ತಮ್ಮ ಬಂಧನ ಅಕ್ರಮ, ಹೈಕೋರ್ಟ್‌ಗೆ ಪುನೀತ್ ಕೆರೆಹಳ್ಳಿ
ಬೆಂಗಳೂರು, ಆಗಸ್ಟ್ 24: ಸಿಸಿಬಿ ಪೊಲೀಸರು ಗೂಂಡಾ ಕಾಯಿದೆಯಡಿ ತಮ್ಮನ್ನು ಬಂಧಿಸಿರುವುದು ಅಕ್ರಮವೆಂದು ಆರೋಪಿಸಿ ರಾಷ್ಟ್ರ ರಕ್ಷಣಾ ಪಡೆ ಸಂಘಟನೆಯ ಮುಖಂಡ ಪುನೀತ್ ಕುಮಾರ್ ಅಲಿಯಾಸ್ ಪುನೀತ್ ಕೆರೆಹಳ್ಳಿ ಕರ್ನಾಟಕ ಹೈಕೋರ್ಟ್ ಮೊರೆ ಹೋಗಿದ್ದಾರೆ. ಈ ಸಂಬಂಧ ಹೈಕೋರ್ಟ್ ನೋಟಿಸ್ ಜಾರಿ ಮಾಡಿ ಮುಂದಿನ ವಿಚಾರಣೆ ವೇಳೆ ಮಧ್ಯಂತರ ಆದೇಶದ ಬಗ್ಗೆ ಪರಿಶೀಲನೆ ನಡೆಸುವಾಗಿ ಹೇಳಿದೆ.
ಪುನೀತ್ ಕೆರೆಹಳ್ಳಿ ಸಲ್ಲಿಸಿರುವ ಹೇಬಿಯಸ್ ಕಾರ್ಪಸ್ ಅರ್ಜಿ ನ್ಯಾಯಮೂರ್ತಿ ಪಿ. ಎಸ್. ದಿನೇಶ್ ಕುಮಾರ್ ಮತ್ತು ನ್ಯಾ. ಟಿ. ಜಿ. ಶಿವಶಂಕರೇಗೌಡ ಅವರಿದ್ದ ವಿಭಾಗೀಯಪೀಠದ ಮುಂದೆ ವಿಚಾರಣೆಗೆ ಬಂದಿತ್ತು. ಕೆಲ ಕಾಲ ವಾದ ಆಲಿಸಿದ ಬಳಿಕ ನ್ಯಾಯಪೀಠ, ಸರಕಾರ, ನಗರ ಪೊಲೀಸ್ ಆಯುಕ್ತರು ಸೇರಿ ಎಲ್ಲ ಪ್ರತಿವಾದಿಗಳಿಗೆ ನೋಟಿಸ್ ಜಾರಿಗೊಳಿಸಿ ಆಕ್ಷೇಪಣೆ ಸಲ್ಲಿಸಲು ಸೂಚನೆ ನೀಡಿ ವಿಚಾರಣೆ ಮುಂದೂಡಿತು.

ಅರ್ಜಿದಾರರ ಪರ ವಾದಿಸಿದ ವಕೀಲರು, ಅರ್ಜಿದಾರರು ಸಮಾಜ ಸೇವೆಯಲ್ಲಿ ತೊಡಗಿದ್ದುಅವರು ರಾಷ್ಟ್ರ ರಕ್ಷಣಾ ಪಡೆಯನ್ನು ಕಟ್ಟಿ ದೇಶಕ್ಕಾಗಿ ಹೋರಾಡುವ ಸಮಾನ ಮನಸ್ಕರನ್ನು ಒಗ್ಗೂಡಿಸುವ ಕೆಲಸ ಮಾಡುತ್ತಿದ್ದಾರೆ. ಆದರೆ ಅವರ ವಿರುದ್ಧ ದುರುದ್ದೇಶ ಪೂರ್ವಕವಾಗಿ ಹಲವು ಪ್ರಕರಣಗಳನ್ನು ಹೂಡಿ ಇದೀಗ ರಾಜಕೀಯ ದ್ವೇಷದ ಕಾರಣಕ್ಕೆ ಅವರನ್ನು ಆ.11ರಂದು ಅಕ್ರಮವಾಗಿ ಬಂಧಿಸಲಾಗಿದೆ ಎಂದರು.
ನಗರ ಪೊಲೀಸ್ ಆಯುಕ್ತರು ಯಾವುದೇ ವಿವೇಚನೆ ಬಳಸದೆ ಏಕಾಏಕಿ ಗೂಂಡಾ ಕಾಯಿದೆಯಡಿ ಬಂಧನ ಆದೇಶ ಹೊರಡಿಸಿದ್ದಾರೆ. ಇದು ಏಕಪಕ್ಷೀಯ ನಡೆಯಾಗಿದೆ. ಅರ್ಜಿದಾರರು ನೀಡಿದ್ದ ಮನವಿಯನ್ನು ಪರಿಗಣಿಸಿಲ್ಲ. ಹಾಗಾಗಿ ಅವರನ್ನು ಬಂಧಿಸಲು ಹೊರಡಿಸಿರುವ ಆದೇಶ ಅಕ್ರಮವಾಗಿದ್ದು, ಅದನ್ನು ರದ್ದುಗೊಳಿಸಬೇಕು ಎಂದು ಕೋರಿದರು.
ಪ್ರಕರಣದ ಹಿನ್ನೆಲೆ?; ಮೂಲತಃ ಹಾಸನ ಜಿಲ್ಲೆಆಲೂರು ತಾಲೂಕಿನ ಕೆರೆಹಳ್ಳಿಯ ಪುನೀತ್ ಬೆಂಗಳೂರಿನ ಜೆ. ಪಿ. ನಗರದ 7ನೇ ಹಂತದಲ್ಲಿ ವಾಸವಾಗಿದ್ದ. ರಾಷ್ಟ್ರ ರಕ್ಷ ಣಾ ಪಡೆ ಎಂಬ ಅನಧಿಕೃತ ಸಂಘಟನೆ ಕಟ್ಟಿಕೊಂಡು ಜನರನ್ನು ಬೆದರಿಸುವ, ಸಮಾಜದ ಶಾಂತಿ ಕದಡುವ, ಗೋ ರಕ್ಷ ಣೆ ಹೆಸರಿನಲ್ಲಿವ್ಯಾಪಾರಿಗಳನ್ನು ಬೆದರಿಸುವ ಕಾರ್ಯದಲ್ಲಿತೊಡಗಿಸಿಕೊಂಡಿದ್ದ ಎಂದು ಆರೋಪಿಸಲಾಗಿದೆ.
ಅಪರಾಧ ಹಿನ್ನೆಲೆಯುಳ್ಳ ಪುನೀತ್ ಕೆರೆಹಳ್ಳಿ ವಿರುದ್ಧ ಬೆಂಗಳೂರಿನ ಚಾಮರಾಜಪೇಟೆ, ಎಲೆಕ್ಟ್ರಾನಿಕ್‌ಸಿಟಿ, ಡಿ. ಜೆ. ಹಳ್ಳಿ, ಬೇಗೂರು, ಕಗ್ಗಲೀಪುರ, ಹಲಸೂರು ಗೇಟ್, ಮಂಡ್ಯ ಜಿಲ್ಲೆಯ ಮಳವಳ್ಳಿ, ರಾಮನಗರ ಜಿಲ್ಲೆಯ ಸಾತನೂರು ಠಾಣೆ, ವಿಜಯನಗರ ಜಿಲ್ಲೆಯ ಹಂಪಿ ಟೂರಿಸಂ ಪೊಲೀಸ್ ಠಾಣೆಯಲ್ಲಿ ಕೊಲೆ, ಹಲ್ಲೆ, ಜೀವ ಬೆದರಿಕೆ, ಕರ್ತವ್ಯ ನಿರತ ಪೊಲೀಸರ ಮೇಲೆ ಹಲ್ಲೆ, ಜಾತಿ ನಿಂದನೆ, ದೊಂಬಿ ಸೇರಿದಂತೆ 10 ಪ್ರಕರಣ ದಾಖಲಾಗಿವೆ.
ಸಮಾಜದ ಸಾಮರಸ್ಯ ಕದಡಿದ ಆರೋಪ, ಸಮಾಜ ವಿರೋಧಿ ಕೃತ್ಯಗಳು, ಅಪರಾಧ ಚಟುವಟಿಕೆಗಳನ್ನು ಆಧರಿಸಿ ಪುನೀತ್ ಕೆರೆಹಳ್ಳಿ ವಿರುದ್ಧ ಗೂಂಡಾ ಕಾಯಿದೆಯಡಿ ಪ್ರಕರಣ ದಾಖಲಿಸಲಾಗಿದೆ. ಪೊಲೀಸರು ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ಕಳೆದೊಂದು ತಿಂಗಳಿಂದ ಸಿದ್ಧತೆ ನಡೆಸಿದ್ದರು. ಈ ಸಂಬಂಧ ಚಿಕ್ಕಪೇಟೆ ಉಪ ವಿಭಾಗದ ಎಸಿಪಿಯು ಪುನೀತ್‌ಗೆ ತಿಳಿವಳಿಕೆಯ ನೋಟಿಸ್ ಜಾರಿ ಮಾಡಿದ್ದರು.
ಪುನೀತ್ ಕೆರೆಹಳ್ಳಿ ವಿರುದ್ಧ ರೌಡಿಪಟ್ಟಿ ತೆರೆಯಲು ಅನುಮತಿ ಕೋರಿ ಚಾಮರಾಜಪೇಟೆ ಠಾಣೆ ಇನ್‌ಸ್ಪೆಕ್ಟರ್ ವರದಿ ಸಲ್ಲಿಸಿದ್ದರು. ಹಲವು ಅಪರಾಧ ಪ್ರಕರಣಗಳಲ್ಲಿ ಆರೋಪಿಯಾಗಿರುವ ತಮ್ಮನ್ನು ಏಕೆ ರೌಡಿ ಪಟ್ಟಿಗೆ ಸೇರಿಸಬಾರದು? ಎಂಬುದಕ್ಕೆ ವಿವರಣೆ ಸಲ್ಲಿಸಬಹುದು. ಇಲ್ಲದಿದ್ದರೆ, ವಿವರಣೆ ಇಲ್ಲವೆಂದು ಪರಿಗಣಿಸಿ ರೌಡಿಪಟ್ಟಿ ತೆರೆಯಲಾಗುವುದು ಎಂದು ಎಸಿಪಿಯು ನೋಟಿಸ್‌ನಲ್ಲಿ ಉಲ್ಲೇಖಿಸಿದ್ದರು.
ಪುನೀತ್ ಕೆರೆಹಳ್ಳಿ ಮತ್ತು ಸಹಚರರು ಕಾನೂನುಬಾಹಿರ ಚಟುವಟಿಕೆಗಳು, ಕೋಮು ಗಲಭೆ ಪ್ರಚೋದಿಸುವ ಕೃತ್ಯಗಳಲ್ಲಿ ಭಾಗಿಯಾಗಿದ್ದರು. ರಾಮನಗರ ಜಿಲ್ಲೆಯಲ್ಲಿ ಗೋವುಗಳನ್ನು ಸಾಗಣೆ ಮಾಡುತ್ತಿದ್ದ ಮುಸ್ಲಿಂ ವ್ಯಕ್ತಿಯನ್ನು ಕೊಲೆ ಮಾಡಿದ ಆರೋಪದಡಿ ಪುನೀತ್ ಕೆರೆಹಳ್ಳಿ ವಿರುದ್ಧ ಇತ್ತೀಚೆಗೆ ಪ್ರಕರಣ ದಾಖಲಾಗಿತ್ತು. ನಂತರ ಪೊಲೀಸರು ಆತನನ್ನು ಬಂಧಿಸಿ ಜೈಲಿಗೆ ಕಳುಹಿಸಿದ್ದರು. ಬಳಿಕ ಆತ ಜಾಮೀನಿನ ಮೇಲೆ ಬಿಡುಗಡೆಯಾಗಿದ್ದ.












Click it and Unblock the Notifications