ಪಿಎಸ್‌ಐ ನೇಮಕಾತಿ ವಿಳಂಬ: ಮುಂಬಡ್ತಿ ಮೂಲಕ ಹುದ್ದೆಗಳ ಭರ್ತಿ
ಬೆಂಗಳೂರು, ಮೇ 8: ಪಿಎಸ್‌ಐ ಹುದ್ದೆಯ ನೇಮಕಾತಿ ಪರೀಕ್ಷೆಯಲ್ಲಿ ಅಕ್ರಮ ನಡೆದಿರುವ ಕಾರಣ ಮರು ಪರೀಕ್ಷೆಗೆ ಆದೇಶಿಸಲಾಗಿದೆ. ಇದರಿಂದ ಪಿಎಸ್‌ಐ ಹುದ್ದೆಗಳ ಅಭಾವ ಕಾಡಲಿದೆ. ಹೀಗಾಗಿ ಎಎಸ್‌ಐಗಳನ್ನು ಜೇಷ್ಠತೆ ಆಧಾರದಲ್ಲಿ ಪಿಎಸ್‌ಐ ಹುದ್ದೆಗೆ ಮುಂಬಡ್ತಿ ನೀಡಲು ನಿರ್ಧರಿಸಲಾಗಿದೆ.
ಪಿಎಸ್‌ಐ ಅಕ್ರಮ ನೇಮಕಾತಿ ಹಗರಣ ನಡೆಯದಿದ್ದರೇ ಅಥವಾ ಅಕ್ರಮ ಬೆಳಕಿಗೆ ಬರದಿದ್ದರೇ ಅಂತಿಮ ಲಿಸ್ಟ್‌ನಲ್ಲಿದ್ದ 545 ಅಭ್ಯರ್ಥಿಗಳು ಇಷ್ಟೊತ್ತಿಗಾಗಲೇ ಹೆಗಲ ಮೇಲೆ ಸಿಂಗಲ್ ಸ್ಟಾರ್ ಯುನಿಫಾರ್ಮ್ ಹಾಕಿಕೊಂಡು ಫ್ರೊಬೇಷನರಿ ಪಿರಿಯಡ್ ಸೇವೆಗೆ ಅಣಿಯಾಗಬೇಕಿತ್ತು. ಆದರೆ ಅದೆಷ್ಟೋ ಅಭ್ಯರ್ಥಿಗಳು ಸರ್ಕಾರಿ ಪೊಲೀಸ್ ಹುದ್ದೆಗೆ ಆಸೆಪಟ್ಟು ಅಕ್ರಮದಲ್ಲಿ ಪಾಲ್ಗೊಂಡು ಹಣವನ್ನು ಕಳೆದುಕೊಂಡು ಜೈಲು ಸೇರುತ್ತಿದ್ದಾರೆ.
ಇದರಿಂದಾಗಿ ಪಿಎಸ್‌ಐ ಪರೀಕ್ಷೆ ರದ್ದಾಗಿ ಹೊಸದಾಗಿ ಪರೀಕ್ಷೆ ನಡೆಸಬೇಕಿದೆ. ಇನ್ನು ಅಂತಿಮ ಲಿಸ್ಟ್‌ನಲ್ಲಿದ್ದ ಕೆಲವು ಅಭ್ಯರ್ಥಿಗಳು ನ್ಯಾಯಕ್ಕಾಗಿ ಕೆಇಟಿ ಮೊರೆ ಹೋಗಿರುವ ಕಾರಣ ಪರೀಕ್ಷೆಯು ತಡವಾಗಲಿದೆ. ಇದರಿಂದ ಬಡ್ತಿಯ ನಿರೀಕ್ಷೆಯಲ್ಲಿದ್ದ ಎಎಸ್ ಐಗಳಿಗೆ ಅದೃಷ್ಟ ಖುಲಾಯಿಸಲಿದೆ.

ಎಎಸ್‌ಐ ಗಳಿಗೆ ಮುಂಡ್ತಿಯ ಆದೇಶ
ಪಿಎಸ್‌ಐ ನೇಮಕಾತಿ ಪ್ರಕ್ರಿಯೆ ಪೂರ್ಣಗೊಳ್ಳಲು ಇನ್ನು ಸ್ವಲ್ಪ ತಡವಾಗುವ ಕಾರಣ ತಮ್ಮ ವಲಯದ ಕಮೀಷನರೇಟ್ ಘಟಕಗಳಲ್ಲಿ ಎಲ್ಲ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ ನೀಡುವುದು ಹಾಗೂ ಜೇಷ್ಟತೆ ಆಧಾರದಲ್ಲಿ ಮುಂಬಡ್ತಿಗೆ ಅರ್ಹರಿದ್ದಾರೆ. ಒಂದು ವರ್ಷದ ಅವಧಿಯ ವಯೋಮಿತಿಯಲ್ಲಿ ನಿವೃತ್ತಿ ಹೊಂದಲಿರುವ ಅಥವಾ ವಯೋಮಿತಿ ಅಂಚಿನಲ್ಲಿರುವ ಎಎಸ್‌ಐಗಳು ಲಭ್ಯರಿದ್ದು, ಮುಂಬಡ್ತಿ ಹುದ್ದೆಗಳು ಇಲ್ಲದಿದ್ದಲ್ಲಿ ಅಂತಹ ಸಿಬ್ಬಂದಿಗಳಿಗೆ ಸಂಬಂಧಪಟ್ಟ ಹುದ್ದೆಯ ಜೇಷ್ಠತೆ ಪಟ್ಟಿಯಲ್ಲಿ ಜೇಷ್ಟತೆ ಮತ್ತು ಮುಂಬಡ್ತಿಗೆ ಪರಿಗಣಿಸಿ ತೃಪ್ತಿಕರ ಸೇವೆಯನ್ನು ಆಧರಿಸಿಕೊಂಡು ನಿಯಮಗಳ ಅನುಸಾರ ನೇರಾ ನೇಮಕಾತಿ ಹುದ್ದೆಗಳಿಗೆ ಎದುರಾಗಿ ಕರ್ನಾಟಕ ನಾಗರೀಕ ಸೇವಾ ನಿಯಮ 32 ಅಡಿಯಲ್ಲಿ ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿರಿಸಲು ಕ್ರಮ ಜರಗಿಸುವುದು ಎಂದು ಡಿಜಿ , ಐಜಿಪಿ ಪ್ರವೀಣ್ ಸೂದ್ ಆದೇಶಿಸಿದ್ದಾರೆ.
ಪಿಎಸ್‌ಐ ಮುಂಬಡ್ತಿಗೆ ಹಕ್ಕೊತ್ತಾಯ ಮಾಡುವಂತಿಲ್ಲ..!
ಇನ್ನು ಪಿಎಸ್‌ಐ ಆಗಿ ಮುಂಬಡ್ತಿ ಪಡೆದ ಎಎಸ್‌ಐ ಗಳ ಸ್ವತಂತ್ರ ಪ್ರಭಾರವು ತಾತ್ಕಾಲಿಕವಾಗಿದ್ದ. ಯಾವುದೇ ಜೇಷ್ಠತೆ ಮತ್ತು ಪೂರ್ವಾನ್ವಯವಾಗುವ ಮುಂಬಡ್ತಿಗೆ ಹಕ್ಕೊತ್ತಾಯ ಮಾಡುವಂತಿಲ್ಲ. ನೇರ ನೇಮಕಾತಿಯ ಅಭ್ಯರ್ಥಿಗಳು ವರದಿ ಮಾಡಿದ ಕೂಡಲೇ ಸ್ವತಂತ್ರ ಪ್ರಭಾರದ ಮುಂಬಡ್ತಿಯನ್ನು ರದ್ದುಗೊಳಿಸಲಾಗುತ್ತದೆ. ಈ ಅಂಶವನ್ನು ಮುಂಬಡ್ತಿ ಪಡೆಯುವ ಸಿಬ್ಬಂದಿಯವರ ಗಮನಕ್ಕೆತಂದು, ಅವರಿಂದ ಲಿಖಿತ ಒಪ್ಪಿಗೆ ಪತ್ರ ಅಥವಾ ಮುಚ್ಚಳಿಕೆ ಪತ್ರವನ್ನು ಪಡೆದು ನಂತರ ನಿಯಮಾನುಸಾರ ನಂತರ ಸ್ವತಂತ್ರ ಪ್ರಭಾರದಲ್ಲಿರಿಸುವ ಕ್ರಮವನ್ನು ಕೈಗೊಳ್ಳುವಂತೆ ತಿಳಿಸಲಾಗಿದೆ.

ಸಂಬಂಧಪಟ್ಟ ವಲಯದ ಘಟಕಾಧಿಕಾರಿಗಳು / ಕಮಿಷನರೇಟ್ ಘಟಕಾಧಿಕಾರಿಗಳು ಕೂಡಲೇ ಹುದ್ದೆಯಾಧರಿತ ಪದ್ದತಿ ಅಡಿ ತಮ್ಮ ವಲಯ /ಕಮೀಷನರೇಟ್ ಘಟಕಗಳಲ್ಲಿನ ಮುಂಬಡ್ತಿ ಹುದ್ದೆಗಳಿಗೆ ಕೂಡಲೇ ಮುಂಬಡ್ತಿ/ ಸ್ವತಂತ್ರ ಪ್ರಭಾರದಲ್ಲಿರಿಸುವ ಪ್ರಕ್ರಿಯೆಯನ್ನು ಕೈಗೊಳ್ಳುವುದು ಹಾಗು ಕೈಗೊಂಡ ಕ್ರಮದ ಮಾಹಿತಿಯನ್ನು , ಹುದ್ದೆಯಾಧರಿದ ಮುಂಬಡ್ತಿಯ ಮಾಹಿತಿಯನ್ನು ಪ್ರಧಾನ ಕಚೇರಿಗೆ ತಲುಪಿಸಲು ಪ್ರವೀಣ್ ಸೂದ್ ರವರು ತಿಳಿಸಿದ್ದಾರೆ.

ಇನ್ನು ಪಿಎಸ್‌ಐ ಹುದ್ದೆಗೆ ನೇರ ನೇಮಕಾತಿಯಾಗಿದ್ದರೆ ಅದೆಷ್ಚೋ ಎಎಸ್‌ಐಗಳು ವೃತ್ತಿ ಜೀವನದಲ್ಲಿ ಪಿಎಸ್‌ಐ ಗಳಾಗಲು ಸಾಧ್ಯವಾಗುತ್ತಿರಲಿಲ್ಲ. ಪಿಎಸ್ ಐ ಹಗರಣಗಳಿಂದಾಗಿ ಎಎಸ್‌ಐ ಹುದ್ದೆಯಲ್ಲಿರುವ ಇಲಾಖೆಯಲ್ಲಿ ಸೇವೆ ಸಲ್ಲಿಸಿರುವವರಿಗೆ ಜೇಷ್ಠತೆ ಆಧಾರದಲ್ಲಿ ಪಿಎಸ್‌ಐ ಆಗಿ ಮುಂಬಡ್ತಿ ಸಿಕ್ತಿದೆ. ಕೆಲವರು ತಾತ್ಕಾಲಿಕವಾಗಿ ಸ್ವತಂತ್ರ ಪ್ರಭಾರದಲ್ಲಿ ಪಿಎಸ್‌ಐ ಗಳಾಗುತ್ತಿದ್ದಾರೆ. ಇದು ನಿಜಕ್ಕೂ ಇಲಾಖೆೆಯಲ್ಲಿ ಸೇವೆ ಸಲ್ಲಿಸಿ ನಿವೃತ್ತಿ ಅಂಚಿನಲ್ಲಿರುವ ಎಎಸ್ ಐ ಗಳಿಗೆ ಸಂತಸದ ವಿಚಾರವಾಗಿದೆ.












Click it and Unblock the Notifications