ಬೇರೆ ಭಾಷೆ ಹುಡುಗೀರನ್ನ ಪ್ರೀತ್ಸೋ ಕನ್ನಡಿಗರಿಗೆ ನಾರಾಯಣಗೌಡ್ರು ಹೇಳಿದ್ದೇನು?
ಕನ್ನಡದ ವಿಚಾರದಲ್ಲಿ ಸದಾ ಮುಂದಿರುವ ಕರ್ನಾಟಕ ರಕ್ಷಣಾ ವೇದಿಕೆ ಅಧ್ಯಕ್ಷ ಟಿ.ಎ.ನಾರಾಯಣಗೌಡರು ಅನ್ಯಭಾಷಿಕರೊಂದಿಗಿನ ಪ್ರೀತಿ ಪ್ರೇಮದ ಬಗ್ಗೆ ಮಾತನಾಡಿದ್ದಾರೆ. ಬೆಂಗಳೂರಿನಲ್ಲಿ ಈಗಾಗಲೇ ಬೇರೆ ಭಾಷಿಕರ ಹೆಚ್ಚಾಗಿದ್ದು, ಕನ್ನಡಿಗರು ಅನ್ಯಭಾಷಿಕ ಹುಡುಗಿಯರನ್ನು ಪ್ರೀತಿ ಮಾಡುವುದು ಹೊಸ ವಿಚಾರವೇನಲ್ಲ. ಇಂತಹ ಕನ್ನಡಿಗರಿಗೆ ನಾರಾಯಣಗೌಡ್ರು ವಿಶೇಷ ಸಲಹೆಯೊಂದನ್ನ ನೀಡಿದ್ದಾರೆ.
ಕರ್ನಾಟಕ ರಕ್ಷಣಾ ವೇದಿಕೆ ಬೆಂಗಳೂರು ದಕ್ಷಿಣ ವಿಧಾನಸಭಾ ಕ್ಷೇತ್ರದ ವತಿಯಿಂದ ಆಯೋಜಿಸಿದ್ದ ಕರ್ನಾಟಕ ರಾಜ್ಯೋತ್ಸವ ಕಾರ್ಯಕ್ರಮದಲ್ಲಿ ಕರವೇ ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡರು ಬೇರೆ ಭಾಷೆಯವರೊಂದಿನ ಕನ್ನಡಿಗರ ಪ್ರೀತಿ ವಿಚಾರವನ್ನು ಪ್ರಸ್ತಾಪಿಸಿದ್ದಾರೆ. ಬೇರೆ ಭಾಷೆಯ ಹುಡುಗಿಯರನ್ನು ಪ್ರೀತಿ ಮಾಡುವ ಕನ್ನಡದ ಹುಡುಗರು, ಮೊದಲು ಅವರು ಕನ್ನಡವನ್ನು ಪ್ರೀತಿಸುವಂತೆ ಕೇಳಬೇಕು, ಬಳಿಕ ನೀವು ಅವರನ್ನು ಪ್ರೀತಿ ಮಾಡುವುದಾಗಿ ಹೇಳಿ ಎಂದು ಸಲಹೆ ಕೊಟ್ಟಿದ್ದಾರೆ.

ಈ ವಿಚಾರದಲ್ಲಿ ಯಾರಿಗೂ ಹೆದರಬೇಡಿ. ನಿಮ್ಮ ಪ್ರೀತಿಯು ಕನ್ನಡದ ಮುಖೇನವಾಗಿಯೇ ಸಾಗಲಿ ಎಂದು ಹೇಳಿದ್ದಾರೆ. ಕನ್ನಡವನ್ನು ಯಾರು ಪ್ರೀತಿಸುತ್ತಾರೋ ಅವರನ್ನು ಕನ್ನಡಿಗರೂ ಪ್ರೀತಿಸುತ್ತಾರೆ ಎಂದು ಟಿ.ಎ.ನಾರಾಯಣಗೌಡರು ಒತ್ತಿ ಹೇಳಿದ್ದಾರೆ. ಮಾಸ್ತಿಯವರ ಮಾತೃಭಾಷೆ ತಮಿಳು. ದ.ರಾ.ಬೇಂದ್ರೆಯವರ ಮಾತೃಭಾಷೆ ಮರಾಠಿ. ಟಿ.ಪಿ.ಕೈಲಾಸಂ ಅವರ ಮಾತೃಭಾಷೆ ತಮಿಳು. ಈ ಕನ್ನಡದ ಶಾಲು ಕೊಟ್ಟ ಮ.ರಾಮಮೂರ್ತಿ ಅವರ ಮಾತೃಭಾಷೆ ತೆಲುಗು. ಅವರೆಲ್ಲ ಕನ್ನಡವನ್ನು ಪ್ರೀತಿಸಿದರು, ಕನ್ನಡಿಗರೂ ಅವರನ್ನು ಪ್ರೀತಿಸಿದರು ಎಂದು ಹೇಳಿದ್ದಾರೆ.
ಆರ್‌ಸಿಬಿ ನಡೆಗೆ ಕೆಂಡವಾದ ಕರವೇ: ರಾಯಲ್ ಚಾಲೆಂಜರ್ಸ್ ಬೆಂಗಳೂರು ಕ್ರಿಕೆಟ್ ಫ್ರಾಂಚೈಸಿ ಸಾಮಾಜಿಕ ಜಾಲತಾಣಗಳಲ್ಲಿ ಹಿಂದಿಯಲ್ಲಿ ಪುಟವನ್ನು ತೆರೆದಿದೆ. ಇದು ಯಾವ ಕಾರಣಕ್ಕೆ ಎಂದು ಅವರು ಸ್ಪಷ್ಟಪಡಿಸಬೇಕು. ಕನ್ನಡಿಗರ ಮೇಲೆ ಹಿಂದಿ ಗುಲಾಮಗಿರಿಯನ್ನು ಹೇರುವುದು ಅವರ ಉದ್ದೇಶವಾಗಿದ್ದರೆ, ಕರ್ನಾಟಕ ಬಿಟ್ಟು ತೊಲಗಲಿ. ನಿಮ್ಮ ಅವಶ್ಯಕತೆ ನಮಗಿಲ್ಲ ಎಂದು ನಾರಾಯಣಗೌಡರು ತರಾಟೆಗೆ ತೆಗೆದುಕೊಂಡಿದ್ದರು.
ಆರ್‌ಸಿಬಿಯನ್ನು ಕನ್ನಡಿಗರು ಮೊದಲಿನಿಂದಲೂ ಬೆಂಬಲಿಸಿಕೊಂಡು ಬಂದಿದ್ದಾರೆ. ಆರ್‌ಸಿಬಿಗೆ ಇರುವಷ್ಟು ಅಭಿಮಾನಿಗಳು ಇನ್ಯಾವ ತಂಡಕ್ಕೂ ಇಲ್ಲ. ಹೀಗಾಗಿಯೇ ಅದರ ಆದಾಯ ಪ್ರತಿ ವರ್ಷಕ್ಕೂ ಹೆಚ್ಚುತ್ತಲೇ ಇದ್ದು, ಒಮ್ಮೆಯೂ ಕಪ್ ಗೆಲ್ಲದಿದ್ದರೂ ಮೂರನೇ ಶ್ರೀಮಂತ ತಂಡವಾಗಿದೆ. ಇದಕ್ಕೆ ಕಾರಣ ಕನ್ನಡಿಗರು ಎಂಬುದನ್ನು ಅದು ಮರೆತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದರು.

ಆರ್‌ಸಿಬಿ ಹಿಂದಿಯಲ್ಲಿ ಪುಟವನ್ನು ತೆರೆಯುವ ಮೂಲಕ ಕನ್ನಡಿಗರನ್ನು ಅವಮಾನಿಸುತ್ತಿದೆ. ತಂಡದಲ್ಲಿ ಇತರ ರಾಜ್ಯಗಳ ಆಟಗಾರರಿದ್ದಾರೆ ಎಂಬ ಕಾರಣಕ್ಕೆ, ಹೊರರಾಜ್ಯಗಳಲ್ಲೂ ಅಭಿಮಾನಿಗಳಿದ್ದಾರೆ ಎಂಬ ಕಾರಣಕ್ಕೆ ಹಿಂದಿಯಲ್ಲಿ ಪುಟ ತೆರೆದಿರುವುದಾದರೆ, ದೇಶದ ಎಲ್ಲ ಭಾಷೆಗಳಲ್ಲೂ ಪುಟ ತೆರೆಯಬೇಕಿತ್ತು. ಹಿಂದಿಯಲ್ಲಿ ಮಾತ್ರ ಯಾಕೆ ತೆರೆದರು? ಎಂದು ಪ್ರಶ್ನಿಸಿದ್ದರು.
ಆರ್‌ಸಿಬಿ ಫ್ರಾಂಚೈಸಿ ನಡೆಸುತ್ತಿರುವವರಿಗೆ ಹಿಂದಿಯೇ ಅತಿ ಪ್ರಿಯವಾಗಿದ್ದರೆ ಹಿಂದಿ ರಾಜ್ಯಗಳಿಗೆ ವಲಸೆ ಹೋಗಲಿ, ಬೆಂಗಳೂರು ಎಂಬ ಹೆಸರನ್ನು ಕೈಬಿಡಲಿ. ಕನ್ನಡಿಗರ ಆದರ, ಆತಿಥ್ಯ, ಅಭಿಮಾನವನ್ನು ಗಳಿಸಿ ಕನ್ನಡಿಗರ ಬೆನ್ನಿಗೆ ಚೂರಿ ಇರಿಯುವ ಕೆಲಸವನ್ನೇಕೆ ಮಾಡುತ್ತಿದ್ದಾರೆ? ಇನ್ನು ಕರ್ನಾಟಕ ಪರವಾಗಿ ಆಡುತ್ತಿರುವ ಹಲವಾರು ಪ್ರತಿಭಾವಂತ ಆಟಗಾರರನ್ನು ಆರ್ ಸಿಬಿ ಮೊದಲಿನಿಂದಲೂ ನಿರ್ಲಕ್ಷಿಸುತ್ತ ಬಂದಿದೆ. ಈ ಬಾರಿಯೂ ಅದೇ ಆಗಿದೆ. ದೇವದತ್ತ ಪಡಿಕ್ಕಲ್, ಮನೋಜ್ ಬಾಂಡಗೆ ಹೊರತುಪಡಿಸಿ ಯಾವ ಕನ್ನಡಿಗರನ್ನೂ ಖರೀದಿಸುವ ಮನಸು ಮಾಡಲಿಲ್ಲ ಎಂದು ಕ್ಲಾಸ್ ತೆಗೆದುಕೊಂಡಿದ್ದರು.
25 ಆಟಗಾರರ ಪೈಕಿ 22 ಆಟಗಾರರನ್ನು ಖರೀದಿ ಮಾಡಲಾಗಿದ್ದು, ಬಾಕಿ ಉಳಿದಿರುವ ಇನ್ನು ಮೂರು ಸ್ಥಾನಗಳಿಗಾದರೂ ಕನ್ನಡಿಗ ಆಟಗಾರರನ್ನೇ ಖರೀದಿಸಬೇಕು ಎಂದು ಆಗ್ರಹಿಸಿದ್ದ ಅವರು ಸಾಮಾಜಿಕ ಜಾಲತಾಣಗಳಿಂದ ಈ ಕೂಡಲೇ ಹಿಂದಿ ಪುಟಗಳನ್ನು ಅಳಿಸಿಹಾಕಬೇಕು. ಇಲ್ಲವಾದಲ್ಲಿ ಪರಿಣಾಮ ನೆಟ್ಟಗಿರುವುದಿಲ್ಲ ಎಂದು ಎಚ್ಚರಿಕೆ ಕೂಡ ನೀಡಿದ್ದರು.












Click it and Unblock the Notifications