ಅಪ್ಪು ಗಂಧದ ಗುಡಿ ಕನಸಿನ ಸೀಕ್ರೇಟ್ ಬಿಚ್ಚಿಟ್ಟ ನಿರ್ದೇಶಕ ಅಮೋಘವರ್ಷ
ಬೆಂಗಳೂರು, ಡಿ. 07: ನಟ ಪುನೀತ್ ರಾಜ್ ಕುಮಾರ್ ಅಕಾಲಿಕ ನಿಧನದ ಬಳಿಕ ಅವರ ಕನಸಿನ ಸಿನಿಮಾ "ಗಂಧದ ಗುಡಿ" ಟೀಸರ್ ಬಿಡುಗಡೆ ಆಗಿದೆ. ದೇಶದಲ್ಲಿ ದೊಡ್ಡ ಮಟ್ಟದಲ್ಲಿ ಟ್ರೆಂಡ್ ಅಗಿದೆ. " ಕರ್ನಾಟಕದ ಕಾಡು ಉಳಿಸಿ" ಎಂಬ ಡಾ. ರಾಜ್ ಸಂದೇಶದ ಮರುಜನ್ಮವೇ ಹೊಸ ಗಂಧದ ಗುಡಿಯ ಕಥೆಯ ಸೀಕ್ರೇಟ್. ನಾನು ಪವರ್ ಸ್ಟಾರ್ ಅಲ್ಲ, ಸಾಮಾನ್ಯ ವ್ಯಕ್ತಿಯಾಗಿ ಕಾಣಿಸಿಕೊಳ್ತೀನಿ ಎಂದು 'ಪವರ್ ಸ್ಟಾರ್' ಬದಿಗೆ ಸರಿಸಿ ದಿವಂಗತ ನಟ ಪುನೀತ್ ನಟಿಸಿರುವ 'ಗಂಧದ ಗುಡಿ' ಕಥೆ ಹುಟ್ಟಿ ಬೆಳೆದಿದ್ದು, ನಿರ್ಮಾಣ, ಪುನೀತ್ ನಟನೆ ಕುರಿತು ವೈಲ್ಡ್ ಕರ್ನಾಟಕ ಖ್ಯಾತಿ ನಿರ್ದೇಶಕ ಅಮೋಘವರ್ಷ 'ಒನ್ ಇಂಡಿಯಾ ಕನ್ನಡ'ಗೆ ವಿಶೇಷ ಸಂದರ್ಶನ ನೀಡಿದ್ದಾರೆ. ಪುನೀತ್ ಗಂಧದ ಗುಡಿಯ ಸೀಕ್ರೇಟ್ ಸಂಗತಿ ಅಮೋಘ ವರ್ಷ ಒನ್ ಇಂಡಿಯಾ ಕನ್ನಡ ಜತೆ ಹಂಚಿಕೊಂಡಿದ್ದಾರೆ.
ಒನ್ ಇಂಡಿಯಾ ಕನ್ನಡ : ಗಂಧದ ಗುಡಿ ಸಿನಿಮಾ ಮಾಡಬೇಕು ಎಂಬ ಆಸೆ ಹುಟ್ಟಿದ್ದು ಹೇಗೆ ?
ಅಮೋಘವರ್ಷ : ನಾನು ಮೊದಲಿನಿಂದಲೂ ಅಣ್ರಾವ್ರ (ಡಾ. ರಾಜ್ ಕುಮಾರ್ ) ಹುಚ್ಚು ಅಭಿಮಾನಿ. ಅವರು ಕಾಡು ಉಳಿಸಿ ಎಂಬ ಸಂದೇಶ ಸಾರುವ ಗಂಧದ ಗುಡಿ ಸಿನಿಮಾ ಬಿಡುಗಡೆಯಾಗಿ ಐವತ್ತು ವರ್ಷ. ಅದರಲ್ಲಿ ಸಮಾಜಕ್ಕೆ ಕಾಡು ಉಳಿಸುವ ಬಗ್ಗೆ ದೊಡ್ಡ ಸಂದೇಶ ಸಾರಿದ್ದರು. ಆ ಸಿನಿಮಾಗೆ ಐವತ್ತು ವರ್ಷ ತುಂಬಿದ ಸಂಭ್ರಮ ಬೇರೆ. ವೈಲ್ಡ್ ಕರ್ನಾಟಕ ಸಿನಿಮಾ ಬಿಡುಗಡೆ ಬಳಿಕ ಸಹಜವಾಗಿಯೇ ಪುನೀತ್ ರಾಜ್ ಕುಮಾರ್ ಒಡನಾಟ ಸಿಕ್ಕಿತ್ತು. ಸಹಜವಾಗಿ ಮಾತಿನಿಂದ ಆರಂಭವಾದ ಚರ್ಚೆ ಗಂಧದ ಗುಡಿಗೆ ನಾಂದಿ ಹಾಡಿತು. ಗಂಧದ ಗುಡಿ ಬಗ್ಗೆ ಪುನೀತ್ ಗೆ ಮೊದಲಿನಿಂದಲೂ ಒಂದು ಕನಸು ಇತ್ತು ಅದರ ಸಕಾರವೇ ಪುನೀತ್ ಗಂಧದ ಗುಡಿ.
ಒನ್ ಇಂಡಿಯಾ ಕನ್ನಡ : ಅಪ್ಪು ಕಥೆ ಒಪ್ಪಿದರಾ ? ಗಂಧದ ಗುಡಿಯ ವಿಶೇಷತೆಗಳೇನು ?
ಅಮೋಘವರ್ಷ: ನಾನು ಗಂಧದ ಗುಡಿಯ ಬಗ್ಗೆ ಕಥೆ ಬರೆದು ತೋರಿಸಲಿಲ್ಲ. ಸಾಮಾನ್ಯ ಭೇಟಿಯಲ್ಲಿ ಚರ್ಚೆಯಾಗಿ ಹೊರ ಬಂದ ವಿಷಯ. ಹೀಗಾಗಿ ಅದರ ಮುತುವರ್ಜಿ ವಹಿಸಿದ್ದು ನಟ ಪುನೀತ್ ರಾಜ್ ಕುಮಾರ್. ಕಳೆದ ಒಂದು ವರ್ಷದಿಂದ ಈ ಸಿನಿಮಾ ಶೂಟಿಂಗ್ ಮಾಡಲಾಗಿದೆ. ಕರ್ನಾಟಕದ ವನ್ಯಸಿರಿ, ಕಾಡಿನ ಸಂಪತ್ತು ಬಗ್ಗೆ ಚಿತ್ರ ನಿರ್ಮಾಣ ಮಾಡಲಾಗಿದೆ. ಅಪ್ಪು ಸ್ವತಃ ಮುಂದಾಳತ್ವ ವಹಿಸಿದ್ದರು. ಕರ್ನಾಟಕದ ಪರಿಸರ, ವನ್ಯ ಸಂಪತ್ತು, ಕಾಡಿನ ಮಹತ್ವ ಕುರಿತು ಗಂಧದ ಗುಡಿಯನ್ನು ಮುಂದಿನ ಹತ್ತು ತಲೆಮಾರಿಗೆ ಅರಿವು ಮೂಡಿಸುವ ಉದ್ದೇಶದಿಂದ ಈ ಸಿನಿಮಾ ಮಾಡಲಾಗಿದೆ. ನಾವು ಅನ್ಯ ರಾಷ್ಟ್ರಗಳ ಸಿನಿಮಾ ನೋಡುತ್ತೇವೆ. ನಮ್ಮ ಕನ್ನಡ ನಾಡಿನ ಹೆಮ್ಮೆ, ವನ್ಯ ಸಂಪತ್ತು, ಕಾಡಿನ ಸಿರಿಯನ್ನು ಜಗತ್ತಿಗೆ ತೋರಿಸಬೇಕೆಂಬ ಆಸೆ. ಅದನ್ನು ಗಂಧದ ಗುಡಿ ಸಕಾರಗೊಳಿಸಲಿದೆ.

ಒನ್ ಇಂಡಿಯಾ ಕನ್ನಡ : ಅಪ್ಪು ಬಗ್ಗೆ ನೀವು ಹೇಳುವುದಾರೆ ಅವರ ಜತೆಗಿನ ಮರೆಯಲಾರದ ಘಳಿಗೆ ?
ಅಮೋಘವರ್ಷ: ಈ ಕಾಲದಲ್ಲೂ ಅಪ್ಪು ಅಂತಹ ವ್ಯಕ್ತಿ ಇದ್ದಾರಾ ಅಂತ ಅನ್ನಿಸಿಬಿಡುತ್ತದೆ. ಅವರ ಜತೆಗೆ ಒಂದು ವರ್ಷದಿಂದ ದಿನ ಕಳೆದಿದ್ದೇನೆ. ಜತೆ ಕೂತು ಊಟ ಮಾಡಿದ್ದೇನೆ. ಸಾಕಷ್ಟು ಚರ್ಚೆ ಮಾಡಿದ್ದೇವೆ. ಎಲ್ಲವೂ ಕಣ್ಣು ಮುಂದೆ ಇದೆ. ಆದರೆ ಅವರು ಈ ಸಿನಿಮಾದಲ್ಲಿ ಮೇಕಪ್ ಮಾಡಿಸಿಕೊಳ್ಳಲಿಲ್ಲ. ಕೇಳಿದ್ದಕ್ಕೆ, ಅಮೋಘವರ್ಷ ಅವರೇ, ನಾನು ಸಾಮಾನ್ಯ ವ್ಯಕ್ತಿಯಾಗಿ ಈ ಸಿನಿಮಾದಲ್ಲಿ ಕಾಣಿಸಿಕೊಳ್ಳುತ್ತೇನೆ. ಒಬ್ಬ ಪುನೀತ್ ಆಗಿಯೇ ಇರುತ್ತೇನೆ. ನಾನು ಪವರ್ ಸ್ಟಾರ್ ಆಗಿ ನಟನೆ ಮಾಡುತ್ತಿಲ್ಲ. ಈ ಸಿನಿಮಾ ಹಳ್ಳಿ ಜನರು ಕೂಡ ನೋಡಬೇಕು" ಎಂದಿದ್ದರು. ಹೀಗಾಗಿ ಅವರ ಆಸೆಯಂತೆ ಪವರ್ ಸ್ಟಾರ್ ಟೈಟಲ್ ನ್ನು ತೆಗೆದು ಹಾಕಲಾಗಿದೆ. ಅವರ ಹೆಸರಿನ ಮುಂದೆ ಶ್ರೀ ಪುನೀತ್ ರಾಜ್ ಕುಮಾರ್ ಎಂದೇ ಉಲ್ಲೇಖಿಸಲಾಗಿದೆ. ಒಬ್ಬ ನಟರಾಗಿ ಪುನೀತ್ ರಾಜ್ ಕುಮಾರ್ ನಟಿಸಿಲ್ಲ. ಒಬ್ಬ ಸಾಮಾನ್ಯ ವ್ಯಕ್ತಿಯಾಗಿ ನಟಿಸಿದ್ದಾರೆ. ಇನ್ನು ಅವರ ನಟನೆ, ಕಥೆಯ ಬಗ್ಗೆ ಈಗ ಹೇಳುವುದು ಸೂಕ್ತವಲ್ಲ ! ಪುನೀತ್ ರಿಯಲ್ ಕಾಡಿನ ಜರ್ನಿ ಅಂತ ಅಂದ್ರೆ ತಪ್ಪಿಲ್ಲ.

ಒನ್ ಇಂಡಿಯಾ ಕನ್ನಡ: ಸಿನಿಮಾ ಗುಣಮಟ್ಟ, ಬಿಡುಗಡೆ ಬಗ್ಗೆ ಏನು ಹೇಳಲಿಕ್ಕೆ ಬಯಸುತ್ತೀರಿ ?
ಅಮೋಘ ವರ್ಷ : ವೈಲ್ಡ್ ಕರ್ನಾಟಕ ಸಿನಿಮಾ ನೀವು ನೋಡಿರಬಹುದು. ಅದರ ಹತ್ತು ಪಟ್ಟು ತಂತ್ರಜ್ಞಾನ ಗಂಧದ ಗುಡಿಗೆ ಬಳಿಸಿದ್ದೇವೆ. ಒಂದು ಕ್ಷಣ ಕೂಡ ಶೂಟಿಂಗ್ ನಲ್ಲಿ ಕಾಂಪ್ರಮೈಸ್ ಮಾಡಿಕೊಂಡಿಲ್ಲ. ಅಂತಾರಾಷ್ಟ್ರೀಯ ಮಟ್ಟದ ಎಲ್ಲಾ ತಂತ್ರಜ್ಞಾನ ಈ ಸಿನಿಮಾಗೆ ಬಳಿಸಿಕೊಳ್ಳಲಾಗಿದೆ. ಪುನೀತ್ ಅವರ ಕನಸಿನಂತೆ ಸಿನಿಮಾಗೆ ಎಳ್ಳಷ್ಟು ಧಕ್ಕೆ ಬರದಂತೆ ನಿರ್ಮಾಣ ಮಾಡಲಾಗುತ್ತಿದೆ. ಸ್ವಲ್ಪ ತಡವಾದರೂ ಪರವಾಗಿಲ್ಲ, ಆದರೆ ಅವರ ಮೂಲ ಆಶಯಕ್ಕೆ ಧಕ್ಕೆ ತರಬಾರದು ಎಂಬ ಕಾರಣಕ್ಕೆ ಗುಣಮಟ್ಟದಲ್ಲಿ ರಾಜಿಯಾಗಿಲ್ಲ. ಅಂದುಕೊಂಡಂತೆ ದಲ್ಲಿ ವಿಶ್ವಮಟ್ಟದಲ್ಲಿ ಮುಂದಿನ ವರ್ಷ ಸಿನಿಮಾ ಬಿಡುಗಡೆಯಾಗಲಿದೆ. ಖಚಿತ ದಿನಾಂಕ ನಿಗದಿ ಮಾಡಿಲ್ಲ. ಆದರೆ, ಥಿಯೇಟರ್ ಗಳಲ್ಲಿ ಜನ ಸಾಮಾನ್ಯರು ನೋಡಬೇಕು ಎಂಬ ಪುನೀತ್ ಆಸೆ ಈಡೇರಿಸುವ ಸಲುವಾಗಿ ಸಿನಿಮಾ ಥಿಯೇಟರ್ ಗಳಲ್ಲಿಯೇ ಬಿಡುಗಡೆ ಮಾಡಲಾಗುತ್ತದೆ. ನಿಜವಾದ ಪುನೀತ್ ಅವರನ್ನು ಅವರ ಅಭಿಮಾನಿ ಬಳಕ ಗಂಧದ ಗುಡಿಯಲ್ಲಿ ನೋಡಲಿದೆ ಎಂಬ ಆಶಯ ಅಮೋಘವರ್ಷ ವ್ಯಕ್ತಪಡಿಸಿದರು.

ಅಮೋಘವರ್ಷ: ಗಂಧದ ಗುಡಿಯ ಬಗ್ಗೆ ನೀವು ಕೊನೆಯದಾಗಿ ಹೇಳುವ ಮಾತು?
ಅಮೋಘವರ್ಷ: ಡಾ. ರಾಜ್ ಕುಮಾರ್ ಈ ರಾಜ್ಯಕ್ಕೆ ದೊಡ್ಡ ಕೊಡುಗೆ ನೀಡಿದ್ದಾರೆ. ಅದೇ ರೀತಿ ಪುನೀತ್ ಕೂಡ. ನಿಜವಾಗಿಯೂ ಪುನೀತ್ ಏನು ಎಂಬುದು ಅವರ ನಿಧನದ ಬಳಿಕವೇ ಸಮಾಜಕ್ಕೆ ಗೊತ್ತಾಗಿದ್ದು. ರಾಜ್ಯಕ್ಕೆ ಗಂಧದ ಗುಡಿ ಕೊಡುವ ಕನಸು ಅಪ್ಪು ಅವರದ್ದಾಗಿತ್ತು. ಅವರ ಕನಸಿಗೆ ಧಕ್ಕೆ ತರದಂತೆ ಸಿನಿಮಾ ಮಾಡುವ ಜವಾಭ್ಧಾರಿ ನನ್ನದು. ಹಾಗೆಯೇ ಅಭಿಮಾನಿಗಳು ತಾಳ್ಮೆಯಿಂದ ಇರಬೇಕು. ಒಳ್ಳೆಯ ಸ್ಟ್ರಕ್ಚರ್ ಕೊಡಲಾಗುತ್ತದೆ. ಈ ಸಿನಿಮಾ ಬಗ್ಗೆ ಕನ್ನಡಿಗರು ಹೆಮ್ಮೆ ಪಡುವುದರಲ್ಲಿ ಅನುಮಾನವೇ ಇಲ್ಲ. ಡಾ. ರಾಜ್ ನಟನೆಯ ಗಂಧದ ಗುಡಿಗೆ ಐವತ್ತು ವರ್ಷ ತುಂಬಿದೆ. ಹೀಗಾಗಿ ಅದನ್ನು ಸ್ಮರಿಸುವ ದೊಡ್ಡ ಕಾಣಿಕೆ ಪುನೀತ್ ಅವರ ಗಂಧದ ಗುಡಿ. ಇದರ ನಿರ್ಮಾಣ ವೆಚ್ಚದ ಬಗ್ಗೆ ಎಲ್ಲೂ ಡಿಸ್ ಕ್ಲೋಸ್ ಮಾಡಿಲ್ಲ. ಆ ಸಂದರ್ಭ ಬಂದಾಗ ಹೇಳುತ್ತೇನೆ. ಅಪ್ಪು ಅವರು ಜತೆಗಲ್ಲ ಎಂಬ ನೋವು ನನಗೆ ಪ್ರತಿ ಕ್ಷಣ ಕಾಡುತ್ತಿದೆ.












Click it and Unblock the Notifications