ರಾಜಕೀಯ ಪ್ರವೇಶದ ಸುಳಿವು ಕೊಟ್ಟ ಕರವೇ ನಾರಾಯಣಗೌಡ, ಪಕ್ಷ ಯಾವ್ದು ಗೊತ್ತಾ?
ಕನ್ನಡಿಗ, ಕರ್ನಾಟಕ ಹಾಗೂ ಕನ್ನಡಪರ ಹೋರಾಟಗಳಲ್ಲಿ ಗುರುತಿಸಿಕೊಂಡಿರುವ ಕರ್ನಾಟಕ ರಕ್ಷಣಾ ವೇದಿಕೆ (ಕರವೇ) ರಾಜ್ಯಾಧ್ಯಕ್ಷ ಟಿ.ಎ.ನಾರಾಯಣಗೌಡ ಅವರು ಮಹಾಶಿವರಾತ್ರಿ ದಿನವೇ ಮಹತ್ವದ ವಿಚಾರವೊಂದನ್ನು ಹಂಚಿಕೊಂಡಿದ್ದಾರೆ. ಈವರೆಗೆ ಕನ್ನಡಪರ ಹೋರಾಟಗಾರರಾಗಿದ್ದ ಅವರು ರಾಜಕೀಯಕ್ಕೆ ಎಂಟ್ರಿ ಕೊಡುವ ಬಗ್ಗೆ ಸುಳಿವು ನೀಡಿದ್ದಾರೆ. ಇದು ಸದ್ಯ ರಾಜ್ಯದಲ್ಲಿ ಅಚ್ಚರಿ ಮೂಡಿಸಿದೆ.
ನಿನ್ನೆ ಬೆಳಗಾವಿಯಲ್ಲಿ ಕನ್ನಡಿಗ ಕಂಡಕ್ಟರ್ ಮೇಲಿನ ಹಲ್ಲೆ ಖಂಡಿಸಿ ಬೃಹತ್ ಪ್ರತಿಭಟನೆ ನಡೆಸಿ ಬಂದಿರುವ ಅವರು ಈ ವಿಚಾರದಲ್ಲಿ ರಾಜಕೀಯ ನಾಯಕರು ಹಾಗೂ ಪಕ್ಷಗಳನ್ನು ಹಿಗ್ಗಾಮುಗ್ಗಾ ತರಾಟೆಗೆ ತೆಗೆದುಕೊಂಡಿದ್ದರು. ಇದೇ ಬೇಸರದಿಂದ ಅವರು ರಾಜಕೀಯದತ್ತ ಮುಖ ಮಾಡುವ ನಿರ್ಧಾರ ತೆಗೆದುಕೊಂಡಿದ್ದಾರೆ ಎಂದು ಹೇಳಲಾಗುತ್ತಿದೆ. ಈ ಬಗ್ಗೆ ಟಿ.ಎ.ನಾರಾಯಣಗೌಡರು ಏನು ಹೇಳಿದ್ದಾರೆ ಮುಂದೆ ಓದಿ..

ʼಇವತ್ತು ಮಹಾಶಿವರಾತ್ರಿ. ಶಿವ ನನ್ನ ಇಷ್ಟದೈವ. ಶಿವ ತನ್ನನ್ನು ನಂಬಿದವರನ್ನು ಎಂದೂ ಕೈಬಿಟ್ಟವನಲ್ಲ. ಅವನು ತನ್ನ ಇಷ್ಟದಂತೆ ಬದುಕಿದವನು. ಅವನಲ್ಲಿ ಕಪಟವಿಲ್ಲ, ಕುತಂತ್ರವಿಲ್ಲ. ಹೀಗಾಗಿಯೇ ಶಿವ ನನಗೆ ಇಷ್ಟ ಎಂದು ಹೇಳಿದ್ದಾರೆ. ಆದರೆ ಈ ವರ್ಷ ಶಿವರಾತ್ರಿಯ ಸಡಗರಕ್ಕೆ ನನ್ನ ಮನಸ್ಸು ತೆರೆದುಕೊಳ್ಳುತ್ತಿಲ್ಲ. ನಿನ್ನೆ ಬೆಳಗಾವಿಯ ಪ್ರತಿಭಟನೆ ಮುಗಿಸಿ ವಾಪಸ್ ಬೆಂಗಳೂರಿಗೆ ಬಂದೆ. ತಡರಾತ್ರಿಯವರೆಗೆ ಒಂದೇ ಸಮನೆ ದೂರವಾಣಿ ಕರೆಗಳು, ವಾಟ್ಸಾಪ್ ಸಂದೇಶಗಳು. ಬಹುತೇಕ ಕರೆ, ಸಂದೇಶಗಳು ಕೆಪಿಎಸ್‌ಸಿ ಪರೀಕ್ಷೆ ಬರೆದ ವಿದ್ಯಾರ್ಥಿಗಳದ್ದುʼ ಎಂದು ಹೇಳಿದ್ದಾರೆ.
ʼನಾರಾಯಣಗೌಡ್ರೇ ನಮಗೆ ನ್ಯಾಯ ಕೊಡಿಸಿ, ಯಾರನ್ನೂ ನಂಬುವ ಸ್ಥಿತಿಯಲ್ಲಿ ನಾವಿಲ್ಲ. ನೀವೇ ನಮಗೆ ದಿಕ್ಕು. ಈಗ ನಮಗೆ ಅನ್ಯಾಯವಾದರೆ ಬದುಕಿಯೂ ಪ್ರಯೋಜನವಿಲ್ಲ, ಸತ್ತೇಹೋಗುತ್ತೇವೆ ಎಂದು ಎಲ್ಲರೂ ಇದೇ ಧಾಟಿಯಲ್ಲೇ ಮಾತನಾಡಿದರು. ಅವರ ಮನೆಗಳ ಸಮಸ್ಯೆಗಳು, ಸಂಕಟಗಳನ್ನು ಹೇಳಿಕೊಳ್ಳುತ್ತಾರೆ. ಎಲ್ಲ ಬಡ ಕುಟುಂಬಗಳ ಮಕ್ಕಳು. ಸಾಮಾಜಿಕವಾಗಿ ಹಿಂದುಳಿದ ವರ್ಗಗಳ ಮಕ್ಕಳು. ಈ ನಡುವೆ ಕನ್ನಡ ಮಾಧ್ಯಮದಲ್ಲಿ ಓದುವವರು ಅವರೇ ತಾನೇ?ʼ ಎಂದಿದ್ದಾರೆ.

ಕನ್ನಡ ಕೇಂದ್ರಿತ ಪ್ರಾದೇಶಿಕ ಪಕ್ಷ ಬೇಕು
ʼನಾನು ಯಾವ ಅಧಿಕಾರ ಸ್ಥಾನದಲ್ಲೂ ಇಲ್ಲ. ನ್ಯಾಯಕ್ಕಾಗಿ ಈ ಮಕ್ಕಳೊಂದಿಗೆ ಸೇರಿ ಬಡಿದಾಡಬಹುದು ಅಷ್ಟೇ ಎಂದು ಹೇಳಿದೆ. ಅದಕ್ಕೆ ಅವರು ಗೌಡ್ರೇ ನೀವೇ ಯಾಕೆ ಒಂದು ಪ್ರಾದೇಶಿಕ ಪಕ್ಷ ಸ್ಥಾಪಿಸಬಾರದು? ನಾವೆಲ್ಲ ನಿಮ್ಮ ಜೊತೆ ಇರುತ್ತೇವೆ ಎಂದು ಹೇಳುತ್ತಿದ್ದಾರೆ. ಪಕ್ಷ ಸ್ಥಾಪಿಸುವುದು, ಚುನಾವಣೆಯಲ್ಲಿ ಸೆಣೆಸುವುದು ಅಷ್ಟು ಸುಲಭದ ವಿಷಯವಲ್ಲ. ಅದಕ್ಕೆ ಕಾಲವೂ ಪಕ್ವವಾಗಿಲ್ಲ. ಕನ್ನಡ ಜನತೆಗೆ ಕನ್ನಡ ಕೇಂದ್ರಿತ ರಾಜಕೀಯ ಪಕ್ಷವೊಂದರ ಅಗತ್ಯವಿದೆ ಎಂಬುದು ಮನವರಿಕೆ ಆಗಬೇಕು. ಆಗ ಮಾತ್ರ ಇಂಥಹ ಪ್ರಯೋಗ ಮಾಡಬಹುದು ಎಂದು ಹೇಳಿದ್ದಾರೆ.
ಕೇಂದ್ರೀಯ ಆಡಳಿತಾತ್ಮಕ ನ್ಯಾಯಮಂಡಳಿ ಈಗಾಗಲೇ ಕನ್ನಡ ಮಾಧ್ಯಮದ ವಿದ್ಯಾರ್ಥಿಗಳ ದೂರಿನ ಹಿನ್ನೆಲೆಯಲ್ಲಿ ಮುಖ್ಯಪರೀಕ್ಷೆಗೆ ತಡೆಯಾಜ್ಞೆ ನೀಡಿದೆ. ಆದರೆ ವಿದ್ಯಾರ್ಥಿಗಳಿಗೆ ಅಲ್ಲೂ ನ್ಯಾಯ ದೊರೆಯುವ ವಿಶ್ವಾಸವಿಲ್ಲ. ಈ ಕನ್ನಡದ ಮಕ್ಕಳಿಗೆ ನ್ಯಾಯ ಕೊಡಿಸಿ. ಇದರಲ್ಲಿ ಯಾರ ಪ್ರತಿಷ್ಟೆಯಿಲ್ಲ, ಇರುವುದು ಕನ್ನಡದ ಮಕ್ಕಳ ಭವಿಷ್ಯ ಮತ್ತು ಅವರು ವ್ಯವಸ್ಥೆಯ ಮೇಲೆ ಇಟ್ಟ ನಂಬಿಕೆಯ ಪ್ರಶ್ನೆ. ಆ ನಂಬಿಕೆ ಹಾಳಾಗಬಾರದು, ಆ ಮಕ್ಕಳು ನಾಳೆ ತಮಗೆ ಅನ್ಯಾಯವಾಯಿತು ಎಂಬ ಕೋಪದಿಂದ ದಾರಿ ತಪ್ಪಬಾರದು. ದಯವಿಟ್ಟು ಅವರಿಗೆ ನ್ಯಾಯ ಕೊಡಿಸಿ ಎಂದು ಸಿಎಂ ಸಿದ್ದರಾಮಯ್ಯ ಅವರಿಗೆ ವಿನಂತಿಸಿದ್ದಾರೆ.












Click it and Unblock the Notifications