ಪಿಎಸ್ಐ ನೇಮಕಾತಿ ಅಕ್ರಮ: ಪರೀಕ್ಷೆ ಅಕ್ರಮ ಸಕ್ಸಸ್ ಬಳಿಕ ಪಾರ್ಟಿ ಮಾಡಿದ್ದ ಗ್ಯಾಂಗ್!
ಬೆಂಗಳೂರು, ಮೇ. 09: ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗುವಲ್ಲಿ ಯಶಸ್ವಿಯಾದ ಬಳಿಕ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ಮಹಾನ್ ಕಿಲಾಡಿಗಳು ಪಾರ್ಟಿ ಮಾಡಿದ್ದರು. ಎಲ್ಲರೂ ಗ್ರೂಪ್ ಪೋಟೋ ತೆಗೆಸಿಕೊಂಡು ಕುಣಿದು ಕುಪ್ಪಳಿಸಿದ್ದರು. ಅಚ್ಚರಿ ಸಂಗತಿ ಏನೆಂದರೆ ಭದ್ರತೆಗೆ ನಿಯೋಜನೆಗೊಂಡಿದ್ದ ಪೊಲೀಸಪ್ಪನೇ ಪಿಎಸ್ಐ ಪ್ರಶ್ನೆ ಪತ್ರಿಕೆಯನ್ನು ಅಕ್ರಮದ ಕಿಂಗ್‌ಪಿನ್ ಆರ್.ಡಿ. ಪಾಟೀಲ್‌ಗೆ ರವಾನಿಸಿದ್ದ!
ಪಿಎಸ್ಐ ನೇಮಕಾತಿ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧಿತ ಅರೋಪಿಗಳನ್ನು ಸಿಐಡಿ ಪೊಲೀಸರು ವಿಚಾರಣೆಗೆ ಒಳಪಡಿಸಿದಾಗ ಕೆಲವು ಮಹತ್ವದ ಸಂಗತಿಗಳು ಹೊರ ಬಿದ್ದಿವೆ. ಈ ಸತ್ಯಗಳನ್ನು ಪೊಲೀಸ್ ಇಲಾಖೆ ಅರಗಿಸಿಕೊಳ್ಳಲಾಗುತ್ತಿಲ್ಲ.
ಆನಂದ ಮೇತ್ರಿ ಮತ್ತು ಆರ್.ಡಿ ಪಾಟೀಲ್ :
ಕಲಬುರಗಿಯ ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ಎರಡು ರೀತಿಯಲ್ಲಿ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿದೆ. ಒಂದೆಡೆ ಪರೀಕ್ಷಾ ಸಿಬ್ಬಂದಿಯೇ ಅಭ್ಯರ್ಥಿಗಳ ಒಎಂಆರ್ ಉತ್ತರ ಹಾಳೆಯನ್ನು ತುಂಬಿಸಿ ಅಕ್ರಮ ಎಸಗಿದ್ದಾರೆ. ಇನ್ನೂ ಕೆಲವು ಅಭ್ಯರ್ಥಿಗಳು ಬ್ಲೂಟೂತ್ ಬಳಿಸಿ ಅಕ್ರಮ ಎಸಗಿದ್ದಾರೆ. ಆದರೆ ಇದಕ್ಕಿಂತೂ ಇನ್ನೂ ರೋಚಕ ಸಂಗತಿಗಳು ಸಿಐಡಿ ಪೊಲೀಸರ ವಿಚಾರಣೆ ವೇಳೆ ಆರೋಪಿತ ಮುಖ್ಯ ಶಿಕ್ಷಕ ಕಾಶಿನಾಥ್ ಬಾಯಿಬಿಟ್ಟಿದ್ದಾನೆ.

ಜ್ಞಾನ ಜ್ಯೋತಿ ಇಂಗ್ಲೀಷ್ ಶಾಲೆಯಲ್ಲಿ ಪಿಎಸ್ಐ ಪರೀಕ್ಷೆ ಡ್ಯೂಟಿಗೆ ನಿಯೋಜನೆಗೊಂಡಿದ್ದ ಬೆರಳು ಮುದ್ರೆ ವಿಭಾಗದ ಇನ್‌ಸ್ಪೆಕ್ಟರ್ ಆನಂದ ಮೇತ್ರಿ ಪಿಎಸ್ಐ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಜೆರಾಕ್ಸ್ ಪಡೆದುಕೊಂಡಿದ್ದಾನೆ. ಮುಖ್ಯ ಶಿಕ್ಷಕ ಕಾಶಿನಾಥ್ ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆಯನ್ನು ಶಾಲೆಯಲ್ಲಿ ಜೆರಾಕ್ಸ್ ತೆಗೆಸಿ ಅದನ್ನು ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ಮೇತ್ರಿ ಅವರಿಗೆ ನೀಡಿದ್ದಾರೆ.
ಆನಂದ ಮೇತ್ರಿ ಅದನ್ನು ವಾಟ್ಸಪ್ ಮೂಲಕವೇ ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಆರ್. ಡಿ. ಪಾಟೀಲ ಕೈಗೆ ತಲುಪಿಸಿದ್ದಾನೆ. ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಕೈ ಸೇರುತ್ತಿದ್ದಂತೆ ಡೀಲ್ ಕುದುರಿಸಿದ್ದ ಅಭ್ಯರ್ಥಿಗಳಿಗೆ ಕರೆ ಮಾಡಿಸಿ( ಬ್ಲೂಟೂತ್ ಬಾಯ್ಸ ) ಉತ್ತರ ಬರೆಸಿದ್ದಾನೆ. ಯಾವುದೇ ಸಣ್ಣ ಸುಳಿವು ಸಿಗದಂತೆ ಪಿಎಸ್ಐ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ಎಸಗಿದ್ದರು. ಪಿಎಸ್ಐ ಪರೀಕ್ಷೆ ಪ್ರಶ್ನೆ ಪತ್ರಿಕೆ ಮಾತ್ರ ಖಾಕಿಯಿಂದಲೇ ಹೊರ ಹೊಗಿರುವ ಸಂಗತಿ ತನಿಖೆಯಲ್ಲಿ ಬೆಳಕಿಗೆ ಬಂದಿದೆ. ಇದು ಪೊಲೀಸ್ ಇಲಾಖೆ ತಲೆ ತಗ್ಗಿಸುವಂತಾಗಿದೆ.

ಮಂಜುನಾಥ್ ಮೇಳಕುಂದಿಗೆ ರವಾನೆ: ನೀರಾವರಿ ಇಲಾಖೆಯಲ್ಲಿ ಇಂಜಿನಿಯರ್ ಆಗಿರುವ ಮಂಜುನಾಥ್ ಮೇಳಕುಂದಿ ಹಾಗೂ ಕಾಶಿನಾಥ್ ಕೂಡ ಪಿಎಸ್ಐ ಡೀಲ್ ಕುದುರಿಸಿದ್ದರು. ಆನಂದ ಮೇತ್ರಿ ಪಿಎಸ್ಐ ನೇಮಕಾತಿ ಪರೀಕ್ಷೆ ಪ್ರಶ್ನೆ ಪತ್ರಿಕೆ ಪಡೆದ ಬೆನ್ನಲ್ಲೇ ಮುಖ್ಯ ಶಿಕ್ಷಕ ಕಾಶಿನಾಥ್ ಅದೇ ಜೆರಾಕ್ಸ್ ಪ್ರತಿಯನ್ನು ಮಂಜುನಾಥ್ ಮೇಳಕುಂದಿಗೆ ರವಾನಿಸಿದ್ದ. ಹೀಗೆ ಪರೀಕ್ಷೆಯಲ್ಲಿ ಅಕ್ರಮಕ್ಕೆ ಅವಕಾಶ ಮಾಡಿಕೊಟ್ಟಿದ್ದ. ಪರೀಕ್ಷೆ ಮುಗಿದ ಕೂಡಲೇ ದಿವ್ಯಾ ಹಾಗರಗಿ ಸೇರಿದಂತೆ ಆನಂದ್ ಮೇತ್ರಿ, ದಿವ್ಯಾ ಹಾಗರಗಿ, ಹಾಗರಗಿ ಪತಿ, ಮುಖ್ಯ ಶಿಕ್ಷಕ ಕಾಶಿನಾಥ್ ಸೇರಿ ಎಲ್ಲರೂ ಕೂಡಿ ಪೋಟೋ ತೆಗೆಸಿಕೊಂಡಿದ್ದರು. ವಿಪರ್ಯಾಸವೆಂದರೆ ಅಕ್ರಮದ ವಾಸನೆ ಅರಿಯದ ಕೆಲವು ಗೃಹ ರಕ್ಷಕ ಸಿಬ್ಬಂದಿ ಶಾಲೆಯ ಹೊರಗೆ ಕಾವಲು ಕಾದಿದ್ದರು.

ಸಿಐಡಿ ಅಧಿಕಾರಿಗಳ ವಿಚಾರಣೆ ವೇಳೆ ಪಿಎಸ್ಐ ನೇಮಕಾತಿ ಪರೀಕ್ಷೆಯ ಪ್ರಶ್ನೆ ಪತ್ರಿಕೆ ಲೀಕ್, ಶಾಲೆಯಲ್ಲಿ ನಡೆದ ಘಟನಾವಳಿಗಳನ್ನು ಮುಖ್ಯ ಶಿಕ್ಷಕ ಕಾಶಿನಾಥ್ ಬಾಯಿ ಬಿಟ್ಟಿದ್ದಾನೆ. ಈ ಹಿನ್ನೆಲೆಯಲ್ಲಿ ಪೊಲೀಸ್ ಇನ್‌ಸ್ಪೆಕ್ಟರ್ ಆನಂದ ಮೇತ್ರಿ ಮತ್ತು ಕಾಶಿನಾಥ್ ನನ್ನು ಜ್ಞಾನ ಜ್ಯೋತಿ ಶಾಲೆಗೆ ಕರೆಸಿ ಮಹಜರಿಗೆ ಒಳಪಡಿಸಲಾಗಿದೆ. ಈ ವೇಳೆ ಜೆರಾಕ್ಸ್ ಯಂತ್ರ, ಪ್ರಿಂಟರ್ ನ್ನು ವಶಕ್ಕೆ ಪಡೆಯಲಾಗಿದೆ.

ಸಿಐಡಿ ವಿಚಾರಣೆ ಅಂತ್ಯ :
ಪಿಎಸ್ಐ ನೇಮಕಾತಿ ಪರೀಕ್ಷೆ ಅಕ್ರಮಕ್ಕೆ ಸಂಬಂಧಿಸಿದಂತೆ ಬಂಧನಕ್ಕೆ ಒಳಗಾಗಿದ್ದ ದಿವ್ಯಾ ಹಾಗರಗಿ ಅವರ ಪೊಲಿಸ್ ಕಸ್ಟಡಿ ಅವಧಿ ಮುಗಿದಿದೆ. ಈ ಹಿನ್ನೆಲೆಯಲ್ಲಿ ಸೋಮವಾರ ದಿವ್ಯಾ ಹಾಗರಗಿ ಅವರನ್ನು ಕಲಬುರಗಿ ಜೈಲಿಗೆ ಕಳುಹಿಸಲಾಗಿದೆ. ಈಗಾಗಲೇ ವಿಚಾರಣೆ ಮುಗಿಸಿ ಜೈಲಿನಲ್ಲಿರುವ ದಿವ್ಯಾ ಪತಿ ರಾಜೇಶ್ ನ್ಯಾಯಾಂಗ ಬಂಧನದಲ್ಲಿದ್ದಾರೆ. ಇದೀಗ ಪತ್ನಿ ಪೊಲೀಸ್ ಕಸ್ಟಡಿ ಮುಗಿದಿದ್ದು, ಜೈಲಿನಲ್ಲಿ ಭೇಟಿ ಮಾಡುವಂತಾಗಿದೆ.












Click it and Unblock the Notifications