ಶಿಕ್ಷಕರ ಬೇಡಿಕೆಗೆ ಮಣಿದ ಕರ್ನಾಟಕ ಸರ್ಕಾರ, ಸಮಿತಿ ರಚಿಸಿ ಆದೇಶ
ಬೆಂಗಳೂರು, ಸೆಪ್ಟೆಂಬರ್ 24: ಕರ್ನಾಟಕ ಸರ್ಕಾರ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಗಮನಹರಿಸಿದೆ. ವಿವಿಧ ಬೇಡಿಕೆಗಳನ್ನು ಶಿಕ್ಷಕರು ಸರ್ಕಾರದ ಮುಂದೆ ಇಟ್ಟಿದ್ದಾರೆ. ಆದ್ದರಿಂದ ಸರ್ಕಾರ ಈ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸಿ ಆದೇಶಿಸಿದೆ. ಒಂದು ತಿಂಗಳಿನಲ್ಲಿ ವರದಿ ಸಲ್ಲಿಸಬೇಕು ಎಂದು ಸಮಿತಿಗೆ ಗಡುವು ನಿಗದಿ ಮಾಡಲಾಗಿದೆ.
ಈ ಕುರಿತು ಕರ್ನಾಟಕ ರಾಜ್ಯವಾಲರ ಆದೇಶಾನುಸಾರ ಮತ್ತು ಅವರ ಹೆಸರಿನಲ್ಲಿ ಎಂ. ಎ. ಮಹಾಲಕ್ಷ್ಮಿ ಸರ್ಕಾರದ ಅಧೀನ ಕಾರ್ಯದರ್ಶಿ, ಶಾಲಾ ಶಿಕ್ಷಣ ಮತ್ತು ಸಾಕ್ಷರತಾ ಇಲಾಖೆ, (ಪ್ರಾಥಮಿಕ) ಆದೇಶವನ್ನು ಹೊರಡಿಸಿದ್ದಾರೆ. ಅಧ್ಯಕ್ಷರು/ ಪ್ರಧಾನ ಕಾರ್ಯದರ್ಶಿ, ಕರ್ನಾಟಕ ರಾಜ್ಯ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರ ಪತ್ರವನ್ನು ಉಲ್ಲೇಖಿಸಿದ್ದಾರೆ.

ಆದೇಶ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಬೇಡಿಕೆಗಳ ಕುರಿತು ಪರಿಶೀಲಿಸಿ ವರದಿ ನೀಡಲು ಸಮಿತಿಯನ್ನು ರಚಿಸುವ ಬಗ್ಗೆ ಎಂಬ ವಿಷಯವನ್ನು ಒಳಗೊಂಡಿದೆ. 2017ರ ಹೊಸ ವೃಂದ ಮತ್ತು ನೇಮಕಾತಿ ನಿಯಮಗಳನ್ನು 2016ಕ್ಕಿಂತ ಮೊದಲು ನೇಮಕಾತಿಯಾದವರಿಗೆ ಪೂರ್ವಾನ್ವಯಗೊಳಿಸದಿರುವುದು, ಪ್ರಾಥಮಿಕ ಶಾಲಾ ಸೇವಾ ನಿರತ ಶಿಕ್ಷಕರಿಗಾಗಿರುವ ಅನ್ಯಾಯವನ್ನು ಸರಿಪಡಿಸುವುದು ಹಾಗೂ ಪದವಿ ಪೂರೈಸಿದ ಶಿಕ್ಷಕರನ್ನು 6 ರಿಂದ 8ಕ್ಕೆ ಸೇವಾ ನಿರತ ಪದವೀಧರ ಶಿಕ್ಷಕರೆಂದು ಒಂದು ಬಾರಿ (One Time) ಪದನಾಮೀಕರಿಸುವುದು ಸೇರಿದಂತೆ ಹಲವಾರು ಬೇಡಿಕೆಗಳನ್ನು ಈಡೇರಿಸುವಂತೆ ಅಧ್ಯಕ್ಷರು, ಕರ್ನಾಟಕ ರಾಜ್ಯ ಪ್ರಾಧಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರು ಪತ್ರದಲ್ಲಿ ಕೋರಿರುತ್ತಾರೆ.
ಮೇಲ್ಕಂಡ ಬೇಡಿಕೆಗಳ ಕುರಿತು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸದರಿ ಬೇಡಿಕೆಗಳನ್ನು ಪರಿಗಣಿಸಲು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳಲ್ಲಿ ಅವಕಾಶವಿರುವ ಕುರಿತು ಹಾಗೂ ಇದರಿಂದ ಶೈಕ್ಷಣಿಕ ವ್ಯವಸ್ಥೆಯ ಮೇಲೆ ಉಂಟಾಗಬಹುದಾದ ಪರಿಣಾಮಗಳು ಮತ್ತು ಕೈಗೊಳ್ಳಬಹುದಾದ ಕ್ರಮಗಳ ಕುರಿತು ಸಮಗ್ರವಾದ ವರದಿ ನೀಡಲು ಸಮಿತಿಯನ್ನು ರಚಿಸಲು ಸರ್ಕಾರವು ತೀರ್ಮಾನಿಸಿ, ಆದೇಶಿಸಿದೆ ಎಂದು ಹೇಳಿದೆ.
ಸಮಿತಿಯಲ್ಲಿ ಯಾರಿದ್ದಾರೆ?: ಪ್ರಸ್ತಾವನೆಯಲ್ಲಿ ವಿವರಿಸಿರುವ ಅಂಶಗಳ ಹಿನ್ನೆಲೆಯಲ್ಲಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು ಇವರ ವಿವಿಧ ಬೇಡಿಕೆಗಳನ್ನು ಪರಿಗಣಿಸುವ ಕುರಿತು ಪ್ರಸ್ತುತ ಅಸ್ತಿತ್ವದಲ್ಲಿರುವ ನಿಯಮಗಳನ್ವಯ ಸಮಗ್ರವಾಗಿ ಪರಿಶೀಲಿಸಿ ಸೂಕ್ತ ಶಿಫಾರಸ್ಸು ಹಾಗೂ ಸ್ಪಷ್ಟ ಅಭಿಪ್ರಾಯವನ್ನೊಳಗೊಂಡ ಸಮಗ್ರ ವರದಿಯನ್ನು ನೀಡಲು ಸಮಿತಿಯನ್ನು ರಚಿಸಿ ಆದೇಶಿಸಲಾಗಿದೆ.
* ಆಯುಕ್ತರು, ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ಅಧ್ಯಕ್ಷರು
* ಪ್ರತಿನಿಧಿ. ಆರ್ಥಿಕ ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು. ಸದಸ್ಯರು
* ಪ್ರತಿನಿಧಿ, ಸಿಬ್ಬಂದಿ ಮತ್ತು ಆಡಳಿತ ಸುಧಾರಣೆ ಇಲಾಖೆ (ಸೇವಾ ನಿಯಮಗಳು), ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು. ಸದಸ್ಯರು
* ಪ್ರತಿನಿಧಿ, ಕಾನೂನು ಇಲಾಖೆ, ಕರ್ನಾಟಕ ಸರ್ಕಾರ ಸಚಿವಾಲಯ, ಬೆಂಗಳೂರು. ಸದಸ್ಯರು
* ನಿರ್ದೇಶಕರು (ಪ್ರಾಥಮಿಕ ಶಿಕ್ಷಣ), ಶಾಲಾ ಶಿಕ್ಷಣ ಇಲಾಖೆ, ಬೆಂಗಳೂರು. ಸದಸ್ಯ ಕಾರ್ಯದರ್ಶಿ
ಮೇಲ್ಕಂಡ ಸಮಿತಿಯು ಸಮಾಲೋಚಿಸಿ ಎಲ್ಲಾ ಅಂಶಗಳನ್ನು ನಿಯಮಾನುಸಾರ ಕೂಲಂಕಷವಾಗಿ ಪರಿಶೀಲಿಸಿ ಸೂಕ್ತ ಮತ್ತು ಸ್ಪಷ್ಟ ಶಿಫಾರಸ್ಸಿನೊಂದಿಗೆ ವಿಸ್ತ್ರತ ವರದಿಯನ್ನು ಒಂದು ತಿಂಗಳೊಳಗಾಗಿ ಸರ್ಕಾರಕ್ಕೆ ಸಲ್ಲಿಸತಕ್ಕದ್ದು ಎಂದು ಆದೇಶದಲ್ಲಿ ತಿಳಿಸಲಾಗಿದೆ. ಸಮಿತಿ ಕರ್ನಾಟಕ ರಾಜ್ಯ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು, ಕರ್ನಾಟಕ ರಾಜ್ಯ ಪದವೀಧರ ಪ್ರಾಥಮಿಕ ಶಾಲಾ ಶಿಕ್ಷಕರ ಸಂಘ (ರಿ), ಬೆಂಗಳೂರು. ಸಂಬಂಧಪಟ್ಟ ಇತರೆ ಪಾಲುದಾರರ ಜೊತೆ ಚರ್ಚಿಸಬೇಕು ಎಂದು ಸಮಿತಿ ಹೇಳಿದೆ.












Click it and Unblock the Notifications