ಪಿಎಸ್ಐ ನೇಮಕಾತಿ ಅಕ್ರಮ: ಜ್ಞಾನಜ್ಯೋತಿ ಶಾಲೆಯ ಶಿಕ್ಷಕ ಕಾಶಿನಾಥ್ ಶರಣು
ಬೆಂಗಳೂರು, ಮೇ. 02: ಪಿಎಸ್ಐ ನೇಮಕ ಪರೀಕ್ಷೆಯಲ್ಲಿ ನಡೆದ ಅಕ್ರಮಕ್ಕೆ ಸಂಬಂಧಿಸದಿಂತೆ ಜ್ಞಾನ ಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ಕಲಬುರಗಿಯಲ್ಲಿ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪಿಎಸ್ಐ ನೇಮಕಾತಿ ಅಕ್ರಮ ತನಿಖೆ ಆರಂಭವಾಗುತ್ತಿದ್ದಂತೆ ಜ್ಞಾನಜ್ಯೋತಿ ಶಾಲೆಯ ಮುಖ್ಯ ಶಿಕ್ಷಕ ಕಾಶಿನಾಥ್ ತಲೆ ಮರೆಸಿಕೊಂಡಿದ್ದ. ದಿವ್ಯಾ ಹಾಗರಗಿ ಮತ್ತು ಪ್ರಮುಖ ಆರೋಪಿ ಇಂಜಿನಿಯರ್ ಮಂಜುನಾಥ್ ಮೇಳಕುಂದಿ, ರುದ್ರಗೌಡ ಪಾಟೀಲ್ ನಡುವೆ ಸಂಪರ್ಕ ಕೊಂಡಿಯಾಗಿ ಕಾಶಿನಾಥ್ ಕಾರ್ಯ ನಿರ್ವಹಿಸಿದ್ದರು.
ದಿವ್ಯಾ ಹಾಗರಗಿ ಪುಣೆಯಲ್ಲಿ ಬಂಧನಕ್ಕೆ ಒಳಗಾಗುತ್ತಿದ್ದಂತೆ, ಇಂಜಿನಿಯರ್ ಮಂಜುನಾಥ್ ಮೇಳಕುಂದಿ ಸಿಐಡಿ ಪೊಲೀಸರ ಎದುರು ಶರಣಾಗಿದ್ದ. ನ್ಯಾಯಾಲಯ ವಾರಂಟ್ ಹಿನ್ನೆಲೆಯಲ್ಲಿ ಇಬ್ಬರ ಬಂಧನದ ಬಳಿಕ ಇದೀಗ ಕಾಶಿನಾಥ್ ಸಹ ಸಿಐಡಿ ಪೊಲೀಸರಿಗೆ ಶರಣಾಗಿದ್ದಾನೆ.

ಮಂಜುನಾಥ್ ಮೇಳಕುಂದಿ ಬಂಧನ ರಿಯಲ್ ಕಹಾನಿ:
ಪಿಎಸ್ಐ ನೇಮಕಾತಿ ಅಕ್ರಮದ ಕಿಂಗ್ ಪಿನ್ ಮಂಜುನಾಥ್ ಮೇಳಕುಂದಿ ಶರಣಾಗತಿ ಹಿಂದೆ ಸಿಐಡಿ ರೋಚಕ ಕಹಾನಿಯೇ ಇದೆ.
ಪಿಎಸ್ಐ ನೇಮಕಾತಿ ಅಕ್ರಮ ಕುರಿತು ಸಿಐಡಿ ತನಿಖೆ ಆರಂಭಿಸುತ್ತಿದ್ದಂತೆ ಮಂಜುನಾಥ್ ಮೇಳಕುಂದಿ ಬೆಂಗಳೂರಿಗೆ ಬಂದಿದ್ದ. ಸಹಾಯಕ ಪ್ರಾಧ್ಯಾಪಕರ ಪರೀಕ್ಷೆ ಅಕ್ರಮ ಸಂಬಂಧ ಮಂಜುನಾಥ್ ಮೇಳಕುಂದಿಯನ್ನು ಅನ್ನಪೂರ್ಣೇಶ್ವರಿನಗರ ಪೊಲೀಸರು ವಶಕ್ಕೆ ಪಡೆದಿದ್ದರು. ಆತನ ಮೊಬೈಲ್ ವಶಕ್ಕೆ ಪಡೆದು ವಿಚಾರಣೆ ನಡೆಸಿ ಬಿಟ್ಟು ಕಳಿಸಿದ್ದರು. ಆ ಬಳಿಕ ಮಂಜುನಾಥ್ ಮೇಳಕುಂದಿ ತಲೆ ಮರೆಸಿಕೊಂಡಿದ್ದು, ಎರಡು ದಿನದ ಹಿಂದಷ್ಟೇ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದ. ಅನಾರೋಗ್ಯದ ಕಾರಣ ಮಂಗಳೂರಿನ ಆಸ್ಪತ್ರೆಯಲ್ಲಿ ದಾಖಲಾಗಿದ್ದಾಗಿ ಹೇಳಿಕೊಂಡಿದ್ದ. ಆದರೆ ಆತನ ಶರಣಾಗತಿಯ ಅಸಲಿ ಸಂಗತಿಯೇ ಬೇರೆಯದ್ದೇ ಇದೆ.

ಮಂಜುನಾಥ್ ಮೇಳಕುಂದಿಗಾಗಿ ಸಿಐಡಿ ಪೊಲೀಸರು ನಾನಾ ಕಡೆ ಶೋಧ ನಡೆಸಿದ್ದರು. ಎಲ್ಲೂ ಸಿಗದ ಕಾರಣ ಆತನ ಮನೆಗೆ ಹೋಗಿ ನೋಟಿಸ್ ನೀಡಿದ್ದರು. ಮಂಜುನಾಥ್ ಸಿಗದ ಕಾರಣಕ್ಕೆ ಅವರ ತಂದೆಯನ್ನು ವಿಚಾರಣೆ ನಡೆಸಿ ನಿಮ್ಮ ಮಗನನ್ನು ಆದಷ್ಟು ಬೇಗ ಕರೆಸುವಂತೆ ಸೂಚಿಸಿದ್ದರು. ಇದೇ ವೇಳೆ ಮಂಜುನಾಥ್ ಚಿಕ್ಕಪ್ಪನ ಮಗಳ ಮದುವೆ ಮೇ 8 ರಂದು ನಿಗದಿಯಾಗಿರುವ ವಿಚಾರ ಸಿಐಡಿಗೆ ಗೊತ್ತಾಗಿತ್ತು.
ಮೇ 8 ರಂದು ಕಲಬುರಗಿಯ ಕೋಟನೂರ್ ಬಳಿಯಿರುವ ಕಲ್ಯಾಣ ಮಂಟಪದಲ್ಲಿ ಮದುವೆ ನಿಗದಿಯಾಗಿತ್ತು. ಮಂಜುನಾಥನನ್ನು ಕರೆಸದಿದ್ರೆ ನಿಮ್ಮನ್ನು ಕರೆದುಕೊಂಡು ಹೋಗಬೇಕಾಗುತ್ತದೆ ಎಂದು ಸಿಐಡಿ ಪೊಲೀಸರು ಎಚ್ಚರಿಕೆ ನೀಡಿದ್ದರು. ಮದುವೆ ಮನೆಗೆ ಪೊಲೀಸರು ಬಂದ್ರೆ ಬೇರೆ ಅನಾಹುತ ಆಗುತ್ತದೆ ಎಂದು ಮಗನಿಗೆ ಶರಣಾಗುವಂತೆ ಆತನ ಪೋಷಕರು ಸೂಚಿಸಿದ್ದರು.

ಆ ಬಳಿಕ ಮಂಜುನಾಥ್ ನಿಗೆ ಕರೆ ಮಾಡಿ ಪೋಷಕರು ವಿಷಯ ಮುಟ್ಟಿಸಿದ್ದರು. ಮದುವೆ ಮನೆಯಲ್ಲಿ ಬಂಧನಕ್ಕೆ ಒಳಗಾದರೆ ಸಂಬಂಧಿಕರ ಎದುರಲ್ಲಿ ಮರ್ಯಾದೆ ಹೋಗುತ್ತದೆ ಎಂಬುದನ್ನು ಮನವರಿಕೆ ಮಾಡಿಕೊಟ್ಟಿದ್ದರು. ಕುಟುಂಬಸ್ಥರು ವಿಷಯ ತಿಳಿಸಿದ ಬೆನ್ನಲ್ಲೇ ಮಂಜುನಾಥ್ ಮೇಳಕುಂದಿ ವಕೀಲರನ್ನು ಭೇಟಿ ಮಾಡಿ ನೇರವಾಗಿ ಸಿಐಡಿ ಪೊಲೀಸರ ಮುಂದೆ ಶರಣಾಗಿದ್ದಾನೆ.
ಪೊಲೀಸರ ತನಿಖೆಗೆ ಮಂಜುನಾಥ್ ತಂದೆ ಪ್ರಶಂಶೆ:
ವೃತ್ತಿಯಲ್ಲಿ ಎಎಸ್ಐ ಆಗಿದ್ದ ಮಂಜುನಾಥ್ ತಂದೆ, ಸಿಐಡಿ ಪೊಲೀಸರ ತನಿಖೆಯನ್ನು ಪ್ರಶಂಸೆ ಮಾಡಿದ್ದಾರೆ. ಪಿಎಸ್ಐ ಅಕ್ರಮ ನೇಮಕಾತಿ ತನಿಖೆ ಒಳ್ಳೆಯ ರೀತಿಯಲ್ಲಿ ಸಾಗುತ್ತಿದೆ. ನನ್ನ ಮಗ ತಪ್ಪು ಮಾಡಿದ್ದರೆ ಖಂಡಿತ ಅವನಿಗೆ ಶಿಕ್ಷೆ ಕೊಡಿ. ಅವನ ಅಕ್ರಮದ ಬಗ್ಗೆ ನನಗೆ ಮಾಹಿತಿ ಇಲ್ಲ ಎಂದು ಹೇಳಿ ಸಿಐಡಿ ಪೊಲೀಸರಿಗೆ ಸೆಲ್ಯೂಟ್ ಹೊಡೆದು ಬಂದಿದ್ದರು. ಇದೀಗ ಮಂಜುನಾಥ್ ಸಿಐಡಿ ವಿಚಾರಣೆಗೆ ಒಳಪಟ್ಟಿದ್ದಾನೆ.

ಮೇಳಕುಂದಿ ಮೂರು ಕೋಟಿ ಮನೆ:
ಪಿಎಸ್ಐ ನೇಮಕಾತಿ ಪರೀಕ್ಷೆ ಸೇರಿದಂತೆ ವಿವಿಧ ಅಕ್ರಮಗಳನ್ನು ಎಸಗಿರುವ ಮಂಜುನಾಥ್ ಮೂರು ಕೋಟಿ ರೂ. ಮನೆ ನಿರ್ಮಾಣ ಮಾಡುತ್ತಿರುವ ಸಂಗತಿ ಹೊರ ಬಿದ್ದಿದೆ. ನಿರ್ಮಾಣ ಹಂತದ ಬೃಹತ್ ಬಂಗಲೆಯ ಪೋಟೋಗಳು ಸಾಮಾಜಿಕ ಜಾಲ ತಾಣದಲ್ಲಿ ವೈರಲ್ ಆಗಿವೆ. ನಾಲ್ಕು ವರ್ಷದ ಹಿಂದಷ್ಟೆ ಇಂಜಿನಿಯರ್ ಆಗಿ ಸೇವೆ ಸೇರಿದ್ದ ಮೇಳಕುಂದಿ ಕಲಬುರಗಿಯ ಜನನಗರ ಬಡಾವಣೆಯಲ್ಲಿ ದೊಡ್ಡ ಬಂಗಲೆ ನಿರ್ಮಿಸಿರುವುದು ಬೆಳಕಿಗೆ ಬಂದಿದೆ. ಈತನ ವಿರುದ್ಧ ಅಕ್ರಮ ಆಸ್ತಿ ಗಳಿಕೆ ಸಂಬಂಧ ಎಸಿಬಿ ಪೊಲೀಸರು ದೂರು ದಾಖಲಿಸಿಕೊಂಡು ತನಿಖೆ ನಡೆಸುವ ಸಾಧ್ಯತೆಯಿದೆ.












Click it and Unblock the Notifications