ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಐ ನೇಮಕ ಹಗರಣದ ಆರೋಪಿಗಳು ಜಾಮೀನಿಗೆ ಅರ್ಹರಲ್ಲ!

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು ಜು.22. ರಾಜ್ಯಾದ್ಯಂತ ತೀವ್ರ ಕುತೂಹಲ ಕೆರಳಿಸಿರುವ ಪಿಎಸ್‌ಐ ನೇಮಕ ಅಕ್ರಮ ಹಗರಣದಲ್ಲಿ ಹೈಕೋರ್ಟ್ ಐವರು ಆರೋಪಿಗಳ ಜಾಮೀನು ಅರ್ಜಿ ವಜಾಗೊಳಿಸಿದೆ.

ಅರ್ಜಿಗಳನ್ನು ಆಲಿಸಿ ತೀರ್ಪು ಕಾಯ್ದಿರಿಸಿದ್ದ ನ್ಯಾ.ಹೆಚ್.ಪಿ.ಸಂದೇಶ್ ರವರಿದ್ದ ಏಕಸದಸ್ಯ ಪೀಠ ಶುಕ್ರವಾರ ಆರೋಪಿಗಳಾದ ಸಿ.ಎನ್.ಶಶಿಧರ್, ದಿಲೀಪ್ ಕುಮಾರ್, ಸೂರ್ಯನಾರಾಯಣ, ರಘುವೀರ್, ನವೀನ್ ಪ್ರಸಾದ್ ಅವರುಗಳ ಜಾಮೀನು ಅರ್ಜಿಗಳನ್ನು ವಜಾಗೊಳಿಸಿದೆ.

ಆರೋಪಿಗಳ ಪೈಕಿ‌ ನವೀನ್ ಪ್ರಸಾದ್ ಹೊರತುಪಡಿಸಿ ಉಳಿದ ನಾಲ್ವರು ಬಂಧನಕ್ಕೆ ಒಳಗಾಗಿ, ರೆಗ್ಯುಲರ್ ಜಾಮೀನು ಕೋರಿದ್ದರೆ, ಬ್ಯಾಡರಹಳ್ಳಿ ಪಿಎಸ್ಐ ಆಗಿರುವ ನವೀನ್‌ಪ್ರಸಾದ್ ಬಂಧನ ಭೀತಿಯಿಂದಾಗಿ ನಿರೀಕ್ಷಣಾ ಜಾಮೀನು ಕೋರಿದ್ದರು.

PSI Recruitment scam: HC rejected bail pleas of 5 accused

ಇದೀಗ ಅರ್ಜಿ ವಜಾಗೊಂಡಿರುವುದರಿಂದ ನವೀನ್ ಪ್ರಸಾದ್, ಇದೀಗ ಶರಣಾಗಬೇಕು, ಇಲ್ಲವೇ ಜಾಮೀನು ಕೋರಿ ಸುಪ್ರೀಂಕೋರ್ಟ್ ಮೊರೆ ಹೋಗಬೇಕು.

ಕೋರ್ಟ್ ಆದೇಶವೇನು?‌

"ತನಿಖೆ ಇನ್ನೂ ಪೂರ್ಣಗೊಂಡಿಲ್ಲ, ಜೊತೆಗೆ ಈ ಹಗರಣದ ಕಬಂಧ ಬಾಹುಗಳು ಪೊಲೀಸ್ ಇಲಾಖೆ ಸೇರಿ ಎಲ್ಲೆಡೆ ವ್ಯಾಪಿಸಿದೆ. ಸುಮಾರು 50 ಸಾವಿರ ಜನ ಅಭ್ಯರ್ಥಿಗಳ ಸಂತ್ರಸ್ತರಾಗಿರುವ ಪ್ರಕರಣದಲ್ಲಿ ಹಿರಿಯ ಅಧಿಕಾರಿಗಳು, ಮಧ್ಯವರ್ತಿಗಳು ಹಾಗೂ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ. ಈ ಹಂತದಲ್ಲಿ ಜಾಮೀನು ನೀಡಲಾಗದು'' ಎಂದು ಹೇಳಿದೆ.

ಅಲ್ಲದೆ, ಎಸ್‌ಪಿಪಿ ಜಾಮೀನು ನೀಡಬಾರದೆಂದು ಮಂಡಿಸಿದ್ದ ವಾದಾಂಶಗಳನ್ನು ಎತ್ತಿಹಿಡಿದಿರುವ ನ್ಯಾಯಪೀಠ, ಆರೋಪಿಗಳು ಜಾಮೀನಿಗೆ ಅರ್ಹರಲ್ಲ ಎಂದು ಆದೇಶಿಸಿದೆ.

ಪ್ರಕರಣ ಸಂಬಂಧ ಬಂಧನಕ್ಕೆ ಒಳಗಾಗಿರುವ ಆರೋಪಿಗಳಾದ ಸಿ.ಎನ್.ಶಶಿಧರ್, ಆರ್.ಶರತ್ ಕುಮಾರ್, ಎಚ್.ಯು. ರಘವೀರ್, ಕೆ.ಸಿ. ದಿಲೀಪ್ ಕುಮಾರ್, ಎಚ್.ಆರ್. ಪ್ರವೀಣ್ ಕುಮಾರ್, ಕೆ.ಸೂರಿ ನಾರಾಯಣ್ ಅವರು ಜಾಮೀನು ಕೋರಿ ಮತ್ತು ತಲೆಮರೆಸಿಕೊಂಡಿರುವ ಆರೋಪಿಯಾದ ಬ್ಯಾಡರಹಳ್ಳಿ ಠಾಣೆಯ ಸಬ್ ಇನ್ಸ್‌ಪೆಕ್ಟರ್ ನವೀನ್ ಪ್ರಸಾದ್ ನಿರೀಕ್ಷಣಾ ಜಾಮೀನುಗಾಗಿ ಪ್ರತ್ಯೇಕ ಕ್ರಿಮಿನಲ್ ಅರ್ಜಿಗಳನ್ನು ಸಲ್ಲಿಸಿದ್ದರು.

ಅರ್ಜಿದಾರರ ಪರ ವಕೀಲರು ಜಾಮೀನು ನೀಡುವಂತೆ ಬಲವಾಗಿ ಮನವಿ ಮಾಡಿದರು. ಅದನ್ನು ಆಕ್ಷೇಪಿಸಿದ ರಾಜ್ಯ ಸರ್ಕಾರ ಅಭಿಯೋಜಕ ವಿ.ಎಸ್. ಹೆಗ್ಡೆ ಜಾಮೀನು ಅರ್ಜಿಗಳನ್ನು ವಜಾಗೊಳಿಸಬೇಕು ಎಂದು ಕೋರಿದರು.

ಎಸ್ ಪಿಪಿ ವಿ.ಎಸ್. ಹೆಗಡೆ ಬುಧವಾರ ಹೈಕೋರ್ಟ್ ಗೆ ಪ್ರಕರಣದಲ್ಲಿ ನೇಮಕಾತಿ ವಿಭಾಗದ ಎಡಿಜಿಪಿ ಅಮೃತ್ ಪೌಲ್, ಸಬ್ ಇನ್ಸ್‌ಪೆಕ್ಟರ್ ಸೇರಿದಂತೆ ಕೆಲ ಪೊಲೀಸ್ ಅಧಿಕಾರಿಗಳೇ ಹಗರಣದಲ್ಲಿ ಭಾಗಿಯಾಗಿದ್ದಾರೆ. ಇದರಿಂದ ಇಡೀ ಪೊಲೀಸ್ ಇಲಾಖೆಗೆ ಕೆಟ್ಟ ಹೆಸರು ಬಂದಿದೆ. ಇದಲ್ಲದೇ ಇನ್ನೂ ಹಲವು ಕಪ್ಪು ಕುರಿಗಳು ಹಗರಣದಲ್ಲಿ ಭಾಗಿಯಾಗಿದ್ದು, ಅವರನ್ನು ಪತ್ತೆ ಹಚ್ಚಬೇಕಿದೆ. ಅಮೃತ್ ಪೌಲ್ ತನಿಖೆಗೆ ಸಹಕರಿಸದ ಕಾರಣ ಮಂಪುರು ಪರೀಕ್ಷೆಗೆ ಅನುಮತಿ ಕೋರಲಾಗಿದೆ ಎಂದರು.

ಭಾರಿ ಅಕ್ರಮ:

ಎಸ್‌ಪಿಪಿ ವಾದ ಮಂಡಿಸಿ, ಅರ್ಜಿದಾರರು ಎಸಗಿರುವುದು ಸಾಮಾನ್ಯ ಅಪರಾಧ ಕೃತ್ಯವಲ್ಲ. ಇದೊಂದು ದೊಡ್ಡ ಹಗರಣ ಹಾಗೂ ಸಮಾಜದ ಮೇಲಿನ ಭಯೋತ್ಪಾದನೆ. ಒಟ್ಟು 545 ಪಿಎಸ್‌ಐ ಹುದ್ದೆಗಳಿಗೆ 50 ಸಾವಿರಕ್ಕೂ ಹೆಚ್ಚು ಆಕಾಂಕ್ಷಿಗಳಿದ್ದಾರೆ. ಆದರೆ, ಅರ್ಜಿದಾರರು, ಕೆಲ ಪೊಲೀಸ್ ಅಧಿಕಾರಿಗಳು, ಮಧ್ಯವರ್ತಿಗಳು ಮತ್ತು ಅಭ್ಯರ್ಥಿಗಳು ಅಕ್ರಮ ನಡೆಸಿ ಇಡೀ ನೇಮಕ ಪ್ರಕ್ರಿಯೆ ರದ್ದುಮಾಡುವ ಪರಿಸ್ಥಿತಿ ಸೃಷ್ಟಿಸಿದ್ದಾರೆ. ಅಭ್ಯರ್ಥಿಗಳ ಒಎಂಆರ್ ಶೀಟ್‌ಗಳನ್ನು ತಿದ್ದಲಾಗಿದೆ ಎಂದು ವಿವರಿಸಿದರು.

ಆಗ ನ್ಯಾಯಪೀಠ, ಬೇಲಿಯೇ ಎದ್ದು ಹೊಲ ಮೇಯಲು ಏಕೆ ಬಿಟ್ಟಿರಿ? ಕಪ್ಪು ಕುರಿಗಳನ್ನು ಪತ್ತೆ ಹಚ್ಚುವುದು ಸರ್ಕಾರದ ಕರ್ತವ್ಯವಲ್ಲವೇ? ಅಧಿಕಾರಿಗಳೇ ಅಕ್ರಮ ನಡೆಸಲು ಬಾಗಿಲು ತೆರೆದಿದ್ದಾರಲ್ಲವೇ? ಅವರನ್ನು ಉಕ್ಕಿನ ಕೈಗಳಿಂದ ದಂಡಿಸುವುದು ಸರ್ಕಾರದ ಜವಾಬ್ದಾರಿಯಲ್ಲವೇ? ಎಂದು ಪ್ರಶ್ನಿಸಿತು.

ಎಸ್‌ಪಿಪಿ ಉತ್ತರಿಸಿ, ಯಾವುದೇ ಲೋಪಕ್ಕೆ ಅವಕಾಶವಿಲ್ಲದೆ ಅತ್ಯಂತ ವೈಜ್ಞಾನಿಕ, ವೃತ್ತಿಪರ ಮತ್ತು ಕಾನೂನಾತ್ಮಕವಾಗಿ ತನಿಖೆ ನಡೆಸಲಾಗುತ್ತಿದೆ. ಪ್ರಕರಣದಲ್ಲಿ ಭಾಗಿಯಾಗಿರುವ ಎಲ್ಲಾ ಕಪ್ಪು ಕುರಿಗಳನ್ನು ಪತ್ತೆ ಹಚ್ಚಲಾಗುವುದು. ಇನ್ನೂ ಅಕ್ರಮದಲ್ಲಿ ಎಲ್ಲಾ ಅಭ್ಯರ್ಥಿಗಳು ಭಾಗಿಯಾಗಿದ್ದಾರೆ ಎಂಬುದಾಗಿ ಹೇಳಲಾಗುವುದು. ಕೆಲ ಅಭ್ಯರ್ಥಿಗಳ ಪಾತ್ರವಿದ್ದು, ಅವರ ವಿರುದ್ಧ ಸರ್ಕಾರ ಕಠಿಣ ಕ್ರಮ ತೆಗೆದುಕೊಳ್ಳಲಿದೆ ಎಂದು ನ್ಯಾಯಪೀಠಕ್ಕೆ ಭರವಸೆ ನೀಡಿದರು.

ಹಾಗೆಯೇ, ಸದ್ಯ ಪ್ರಕರಣ ತನಿಖೆಯಲ್ಲಿದೆ. ಅಮೃತ್ ಪೌಲ್ ಅವರ ಮೊಬೈಲ್ ಪೋನ್ ಅನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿ ಬರಬೇಕಿದೆ. ಅದನ್ನು ಆಧರಿಸಿ ಹೆಚ್ಚಿನ ತನಿಖೆ ನಡೆಸಿದರೆ ಮತ್ತಷ್ಟು ಸಂಗತಿಗಳು ಬಯಲಾಗಬಹುದು ಎಂದು ಹೇಳಿದರು.

Recommended Video

India vs West Indies: ಪಂದ್ಯದ ನಂತರ ಶಿಖರ ಧವನ್ ಮತ್ತು ನಿಕೋಲಸ್ ಪೂರನ್ ಏನ್ ಹೇಳಿದ್ರು? | *Cricket | OneIndia

English summary
High Court has rejected the bail application of five accused in the illegal PSI recruitment scam which has aroused intense curiosity across the state.
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X