತರು, ಗಣ್ಯರು ಕಾವೇರಿ ಮಾತೆಗೆ ಪೂಜೆ ಸಲ್ಲಿಸಿ ಬಾಗೀನ ಅರ್ಪಿಸಿ ಭಕ್ತರು ನದಿಯಲ್ಲಿ ಸ್ನಾನ ಮಾಡಲು ಚಾಲನೆ ನೀಡಿದರು.

ಶ್ರೀ ರಂಗನಾಥಸ್ವಾಮಿ ದೇವಾಲಯದ ಪಕ್ಕದ ಸ್ನಾನಘಟ್ಟದಲ್ಲಿ ನಡೆದ ನಡೆದ ಪುಷ್ಕರ ಸಂಭ್ರಮದಲ್ಲಿ ಸುಮಾರು 50 ಸಾವಿರಕ್ಕೂ ಹೆಚ್ಚು ಭಕ್ತರು ಪಾಲ್ಗೊಂಡಿದ್ದರು. ಸೆಪ್ಟೆಂಬರ್ 23ರವರೆಗೂ ಈ ಮಹಾಪುಷ್ಕರ ಮೇಳ ನಡೆಯಲಿದೆ.

ಕಾವೇರಿ ತೀರ್ಥ ರಥಕ್ಕೆ ಭವ್ಯ ಸ್ವಾಗತ

ಕಾವೇರಿ ತೀರ್ಥ ರಥಕ್ಕೆ ಭವ್ಯ ಸ್ವಾಗತ

ಕಾವೇರಿ ಪುಷ್ಕರದ ಅಂಗವಾಗಿ ಭಾಗಮಂಡಲದಿಂದ ಶ್ರೀರಂಗಪಟ್ಟಣಕ್ಕೆ ಆಗಮಿಸಿದ ಕಾವೇರಿ ತೀರ್ಥದ ರಥವನ್ನು ಡಾ. ಭಾನುಪ್ರಕಾಶ್ ಶರ್ಮಾ ವಿಶೇಷವಾಗಿ ಸ್ವಾಗತಿಸಿ ಬರಮಾಡಿಕೊಂಡರು.

ಬ್ರಹ್ಮಾಂಡ ಗುರೂಜಿ ಹಾಗೂ ಭಾಷ್ಯಂ ಸ್ವಾಮೀಜಿ ನೇತೃತ್ವದಲ್ಲಿ ಅಪಾರ ಸಂಖ್ಯೆಯ ಪುಷ್ಕರದ ಭಕ್ತರು ಹಾಗೂ ಉಸ್ತುವಾರಿ ಹೊತ್ತಿರುವ ನಿಯೋಜಕರ ತಂಡದ ಸದಸ್ಯರು ಕಳಸದಲ್ಲಿ ಕಾವೇರಿ ತೀರ್ಥವನ್ನು ತುಂಬಿ ತಲೆ ಮೇಲೆ ಆ ಕಳಸವನ್ನು ಹೊತ್ತು ರಥದ ಮೇಲೆ ಕುಳಿತಿದ್ದರು. ನಂತರ ಸ್ವಾಮೀಜಿಗಳು ಕುಳಿತ ರಥವನ್ನು ಭಾಗಮಂಡಲದಿಂದ ವಿಶೇಷ ಪೂಜೆಯೊಂದಿಗೆ ಮಂಗಳವಾದ್ಯದ ಮೂಲಕ ಶ್ರೀರಂಗಪಟ್ಟಣಕ್ಕೆ ಕರೆತರಲಾಯಿತು.

ಬಿಗಿ ಭದ್ರತೆ

ಬಿಗಿ ಭದ್ರತೆ

ಕಾವೇರಿ ಪುಷ್ಕರದಿಂದ ಶ್ರೀರಂಗಪಟ್ಟಣಕ್ಕೆ ಸಾವಿರಾರು ಭಕ್ತರು ಬರುವ ಹಿನ್ನೆಲೆಯಲ್ಲಿ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ ಸ್ಥಳ ಪರಿಶೀಲನೆ ನಡೆಸಿ ಮುನ್ನೆಚ್ಚರಿಕಾ ಕ್ರಮವಾಗಿ ಬಂದೋಬಸ್ತ್ ಮಾಡಿದ್ದರು.

ಶ್ರೀರಂಗಪಟ್ಟಣದ ಕಾವೇರಿ ಪುಷ್ಕರದ ಎಲ್ಲಾ ಸ್ನಾನಘಟ್ಟಗಳಿಗೆ 100ಕ್ಕೂ ಹೆಚ್ಚು ಪೊಲೀಸರನ್ನು ನಿಯೋಜನೆ ಮಾಡಿ, ನುರಿತ ಈಜು ಪಟುಗಳು, ನದಿ ನೀರಿನಲ್ಲಿ ಉಂಟಾಗುವ ಅನಾಹುತವನ್ನು ತಡೆಯಲು ಬೋಟಿಂಗ್ ವ್ಯವಸ್ಥೆ ಕಲ್ಪಿಸಲಾಗಿತ್ತು.

ರಾಮನಾಥಪುರದಲ್ಲೂ ಷುಷ್ಕರ

ರಾಮನಾಥಪುರದಲ್ಲೂ ಷುಷ್ಕರ

ಹಾಸನದ ರಾಮನಾಥಪುರದ ಕಾವೇರಿ ನದಿ ದಡದಲ್ಲಿಯೂ ಸಂಕಲ್ಪ ಸಹಿತ ಸ್ನಾನ, ಜಪ, ಪೂಜೆ, ಹೋಮ, ದಾನ, ತೀರ್ಥ ಶ್ರಾದ್ಧಗಳು, ಸ್ವಯಂ ಪಾಕದಾನ, ದಶದಾನ, ಗೋದಾನಗಳು, ಮಹಾ ಪುಣ್ಯ ಕಾವೇರಿ ನದಿಗೆ ಪಂಚ ಆರತಿಯನ್ನು ನಡೆಸಲಾಯಿತು.

ಅರೇಮಾದನಹಳ್ಳಿ ವಿಶ್ವಬ್ರಾಹ್ಮಣ ಮಹಾಸಂಸ್ಥಾನ ಮಠದ ಜಗದ್ಗುರು ಶ್ರೀ ಶಿವಸುಜ್ಞಾನ ತೀರ್ಥ ಸ್ವಾಮೀಜಿ ಮಾತನಾಡಿ ತುಲಾ ರಾಶಿಗೆ ಗುರುಗ್ರಹ ಪ್ರವೇಶಿಸುವ ಇಂದಿನ ಮಹಾ ಪರ್ವ ಕಾಲದ ಶ್ರೇಷ್ಠ ದಿನಗಳಲ್ಲಿ ಪವಿತ್ರ ಕಾವೇರಿ ನದಿಯಲ್ಲಿ ಮಿಂದರೆ ಸಂಕಷ್ಟಗಳು ಪರಿಹಾರವಾಗಿ ಸಕಲ ಇಷ್ಟಾರ್ಥಗಳು ಸಿದ್ದಿಸಲಿವೆ ಎಂದು ಹೇಳಿದರು.

ಕಾವೇರಿಯಲ್ಲಿ ಮಿಂದೆದ್ದ ರಾಮ

ಕಾವೇರಿಯಲ್ಲಿ ಮಿಂದೆದ್ದ ರಾಮ

ರಾವಣನನ್ನು ಸಂಹಾರ ಮಾಡಿದ ಶ್ರೀರಾಮನು ಬ್ರಹ್ಮ ಹತ್ಯಾ ದೋಷ ನಿವಾರಣೆಗಾಗಿ ಕಾವೇರಿಯಲ್ಲಿ ಸ್ನಾನ ಮಾಡಿದನೆಂಬ ಉಲ್ಲೇಖವಿದೆ. ಇದಕ್ಕೂ ಮುನ್ನ ಅಗ್ನಿದೇವ ರಾಮನಾಥಪುರದಲ್ಲಿ ಶಿವನನ್ನು ಪ್ರತಿಷ್ಠಾಪಿಸಿ ಅನುಷ್ಥಾನಗೊಳಿಸಿದ್ದು, ಕೃತಯುಗದಲ್ಲೇ ಶಿವನ ಪ್ರತಿಷ್ಠಾಪನೆಯಾಗಿರುವುದರಿಂದ ಅಲ್ಲಿಯ ಶಿವನಿಗೆ ಚತುರ್ಯುಗ ರಾಮೇಶ್ವರ ಎಂದು ಕರೆಯಲ್ಪಟಿದೆ ಎಂದು ಹೇಳಿದರು.

ಬೆಂಗಳೂರು ಶ್ರೀ ಗುರುಪ್ರಕಾಶ್ ಗುರೂಜಿ. ಕಾವೇರಿ ನದಿ ಸ್ವಚ್ಛತಾ ಅಂದೋಲನಾ ಸಮಿತಿ ಜಿಲ್ಲಾ ಮಟ್ಟದ ಗೌರವ ಸಲಹೆಗಾರ ಆರ್.ಎಸ್, ನರಸಿಂಹಮೂರ್ತಿ, ಯೋಗಗುರು ಸುಬ್ರಹ್ಮಣ್ಯಚಾರ್, ಲಕ್ಷಣೇಶ್ವರಸ್ವಾಮಿ ದೇವಸ್ಥಾನದ ಸದಸ್ಯ ಮಲ್ಲಿರಾಜಪಟ್ಟಣ ವೆಂಕಟೇಶ್, ಜಿಲ್ಲಾ ಕಾವೇರಿ ನದಿ ಸ್ವಚ್ಚತಾ ಅಂದೋಲನಾ ಸಮಿತಿ ಜಿಲ್ಲಾಧ್ಯಕ್ಷ ಎಂ.ಎನ್. ಕುಮಾರಸ್ವಾಮಿ ಇನ್ನಿತರರು ಪೂಜಾ ಕೈಂಕರ್ಯದಲ್ಲಿ ಪಾಲ್ಗೊಂಡಿದ್ದರು.

ಕನ್ನಡ ಮ್ಯಾಟ್ರಿಮನಿಯಲ್ಲಿ ಸೂಕ್ತ ಸಂಗಾತಿಯನ್ನು ಆಯ್ಕೆ ಮಾಡಿ- ನೋಂದಣಿ ಉಚಿತ!

English summary
Lakhs of devotees takes holy dip in the Cauveri river on Tuesday on the occasion of Cauvery Pushkar Mela. Cauvery Pushkar Mela is celebrating after 12 years in Bhagamandala, Srirangapatna and Hassan’s Ramanathapura.

Oneindia ಬ್ರೇಕಿಂಗ್ ನ್ಯೂಸ್,
ತಾಜಾ ಸುದ್ದಿ ತಕ್ಷಣವೇ ಪಡೆಯಿರಿ