ದೊಡ್ಡಬಳ್ಳಾಪುರ ಎಸ್‌ಐ ಜಗದೀಶ್ ಹತ್ಯೆಯಾಗಿದ್ದು ಹೇಗೆ?
ಬೆಂಗಳೂರು, ಅಕ್ಟೋಬರ್ 16 : ದೊಡ್ಡಬಳ್ಳಾಪುರ ಠಾಣೆಯ ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ಜಗದೀಶ್ ಅವರನ್ನು ಕಳ್ಳರು ಹತ್ಯೆ ಮಾಡಿದ್ದಾರೆ. 'ಜಗದೀಶ್ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುತ್ತದೆ. ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸುವಂತೆ ಸರ್ಕಾರಕ್ಕೆ ಮನವಿ ಸಲ್ಲಿಸಲಾಗುತ್ತದೆ' ಎಂದು ರಾಜ್ಯ ಪೊಲೀಸ್ ಮಹಾನಿರ್ದೇಶಕ ಓಂ ಪ್ರಕಾಶ್ ಹೇಳಿದರು.
ಬೆಂಗಳೂರಿನಲ್ಲಿ ಶುಕ್ರವಾರ ಸಂಜೆ ಪತ್ರಿಕಾಗೋಷ್ಠಿ ನಡೆಸಿದ ಓಂ ಪ್ರಕಾಶ್ ಅವರು ಘಟನೆಯ ಕುರಿತು ಮಾಹಿತಿ ನೀಡಿದರು. 'ಜಗದೀಶ್ ಅವರ ಸಾಹಸದ ಬಗ್ಗೆ ನಮಗೆ ಹೆಮ್ಮೆ ಇದೆ. ಶೌರ್ಯ ಪ್ರಶಸ್ತಿಗೆ ಅವರ ಹೆಸರನ್ನು ಶಿಫಾರಸು ಮಾಡಲಾಗುತ್ತದೆ' ಎಂದು ತಿಳಿಸಿದರು. [ಜಗದೀಶ್ ಪರಿಚಯ]

ಘಟನೆ ನಡೆದದ್ದು ಹೇಗೆ?: ಎಸ್‌ಐ ಜಗದೀಶ್, ಪೇದೆ ವೆಂಕಟೇಶ ಮೂರ್ತಿ ಮತ್ತು ಇತರ ಇಬ್ಬರು ಪೇದೆಗಳು ಕೃಷ್ಣ ಮತ್ತು ಮಧು ಎಂಬ ಬೈಕ್ ಕಳ್ಳರನ್ನು ಹಿಡಿಯಲು ಹೋಗಿದ್ದರು. 11.30ರ ಸುಮಾರಿಗೆ ಕೃಷ್ಣ ಹಿರೋ ಹೊಂಡಾ ಶೋ ರೂಂನಲ್ಲಿದ್ದ. [ದೊಡ್ಡಬಳ್ಳಾಪುರ ಎಸ್ ಐ ಹತ್ಯೆ]
ಎಸ್‌ಐ ಜಗದೀಶ್ ಮತ್ತು ನಾಲ್ವರು ಪೇದೆಗಳು ನಾಲ್ಕು ಕಡೆಗಳಿಂದ ಅವರನ್ನು ಸುತ್ತುವರೆದರು. ಎಸ್‌ಐ ಜಗದೀಶ್ ಕೃಷ್ಣನನ್ನು ಹಿಡಿಯಲು ಹೋದರು. ಜಗದೀಶ್ ನೋಡಿ ಕೃಷ್ಣ ಓಡಲು ಆರಂಭಿಸಿದ. ಕೃಷ್ಣ ಅವರ ಪುತ್ರ ಮಧು ಕೂಡಾ ಓಡಲು ಆರಂಭಿಸಿದ. [ಮಲ್ಲಿಕಾರ್ಜುನ ಬಂಡೆ ಪ್ರಕರಣದ timeline]
ಕೃಷ್ಣನನ್ನು ಓಡಿಸಿಕೊಂಡು ಹೋದ ಜಗದೀಶ್ ಅವರು ಚಿಕ್ಕ ಕಾಲುವೆಗೆ ಬಿದ್ದರು. ಆಗ, ಕೃಷ್ಣ ಮತ್ತು ಮಧು ಅವರು ಡ್ರ್ಯಾಗರ್‌ನಿಂದ ಜಗದೀಶ್ ಅವರ ಹೊಟ್ಟೆ ಮತ್ತು ಎದೆಗೆ ಚುಚ್ಚಿದರು. ಗನ್ ತೆಗೆಯಲು ಮುಂದಾದ ಜಗದೀಶ್ ಅವರ ಕೈಗೆ ಚುಚ್ಚಿ ಗನ್ ಕಸಿದುಕೊಂಡು ಪರಾರಿಯಾದರು.
ಪರಿಹಾರ, ಸರ್ಕಾರಿ ಉದ್ಯೋಗ : 'ಎಸ್‌ಐ ಜಗದೀಶ್ ಅವರು ಕರ್ತವ್ಯದಲ್ಲಿದ್ದಾಗ ಮೃತಪಟ್ಟಿರುವುದರಿಂದ ಅವರ ಕುಟುಂಬಕ್ಕೆ 30 ಲಕ್ಷ ಪರಿಹಾರ ನೀಡಲಾಗುತ್ತದೆ, ವಿಮೆ ಹಣವಾಗಿ 20 ಲಕ್ಷ ದೊರೆಯಲಿದೆ. ಇಬ್ಬರು ಮಕ್ಕಳ ಶಿಕ್ಷಣ ವೆಚ್ಚವನ್ನು ಭರಿಸಲು ಸರ್ಕಾರಕ್ಕೆ ಮನವಿ ಮಾಡಲಾಗುತ್ತದೆ. ಜಗದೀಶ್ ಅವರ ಪತ್ನಿ ಬಯಸಿದರೆ ಸರ್ಕಾರಿ ಉದ್ಯೋಗ ನೀಡಲಾಗುತ್ತದೆ' ಎಂದು ಓಂ ಪ್ರಕಾಶ್ ಹೇಳಿದರು.











Click it and Unblock the Notifications