PSI Recruitment; ಮರು ಪರೀಕ್ಷೆ ದಿನಾಂಕ ಮುಂದೂಡಲು ಪ್ರತಿಭಟನೆ
ಬೆಂಗಳೂರು, ನವೆಂಬರ್ 27; ಕರ್ನಾಟಕ ಪರೀಕ್ಷಾ ಪ್ರಾಧಿಕಾರ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಆದರೆ ಪರೀಕ್ಷೆ ದಿನಾಂಕವನ್ನು ಮುಂದೂಡುವಂತೆ ಆಗ್ರಹಿಸಿ ಅಭ್ಯರ್ಥಿಗಳು ಸೋಮವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಧರಣಿ ನಡೆಸಿದರು.
ಸಿದ್ದರಾಮಯ್ಯ ಗೃಹ ಕಛೇರಿ ಕೃಷ್ಣಾದಲ್ಲಿ ಸೋಮವಾರ 'ಜನತಾ ದರ್ಶನ' ಹಮ್ಮಿಕೊಂಡಿದ್ದರು. ಈ ಸಂದರ್ಭದಲ್ಲಿ ಆಗಮಿಸಿದ ಅಭ್ಯರ್ಥಿಗಳು ಲಿಖಿತ ಪರೀಕ್ಷೆ ದಿನಾಂಕ ಮುಂದೂಡಿಕೆ ಮಾಡಬೇಕು ಎಂದು ಆಗ್ರಹಿಸಿದರು. ಪ್ರತಿಭಟನಾನಿರತರನ್ನು ಪೊಲೀಸರು ವಶಕ್ಕೆ ಪಡೆದರು.

ನವೆಂಬರ್ 22ರಂದು ಕೆಐಎ ಕಾರ್ಯ ನಿರ್ವಾಹಕ ನಿರ್ದೇಶಕಿ ಎಸ್. ರಮ್ಯಾ ಮರು ಪರೀಕ್ಷೆ ದಿನಾಂಕದ ಕುರಿತು ಆದೇಶ ಹೊರಡಿಸಿದ್ದರು. ಪೊಲೀಸ್ ಸಬ್ ಇನ್ಸ್‌ಪೆಕ್ಟರ್ (ಪಿಎಸ್‌ಐ) ನೇಮಕಾತಿಯ ಮರು ಪರೀಕ್ಷೆಯನ್ನು ಡಿಸೆಂಬರ್ 23ರ ಶನಿವಾರ ನಡೆಸಲಾಗುತ್ತದೆ ಎಂದು ಹೇಳಿದ್ದರು.
ಆದರೆ ಅಭ್ಯರ್ಥಿಗಳು ಪರೀಕ್ಷೆಗೆ ತಯಾರಿ ನಡೆಸಲು 2 ರಿಂದ 3 ತಿಂಗಳು ಅವಕಾಶ ನೀಡಬೇಕು. ಏಕಾಏಕಿ ಪರೀಕ್ಷೆ ನಡೆಸಬಾರದು, ಈಗ ಘೋಷಣೆ ಮಾಡಿರುವ ಲಿಖಿತ ಪರೀಕ್ಷೆ ದಿನಾಂಕವನ್ನು ಮುಂದೂಡಬೇಕು ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಮುಂದೆ ಬೇಡಿಕೆ ಇಟ್ಟರು.
ವಿಜಯೇಂದ್ರ ಟ್ವೀಟ್; ಕರ್ನಾಟಕ ಬಿಜೆಪಿ ಅಧ್ಯಕ್ಷ ಬಿ. ವೈ. ವಿಜಯೇಂದ್ರ ಈ ವಿಚಾರದ ಕುರಿತು ಟ್ವೀಟ್ ಮಾಡಿದ್ದಾರೆ. 545 ಪೊಲೀಸ್ ಸಬ್ ಇನ್ಸ್'ಪೆಕ್ಟರ್ ಹುದ್ದೆಗಳ ಮರು ಪರೀಕ್ಷೆಗೆ ಅತ್ಯಂತ ಕಡಿಮೆ ಕಾಲಾವಕಾಶವನ್ನು ನಿಗದಿಪಡಿಸಿರುವ ಸರ್ಕಾರದ ಅವೈಜ್ಞಾನಿಕ ನಿರ್ಧಾರವನ್ನು ಪ್ರತಿಭಟಿಸಿ, ಪರೀಕ್ಷಾ ದಿನಾಂಕವನ್ನು ಮುಂದೂಡಿ ಸಮಯ ವಿಸ್ತರಿಸುವಂತೆ ಜನತಾ ದರ್ಶನದಲ್ಲಿ ಮನವಿ ಮಾಡಲು ಮುಖ್ಯಮಂತ್ರಿಗಳ ಬಳಿಗೆ ತೆರಳಿದ್ದ ಪರೀಕ್ಷಾರ್ಥಿ ನಿರುದ್ಯೋಗಿಗಳನ್ನು ಅಮಾನವೀಯವಾಗಿ ನಡೆಸಿಕೊಂಡು ಪೊಲೀಸ್ ಬಂಧನಕ್ಕೆ ಒಳಪಡಿಸಿರುವುದು ಅತ್ಯಂತ ಖಂಡನೀಯ ಕ್ರಮವಾಗಿದೆ ಎಂದು ಅವರು ಹೇಳಿದ್ದಾರೆ.
ಪರೀಕ್ಷಾ ಹಗರಣದಿಂದ ಈ ಮೊದಲೇ ಹೈರಾಣಾಗಿ ಹೋಗಿದ್ದ ಪಿಎಸ್ಐ ಹುದ್ದೆ ಆಕಾಂಕ್ಷಿಗಳ ಮನವಿ ಅತ್ಯಂತ ನ್ಯಾಯ ಸಮ್ಮತವಾಗಿದ್ದು, ಇದನ್ನು ಮುಖ್ಯಮಂತ್ರಿಗಳು ಸಹಾನುಭೂತಿಯಿಂದ ಪರಿಶೀಲಿಸಬೇಕಿತ್ತು. ಆದರೆ ಪೊಲೀಸರನ್ನು ಬಿಟ್ಟು ಬಂಧಿಸಿದ ಕ್ರಮ ಕಾಂಗ್ರೆಸ್ ಸರ್ಕಾರಕ್ಕೆ, ಅಮಾಯಕ ನಿರುದ್ಯೋಗಿಗಳ ಮೇಲೆ ಇರುವ ತಾತ್ಸಾರ ಧೋರಣೆಯನ್ನು ಪ್ರತಿಬಿಂಬಿಸಿದೆ ಎಂದು ಆರೋಪಿಸಿದ್ದಾರೆ.
ಪಿಎಸ್ಐ ಹುದ್ದೆ ಆಕಾಂಕ್ಷಿಗಳ ಬೇಡಿಕೆ ನ್ಯಾಯಸಮ್ಮತವಾಗಿದ್ದು, ಸರ್ಕಾರ ಈ ಕೂಡಲೇ ಪರೀಕ್ಷೆಯನ್ನು ಮುಂದೂಡಿ ಸೂಕ್ತ ಕಾಲಾವಕಾಶ ನೀಡಬೇಕೆಂದು ಒತ್ತಾಯಿಸುತ್ತೇನೆ. ಪಿಎಸ್ಐ ಹುದ್ದೆ ಪರೀಕ್ಷಾರ್ಥಿಗಳ ನ್ಯಾಯಯುತ ಬೇಡಿಕೆಗಳನ್ನು ಬಿಜೆಪಿ ಕರ್ನಾಟಕ ಬೆಂಬಲಿಸುತ್ತದೆ ಎಂದು ವಿಜಯೇಂದ್ರ ಟ್ವೀಟ್ ಮಾಡಿದ್ದಾರೆ.
ಹೈಕೋರ್ಟ್ ಆದೇಶ; ಕರ್ನಾಟಕ ಹೈಕೋರ್ಟ್ ಆದೇಶದ ಬಳಿಕ ಕೆಐಎ 545 ಪೊಲೀಸ್ ಸಬ್ ಇನ್ಸ್‌ಪೆಕ್ಟರ್ ನೇಮಕಾತಿ ಮರು ಪರೀಕ್ಷೆ ದಿನಾಂಕವನ್ನು ಪ್ರಕಟಿಸಿದೆ. ಪೊಲೀಸ್ ಇಲಾಖೆ ಈ ಹಿಂದೆ ನಡೆಸಿದ್ದ ಪರೀಕ್ಷೆಗೆ ಅರ್ಹತೆ ಪಡೆದವರು ಮರು ಪರೀಕ್ಷೆಗೂ ಅರ್ಹರು ಎಂದು ಸ್ಪಷ್ಟಪಡಿಸಲಾಗಿದೆ.
ಮರುಪರೀಕ್ಷೆ ನಡೆಸುವ ಸರ್ಕಾರದ ತೀರ್ಮಾನವನ್ನು ಪ್ರಶ್ನಿಸಿ ಅಭ್ಯರ್ಥಿಗಳು ಹೈಕೋರ್ಟ್‌ಗೆ ಅರ್ಜಿ ಸಲ್ಲಿಕೆ ಮಾಡಿದ್ದರು. ಅರ್ಜಿಯ ವಿಚಾರಣೆ ನಡೆಸಿದ್ದ ಕೋರ್ಟ್ ಮರು ಪರೀಕ್ಷೆಗೆ ತಡೆಯಾಜ್ಞೆ ನೀಡಿತ್ತು. ಆದರೆ ನವೆಂಬರ್ 11ರಂದು ಅಂತಿಮ ಆದೇಶ ಹೊರಡಿಸುವಾಗ ಮರು ಪರೀಕ್ಷೆಗೆ ಇದ್ದ ಎಲ್ಲಾ ತಡೆಯಾಜ್ಞೆಯನ್ನು ತೆರವುಗೊಳಿಸಿತ್ತು.
ನ್ಯಾಯಾಲಯ ತನ್ನ 111 ಪುಟಗಳ ತೀರ್ಪಿನಲ್ಲಿ ಈ ಹಿಂದೆ ನಡೆದ ಲಿಖಿತ ಪರೀಕ್ಷೆಯ ವೇಳೆ ನಡೆದ ಅಕ್ರಮಗಳ ಅಂಶಗಳನ್ನು ಎಳೆಎಳೆಯಾಗಿ ಬಿಡಿಸಿಟ್ಟು ಮರು ಪರೀಕ್ಷೆ ಆಗಲೇಬೇಕೆಂದು ಹೇಳಿತ್ತು. ಈ ಸಂಬಂಧ ರಾಜ್ಯ ಸರ್ಕಾರದ ನಿರ್ಧಾರವನ್ನು ಎತ್ತಿ ಹಿಡಿದಿದ್ದ ಹೈಕೋರ್ಟ್, ಸ್ವತಂತ್ರ ಸಂಸ್ಥೆಯಿಂದಲೇ ಮರು ಪರೀಕ್ಷೆ ನಡೆಸುವಂತೆ ತಾಕೀತು ಮಾಡಿತ್ತು.












Click it and Unblock the Notifications