ಪಿಎಸ್‌ಐ ನೇಮಕಾತಿ ಹಗರಣ; ಕೆಎಎಸ್ ವಿಧಾನ ಬಳಸಲು ವಾದ
ಬೆಂಗಳೂರು, ಜುಲೈ 13; ಕರ್ನಾಟಕ ನಾಗರಿಕ ಸೇವೆಗಳ 2011ನೇ ಬ್ಯಾಚಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಸಿಂಧುತ್ವ ಮತ್ತು ನೇಮಕ ಕಾಯ್ದೆ ಜಾರಿಗೆ ತಂದು 2011ರ ಗೆಜೆಟೆಡ್ ಪ್ರೊಬೆಷನರಿ ಹುದ್ದೆಗಳ ನೇಮಕ ರದ್ದುಪಡಿಸಿದ್ದ ಆದೇಶವನ್ನು ಹಿಂಪಡೆದ ವಿಧಾನವನ್ನೇ ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಪಾಲಿಸಬೇಕು ಎಂದು ಹೈಕೋರ್ಟ್‌ನಲ್ಲಿ ವಾದ ಮಂಡಿಸಲಾಗಿದೆ.
ಹಾಗಾಗಿ ಕರ್ನಾಟಕದ ಪಿಎಸ್ಐ ನೇಮಕಾತಿ ಹಗರಣಕ್ಕೆ ಹೊಸ ತಿರುವು ಸಿಕ್ಕಿದ್ದು, ಹೈಕೋರ್ಟ್ ಈ ವಾದವನ್ನು ಒಪ್ಪಿದ್ದೇ ಆದಲ್ಲಿ ಪಿಎಸ್ಐ ನೇಮಕಕ್ಕೆ ನಡೆಸಿದ ಅರ್ಹತಾ ಪಟ್ಟಿಯಲ್ಲಿದ್ದವರು ನೇಮಕ ಪತ್ರ ಪಡೆಯುವ ಕಾಲ ಸನ್ನಿಹಿತವಾಗಲಿದೆ.

ಹಿಂದಿನ ಬಿಜೆಪಿ ಸರ್ಕಾರ ಹೊರಡಿಸಿದ ಆದೇಶ ರದ್ದುಪಡಿಸಬೇಕು ಮತ್ತು ಕಳಂಕಿತ ಮತ್ತು ಕಳಂಕರಹಿತ ಅಭ್ಯರ್ಥಿಗಳೆಂದು ಪ್ರತ್ಯೇಕಿಸಿ ನೇಮಕಾತಿ ಆದೇಶ ನೀಡಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿ ಆಯ್ಕೆಪಟ್ಟಿಯಲ್ಲಿ ಹೆಸರಿದ್ದ 100ಕ್ಕೂ ಅಧಿಕ ಅಭ್ಯರ್ಥಿಗಳು ಸಲ್ಲಿಸಿದ್ದ ಅರ್ಜಿಯನ್ನು ನ್ಯಾಯಮೂರ್ತಿ ಜಿ. ನರೇಂದರ್ ನೇತೃತ್ವದ ವಿಭಾಗೀಯ ಪೀಠ ವಿಚಾರಣೆ ನಡೆಸಿತು.
ಅಭ್ಯರ್ಥಿಗಳ ಪರ ಹಾಜರಾಗಿ ವಾದ ಮಂಡಿಸಿದ ಹಿರಿಯ ವಕೀಲರು, 2011ರಲ್ಲಿ ನಡೆದಿದ್ದ ನೇಮಕಾತಿಯಲ್ಲಿ ಅವ್ಯವಹಾರ ಕಂಡುಬಂದಿತ್ತು. ಆ ಕುರಿತು ಸಿಐಡಿ ತನಿಖೆ ನಡೆಸಿ ನೀಡಿದ್ದ ಮಧ್ಯಂತರ ವರದಿ ಆಧರಿಸಿಯೇ ರಾಜ್ಯ ಸರ್ಕಾರವು ಇಡೀ ಪ್ರಕ್ರಿಯೆಯನ್ನು 2013ರ ಅಕ್ಟೋಬರ್ 15ರಂದು ಹಿಂಪಡೆದಿತ್ತು. ಒಂದು ದಶಕದ ಬಳಿಕ 2022ರಲ್ಲಿ ಕರ್ನಾಟಕ ನಾಗರಿಕ ಸೇವೆಗಳ (2011ನೇ ಬ್ಯಾಚಿನ ಗೆಜೆಟೆಡ್ ಪ್ರೊಬೆಷನರ್ಸ್ ಆಯ್ಕೆ ಸಿಂಧುತ್ವ ಮತ್ತು ನೇಮಕಾತಿ) ಕಾಯ್ದೆ ಮೂಲಕ ಅವರ ಆಯ್ಕೆಗೆ ಅನುವು ಮಾಡಿಕೊಡಲಾಗಿದೆ. ಇದೇ ನಿಯಮವನ್ನು ಪಿಎಸ್‌ಐ ನೇಮಕಾತಿ ಪ್ರಕರಣದಲ್ಲಿ ಪಾಲಿಸಬೇಕು ಎಂದು ತಿಳಿಸಿದರು.
ಮಾಡಿದ ವಾದವೇನು?; ಅಲ್ಲದೆ, ಪಿಎಸ್‌ಐ ನೇಮಕಾತಿ ಲಿಖಿತ ಪರೀಕ್ಷೆಗೆ 15,103 ಮಂದಿ ಹಾಜರಾಗಿದ್ದರು. ಅದರಲ್ಲಿ 545 ಮಂದಿ ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ಆಯ್ಕೆಯಾಗಿದ್ದರು. ಕೇವಲ 5 ಅಭ್ಯರ್ಥಿಗಳ ಓಎಂಆರ್ ಶೀಟ್ ತಿದ್ದಲಾಗಿದೆ ಎಂದು ಹೇಳಿ ಪರಿಶೀಲನೆ ನಡೆಸಲಾಗಿತ್ತು. ಅದರಲ್ಲಿ ನಾಲ್ಕು ಓಎಂಆರ್ ಶೀಟ್ ತಿದ್ದಿರುವುದು ಕಂಡುಬಂತು. ಕಲಬುರಗಿಯ ಜ್ಞಾನಜ್ಯೋತಿ ಇಂಗ್ಲೀಷ್ ಶಾಲೆಯ ಪರೀಕ್ಷಾ ಕೇಂದ್ರದಲ್ಲಿ ಮೇಲ್ವಿಚಾರಕರು ಮತ್ತು ಆಡಳಿತ ಸಿಬ್ಬಂದಿಗಳು ಅಭ್ಯರ್ಥಿಗಳು ಪರೀಕ್ಷೆಯಲ್ಲಿ ಅಕ್ರಮ ನಡೆಸಲು ಸಹಕರಿಸಿದ್ದಾರೆ ಎಂದು ಹೇಳಲಾಗಿತ್ತು.
ಆದರೆ, ರಾಜ್ಯಾದ್ಯಂತ ನೂರಾರು ಪರೀಕ್ಷಾ ಕೇಂದ್ರಗಳಲ್ಲಿ ಲಿಖಿತ ಪರೀಕ್ಷೆ ನಡೆದಿದ್ದು, ಎಲ್ಲಾ ಕೇಂದ್ರಗಳಲ್ಲಿ ಅಕ್ರಮ ನಡೆದಿರಲಿಲ್ಲ. ಇಡೀ ನೇಮಕಾತಿ ಪ್ರಕ್ರಿಯೆಯೇ ಸಂಪೂರ್ಣವಾಗಿ ಅಕ್ರಮವಾಗಿದೆ ಎಂಬುದನ್ನು ಸಾಬೀತುಪಡಿಸುವ ದಾಖಲೆಗಳು ಇಲ್ಲದಿದ್ದರೂ 2022ರ ಏ.19ರಂದು ಪರೀಕ್ಷೆ ರದ್ದುಪಡಿಸಲು ಸರ್ಕಾರ ಆದೇಶಿಸಿದ್ದು ನ್ಯಾಯಸಮ್ಮತವಾಗಿಲ್ಲ ಎಂದು ತಿಳಿಸಿದರು.
ಅಲ್ಲದೆ, ಸರ್ಕಾರ ಆದೇಶ ಹೊರಡಿಸುವ ವೇಳೆಗೆ ಕಳಂಕರಹಿತ ಅಭ್ಯರ್ಥಿಗಳ ನೇಮಕಾತಿ ಪ್ರಕ್ರಿಯೆ ಅಂತಿಮ ಹಂತ ತಲುಪಿತ್ತು. 171 ಮಂದಿ ಆಯ್ಕೆಯಾಗಿದ್ದ ಅಭ್ಯರ್ಥಿಗಳಿಗೆ ಮಾತ್ರ ನೇಮಕಾತಿ ಆದೇಶ ವಿತರಿಸಲು ಬಾಕಿ ಇತ್ತು. ಈ ನಡುವೆ ವಿವೇಚನರಹಿತ, ಅಕ್ರಮ, ಅಸಂವಿಧಾನಿಕ ಮತ್ತು ಅತಾರ್ತಿಕವಾಗಿ ಲಿಖಿತ ಪರೀಕ್ಷೆಯನ್ನೇ ರದ್ದುಪಡಿಸಲು ಸರ್ಕಾರ ಆದೇಶಿಸಿದೆ.
15 ತಿಂಗಳು ಕಳೆದರೂ ಲಿಖಿತ ಪರೀಕ್ಷೆ ರದ್ದುಪಡಿಸಿರುವುದಕ್ಕೆ ಸಮರ್ಥವಾದ ಕಾರಣ ಹಾಗೂ ದಾಖಲೆಗಳು ರಾಜ್ಯ ಸರ್ಕಾರದ ಬಳಿ ಇಲ್ಲವೇ ಇಲ್ಲ. ಇನ್ನೆಷ್ಟು ದಿನ ಆಯ್ಕೆಯಾದ ಅಭ್ಯರ್ಥಿಗಳು ನರಳಬೇಕು?. ಪ್ರಕರಣದಲ್ಲಿ ಕಳಂಕಿತ ಅಭ್ಯರ್ಥಿಗಳು ಹಾಗೂ ಕಳಂಕರಹಿತ ಅಭ್ಯರ್ಥಿಗಳು ಎಂದು ಪ್ರತ್ಯೇಕಿಸಿ ನೇಮಕಾತಿ ಆದೇಶ ನೀಡಲು ಸಾಧ್ಯವಿಲ್ಲದ ಪ್ರಕರಣ ಇದೇನಲ್ಲ ಎಂದು ಪೀಠಕ್ಕೆ ವಿವರಿಸಿದರು.
ಪಿಎಸ್‌ಐ ನೇಮಕಾತಿಯಲ್ಲಿ ಆಯ್ಕೆಯಾಗಿರುವ 545 ಅಭ್ಯರ್ಥಿಗಳ ಪೈಕಿ 53 ಮಂದಿಯ ವಿರುದ್ಧ ಆರೋಪ ಪಟ್ಟಿ ಸಲ್ಲಿಸಲಾಗಿದೆ. ಇವರಲ್ಲಿ 52 ಮಂದಿಗೆ 2022ರ ಏ.6ರಂದು ಷೋಕಾಸ್ ನೋಟಿಸ್ ನೀಡಿ, 2023 ಜೂನ್ 20ರಂದು ಅವರನ್ನು ಡಿಬಾರ್ ಮಾಡಲಾಗಿದೆ. 53 ಮಂದಿ ಆರೋಪಿಗಳನ್ನು ಹೊರತುಪಡಿಸಿ ಉಳಿದವರ ವಿರುದ್ಧ ಯಾವುದೇ ಆರೋಪಗಳು ಇಲ್ಲ. ಹಾಗಾಗಿ, ಅವರಿಗೆ ಕರ್ನಾಟಕ ನಾಗರಿಕ ಸೇವೆಗಳ ಕಾಯ್ದೆಯನ್ನು ಅನ್ವಯಿಸುವ ಮೂಲಕ ಕಳಂಕರಹಿತರನ್ನು ರಕ್ಷಿಸಬೇಕಿದೆ ಎಂದು ಕೋರಿದರು.












Click it and Unblock the Notifications