ಆರ್‌ಎಸ್‌ಎಸ್ ಬ್ಯಾನ್ ಎಂದ ಸಚಿವ ಪ್ರಿಯಾಂಕ್ ಖರ್ಗೆಗೆ ಜೀವ ಬೆದರಿಕೆ, ಯಾರಿಂದ?
ಆರ್‌ಎಸ್‌ಎಸ್ ನಿಷೇಧಿಸುವಂತೆ ಕಾಂಗ್ರೆಸ್ ಸಚಿವ ಪ್ರಿಯಾಂಕ್ ಖರ್ಗೆ ಪತ್ರ ಬರೆಯುವುದು ರಾಜ್ಯ ರಾಜಕೀಯ ವಲಯದಲ್ಲಿ ಕಿತ್ತಾಟಕ್ಕೆ ಕಾರಣವಾಗಿದೆ. ಈ ವಿಚಾರವಾಗಿ ಬಿಜೆಪಿ ನಾಯಕರು ಪ್ರಿಯಾಂಕ್ ವಿರುದ್ಧ ಕೆಂಡಕಾರುತ್ತಿದ್ದಾರೆ. ಇದರ ನಡುವೆ ಪ್ರಿಯಾಂಕ್ ಖರ್ಗೆ ಅವರಿಗೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿವೆ. ಈ ವಿಚಾರವನ್ನು ಖುದ್ದು ಅವರೇ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.
ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಕೋರಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಪ್ರಿಯಾಂಕ್ ಖರ್ಗೆ ಪತ್ರ ಬರೆದಿದ್ದರು. ಸಂವಿಧಾನದ ಮೌಲ್ಯಗಳನ್ನು ಗಾಳಿಗೆ ತೂರುವ ವಿಭಜಕ ಶಕ್ತಿಗಳು ತಲೆ ಎತ್ತಿದಾಗ ಅವುಗಳನ್ನು ನಿಗ್ರಹಿಸಲು ಸಂವಿಧಾನವೇ ನಮಗೆ ಶಕ್ತಿಯನ್ನು ಮತ್ತು ಅಧಿಕಾರವನ್ನು ನೀಡುತ್ತದೆ ಎಂದಿದ್ದರು.

ಆರ್‌ಎಸ್‌ಎಸ್ ಪ್ರತಿಪಾದಿಸುವ ಮೂಲಭೂತವಾದಿ ಸಿದ್ಧಾಂತದ ಪರಿಣಾಮದಿಂದಲೇ ಇಂದು ನ್ಯಾಯಾಂಗದ ಮುಖ್ಯಸ್ಥರ ಮೇಲೆ ಶೂ ಎಸೆಯುವಂತಹ ವಾತಾವರಣ ಸೃಷ್ಟಿಯಾಗಿದೆ. ಬಾಬಾ ಸಾಹೇಬ್ ಅಂಬೇಡ್ಕರ್ ಅವರನ್ನು ನಿಂದಿಸುವ ಮನಸ್ಥಿತಿ ಬೆಳೆದಿದೆ. ಮಕ್ಕಳು ಹಾಗೂ ಯುವ ಸಮುದಾಯದ ಮೇಲೆ ನಾಕಾರಾತ್ಮ ಪರಿಣಾಮಗಳನ್ನು ಉಂಟುಮಾಡಲು ಯತ್ನಿಸುವ ಆರ್‌ಎಸ್‌ಎಸ್ ಪ್ರಯತ್ನವನ್ನು ತಡೆಯಬೇಕು ಎಂದಿದ್ದರು.
ಸಂವಿಧಾನದ ಆಶಯಗಳನ್ನು, ಏಕತೆ, ಸಮಾನತೆ, ಸಮಗ್ರತೆಯನ್ನು ಎತ್ತಿ ಹಿಡಿಯುವ ಉದ್ದೇಶದೊಂದಿಗೆ ಎಲ್ಲ ಸರ್ಕಾರಿ ಸಾರ್ವಜನಿಕ ಪ್ರದೇಶದಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ನಿರ್ಬಂಧಿಸುವಂತೆ ಮುಖ್ಯಮಂತ್ರಿಗಳಿಗೆ ಕೋರಿಕೆ ಸಿಲ್ಲಿಸಿದ್ದೇನೆ ಎಂದು ಹೇಳಿದ್ದರು. ಇದರ ಬೆನ್ನಲ್ಲೇ ಕಾಂಗ್ರೆಸ್-ಬಿಜೆಪಿ ನಡುವೆ ಇದೇ ವಿಚಾರವಾಗಿ ಕಿಡಿ ಹೊತ್ತಿಕೊಂಡಿತ್ತು. ಇದರ ನಡುವೆ ಜೀವ ಬೆದರಿಕೆ ಕರೆಗಳು ಹೆಚ್ಚಾಗಿ ಬರುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಹೇಳಿಕೊಂಡಿದ್ದಾರೆ.
ಕಳೆದ ಎರಡು ದಿನಗಳಿಂದ ನನ್ನ ಫೋನ್ ರಿಂಗ್ ಆಗುವುದು ನಿಲ್ಲಿಸಿಲ್ಲ. ಸರ್ಕಾರಿ ಶಾಲೆಗಳು, ಕಾಲೇಜುಗಳು ಮತ್ತು ಸಾರ್ವಜನಿಕ ಸಂಸ್ಥೆಗಳಲ್ಲಿ ಆರ್‌ಎಸ್‌ಎಸ್ ಚಟುವಟಿಕೆಗಳನ್ನು ಪ್ರಶ್ನಿಸಲು ಮತ್ತು ತಡೆಯಲು ನಾನು ಧೈರ್ಯ ಮಾಡಿದ್ದರಿಂದಲೇ ನನಗೆ ಮತ್ತು ನನ್ನ ಕುಟುಂಬಕ್ಕೆ ಬೆದರಿಕೆಗಳು ಹಾಗೂ ಅತ್ಯಂತ ಕೆಟ್ಟ ನಿಂದನೆಗಳಿಂದ ತುಂಬಿರುವ ಕರೆಗಳು ಬರುತ್ತಿವೆ ಎಂದು ಪ್ರಿಯಾಂಕ್ ಹೇಳಿದ್ದಾರೆ.
ಇದಕ್ಕೆಲ್ಲ ಹೆದರಲ್ಲ
ಆದರೆ ನಾನು ಇದಕ್ಕೆಲ್ಲ ಬೆಚ್ಚಿ ಬೀಳುವುದಿಲ್ಲ ಅಥವಾ ಆಶ್ಚರ್ಯಪಡುವುದಿಲ್ಲ. ಆರ್‌ಎಸ್‌ಎಸ್ ಮಹಾತ್ಮ ಗಾಂಧಿ ಅಥವಾ ಬಾಬಾಸಾಹೇಬ್ ಅಂಬೇಡ್ಕರ್ ಅವರನ್ನು ಬಿಡದಿದ್ದಾಗ, ಅವರು ನನ್ನನ್ನು ಏಕೆ ಬಿಡುತ್ತಿದ್ದರು? ಬೆದರಿಕೆಗಳು ಮತ್ತು ವೈಯಕ್ತಿಕ ನಿಂದನೆಗಳು ನನ್ನನ್ನು ಮೌನಗೊಳಿಸುತ್ತವೆ ಎಂದು ಅವರು ಭಾವಿಸಿದರೆ, ಅದು ತಪ್ಪು. ಬುದ್ಧ, ಬಸವಣ್ಣ ಮತ್ತು ಬಾಬಾಸಾಹೇಬರ ತತ್ವಗಳ ಮೇಲೆ ಸ್ಥಾಪಿತವಾದ ಸಮಾಜವನ್ನು, ಸಮಾನತೆ, ವಿವೇಚನೆ ಮತ್ತು ಕರುಣೆಯಲ್ಲಿ ಬೇರೂರಿರುವ ಸಮಾಜವನ್ನು ನಿರ್ಮಿಸುವ ಮತ್ತು ಈ ದೇಶವನ್ನು ಅತ್ಯಂತ ಅಪಾಯಕಾರಿ ವೈರಸ್‌ಗಳಿಂದ ಶುದ್ಧೀಕರಿಸುವ ಸಮಯ ಇದು ಎಂದು ಪ್ರಿಯಾಂಕ್ ತೊಡೆತಟ್ಟಿದ್ದಾರೆ.












Click it and Unblock the Notifications