E Swathu: ಇ-ಸ್ವತ್ತು ಸವಾಲು, ತಾಂತ್ರಿಕ ಸಮಸ್ಯೆ ನಿವಾರಿಸಲು ಅಧಿಕಾರಿಗಳಿಗೆ ಮಹತ್ವ ಸೂಚನೆ: ವಿವರ ತಿಳಿಯಿರಿ
ಬೆಂಗಳೂರು, ಆಗಸ್ಟ್ 06: ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ತಿದ್ದುಪಡಿ) ಕಾಯ್ದೆ, 2025, ದಿನಾಂಕ 07.04.2025ರ ಪ್ರಕಾರ, ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಇಲಾಖೆಯು ಇ-ಸ್ವತ್ತು ಕಾರ್ಯಕ್ರಮವನ್ನು ಪ್ರಾರಂಭಿಸಲಿರುವ ಹಿನ್ನೆಲೆಯಲ್ಲಿ ಎದುರಾಗಬಹುದಾದ ಸವಾಲುಗಳು ಹಾಗೂ ತಾಂತ್ರಿಕ ಸಮಸ್ಯೆಗಳ ನಿವಾರಣೆಗೆ ಅಧಿಕಾರಿಗಳೊಂದಿಗೆ ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಇಲಾಖೆಗಳ ಸಚಿವ ಪ್ರಿಯಾಂಕ್ ಖರ್ಗೆ ಸಮಾಲೋಚನೆ ನಡೆಸಿದರಲ್ಲದೆ ಕೆಲವಾರು ನಿವಾರೋಣಪಾಯಗಳನ್ನು ಸೂಚಿಸಿದರು.
ಇ-ಸ್ವತ್ತು ಮಂಜೂರಾತಿ ವ್ಯವಸ್ಥೆಯನ್ನು ಬೇಡಿಕೆ ಆಧಾರಿತ ವಿಧಾನದಿಂದ ಅಭಿಯಾನ ಆಧಾರಿತ ಮಾದರಿಗೆ ಪರಿವರ್ತನೆಗೊಳಿಸುವ ಪ್ರಕ್ರಿಯೆ ನಡೆಯುತ್ತಿದ್ದು, ಈ ಸಂಬಂಧದಲ್ಲಿ ಸಚಿವರು ಸಭೆ ನಡೆಸಿದರು. ರಾಷ್ಟ್ರೀಯ ಮಾಹಿತಿ ಕೇಂದ್ರದ (NIC) ಅಧಿಕಾರಿಗಳು, ಗ್ರಾಮೀಣಾಭಿವೃದ್ಧಿ ಇಲಾಖೆಯ ದಾಟಾ ಸೆಂಟರ್ ಹಾಗೂ ಇಲಾಖೆಯ ಹಿರಿಯ ಅಧಿಕಾರಿಗಳೊಂದಿಗೆ ಎರಡನೆಯ ದಿನವಾದ ಇಂದು ದೀರ್ಘ ಚರ್ಚೆ ನಡೆಸಿದರು.

ಇ-ಸ್ವತ್ತು ರೂಪಾಂತರದ ಭಾಗವಾಗಿ ಅರ್ಜಿಯ ಕಾರ್ಯಾಚರಣೆಯ ಸಿದ್ಧತೆಯನ್ನು ಸಚಿವ ಪ್ರಿಯಾಂಕ್ ಖರ್ಗೆ ಅವರು ಪರಿಶೀಲಿಸಿದರಲ್ಲದೆ ಕಾರ್ಯಕ್ರಮದ ಸುಗಮ ಅನುಷ್ಠಾನವನ್ನು ಖಚಿತಪಡಿಸಿಕೊಳ್ಳುವಲ್ಲಿ ಎದುರಾಗಬಹುದಾದ ತಾಂತ್ರಿಕ ಸವಾಲುಗಳನ್ನು ಎದುರಿಸಲು ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ತಿಳಿಸಿದರು.
ಇಲಾಖೆಯು ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತ್ಗಳ ತೆರಿಗೆಗಳು, ದರಗಳು ಮತ್ತು ಶುಲ್ಕಗಳು) ನಿಯಮಗಳು, 2025ನ್ನು ಸಾರ್ವಜನಿಕರಿಗೆ ತಲುಪಿಸುವ ಪ್ರಕ್ರಿಯೆಯಲ್ಲಿದೆ. ಈ ನಿಯಮಗಳು ಪಂಚತಂತ್ರ 2.0 ವೇದಿಕೆಯಲ್ಲಿ ಲಭ್ಯವಿರುವ 97 ಲಕ್ಷಕ್ಕೂ ಹೆಚ್ಚು ಡಿಜಿಟಲೀಕೃತ ಆಸ್ತಿಗಳಿಗೆ ಇ-ಖಾತಾಗಳನ್ನು ಆನ್ಲೈನ್ನಲ್ಲಿ ನೀಡಲು ಅನುಕೂಲವಾಗುತ್ತವೆ, ಇದರಿಂದಾಗಿ ನಾಗರಿಕರು ಖಾತಾ ಸೇವೆಗಳಿಗಾಗಿ ಗ್ರಾಮ ಪಂಚಾಯತ್ ಕಚೇರಿಗಳಿಗೆ ಭೇಟಿ ನೀಡುವ ಅಗತ್ಯವನ್ನು ನಿವಾರಿಸುತ್ತದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ಹೇಳಿದರು.
ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ (ಗ್ರಾಮ ಪಂಚಾಯತಿಗಳ ತೆರಿಗೆ, ದರ ಮತ್ತು ಫೀಜುಗಳು) ನಿಯಮಗಳು, 2025ರ ಕರಡು ನಿಯಮಗಳನ್ನು ಪರಿಶೀಲಿಸಿ ವರದಿ ನೀಡಲು ನೇಮಿಸಲಾಗಿದ್ದ ಇ-ಸ್ವತ್ತು ಕಾರ್ಯನಿರ್ವಹಣಾ ಸಮಿತಿಯಿಂದ 18 ಆಕ್ಷೇಪಣೆ ಹಾಗೂ ಸಲಹೆಗಳನ್ನು ಸ್ವೀಕರಿಸಲಾಗಿದ್ದು ಅವುಗಳನ್ನು ಇಂದು ನಡೆದ ಸಭೆಯಲ್ಲಿ ಪರಿಶೀಲಿಸಿ, ಅಧಿಕಾರಿಗಳೊಂದಿಗೆ ಚರ್ಚಿಸಲಾಯಿತಲ್ಲದೆ, ಹಲವಾರು ಸಲಹೆಗಳನ್ನು ನೀಡಲಾಯಿತು ಎಂದು ಗ್ರಾಮೀಣಾಭಿವೃದ್ಧಿ ಮತ್ತು ಪಂಚಾಯತ್ ರಾಜ್ ಹಾಗೂ ಮಾಹಿತಿ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದ್ದಾರೆ.
ಕರಡು ನಿಯಮಗಳಿಗೆ ಸಂಬಂಧಿಸದಂತೆ ಸಾರ್ವಜನಿಕರಿಂದ ಸಲಹೆ, ಆಕ್ಷೇಪಣೆಗಳನ್ನು ಆಹ್ವಾನಿಸಲಾಗಿತ್ತು, ಅದರಂತೆ 8 ಮಂದಿ ಅಕ್ಷೇಪಣೆಗಳನ್ನು ಸಲ್ಲಿಸಿ, ಕೆಲವಾರು ಸಲಹೆಗಳನ್ನು ನೀಡಿದ್ದರು, ಇವುಗಳನ್ನು ಸಹ ಸಭೆಯಲ್ಲಿ ಚರ್ಚಿಸಲಾಯಿತು. ಗ್ರಾಮೀಣ ಜನರಿಗೆ ಅನುಕೂಲವಾಗುವಂತೆ 2025ರ ಕರಡು ನಿಯಮಗಳಲ್ಲಿ ಕೆಲವು ಬದಲಾವಣೆ ತರುವ ಮೂಲಕ ಸುಧಾರಣೆಗಳನ್ನು ಮಾಡಿಕೊಳ್ಳಲು ಅಧಿಕಾರಿಗಳಿಗೆ ಸೂಚಿಸಲಾಯಿತು ಎಂದು ಸಚಿವರು ಮಾಹಿತಿ ನೀಡಿದ್ದಾರೆ. ಜನಗಳಿಂದ ಆಯ್ಕೆಗೊಂಡು ಗ್ರಾಮ ಪಂಚಾಯತಿಗಳಿಗೆ ಚುನಾಯಿತರಾಗುವ ಜನ ಪ್ರತಿನಿಧಿಗಳ ಹಕ್ಕುಗಳಿಗೆ ಧಕ್ಕೆಯಾಗದಂತೆ ನಿಯಮಗಳನ್ನು ರೂಪಿಸಬೇಕಾದ ಅವಶ್ಯಕತೆಯಿದೆ ಎಂದು ಸಚಿವ ಪ್ರಿಯಾಂಕ್ ಖರ್ಗೆ ತಿಳಿಸಿದರು.












Click it and Unblock the Notifications