ಪಿಎಸ್‌ಐ ಅಕ್ರಮ ನೇಮಕ ಹಗರಣ: ಆರೋಪಿಗಳ ಜಾಮೀನು ಅರ್ಜಿ ವಜಾ
ಬೆಂಗಳೂರು ಮೇ 20. ಪಿಎಸ್ಐ ನೇಮಕದಲ್ಲಿ ಅಕ್ರಮ ನಡೆಸಿದ ಆರೋಪ ಎದುರಿಸುತ್ತಿರುವ ರಚನಾ ಮತ್ತು ಜಾಗೃತ್ ನಿರೀಕ್ಷಣಾ ಜಾಮೀನು ಅರ್ಜಿಯನ್ನು ನಗರದ ನ್ಯಾಯಾಲಯ ವಜಾ ಮಾಡಿದೆ.
ಬೆಂಗಳೂರಿನ 52 ನೇ ಸಿಸಿಹೆಚ್ ಕೋರ್ಟ್ ಈ ಆದೇಶ ನೀಡಿದೆ. ಇದರಿಂದಾಗಿ ಆರೋಪಿಗಳಿಬ್ಬರು ಬಂಧನ ಭೀತಿ ಎದುರಿಸುವಂತಾಗಿದೆ.
ಸರ್ಕಾರದ ಪರ ಅಭಿಯೋಜಕರು, ಆರೋಪಿಗಳು ಪ್ರಭಾವಿ ಅಧಿಕಾರಿಗಳೊಂದಿಗೆ ಸೇರಿ ಸಂಚು ಮಾಡಿದ್ದಾರೆ. ಸರ್ಕಾರದ ನೇಮಕಾತಿ ಅಧಿಸೂಚನೆ ಬುಡಮೇಲು ಮಾಡಿದ್ದಾರೆ. ಪ್ರತಿಭಾವಂತ ವಿದ್ಯಾರ್ಥಿಗಳಿಗೆ ಅನ್ಯಾಯ ಎಸಗಿದ್ದಾರೆ.ಜಾಮೀನು ನೀಡಿದರೆ ತನಿಖೆಗೆ ಹಿನ್ನಡೆಯಾಗುತ್ತದೆ ಎಂದು ವಾದ ಮಂಡಿಸಿದ್ದರು. ಅದನ್ನು ಪುರಸ್ಕರಿಸಿರುವ ನ್ಯಾಯಾಲಯ ನಿರೀಕ್ಷಣಾ ಜಾಮೀನು ಅರ್ಜಿ ತಿರಸ್ಕರಿಸಿದೆ. ಹಾಗಾಗಿ ಪ್ರಕರಣ ಹೊಸ ತಿರುವು ಪಡೆದುಕೊಳ್ಳುತ್ತಿದೆ.
ನೋಟಿಸ್ ಜಾರಿ:
ಪಿಎಸ್ಐ ನೇಮಕ ಅಕ್ರಮ ಆರೋಪ ಪ್ರಕರಣದಲ್ಲಿ ಇಬ್ಬರು ಆರೋಪಿಗಳಾದ ರಚನಾ, ಜಾಗೃತ್ ಎಫ್ಐಆರ್ ರದ್ದು ಕೋರಿದ್ದ ಅರ್ಜಿಯಲ್ಲಿ ಹೈಕೋರ್ಟ್ ಸರ್ಕಾರಕ್ಕೆ ನೋಟಿಸ್ ಜಾರಿಗೊಳಿಸಿ, ವಿಚಾರಣೆಯನ್ನು ಮೇ. 25 ಕ್ಕೆ ಮುಂದೂಡಿತು.
ಅರ್ಜಿದಾರರ ಪರ ವಾದಿಸಿದ ವಕೀಲರು ನಿಯಮದಂತೆ ಎರಡನೇ ಎಫ್ಐಆರ್ ಕಾನೂನುಬಾಹಿರ, ಹಾಗಾಗಿ ಸಿಐಡಿಯ ಸ್ವಯಂ ಪ್ರೇರಿತ ಕೇಸ್ ರದ್ದು ಮಾಡಬೇಕೆಂದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕ ಪ್ರಕರಣದಲ್ಲಿ ತಮ್ಮ ವಿರುದ್ಧ ದಾಖಲಾಗಿರುವ ಎಫ್ ಐಆರ್ ರದ್ದುಪಡಿಸುವಂತೆ ಕೋರಿ ಆರೋಪಿಗಳಾದ ಜಾಗೃತ್ ಮತ್ತು ರಚನಾ ಹನುಮಂತ ಹೈಕೋರ್ಟ್ ಮೊರೆ ಹೋಗಿದ್ದರು.
ಅರ್ಜಿದಾರರ ವಾದವೇನು?
"ಪರೀಕ್ಷಾ ಕೇಂದ್ರದಲ್ಲಿ ಸಿಸಿಟಿವಿ ಅಳವಡಿಸಲಾಗಿತ್ತು. ಮೇಲ್ವಿಚಾರಕರು ಮತ್ತು ವಿಚಕ್ಷಣಾ ಸ್ಕ್ವಾಡ್ ಪರೀಕ್ಷಾ ಕೇಂದ್ರದ ಮೇಲೆ ನಿಗಾಯಿಟ್ಟಿದ್ದರು. ಇಂತಹ ಸಂದರ್ಭದಲ್ಲಿ ಪರಿಕ್ಷಾ ಕೇಂದ್ರದಲ್ಲಿ ಯಾವುದೇ ರೀತಿ ನಕಲು ಹಾಗೂ ಅಕ್ರಮ ನಡೆಯಲು ಸಾಧ್ಯವಿಲ್ಲ. ಪರೀಕ್ಷೆ ನಡೆದು ಬಹುತೇಕ ಒಂದು ವರ್ಷ ಕಳೆದಿದೆ. ಫಲಿತಾಂಶ ಪ್ರಕಟಗೊಂಡ ನಂತರ ಎಫ್‌ಐಆರ್ ದಾಖಲಿಸಲಾಗಿದೆ'' ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. ಅಲ್ಲದೆ, ಈ ಅರ್ಜಿ ನ್ಯಾಯಾಲಯದಿಂದ ಇತ್ಯರ್ಥಪಡಿಸುವರೆಗೂ ಪ್ರಕರಣ ಕುರಿತ ತನಿಖೆಗೆ ತಡೆಯಾಜ್ಞೆ ನೀಡಬೇಕು ಎಂದು ಅರ್ಜಿದಾರರು ಮಧ್ಯಂತರ ಮನವಿ ಮಾಡಿದ್ದಾರೆ.
"ಸಿಐಡಿ ಪೊಲೀಸ್ ಅಧಿಕಾರಿ ನರಸಿಂಹ ಮೂರ್ತಿ ಪ್ರಕರಣ ಸಂಬಂಧ ದೂರು ದಾಖಲಿಸಿದ್ದಾರೆ. ಅವರೇ ತನಿಖಾ ತಂಡದಲ್ಲಿ ಸಹಕಾಯಕ ತನಿಖಾಧಿಕಾರಿಯಾಗಿದ್ದಾರೆ. ಈವರೆಗೂ ನಡೆದಿರುವ ಸಿಐಡಿ ತನಿಖೆಯಲ್ಲಿ ಅಕ್ರಮದಲ್ಲಿ ಭಾಗಿಯಾಗಿರುವ ಬಗ್ಗೆ ತಮ್ಮ ವಿರುದ್ಧ ಯಾವುದೇ ಆರೋಪ ಕೇಳಿಬಂದಿಲ್ಲ ಮತ್ತು ಸಾಕ್ಷ್ಯಾಧಾರಗಳೂ ಇಲ್ಲ. ಆದರೂ ಪ್ರಕರಣದಲ್ಲಿ ತಮ್ಮನ್ನು ಸಿಲುಕಿಸುವ ಉದ್ದೇಶದಿಂದ ಎಫ್‌ಐಆರ್ ದಾಖಲಿಸಲಾಗಿದೆ. ಆದ್ದರಿಂದ ತಮ್ಮ ವಿರುದ್ಧದ ಎಫ್ ಐಆರ್ ರದ್ದುಪಡಿಸಬೇಕು ಎಂದು ಕೋರ್ಟ್ ಮೊರೆ ಹೋಗಿದ್ದಾರೆ.
ಪ್ರಕರಣದ ಹಿನ್ನೆಲೆ:
545 ಪಿಎಸ್ ಐ ಹುದ್ದೆಗಳ ನೇಮಕ ಅಕ್ರಮ ಹಗರಣದಲ್ಲಿ ಪಾಲ್ಗೊಂಡ ಆರೋಪ ಸಂಬಂಧ ಸಿಐಡಿ ಪೊಲೀಸ್ ಅಧಿಕಾರಿ ಪಿ.ನರಸಿಂಹಮೂರ್ತಿ ಎಂಬುವರ ನೀಡಿದ ದೂರು ಆಧರಿಸಿ ಹೈಗ್ರೌಂಡ್ಸ್ ಠಾಣಾ ಪೊಲೀಸರು ತಾತ್ಕಾಲಿಕ ಆಯ್ಕೆ ಪಟ್ಟಿಯಲ್ಲಿ ನಾಲ್ಕನೇ ಸ್ಥಾನ ಪಡೆದಿರುವ ಜಾಗೃತ್ ವಿರುದ್ಧ 2022ರ ಏ.9ರಂದು ಎಫ್‌ಐಆರ್ ದಾಖಲಿಸಿದ್ದರು. ಅಂತೆಯೇ ಮಹಿಳಾ ವಿಭಾಗದಲ್ಲಿ
ಪ್ರಥಮ ಸ್ಥಾನ ಪಡೆದಿರುವ ರಚನಾ ಹನುಮಂತ ವಿರುದ್ಧ ಏ.30ರಂದು ಎಫ್‌ಐಆರ್ ದಾಖಲಿಸಿದ್ದರು.