ರಾಜ್ಯಗಳ ತೆರಿಗೆ ಪಾಲನ್ನು ಕಡಿತ ಮಾಡುವ ಕೇಂದ್ರ ಸರ್ಕಾರದ ಪ್ರಸ್ತಾವನೆಗೆ ಪ್ರಿಯಾಂಕ್ ಖರ್ಗೆ ಆಕ್ರೋಶ
ಬೆಂಗಳೂರು, ಮಾರ್ಚ್ 01: ರಾಜ್ಯಗಳ ಗಾಯದ ಮೇಲೆ ಬರೆ ಎಳೆದಿದ್ದಲ್ಲದೆ, ಬಿಸಿನೀರನ್ನೂ ಸುರಿಯುತ್ತಿದೆ ಕೇಂದ್ರ ಸರ್ಕಾರ. ಈಗಾಗಲೇ ಅನುದಾನ ಹಂಚಿಕೆಯಲ್ಲಿ ಕೇಂದ್ರ ಸರ್ಕಾರದಿಂದ ದಕ್ಷಿಣ ರಾಜ್ಯಗಳಿಗೆ ಅನ್ಯಾಯವಾಗುತ್ತಿದೆ, ತೆರಿಗೆ ಪಾಲಿನಲ್ಲಿ ಕರ್ನಾಟಕಕ್ಕೆ ದ್ರೋಹವಾಗುತ್ತಿದೆ ಎಂದು ಪ್ರಿಯಾಂಕ್ ಖರ್ಗೆ ಅವರು ಕೇಂದ್ರ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದರು.
ಈಗ ತೆರಿಗೆ ಪಾಲಿನ ಹಂಚಿಕೆಯಲ್ಲಿ ರಾಜ್ಯಗಳ ಪಾಲನ್ನು ಕಡಿತಗೊಳಿಸಲು ಹಣಕಾಸು ಆಯೋಗಕ್ಕೆ ಕೋರಿಕೆ ಸಲ್ಲಿಸಲು ಮುಂದಾಗಿದೆ, ಇದರಿಂದ ಅತಿ ಹೆಚ್ಚು ಅನ್ಯಾಯಕ್ಕೋಳಗಾಗುವುದು ದಕ್ಷಿಣ ರಾಜ್ಯಗಳು, ಅದರಲ್ಲೂ ಕರ್ನಾಟಕ. ಹಂತ ಹಂತವಾಗಿ ಒಕ್ಕೂಟ ವ್ಯವಸ್ಥೆಯನ್ನು ದುರ್ಬಲಗೊಳಿಸುವ ಹಾಗೂ ಆರ್ಥಿಕ ಸ್ವಾತಂತ್ರ್ಯವನ್ನು ಕಸಿಯುವ ಕೇಂದ್ರ ಸರ್ಕಾರದ ಈ ದುಷ್ಟ ನಡೆಗೆ ರಾಜ್ಯದ ಬಿಜೆಪಿ ನಾಯಕರ ಮೌನವು ಅವರ ಜನದ್ರೋಹವನ್ನು ಸಾಬೀತು ಮಾಡುತ್ತದೆ.

ರಾಜ್ಯ ಸರ್ಕಾರವನ್ನು ಪ್ರಶ್ನಿಸುವ ವಿರೋಧ ಪಕ್ಷದ ನಾಯಕರಾದ ಆರ್ ಅಶೋಲ್ ಅವರೇ, ರಾಜ್ಯಗಳ ಅನುದಾನ ಕಡಿತದ ತೀರ್ಮಾನದ ಬಗ್ಗೆ ತಾವೇಕೆ ನಿಮ್ಮ ಮೋದಿಯವರನ್ನು ಪ್ರಶ್ನಿಸಬಾರದು. ರಾಜ್ಯದಿಂದಲೇ ಆಯ್ಕೆಯಾಗಿರುವ ನಿರ್ಮಾಲಾ ಸೀತಾರಾಮನ್ ಅವರನ್ನು ರಾಜ್ಯ ಬಿಜೆಪಿ ನಿಯೋಗವು ಭೇಟಿಯಾಗಿ ಈ ತೀರ್ಮಾನದಿಂದ ಹಿಂದೆ ಸರಿಯಲು ಏಕೆ ಒತ್ತಾಯಿಸುತ್ತಿಲ್ಲ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು. ಕುರ್ಚಿ ಕಿತ್ತಾಟಕ್ಕಾಗಿ ದಿನಕ್ಕೊಬ್ಬೊಬ್ಬರು ದೆಹಲಿ ಯಾತ್ರೆ ಮಾಡುವ ಬಿಜೆಪಿ ನಾಯಕರು ರಾಜ್ಯದ ಹಿತಾಸಕ್ತಿಯ ವಿಷಯದಲ್ಲಿ ದೆಹಲಿ ನಾಯಕರನ್ನು ಭೇಟಿಯಾಗುವುದಿಲ್ಲವೇಕೆ?
ಬಿಜೆಪಿ ನಾಯಕರೇ, ನಿಮಗೆ ಕರ್ನಾಟಕದ ಹಿತಾಸಕ್ತಿ ಮುಖ್ಯವೊ, ನಿಮ್ಮ ರಾಜಕೀಯ ಹಿತಾಸಕ್ತಿ ಮುಖ್ಯವೋ? ರಾಜ್ಯದ ಏಳಿಗೆಗೆ ಕೇಂದ್ರ ಸರ್ಕಾರ ಪೆಟ್ಟು ನೀಡುತ್ತಿದ್ದರೂ ನಡುಬಗ್ಗಿಸಿ ಶರಣಾಗತಿ ಸೂಚಿಸುವುದನ್ನು "ಜನದ್ರೋಹಿ ಗುಲಾಮಗಿರಿ" ಎನ್ನದೆ ಬೇರೆ ಪದಗಳಲ್ಲಿ ವಿವರಿಸಲು ಸಾಧ್ಯವಿಲ್ಲ. ದೇಶದ ಬೆಳವಣಿಗೆಯಲ್ಲಿ ರಾಜ್ಯಗಳ ಪಾತ್ರ ಪ್ರಮುಖವಾಗಿರುತ್ತದೆ, ಜನಹಿತದ ಯೋಜನೆಗಳ ಜಾರಿ ಮಾಡುವುದು ರಾಜ್ಯಗಳ ಹೊಣೆಗಾರಿಕೆ, ರಾಜ್ಯದ ಸಂಪನ್ಮೂಲವನ್ನು ಕೇಂದ್ರ ಸರ್ಕಾರ ಹೀಗೆ ಕೊಳ್ಳೆ ಹೊಡೆದರೆ ರಾಜ್ಯ ಸರ್ಕಾರಗಳು ಏಕಿರಬೇಕು? ಏನು ಮಾಡಬೇಕು? ಬಿಜೆಪಿಗರಿಗೆ ಈ ಪ್ರಶ್ನೆಗಳು ಉದ್ಭವಿಸುವುದಿಲ್ಲವೇ? ಎಂದು ಸಚಿವ ಪ್ರಿಯಾಂಕ್ ಖರ್ಗೆ ಅವರು ಪ್ರಶ್ನಿಸಿದರು.
ಆರ್ ಅಶೋಕ್ ಅವರೇ ಕಲ್ಯಾಣ ಕರ್ನಾಟಕದ ವಿಷಯದಲ್ಲಿ ಮಾತಾನಾಡಲು ನಿಮಗೆ ಹಾಗೂ ನಿಮ್ಮ ಪಕ್ಷಕ್ಕೆ ಅರ್ಹತೆಯೂ ಇಲ್ಲ, ನೈತಿಕತೆಯೂ ಇಲ್ಲ. ಕಲ್ಯಾಣ ಕರ್ನಾಟಕದ ಅಭಿವೃದ್ಧಿಯ ವಿರೋಧಿಗಳು ಯಾರು ಎನ್ನುವುದನ್ನು ನಾನು ಹೇಳಬೇಕಿಲ್ಲ, ಅಡ್ವಾಣಿಯವರ ಈ ಪತ್ರವೇ ಹೇಳುತ್ತದೆ. ಬಿಜೆಪಿ ಕಲ್ಯಾಣ ಕರ್ನಾಟಕಕ್ಕೆ ದ್ರೋಹ ಬಗೆದಿದ್ದು ಐತಿಹಾಸಿಕ ಸತ್ಯ.ಬಿಜೆಪಿಯವರಿಗೆ ನಾನು ಆಡುವ ಮಾತಿನಲ್ಲಿ ಸಮಸ್ಯೆ ಕಾಣುತ್ತಿದೆಯೇ ಅಥವಾ ನಾನು ಮಾತಾಡುವುದೇ ಸಮಸ್ಯೆಯಾಗಿ ಕಾಡುತ್ತಿದೆಯೇ? ಬಿಜೆಪಿಗರು ನನ್ನನ್ನು "ಬಡವ ನೀ ಮಡಗಿದಂಗೆ ಇರು" ಎಂಬ ರೀತಿಯಲ್ಲಿ ಕಾಣಲು ಬಯಸುತ್ತಿದ್ದಾರೆಯೇ? ನನ್ನ ಬಗ್ಗೆ ಇಷ್ಟೊಂದು ಅಸಹನೆ ಏಕೆ? ಎಂದು ಕೇಳಿದರು.
ಇಂದು ನೀವು ಅನುದಾನದ ಬಗ್ಗೆ ಮಾತನಾಡುತ್ತಿರುವುದಕ್ಕೆ ಅವಕಾಶ ಮಾಡಿಕೊಟ್ಟಿದ್ದೇ ಆರ್ಟಿಕಲ್ 371ಜೆ, ಆದರೆ ಹಿಂದೆ ನಿಮ್ಮ ಬಿಜೆಪಿ ಸರ್ಕಾರ ಈ ವಿಶೇಷ ಸ್ಥಾನಮಾನವನ್ನು ತಿರಸ್ಕರಿಸಿತ್ತು, ದಶಕ ಕಳೆದರೂ ಬಿಜೆಪಿ ಆರ್ಟಿಕಲ್ 371ಜೆ ತಿರಸ್ಕರಿಸಿದ್ದಕ್ಕೆ ಸ್ಪಷ್ಟ ಕಾರಣಗಳನ್ನು ಕೊಟ್ಟಿಲ್ಲ, ಅಶೋಕ್ ಸರ್, ಈಗ ನೀವಾದರೂ ಆರ್ಟಿಕಲ್ 371ಜೆ ತಿರಸ್ಕಾರಕ್ಕೆ ಕಾರಣಗಳನ್ನು ಕೊಡಿ. ಹಿಂದುಳಿದ ಪ್ರದೇಶದ ಜನರ ಏಳಿಗೆಯನ್ನು ಸಾರಾಸಗಟಾಗಿ ತಿರಸ್ಕರಿಸಿದವರು ಈಗ ನಮಗೆ ಪಾಠ ಮಾಡುವ ಅಗತ್ಯವಿಲ್ಲ. ಹಿಂದಿನ ಬಿಜೆಪಿ ಸರ್ಕಾರ ಕೆಕೆಆರ್ ಡಿಬಿಯಲ್ಲಿ ಹಗರಣ ನಡೆಸುವ ಮೂಲಕ ಕಲ್ಯಾಣ ಕರ್ನಾಟಕದ ವಿರೋಧಿಯಾಗಿತ್ತು ಎನ್ನುವುದನ್ನು ಮರೆತಿದ್ದೀರಾ? ಎಂದು ಪ್ರಶ್ನಿಸಿದ್ದಾರೆ.
ಕೆಕೆಆರ್ ಡಿಬಿ ಹಗರಣವನ್ನು ನೀವು ಮರೆಮಾಚಿರಬಹುದು, ಆದರೆ ಜನತೆ ಮರೆತಿಲ್ಲ, ನಮ್ಮ ಸರ್ಕಾರವೂ ಮರೆತಿಲ್ಲ, ಕಲ್ಯಾಣ ಕರ್ನಾಟಕಕ್ಕೆ ನಿಮ್ಮ ಸರ್ಕಾರ ಮಾಡಿದ ಲೂಟಿಯ ದ್ರೋಹದ ಬಗ್ಗೆ ತನಿಖೆ ನಡೆಯುತ್ತಿದೆ.
ಭ್ರಷ್ಟರಿಗೆ ಶಿಕ್ಷೆಯೂ ಆಗಲಿದೆ. ಕೊನೆಯ ಮಾತು - ಎಲ್ಲಾ ಇಲಾಖೆಯಲ್ಲೂ, ಎಲ್ಲಾ ವಿಷಯಗಳಲ್ಲೂ ಮೂಗು ತೂರಿಸುತ್ತೇನೆ ಎಂದು ಹೇಳುವ ಬಿಜೆಪಿಗರೇ, ಮುಖ್ಯಮಂತ್ರಿಗಳು ನನ್ನನ್ನು ಸರ್ಕಾರದ ವಕ್ತಾರನಾಗಿ ನೇಮಿಸಿದ್ದಾರೆ, ನಿಮ್ಮ ಸುಳ್ಳುಗಳನ್ನು ಬೇಧಿಸುವುದು ನನ್ನ ಜವಾಬ್ದಾರಿಯಾಗಿದೆ.












Click it and Unblock the Notifications