ಸಾರ್ವಜನಿಕ ಗಣೇಶೋತ್ಸವ ಆಚರಿಸಿದರೆ ತಪ್ಪಾ, ಸರಿಯಾ? ಒಂದು ಚರ್ಚೆ
ಇನ್ನೇನು ಇಪ್ಪತ್ತು ದಿನಗಳಲ್ಲಿ ಗಣೇಶ ಹಬ್ಬ ಬರುತ್ತಿದೆ, ಕಳೆದ ವರ್ಷದಂತೆ ಈ ವರ್ಷವೂ ಹಬ್ಬ ಆಚರಣೆಗೆ ಸರಕಾರ ಹಲವು ನಿರ್ಬಂಧಗಳನ್ನು ವಿಧಿಸಿದೆ. ಕೋವಿಡ್ ಮೊದಲನೇ ಅಲೆಯ ಕಾರಣಕ್ಕಾಗಿ ಕಳೆದ ವರ್ಷ, ಎರಡನೇ ಮತ್ತು ಸಂಭಾವ್ಯ ಮೂರನೇ ಅಲೆಯ ಕಾರಣಕ್ಕಾಗಿ ಈ ವರ್ಷವೂ ಸಂಭ್ರಮದಿಂದ ಗಣೇಶನನ್ನು ಬರ ಮಾಡಿಕೊಳ್ಳಲು ತೊಡಕಾಗಿದೆ.
ಕಳೆದ ಬಾರಿ ಕೊರೊನಾದ ಪ್ರಭಾವ ಹೇಗಿರಬಹುದು ಎನ್ನುವುದರ ಸ್ಪಷ್ಟ ಅರಿವಿಲ್ಲದ ಕಾರಣ, ಸಾರ್ವಜನಿಕರಿಂದ ಅಷ್ಟೇನೂ ನಿರ್ಬಂಧಕ್ಕೆ ವಿರೋಧ ವ್ಯಕ್ತವಾಗಿರಲಿಲ್ಲ. ಆದರೆ, ಈ ಬಾರಿ ಸಾರ್ವಜನಿಕ ವಲಯದಿಂದ ನಿರ್ಬಂಧಕ್ಕೆ ಪ್ರತಿರೋಧ ವ್ಯಕ್ತವಾಗುತ್ತಿದೆ.
ಅಷ್ಟೇ ಏಕೆ, ರಾಜಕಾರಣಿಗಳೂ ಸಾರ್ವಜನಿಕ ಗಣೇಶೋತ್ಸವಕ್ಕೆ ಅನುಮತಿ ನೀಡಬೇಕೆಂದು ಒತ್ತಾಯಿಸುತ್ತಿದ್ದಾರೆ. ಇನ್ನು, ಬಿಜೆಪಿಯ ಮುಖಂಡರೂ ಸರಕಾರದ ನಿರ್ಧಾರದ ವಿರುದ್ದ ಪ್ರತಿಕ್ರಿಯೆ ನೀಡುತ್ತಿರುವುದು ಬೊಮ್ಮಾಯಿ ಸರಕಾರಕ್ಕೆ ಮುಜುಗರವನ್ನು ತಂದೊಡ್ಡುತ್ತಿದೆ.
ಜನಸಾಮಾನ್ಯರಲ್ಲಿ ಇರುವ ಸಿಟ್ಟೇನೆಂದರೆ, ರಾಜಕೀಯ ಸಭೆಗಳಿಗೆ ಕಾಟಾಚಾರಕ್ಕೆ ನಿಯಮ ಮಾಡುವ ಸರಕಾರ, ಹಬ್ಬಗಳ ಆಚರಣೆಗೆ ಯಾಕೆ ತಡೆಯೊಡ್ಡುತ್ತಿದೆ ಎನ್ನುವುದು. ಇನ್ನು, ಕೆಲವರು ಹಿಂದೂಗಳ ಹಬ್ಬವೇ ಇವರಿಗೆ ಟಾರ್ಗೆಟ್ ಎನ್ನುವ ಮೂಲಕ, ವಿಷಯಾಂತರ ಮಾಡಲು ಹೊರಟಿದ್ದಾರೆ.

ಬೊಮ್ಮಾಯಿ ನೇತೃತ್ವದ ಸರಕಾರ ಮಾರ್ಗಸೂಚಿ ಬದಲಿಸುವ ಒತ್ತಡದಲ್ಲಿದೆ
ಸಾರ್ವಜನಿಕ ಗಣೇಶೋತ್ಸವಕ್ಕೆ ನೂರಾರು ವರ್ಷಗಳ ಇತಿಹಾಸವಿದೆ. ದೇಶದ ಎಲ್ಲಾ ರಾಜ್ಯಗಳಲ್ಲಿ ಆಚರಿಸಲಾಗುವ ಹಬ್ಬಗಳಲ್ಲಿ ಗಣೇಶ ಮತ್ತು ದೀಪಾವಳಿ ಪ್ರಮುಖವಾದದ್ದು. ಕೋವಿಡ್ ಕಾರಣಕ್ಕಾಗಿ ನಿರ್ಬಂಧ ಸರಿಯಾದ ಹೆಜ್ಜೆಯಾಗಿದ್ದರು ಕೂಡಾ, ಜನರು ಹಬ್ಬದಾಚರಣೆಗೂ, ರಾಜಕೀಯ ಸಭೆಗಳಿಗೆ ತುಲನೆ ಮಾಡುತ್ತಿರುವುದರಿಂದ, ಸರಕಾರ ಈ ಬಾರಿ ಇಕ್ಕಟ್ಟಿನಲ್ಲಿ ಸಿಲುಕಿದೆ. ಸರಕಾರ ಮಾರ್ಗಸೂಚಿ ಬದಲಿಸುವ ಒತ್ತಡದಲ್ಲಿದೆ.

ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು ನಡೆಸಿದ ಜನಾಶೀರ್ವಾದ ಯಾತ್ರೆ
ರಾಜ್ಯವನ್ನು ಪ್ರತಿನಿಧಿಸುವ ಕೇಂದ್ರದ ಮಂತ್ರಿಗಳು ನಡೆಸಿದ ಜನಾಶೀರ್ವಾದ ಯಾತ್ರೆಯನ್ನೇ ಪ್ರಮುಖವಾಗಿ ಜನರು ಉದಾಹರಣೆಯಾಗಿ ತೆಗೆದುಕೊಳ್ಳುತ್ತಿದ್ದಾರೆ. ಸಚಿವರಾದ ನಾರಾಯಣಸ್ವಾಮಿ, ಭಗವಂತ ಖೂಬಾಗೆ ಸಿಕ್ಕ ಸ್ವಾಗತ, ನಡೆದ ಅದ್ದೂರಿ ಮೆರವಣಿಗೆ ಕೋವಿಡ್ ವೈರಸ್ ಅನ್ನೇ ನಾಚಿಸುವಂತಿತ್ತು. ಇನ್ನು, ಹೋದಲೆಲ್ಲಾ ಜನರು ಭಾರೀ ಸಂಖ್ಯೆಯಲ್ಲಿ ಸೇರಿದ್ದರು. ಇದು ಬರೀ ಬಿಜೆಪಿಗೆ ಮಾತ್ರ ಸೀಮಿತವಲ್ಲ, ಕಾಂಗ್ರೆಸ್ ಮತ್ತು ಜೆಡಿಎಸ್ ಸಭೆಗಳಲ್ಲೂ ಇದೇ ಪರಿಸ್ಥಿತಿ.

ಗಣೇಶ ಹಬ್ಬದ ಆಗಸ್ಟ್ ಹನ್ನೆರಡರ ಸರಕಾರೀ ಅಧಿಸೂಚನೆ
ಆಗಸ್ಟ್ ಹನ್ನೆರಡರ ಸರಕಾರೀ ಅಧಿಸೂಚನೆಯ ಪ್ರಕಾರ, ಚಪ್ಪರ/ಪೆಂಡಾಲ್/ಶಾಮಿಯಾನ/ ವೇದಿಕೆಗಳನ್ನು ನಿರ್ಮಿಸಿ ಗಣೇಶ ಹಬ್ಬ ನಡೆಸುವಂತಿಲ್ಲ. ವಿಸರ್ಜನೆಯ ವೇಳೆ ಮೆರವಣಿಗೆ, ಮನೋರಂಜನಾ ಕಾರ್ಯಕ್ರಮ ಮಾಡುವಂತಿಲ್ಲ. ದರ್ಶನಕ್ಕೆ ಬರುವವರು ಖಡ್ಡಾಯವಾಗಿ ಮಾಸ್ಕ್ ಧರಿಸಬೇಕು.. ಹೀಗೆ ಹಲವು ನಿಯಮಗಳನ್ನು ಸರಕಾರ ತಂದಿದೆ. ಹೊಟೇಲ್, ಮಾಲ್ ಗಳಲ್ಲಿ ಇಲ್ಲದ ನಿರ್ಬಂಧ, ಗಣೇಶೋತ್ಸವಕ್ಕೆ ಯಾಕೆ? ರಾಜಕೀಯ ಸಭೆಗಳಿಂದ ವೈರಾಣು ಹರಡುವುದಿಲ್ಲವೇ ಎನ್ನುವುದು ಜನರ ಪ್ರಶ್ನೆಯಾಗಿದೆ.
Recommended Video

ರಾಜಕೀಯ ಕಾರ್ಯಕ್ರಮಕ್ಕೆ ಇಲ್ಲದ ನಿರ್ಬಂಧ, ಗಣೇಶೋತ್ಸವಕ್ಕೆ ಏಕೆ?
ಗಣೇಶ ಹಬ್ಬಕ್ಕೆ ಪ್ರತ್ಯೇಕ ಎಸ್ಒಪಿ ಮಾಡಿ ಆಚರಣೆಗೆ ಅವಕಾಶ ನೀಡಬೇಕೆಂದು ಕೆಲವು ಬಿಜೆಪಿ/ಕಾಂಗ್ರೆಸ್ ಮುಖಂಡರು, ಸಂಘ ಪರಿವಾರದ ಸದಸ್ಯರು ಸರಕಾರವನ್ನು ಒತ್ತಾಯಿಸಿದ್ದಾರೆ. ನನಗೆ ಗುಂಡು ಹೊಡೆದರೂ ಪರವಾಗಿಲ್ಲ, ಹಬ್ಬ ಆಚರಿಸಿಯೇ ತೀರುತ್ತೇವೆ ಎಂದು ಶಾಸಕ ಯತ್ನಾಳ್ ಘರ್ಜಿಸಿದ್ದಾರೆ. ರಾಜ್ಯಾದ್ಯಂತ ಸಾವಿರಕ್ಕೂ ಹೆಚ್ಚು ಗಣೇಶೋತ್ಸವ ಸಮಿತಿಗಳು ಸರಕಾರದ ವಿರುದ್ದ ಗರಂ ಆಗಿವೆ. ಒಟ್ಟಿನಲ್ಲಿ, ಜನರ ಕಟ್ಟಕಡೆಯ ಪ್ರಶ್ನೆ ಇಷ್ಟೇ.. ರಾಜಕೀಯ ಕಾರ್ಯಕ್ರಮಕ್ಕೆ ಇಲ್ಲದ ನಿರ್ಬಂಧ, ಗಣೇಶೋತ್ಸವಕ್ಕೆ ಏಕೆ?












Click it and Unblock the Notifications