ಕೋಟಿ ಕೋಟಿ ಆಸ್ತಿ ಇರುವ ಪ್ರಜ್ವಲ್ ರೇವಣ್ಣಗೆ ಜೈಲಿನಲ್ಲಿ ಕ್ಲರ್ಕ್ ಕೆಲಸ, ಸಂಬಳ ಎಷ್ಟು?
ಮಹಿಳೆ ಮೇಲೆ ಅತ್ಯಾಚಾರ ಎಸಗಿದ ಕೇಸ್‌ನಲ್ಲಿ ಜೀವಾವಧಿ ಶಿಕ್ಷೆಗೆ ಒಳಗಾಗಿ ಹಾಸನ ಜೆಡಿಎಸ್ ಮಾಜಿ ಸಂಸದ ಪ್ರಜ್ವಲ್ ರೇವಣ್ಣ ಅವರು ಜೈಲಿನಲ್ಲಿದ್ದಾರೆ. ಇತ್ತೀಚೆಗಷ್ಟೇ ಕೋರ್ಟ್ ಈ ಪ್ರಕರಣದಲ್ಲಿ ಪ್ರಜ್ವಲ್ ರೇವಣ್ಣ ಅಪರಾಧಿ ಎಂದು ತೀರ್ಪು ಪ್ರಕಟಿಸಿತ್ತು. ಹೀಗಾಗಿ ಸಾಮಾನ್ಯ ಕೈದಿಯಂತೆ ಪ್ರಜ್ವಲ್ ತಮ್ಮ ಜೈಲುವಾಸ ಮುಂದುವರಿಸಿದ್ದಾರೆ. ಪರಪ್ಪನ ಅಗ್ರಹಾರ ಕೇಂದ್ರ ಕಾರಾಗೃಹದಲ್ಲಿ ಪ್ರಜ್ವಲ್ ರೇವಣ್ಣಗೆ ಕೈದಿ ನಂ.15528 ನೀಡಲಾಗಿದೆ. ಜೈಲಿನಲ್ಲಿರುವ ಲೈಬ್ರರಿಯಲ್ಲಿ ಪ್ರಜ್ವಲ್‌ಗೆ ಕ್ಲರ್ಕ್ ಕೆಲಸ ವಹಿಸಲಾಗಿದೆ.
ಪ್ರಜ್ವಲ್ ವಿರುದ್ಧ ಸಿಐಡಿ ಹಾಗೂ ಹೊಳೆನರಸೀಪುರ ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಹಲವು ಪ್ರಕರಣಗಳು ದಾಖಲಾಗಿದ್ದವು. ಇದರಲ್ಲಿ ಒಂದು ಪ್ರಕರಣದಲ್ಲಿ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ವಿಚಾರಣೆ ನಡೆಸಿ, ಆಗಸ್ಟ್ 2ರಂದು ಪ್ರಜ್ವಲ್ ರೇವಣ್ಣಗೆ ಜೀವಾವಧಿ ಶಿಕ್ಷೆ ವಿಧಿಸಿತ್ತು.
ಜೈಲಿನಲ್ಲಿ ಎಲ್ಲ ಕೈದಿಗಳಿಗೆ ನೀಡುವಂತೆ ಪ್ರಜ್ವಲ್ ರೇವಣ್ಣಗೂ ಜೈಲಿನ ಅಧಿಕಾರಿಗಳು ಕೆಲಸ ಹಂಚಿಕೆ ಮಾಡಿದ್ದಾರೆ. ಇಂಜಿನಿಯರಿಂಗ್ ಪದವಿ ಪಡೆದಿರುವ ಪ್ರಜ್ವಲ್ ರೇವಣ್ಣ ಕೃಷಿ ಕೆಲಸ ಮಾಡುವುದಾಗಿ ಹೇಳಿದ್ದರು. ಆದರೆ ಕ್ಲರ್ಕ್ ಕೆಲಸ ನೀಡಲಾಗಿದೆ. ಹೀಗಾಗಿ ವಿಚಾರಣಾಧೀನ ಕೈದಿಗಳಿಗೆ ಜೈಲಿನ ಲೈಬ್ರರಿಯಲ್ಲಿ ಪುಸ್ತಕ ವಿತರಿಸುವುದು ಹಾಗೂ ಈ ಬಗ್ಗೆ ನೋಂದಣಿ ಪುಸ್ತಕದಲ್ಲಿ ಬರೆದುಕೊಳ್ಳುವ ಕೆಲಸ ನೀಡಲಾಗಿದೆ.

ಪ್ರಜ್ವಲ್‌ಗೆ ದಿನಗೂಲಿ ಎಷ್ಟು?
ಯಾವ ಕೈದಿಗೆ ಯಾವ ಪುಸ್ತಕ ನೀಡಲಾಗಿದೆ ಎಂಬುದನ್ನು ಪ್ರಜ್ವಲ್ ಪುಸ್ತಕದಲ್ಲಿ ಬರೆದುಕೊಳ್ಳಬೇಕಾಗಿದೆ. ಈ ಕ್ಲರ್ಕ್ ಕೆಲಸಕ್ಕೆ ಪ್ರಜ್ವಲ್‌ಗೆ ದಿನಕ್ಕೆ 524 ರೂಪಾಯಿ ದಿನಗೂಲಿ ನಿಗದಿಪಡಿಸಲಾಗಿದೆ. ಕೆಲಸ ಮಾಡಿದ ದಿನದಂದು ಮಾತ್ರವೇ ಈ ಕೂಲಿ ಸಿಗಲಿದೆ. ಕೋರ್ಟ್‌ಗೆ ಹಾಜರಾಗುವ ದಿನಗಳಂದು ಯಾವುದೇ ಕೂಲಿ ಹಣ ನೀಡುವುದಿಲ್ಲ ಎನ್ನಲಾಗಿದೆ.
ಕರ್ನಾಟಕದಲ್ಲಿರುವ ಜೈಲುಗಳಲ್ಲಿ ಕೈದಿಗಳಿಗೆ ಆರಂಭದಲ್ಲಿ ದಿನಕ್ಕೆ ಒಟ್ಟು 524 ರೂಪಾಯಿ ಸಂಬಳ ನೀಡಲಾಗುತ್ತದೆ. ಒಂದು ವರ್ಷದ ಬಳಿಕ ಕೆಲಸದಲ್ಲಿ ಪರಿಣಿತಿ ಹೊಂದಿದ ಬಳಿಕ ದಿನಕ್ಕೆ 548 ರೂಪಾಯಿ ಸಂಬಳ ನೀಡಲಾಗುತ್ತದೆ. ಕೈದಿಯು ಎರಡು ವರ್ಷಗಳ ಅನುಭವ ಪಡೆದ ನಂತರ ಬಡ್ತಿ ಕೊಡಲಾಗುತ್ತೆ. ಆಗ ಕೈದಿಗೆ ದಿನಕ್ಕೆ 615 ರೂಪಾಯಿ ಸಂಬಳ ನೀಡುತ್ತಾರೆ. ಮೂರು ವರ್ಷಗಳ ನಂತರ ಅವರನ್ನು ಅನುಭವಿ ಕೆಲಸಗಾರರದು ಎಂದು ಪರಿಗಣಿಸಲಾಗುತ್ತೆ, ಆಗ ಅವರಿಗೆ ದಿನಕ್ಕೆ 663 ರೂಪಾಯಿ ಸಂಬಳ ನೀಡುತ್ತಾರೆ ಎಂದು ವರದಿಯಾಗಿದೆ.
ಕೆ.ಆರ್.ನಗರ ಮೂಲದ ಮಹಿಳೆ ಮೇಲಿನ ಅತ್ಯಾಚಾರ ಪ್ರಕರಣದಲ್ಲಿ ಕಳೆದ 14 ತಿಂಗಳಿನಿಂದಲೂ ಪ್ರಜ್ವಲ್ ಪರಪ್ಪನ ಅಗ್ರಹಾರ ಜೈಲಿನಲ್ಲಿದ್ದರು. ಬೆಂಗಳೂರಿನ ಜನಪ್ರತಿನಿಧಿಗಳ ವಿಶೇಷ ನ್ಯಾಯಾಲಯವು ಇತ್ತೀಚೆಗೆ ಈ ಪ್ರಕರಣದ ತೀರ್ಪು ಪ್ರಕಟಿಸಿ, ತಪ್ಪಿತಸ್ಥ ಎಂದು ಹೇಳಿತ್ತು. ಅಲ್ಲದೆ ಜೀವಾವಧಿ ಶಿಕ್ಷೆಯನ್ನೂ ವಿಧಿಸಿತ್ತು. ಅತ್ಯಾಚಾರ ಪ್ರಕರಣವನ್ನು ತ್ವರಿತವಾಗಿ ವಿಚಾರಣೆ ಪೂರ್ಣಗೊಳಿಸಿ ಕೇವಲ 7 ತಿಂಗಳಲ್ಲೇ ತೀರ್ಪು ಪ್ರಕಟಿಸುವ ಮೂಲಕ ದಾಖಲೆ ಬರೆದಿತ್ತು. ಹೀಗಾಗಿ ಪ್ರಜ್ವಲ್ ಅವರು ಸಾಮಾನ್ಯ ಕೈದಿಯಂತೆ ಪರಪ್ಪನ ಅಗ್ರಹಾರ ಜೈಲುವಾಸದಲ್ಲಿದ್ದಾರೆ.ರಾಜಕಾರಣಿ ಬದುಕಿನಿಂದ ಕೈದಿ ಬದುಕು ಕಳೆಯುತ್ತಿದ್ದಾರೆ.












Click it and Unblock the Notifications