ತ್ವರಿತ ಅಲರ್ಟ್ ಗಳಿಗಾಗಿ
ನೋಟಿಫಿಕೇಷನ್ ಅನುಮತಿಸಿ  
For Daily Alerts
Oneindia App Download

ಪಿಎಸ್‌ಐ ಅಕ್ರಮ: ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಅಮೃತ್ ಪೌಲ್ ಕೈವಾಡ-ಸಿಐಡಿ

By ಎಸ್ ಎಸ್ ಎಸ್
|
Google Oneindia Kannada News

ಬೆಂಗಳೂರು, ಜುಲೈ 20: ಪೊಲೀಸ್ ಸಬ್ ಇನ್ಸ್ ಪೆಕ್ಟರ್ ನೇಮಕ ಅಕ್ರಮ ಪ್ರಕರಣದಲ್ಲಿ ಬಂಧನಕ್ಕೆ ಒಳಗಾಗಿರುವ ಎಡಿಜಿಪಿ ಅಮೃತ್ ಪೌಲ್ ಅವರ ಕೈವಾಡ ಒಎಂಆರ್ ಶೀಟ್ ತಿದ್ದುಪಡಿಯಲ್ಲಿ ಇರುವುದು ಬಹುತೇಕ ಸಾಬೀತಾಗಿದೆ ಎಂದು ಸಿಐಡಿ ಹೇಳಿದೆ.

ಪ್ರಕರಣಕ್ಕೆ ಸಂಬಂಧಿಸಿದಂತೆ ಜಾಮೀನು ಕೋರಿ ಅಮೃತ್ ಪೌಲ್ ಸಲ್ಲಿಸಿರುವ ಜಾಮೀನು ಅರ್ಜಿ ವಿಚಾರಣೆ ವೇಳೆ ಸಿಐಡಿ ನಗರದ 1ನೇ ಎಸಿಎಂಎಂ ನ್ಯಾಯಾಲಯದ ನ್ಯಾಯಾಧೀಶ ಆನಂದ ಚೌಹಾಣ್ ಅವರ ಮುಂದೆ ಸಲ್ಲಿಸಿದ ಆಕ್ಷೇಪಣೆಯಲ್ಲಿ ಈ ವಿಷಯ ಹೇಳಿದೆ.

"ಪ್ರಕರಣದ ಪೊಲೀಸ್ ನೇಮಕ ವಿಭಾಗದ ಎಡಿಜಿಪಿಯಾಗಿದ್ದ ಅಮೃತ್ ಪೌಲ್ ಪಾತ್ರವೂ ತನಿಖೆ ಯಲ್ಲಿ ಬಯಲಾಗಿದೆ. ಅವರನ್ನು 35ನೇ ಆರೋಪಿಯನ್ನಾಗಿಸಿ ಬಂಧಿಸಿ ವಿಚಾರಣೆ ನಡೆಸಲಾಗಿದೆ. ಓಎಂಆರ್ ಶೀಟ್‌ಗಳನ್ನು ಒಳಗೊಂಡ ಕಿಟ್ ಬಾಕ್ಸ್‌ನ ಕೀಗಳು ನೇಮಕಾತಿ ವಿಭಾಗದ ಮುಖ್ಯಸ್ಥ ಎಡಿಜಿಪಿ ಅವರ ಬಳಿಯಿರುತ್ತದೆ. ಓಎಂಆರ್ ಶೀಟ್‌ಗಳು ಸ್ಟ್ರಾಂಗ್ ರೂಂನಲ್ಲಿರುತ್ತದೆ. ಇತರೆ ಆರೋಪಿಗಳ ಜೊತೆ ಸೇರಿ ಒಳಸಂಚು ರೂಪಿಸಿ ಉದ್ದೇಶಪೂರ್ವಕವಾಗಿ ಸ್ಟ್ರಾಂಗ್ ರೂಂ ಕೀ ನೀಡಲಾಗಿದೆ. ಸಹ ಆರೋಪಿಗಳು ಓಎಂಆರ್ ಶೀಟ್‌ಗಳನ್ನು ಪಡೆದು ತಿದ್ದಿದ್ದಾರೆ. ಆ ಮೂಲ ಆರೋಪಿಗಳ ಗಂಭೀರ ಅಪರಾಧ ಕೃತ್ಯ ಎಸಗಿದ್ದಾರೆ. ಪ್ರಕರಣಕ್ಕೆ ಸಂಬಂಧ ಸಂಗ್ರಹಿಸಿರುವ ದಾಖಲೆಗಳು ಅಮೃತ್ ಪಾಲ್ ಪಾತ್ರವಿರುವುದು ಸ್ಪಷ್ಟವಾಗಿದೆ''ಎಂದು ಸಿಐಡಿ ತಿಳಿಸಿದೆ.

PSI Recruitment scam: CID filed objections against bail plea of ADGP

ಸಾಕ್ಷ್ಯ ನಾಶ ಸಾಧ್ಯತೆ: ಅಲ್ಲದೆ, ಪ್ರಕರಣದ ತನಿಖೆ ಇನ್ನೂ ಪ್ರಗತಿಯಲ್ಲಿದೆ. ಇಂತಹ ಗಂಭೀರ ಪ್ರಕರಣದಲ್ಲಿ ಭಾಗಿಯಾಗಿರುವ ಆರೋಪಿಗೆ ಪ್ರಾಥಮಿಕ ಹಂತದಲ್ಲಿ ಜಾಮೀನು ನೀಡಿದರೆ ಸಾಕ್ಷ್ಯ ನಾಶಪಡಿಸುವ ಸಾಧ್ಯತೆಯಿದೆ. ಸಿಐಡಿ ಪೊಲೀಸ್ ಮುಂದೆ ಹೇಳಿಕೆ ನೀಡಿದ್ದ ಸಿಬ್ಬಂದಿಗೆ ಅರ್ಜಿದಾರ ಬೆದರಿಕೆ ಹಾಕಿದ್ದಾರೆ.

ಹಿರಿಯ ಅಧಿಕಾರಿಯಾಗಿರುವ ಅರ್ಜಿದಾರರು ತಮ್ಮ ಸಿಬ್ಬಂದಿ ಮತ್ತು ಮಧ್ಯವರ್ತಿಗಳೊಂದಿಗೆ ಒಳಸಂಚು ರೂಪಿಸಿ ಓಎಂಆರ್ ಶೀಟ್ ತಿದ್ದುಪಡಿ ಮಾಡಿದ್ದಾರೆ. ಅವರ ಮೊಬೈಲ್ ಪೋನ್ ಜಪ್ತಿ ಮಾಡಿ ಎಫ್‌ಎಸ್‌ಎಲ್‌ಗೆ ಕಳುಹಿಸಲಾಗಿದ್ದು, ವರದಿಗೆ ನಿರೀಕ್ಷಿಸಲಾಗಿದೆ. ಇದನ್ನು ಹೊರತುಪಡಿಸಿ ಸಾಕ್ಷಿಗಳ ಹೇಳಿಕೆ ದಾಖಲಿಸಿಕೊಳ್ಳಲಾಗುತ್ತಿದೆ. ಈ ಹಂತದಲ್ಲಿ ಅರ್ಜಿದಾರ ಆರೋಪಿಗೆ ಜಾಮೀನು ನೀಡಿದರೆ, ತನಿಖೆಗೆ ಅಡ್ಡಿಯುಂಟಾಗುತ್ತದೆ ಎಂದು ಆಕ್ಷೇಪಣೆಯಲ್ಲಿ ಹೇಳಲಾಗಿದೆ.

ಪ್ರಕರಣದ ಗಂಭೀರತೆ ಮತ್ತು ಅದರಿಂದ ಸಮಾಜದ ಮೇಲೆ ಆಗಿರುವ ಪರಿಣಾಮ ಪರಿಗಣಿಸಿ ಸರ್ಕಾರ ತನಿಖೆಯನ್ನು ಸಿಐಡಿಗೆ ವರ್ಗಾಯಿಸಿದೆ. ಪ್ರಕರಣದ ತನಿಖೆ ಸಂದರ್ಭದಲ್ಲಿ 122 ಯಶಸ್ವಿ ಅಭ್ಯರ್ಥಿಗಳಿಗೆ ಅವರ ಓಎಂಆರ್ ಕಾರ್ಬನ್ ಶೀಟ್ ಮತ್ತು ಹಾಲ್ ಟಿಕೆಟ್ ನೀಡಲು ಸೂಚಿಸಲಾಗಿತ್ತು. ನಾಲ್ಕು ಅಭ್ಯರ್ಥಿಗಳು ಹೊರತುಪಡಿಸಿ ಉಳಿದ ಅಭ್ಯರ್ಥಿಗಳು ಓಎಂಆರ್ ಕಾರ್ಬನ್ ಶೀಟ್ ಮತ್ತು ಹಾಲ್ ಟಿಕೆಟ್ ನೀಡಿದ್ದರು. ಅವುಗಳನ್ನು ಎಫ್‌ಎಸ್‌ಎಲ್‌ಗೆ ಕಳುಹಿಸಿಕೊಡಲಾಗಿತ್ತು. ಅದರಲ್ಲಿ 22 ಅಭ್ಯರ್ಥಿಗಳ ಮೂಲ ಓಎಂಆರ್ ಶೀಟ್ ಜೊತೆಗೆ ಕಾರ್ಬನ್ ಶೀಟ್ ಹೊಂದಾಣಿಕೆಯಾಗಿರಲಿಲ್ಲ. ಇದರಿಂದ ಹೈ ಗ್ರೌಂಡ್ಸ್ ಪೊಲೀಸ್ ಠಾಣೆಯಲ್ಲಿ ಎಫ್‌ಐಆರ್ ಆಗಿತ್ತು ಎಂದು ಆಕ್ಷೇಪಣೆಯಲ್ಲಿ ಸಿಐಡಿ ತಿಳಿಸಿದೆ.
ಪ್ರಕರಣದ 7, 9, 17,18, 36 ಮತ್ತು 37ನೇ ಆರೋಪಿ ತಲೆಮರೆಸಿಕೊಂಡಿದ್ದು, ಈವರೆಗೂ ಪತ್ತೆಯಾಗಿಲ್ಲ. ಈ ಎಲ್ಲಾ ಆರೋಪಿಗಳನ್ನು ಬಂಧಿಸಿ, ಅರ್ಜಿದಾರರೊಂದಿಗೆ ಪಿತೂರಿ ಬಗ್ಗೆ ತನಿಖೆ ನಡೆಸಬೇಕಿದೆ. ಆದ್ದರಿಂದ ಜಾಮೀನು ಅರ್ಜಿ ವಜಾಗೊಳಿಸಬೇಕು ಎಂದು ಸಿಐಡಿ ಕೋರಿದೆ.

Recommended Video

Jhulan Goswamiಯ ಬೆಂಕಿ ಬೌಲಿಂಗ್ ಗೆ KL Rahul ಬ್ಯಾಟ್ ಬೀಸಿದ್ದು ಫುಲ್ ವೈರಲ್ | *Cricket | OneIndia Kannada

ಮಂಪರು ಪರೀಕ್ಷೆಗೆ ನಕಾರ: ಪೊಲೀಸ್ ಸಬ್ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಹಗರಣದ ಪ್ರಮುಖ ಆರೋಪಿಯಾದ ಐಪಿಎಸ್ ಅಧಿಕಾರಿ ಅಮ್ರಿತ್ ಪೌಲ್ ಮಂಪರು ಪರೀಕ್ಷೆಗೆ ಒಳಪಡಲು ನಿರಾಕರಿಸಿದ್ದಾರೆ.

ಈ ಮಧ್ಯೆ ಅಮೃತ್ ಪೌಲ್ ಅವರನ್ನು ಮಂಪರು ಪರೀಕ್ಷೆಗೆ ಒಳಪಡಿಸಲು ಅನುಮತಿ ಕೋರಿ ಸಿಐಡಿ ಸಹ ಅರ್ಜಿ ಸಲ್ಲಿಸಿತ್ತು. ಅದಕ್ಕೆ ಸಲ್ಲಿಸಿದ್ದ ಆಕ್ಷೇಪಣೆ ಸಲ್ಲಿಸಿರುವ ಅಮೃತ್ ಪೌಲ್ ಪರ ವಕೀಲರು, ಮಂಪರು ಪರೀಕ್ಷೆಗೆ ಒಪ್ಪಿಗೆ ನೀಡಲು ನಿರಾಕರಿಸಿದರು. ಅರ್ಜಿದಾರರು ಉತ್ತಮ ಸೇವಾ ನಡತೆ ಹೊಂದಿದ್ದಾರೆ. ಮುಗ್ದ ಮತ್ತು ಅಮಾಯಕರಾಗಿರುವವರನ್ನು ಪ್ರಕರಣದಲ್ಲಿ ತಪ್ಪಾಗಿ ಸಿಲುಕಿಸಲಾಗಿದೆ. ಅವರ ವಿರುದ್ಧ ಬೇರೆ ಯಾವುದೇ ಆರೋಪಗಳಿಲ್ಲ. ತನಿಖೆಗೆ ಸಂಪೂರ್ಣ ಸಹಕಾರ ನೀಡುತ್ತಾರೆ. ಆದ್ದರಿಂದ, ಜಾಮೀನು ನೀಡಬೇಕು ಎಂದು ಕೋರಿದರು.

English summary
PSI Recruitment scam: ADGP colluded with middlemen and helped for tampering OMR sheets: CID filed objections against bail plea
ತಾಜಾ ಸುದ್ದಿ ತಕ್ಷಣ ಪಡೆಯಿರಿ
Enable
x
Notification Settings X
Time Settings
Done
Clear Notification X
Do you want to clear all the notifications from your inbox?
Settings X