ಶಿಕ್ಷಕರಿಗಿಂತ ಕೈದಿಗಳ ಕೂಲಿಯೆ ಹೆಚ್ಚು ಎಂಬ ಜೋಕ್‌ಗಳು: ಗೃಹ ಸಚಿವರ ಸ್ಪಷ್ಟನೆ
ಬೆಂಗಳೂರು ಜುಲೈ 20: ಕರ್ನಾಟಕದ ಕಾರಾಗೃಹ ಗಳಲ್ಲಿರುವ ಕೈದಿಗಳ ಕೂಲಿ ಮೊತ್ತವನ್ನು ಹೆಚ್ಚಿಸುವ ಕುರಿತು ಪ್ರಸ್ತಾಪಿಸಲಾಗಿದೆಯೇ ಹೊರತು ಆದೇಶ ಹೊರಡಿಸಿಲ್ಲ ಎಂದು ಗೃಹ ಸಚಿವ ಅರಗ ಜ್ಞಾನೇಂದ್ರ ತಿಳಿಸಿದ್ದಾರೆ.
ಈ ಕುರಿತು ಟ್ವಿಟ್ ಮಾಡಿರುವ ಅವರು, ಜೈಲಿನಲ್ಲಿರುವ ಕೈದಿಗಳಿಗೆ 525ರೂ.ಗೂ ಅಧಿಕ ಕೂಲಿ ನೀಡಲಾಗುತ್ತಿದೆ. ಬೇರೆ ಉದ್ಯೋಗಗಳಿಗಿಂತ ಜೈಲುವಾಸವೇ ಲಾಭದಾಯಕ ಎಂಬಂತೆ ಹಲವರು ಗೇಲಿ ಮಾಡಿ ಹರಿಬಿಟ್ಟಿರುವುದು ಕಂಡುಬಂದಿದೆ. ಈ ರೀತಿ ಸಾಮಾಜಿಕ ಜಾಲತಾಣಗಳಲ್ಲಿ ಬರೆದುಕೊಂಡಿರುವುದು ಸತ್ಯಕ್ಕೆ ದೂರವಾದ ವಿಚಾರ ಎಂದು ಅವರು ಹೇಳಿದ್ದಾರೆ.
ಜೈಲಿನಲ್ಲಿರುವ ಖೈದಿಗಳ ಕೂಲಿ ಮೊತ್ತವನ್ನು 200ರು.ನಿಂದ ಸ್ವಲ್ಪ ಹೆಚ್ಚಳ ಮಾಡುವ ಕುರಿತು ಪ್ರಸ್ತಾವನೆ ಮಾಡಲಾಗಿದೆ. ಆದರೆ ಆದೇಶ ಹೊರಡಿಸಿಲ್ಲ. ರಾಜ್ಯದ ಕಾರಾಗೃಹಗಳಲ್ಲಿ ಸುಮಾರು 15 ಸಾವಿರ ಕೈದಿಗಳಿದ್ದಾರೆ. ಜೈಲಿನಲ್ಲಿ ಪ್ರತಿ ಕೈದಿಯೂ ಕೆಲಸ ಮಾಡಬೇಕಾಗುತ್ತದೆ. ಅವರಿಗೆ ನಿಗದಿಪಡಿಸುವ ಕೂಲಿಯನ್ನೇ ನೀಡಲಾಗುತ್ತಿದೆ ಎಂದರು.
ಜೈಲಿನಲ್ಲಿ ಕೈದಿಗಳು ಮರಗೆಲಸ, ಬೇಕರಿ, ಮೇಣದ ಬತ್ತಿ ತರಯಾರಿಕೆ, ಕೃಷಿ ಕೆಲಸ, ನೇಯುವುದು, ಜಮಖಾನ, ಶಾಮಿಯಾನ, ಸೋಪ್ ತಯಾರಿಕೆ ಸೇರಿದಂತೆ ವಿವಿಧ ಕೈಗಾರಿಕೆ ಚಟುವಟಿಕೆಗಳನ್ನು ಮಾಡುತ್ತಾರೆ. ಹಾಲಿ ಇರುವ ಯಂತ್ರೋಪಕರಣಗಳ ಉನ್ನತೀಕರಣ, ಕೈದಿಗಳಿಗೆ ವೃತ್ತಿಯಲ್ಲಿ ನೈಪುಣ್ಯತೆ ಒಳಗೊಂಡಂತೆ ಹಲವಾರು ಸುಧಾರಣೆ ಕುರಿತು ಚರ್ಚೆ ಆಗಿದೆ. ಕೆಲಸಕ್ಕೆ ತಕ್ಕ ಕೂಲಿಯನ್ನು ನೀಡಲಾಗುತ್ತಿದೆ.

ಕೈದಿಗಳಲ್ಲಿ ಪರಿವರ್ತನೆ ತರುವ ಉದ್ದೇಶ
ಇಂತಹ ವಿವಿಧ ಕೆಲಸಗಳ ಮೂಲಕ ಕೈದಿಗಳ ಖಿನ್ನತೆ ಹೋಗಲಾಡಿಸಿ ಅವರ ಮನಃಪರಿವರ್ತನೆ ಮಾಡುವುದೇ ಸರ್ಕಾರದ ಇದರ ಉದ್ದೇಶ. ಈ ಮೂಲಕ ಪೊಲೀಸ್ ಇಲಾಖೆಗೂ ಆದಾಯವೂ ಬರುತ್ತಿದೆ. ಕೈದಿಯಾದ ಮಾತ್ರಕ್ಕೆ ಅವರಿಂದ ಜೀತ ಮಾಡಿಸಿಕೊಳ್ಳುವ ಹಕ್ಕು ಯಾವ ಸರ್ಕಾರಕ್ಕೂ ಇಲ್ಲ. ಆ ರೀತಿಯ ಸರ್ಕಾರ ಯಾವ ಕಾರಾಗೃಹಗಳಲ್ಲಿ ಕೆಲಸ ಮಾಡಿಕೊಳ್ಳುತ್ತಿಲ್ಲ. ಈ ಬಗ್ಗೆ ಸುಳ್ಳು ವಿಷಯಗಳು ಹರಿದಾಡಿವೆ ಎಂದು ಅವರು ಸ್ಪಷ್ಟಪಡಿಸಿದರು.
ರಾಜ್ಯ ಹಣಕಾಸು ಇಲಾಖೆ ಕೈದಿಗಳಿಗಾಗೇ ಏಳು ಕೋಟಿ ರೂ. ಅನುದಾನ ಬಿಡುಗಡೆಗೆ ಅವಕಾಶ ಮಾಡಿದೆ. ಕೈದಿಗಳಿಂದ ಬರುವ ಲಾಭ ಬಳಸಿ ಅವರಿಗೇ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಸರ್ಕಾರ ಮಾಡಿದ್ದು, ಪ್ರಸ್ತಾವನೆ ಹಂತದಲ್ಲಿದೆ. ಆದೇಶ ಇನ್ನು ಹೊರಡಿಸಿಲ್ಲ. ಈ ಬಗ್ಗೆ ತಪ್ಪು ಸಂದೇಶ ಬಿತ್ತಬಾರದು. ತಪ್ಪು ಸಂದೇಶಗಳು ಸಮಾಜದ ಶಾಂತಿ ಕದಡುತ್ತವೆ ಎಂದು ಅವರು ಅಸಮಾಧಾನ ಹೊರಹಾಕಿದ್ದಾರೆ.

ಕೈದಿಗಳ ಅಕ್ಷರಾಭ್ಯಾಸಕ್ಕೆ ಆದ್ಯತೆ
ಶಿಕ್ಷೆಯಲ್ಲಿರುವ ಖೈದಿಗಳಿಗೆ ಈಗಲೂ ಕೊಡುತ್ತಿರುವುದು ದಿನಕ್ಕೆ 200 ರೂಗಳು. ಅದರಲ್ಲಿ ಊಟದ ಖರ್ಚು 100 ರೂಗಳನ್ನು ಸಹ ಕಳೆಯಲಾಗುತ್ತಿದೆ. ಕಾರಾಗೃಹವಾಸಿಗಳಲ್ಲಿ ಶೇ.50 ಗಿಂತಲೂ ಹೆಚ್ಚು ಮಂದಿ ಅನಕ್ಷರಸ್ಥರೇ ಇದ್ದಾರೆ. ಈಗಾಗಲೇ ನಾನು ಗೃಹಸಚಿವನಾದ ಬಳಿಕ ಅವರಿಗೆಲ್ಲಾ ಅಕ್ಷರಾಭ್ಯಾಸ ನಡೆಸುವ ಯೋಜನೆಗೆ ಒತ್ತು ಕೊಟ್ಟಿದ್ದು ಈಗಾಗಲೇ ಬಹಳಷ್ಟು ಪ್ರಗತಿ ಕಂಡುಬಂದಿದೆ ಎಂದು ವಿವರಿಸಿದರು.

ಕೈದಿ ಬಿಡುಗಡೆ ನಂತರವೇ ಕೂಲಿ ಹಣ
ಸೆರೆವಾಸ ಮುಗಿಸಿ ಒಬ್ಬ ಪ್ರಜ್ಞಾವಂತ ನಾಗರೀಕನಾಗಿ ಬದುಕಬೇಕಾದ ಒಬ್ಬ ವ್ಯಕ್ತಿ ಬರಿಗೈಯಲ್ಲಿ ಮನೆಗೆ ಹೋದರೆ ಆತನ ಜೀವನ ಕಷ್ಟ. ತನ್ನ ಜೀವನಕ್ಕೆ ಏನೂ ಆಧಾರ, ಆದಾಯ ಇಲ್ಲದೇ ಸಮಾಜದ ದೃಷ್ಠಿಯಲ್ಲಿ ಅಸ್ಪೃಶ್ಯರಂತಾಗುವ ಆತ ಮತ್ತೆ ತನ್ನ ಜೀವನ ನಡೆಸಲು ಕೆಟ್ಟ ದಾರಿಯನ್ನೇ ಆರಿಸಿಕೊಳ್ಳುವ ಸಂಭವ ಇರುತ್ತದೆ. ಖೈದಿಗಳ ಕೂಲಿ ಏರಿಸಿದರೂ ಜೈಲಿನಿಂದ ಹೊರಬಂದ ನಂತರವೇ ಅವರಿಗೆ ಹಣ ನೀಡಲಾಗುತ್ತದೆ. ತಮ್ಮ ಕುಟುಂಬದ ನಿರ್ವಹಣೆಗೆ, ಮಕ್ಕಳ ವಿದ್ಯಾಭ್ಯಾಸಕ್ಕೆ , ಸ್ವಂತ ಉದ್ಯೋಗಕ್ಕೆ ಇದು ಸಹಕಾರಿಯಾಗಲಿದೆ ಎಂದರು.

ಸಾಧಕ ಬಾಧಕ ಬಗ್ಗೆ ಮಾಹಿತಿ
ಮಾನವೀಯತೆಯ ದೃಷ್ಠಿಯಿಂದ ಖೈದಿಗಳಿಂದ ಬರುತ್ತಿರುವ ಆದಾಯದಿಂದಲೇ ಅವರಿಗೆ ಸ್ವಲ್ಪ ಕೂಲಿ ಹೆಚ್ಚಿಸುವ ಯೋಚನೆ ಮಾಡಲಾಗಿದೆ. ಸಾಧಕ ಬಾಧಕಗಳ ಬಗ್ಗೆ ಮಾಹಿತಿ ಕಲೆ ಹಾಕಲಾಗುತ್ತಿದೆ. ಕೂಲಿ ಹೆಚ್ಚಿಸುವ ಆದೇಶ ಹೊರಡಿಸಿಲ್ಲ ಎಂದು ಸರ್ಕಾರ ಸದುದ್ದೇಶವನ್ನು ಸಾಮಾಜಿಕ ಜಾಲತಾಣಗಳಲ್ಲಿ ತಪ್ಪಾಗಿ ಅರ್ಥೈಸಲಾಗಿದೆ ಎಂದು ಅವರು ಸ್ಪಷ್ಟನೆ ನೀಡಿದರು.












Click it and Unblock the Notifications